
ರಾಷ್ಟ್ರೀಯ ಭಾರತೀಯ ಮಿಲಿಟರಿ ಕಾಲೇಜಿನಲ್ಲಿ (RIMC) ವಿದ್ಯಾಭ್ಯಾಸ ಮಾಡಿ ರಕ್ಷಣಾ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳುವ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಪ್ರಮುಖ ಸುದ್ದಿಯೊಂದು ಇಲ್ಲಿದೆ. ಜುಲೈ 2027 ರ ಅವಧಿಗೆ 8 ನೇ ತರಗತಿ ಪ್ರವೇಶಕ್ಕಾಗಿ ನಡೆಸಲಾಗುವ ಪ್ರವೇಶ ಪರೀಕ್ಷೆಯ ಪ್ರಕ್ರಿಯೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪ್ರಾರಂಭಿಸಿದೆ. ಮಿಲಿಟರಿ ಕ್ಷೇತ್ರದಲ್ಲಿ ದೇಶಸೇವೆ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ RIMC ಅತ್ಯಂತ ಪ್ರಮುಖ ತರಬೇತಿ ಸಂಸ್ಥೆಯಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 30 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಜುಲೈ 2027 ರ ಶೈಕ್ಷಣಿಕ ಅವಧಿಗೆ 8ನೇ ತರಗತಿ ಪ್ರವೇಶ ಬಯಸುವ ಅಭ್ಯರ್ಥಿಗಳು ಜುಲೈ 2, 2013 ಮತ್ತು ಜನವರಿ 1, 2015 ರ ನಡುವೆ ಜನಿಸಿರಬೇಕು. ಅರ್ಹ ಅಭ್ಯರ್ಥಿಗಳು NTA ಅಧಿಕೃತ ವೆಬ್‌ಸೈಟ್ ಮೂಲಕ ಸೆಪ್ಟೆಂಬರ್ 30 ರ ಸಂಜೆ 5:00 ಗಂಟೆಯವರೆಗೆ ಅರ್ಜಿ ಸಲ್ಲಿಸಬಹುದು ಹಾಗೂ ಅದೇ ದಿನ ರಾತ್ರಿ 11:50 ರವರೆಗೆ ಅರ್ಜಿ ಶುಲ್ಕ ಪಾವತಿಸಲು ಅವಕಾಶವಿದೆ. ನಿಯಮಿತ ಅವಧಿಯಲ್ಲಿ ಅರ್ಜಿ ಸಲ್ಲಿಸಲು ತಪ್ಪಿದವರು ಅಕ್ಟೋಬರ್ 1 ರಿಂದ 7 ರವರೆಗೆ ವಿಳಂಬ ಶುಲ್ಕದೊಂದಿಗೆ (Late Fee) ಅರ್ಜಿ ಸಲ್ಲಿಸಬಹುದಾಗಿದೆ.
ಸಾಮಾನ್ಯ ವರ್ಗದ ಅಭ್ಯರ್ಥಿಗಳು, ರಕ್ಷಣಾ ಸಿಬ್ಬಂದಿ, ಮಾಜಿ ಸೈನಿಕರ ಮಕ್ಕಳು ಮತ್ತು ಕೇಂದ್ರ ಪಟ್ಟಿಯಲ್ಲಿರುವ OBC-NCL ಅಭ್ಯರ್ಥಿಗಳಿಗೆ 1,000 ಪರೀಕ್ಷಾ ಶುಲ್ಕ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ಅಭ್ಯರ್ಥಿಗಳಿಗೆ ₹750 ಶುಲ್ಕವಿರುತ್ತದೆ. ನಿಗದಿತ ದಿನಾಂಕದ ನಂತರ ಅರ್ಜಿ ಸಲ್ಲಿಸಿದರೆ 500ರೂ| ವಿಳಂಬ ಶುಲ್ಕ ಪಾವತಿಸಬೇಕಾಗುತ್ತದೆ. OBC-NCL ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ತಮ್ಮ ಜಾತಿಯು ಕೇಂದ್ರ OBC ಪಟ್ಟಿಯಲ್ಲಿದೆಯೇ ಎಂದು ಪರಿಶೀಲಿಸಿಕೊಳ್ಳುವುದು ಕಡ್ಡಾಯ.
ಇದನ್ನೂ ಓದಿ: ಕಾಲೇಜಿನಲ್ಲಿ ರಾತ್ರಿ ಕಾವಲುಗಾರನ ಕೆಲಸ ಮಾಡುತ್ತಲೇ ಓದಿ ಸತತ 3 ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡ ಸಾಧಕ!
RIMC ಪ್ರವೇಶ ಪರೀಕ್ಷೆಯು (RIMCEE) ಡಿಸೆಂಬರ್ 6, 2026 ರಂದು ಪೆನ್ನು ಮತ್ತು ಕಾಗದ (Offline) ಮಾದರಿಯಲ್ಲಿ ನಡೆಯಲಿದೆ. ಒಟ್ಟು 4 ಗಂಟೆ 30 ನಿಮಿಷಗಳ ಕಾಲ ಲಿಖಿತ ಪರೀಕ್ಷೆ ನಡೆಯಲಿದ್ದು, ಫಲಿತಾಂಶವನ್ನು ಫೆಬ್ರವರಿ 20, 2027 ರೊಳಗೆ ಪ್ರಕಟಿಸಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು 2027 ರ ಏಪ್ರಿಲ್ ನಲ್ಲಿ ನಡೆಯಲಿರುವ ಎರಡನೇ ಹಂತದ ಮೌಖಿಕ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ.
ಮಿಲಿಟರಿ ಸೇವಾ ತಯಾರಿಯಲ್ಲಿ RIMC ದೇಶದಲ್ಲೇ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದೆ. ಇತ್ತೀಚಿನ NDA-1 2025 ರ ಪರೀಕ್ಷೆಯಲ್ಲಿ ಮೊದಲ ಮೂರು ರ್ಯಾಂಕ್ ಸೇರಿದಂತೆ ಟಾಪ್ 10 ರ್ಯಾಂಕ್‌ಗಳಲ್ಲಿ 5 RIMC ವಿದ್ಯಾರ್ಥಿಗಳು ಸಾಧನೆ ಮಾಡಿದ್ದರು. ಪರೀಕ್ಷೆಗೆ ಹಾಜರಾಗಿದ್ದ 38 ವಿದ್ಯಾರ್ಥಿಗಳಲ್ಲಿ 28 ಮಂದಿ ಯಶಸ್ವಿಯಾಗಿದ್ದರು. ಅಲ್ಲದೆ NDA-II 2024 ರಲ್ಲಿ RIMC ಯ ಎಮನ್ ಘೋಷ್ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ್ಯಾಂಕ್ (AIR 1) ಪಡೆದು ಸಾಧನೆ ಮಾಡಿದ್ದರು.
ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:39 pm, Thu, 10 September 26