ಕರ್ನಾಟಕದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: ಬೇಡಿಕೆ ಆಧಾರಿತ ಮರುಪರೀಕ್ಷೆ ನಡೆಸಲಿದೆ ವಿಟಿಯು
ಎಂಜಿನಿಯರಿಂಗ್ ವಿಷಯಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ತಮ್ಮ ಅನುಕೂಲಕ್ಕೆ ತಕ್ಕ ದಿನಾಂಕದಂದು ಪರೀಕ್ಷೆ ಬರೆಯಲು ಅನುವು ಮಾಡಿಕೊಡುವ 'ಡಿಮ್ಯಾಂಡ್-ಬೇಸ್ಡ್' ಮರುಪರೀಕ್ಷಾ ವ್ಯವಸ್ಥೆಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) 2027ರಿಂದ ಜಾರಿಗೆ ತರಲು ಸಿದ್ಧತೆ ನಡೆಸಿದೆ. ರಾಜ್ಯದಲ್ಲೇ ಇಂತಹ ವ್ಯವಸ್ಥೆ ಅಳವಡಿಸಿಕೊಳ್ಳುತ್ತಿರುವ ಮೊದಲ ಸಾರ್ವಜನಿಕ ವಿಶ್ವವಿದ್ಯಾಲಯ VTU ಆಗಿದ್ದು, ಇದರ ವ್ಯಾಪ್ತಿಯಲ್ಲಿ ಸುಮಾರು 220 ಎಂಜಿನಿಯರಿಂಗ್ ಕಾಲೇಜುಗಳು ಹಾಗೂ ಸುಮಾರು 3 ಲಕ್ಷ ವಿದ್ಯಾರ್ಥಿಗಳಿದ್ದಾರೆ ಎಂಬುದಿಲ್ಲಿ ಗಮನಾರ್ಹ.

ಬೆಂಗಳೂರು, ಸೆಪ್ಟೆಂಬರ್ 09: ಒಂದು ವಿಷಯದಲ್ಲಿ ಅನುತ್ತೀರಣರಾದರೂ ಸಪ್ಲಿಮೆಂಟರಿ ಪರೀಕ್ಷೆ ಬರೆಯಲು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಬಹಳ ಸಮಯ ಕಾಯಬೇಕಿತ್ತು. ಆದರೆ ಇಂತಹ ವಿದ್ಯಾರ್ಥಿಗಳಿಗೀಗ ಕರ್ನಾಟಕದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಗುಡ್‌ನ್ಯೂಸ್ ನೀಡಿದೆ. ವಿಷಯವೊಂದರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಸಪ್ಲಿಮೆಂಟರಿ ಪರೀಕ್ಷೆ ಬರೆಯಲು ಇನ್ನು ಮುಂದೆ ತಿಂಗಳುಗಟ್ಟಲೆ ಕಾಯಬೇಕಾಗಿಲ್ಲ. ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ಮರುಪರೀಕ್ಷೆ ನಡೆಸುವ ‘ಡಿಮ್ಯಾಂಡ್-ಬೇಸ್ಡ್’ ಪರೀಕ್ಷಾ ವ್ಯವಸ್ಥೆ ಜಾರಿಗೆ ತರಲು ವಿಶ್ವವಿದ್ಯಾಲಯ ಸಿದ್ಧತೆ ನಡೆಸಿದೆ.
ವಿದ್ಯಾರ್ಥಿಗಳು ತಿಳಿಸಿದ ದಿನಾಂಕದಂದೇ ಪರೀಕ್ಷೆ
ಹೊಸ ವ್ಯವಸ್ಥೆಯನ್ನು 2027ರ ಏಪ್ರಿಲ್-ಮೇನಲ್ಲಿ ಆರಂಭವಾಗುವ ಮುಂದಿನ ಶೈಕ್ಷಣಿಕ ಸಾಲಿನಿಂದ ಜಾರಿಗೆ ತರಲು ನಿರ್ಧರಿಸಲಾಗಿದ್ದು, ಈ ವ್ಯವಸ್ಥೆಯಡಿ ವಿದ್ಯಾರ್ಥಿಗಳು ಮರುಪರೀಕ್ಷೆಗೆ ಮನವಿ ಸಲ್ಲಿಸಬಹುದಾಗಿದೆ. ಬೇಡಿಕೆಗೆ ಅನುಗುಣವಾಗಿ VTU ಪರೀಕ್ಷೆ ನಡೆಸಲಿದೆ. ವಿದ್ಯಾರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕ ಪರೀಕ್ಷಾ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಸಾರ್ವಜನಿಕ ರಜಾದಿನಗಳಲ್ಲಿಯೂ ಪರೀಕ್ಷೆ ನಡೆಸುವಂತೆ ಮನವಿ ಮಾಡಬಹುದು. ಪರೀಕ್ಷೆ ಮುಗಿದ 24 ಗಂಟೆಗಳೊಳಗೆ ಫಲಿತಾಂಶ ಪ್ರಕಟಿಸಲಾಗುವುದು.
ಇದನ್ನೂ ಓದಿ: ಪಿಎಚ್‌ಡಿ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ: 70,000ರೂ. ವರೆಗೆ ಮಾಸಿಕ ಫೆಲೋಶಿಪ್, 10 ಲಕ್ಷ ರೂ. ಅನುದಾನ!
ಒಬ್ಬನೇ ವಿದ್ಯಾರ್ಥಿ ಬಯಸಿದರೂ ನಡೆಯಲಿದೆ ಎಕ್ಸಾಂ!
ವಿದ್ಯಾರ್ಥಿಗಳ ಕಲ್ಯಾಣವೇ ನಮ್ಮ ಆದ್ಯತೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಅನುಕೂಲಕರವಾಗಿಸಲು ಡಿಮ್ಯಾಂಡ್-ಬೇಸ್ಡ್ ಪರೀಕ್ಷೆಗಳನ್ನು ಜಾರಿಗೆ ತರಲು ನಿರ್ಧರಿಸಿದ್ದೇನೆ. ಅಗತ್ಯ ಸಿದ್ಧತೆಗಳೆಲ್ಲ ಪೂರ್ಣಗೊಂಡಿವೆ. ಒಬ್ಬನೇ ವಿದ್ಯಾರ್ಥಿ ಪರೀಕ್ಷೆ ಬರೆಯಲು ಬಯಸಿದರೂ ನಾವು ಪರೀಕ್ಷೆ ನಡೆಸುತ್ತೇವೆ ಎಂದು VTU ಉಪಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ತಿಳಿಸಿದ್ದಾರೆ.
ರಾಜ್ಯದಲ್ಲೇ ಇಂತಹ ವ್ಯವಸ್ಥೆ ಅಳವಡಿಸಿಕೊಳ್ಳುತ್ತಿರುವ ಮೊದಲ ಸಾರ್ವಜನಿಕ ವಿಶ್ವವಿದ್ಯಾಲಯ VTU ಆಗಿದೆ. VTU ವ್ಯಾಪ್ತಿಯಲ್ಲಿ ಸುಮಾರು 220 ಎಂಜಿನಿಯರಿಂಗ್ ಕಾಲೇಜುಗಳು ಹಾಗೂ ಸುಮಾರು 3 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಪ್ರತಿವರ್ಷ ಸುಮಾರು 70,000 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದು, ಅವರಲ್ಲಿ ಸುಮಾರು ಶೇ.20ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗುತ್ತಾರೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ. ಇದುವರೆಗೆ ಇಂತಹ ವಿದ್ಯಾರ್ಥಿಗಳು ಮರುಪರೀಕ್ಷೆ ಬರೆಯಲು ಆರು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಕಾಯಬೇಕಾಗುತ್ತಿತ್ತು.
ಹೊಸ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸಲಿದೆ?
VTU ಪ್ರಕಾರ, ವಿದ್ಯಾರ್ಥಿಯೊಬ್ಬರು ಪರೀಕ್ಷೆ ಬರೆಯಲು ಸಿದ್ಧರಾಗಿದ್ದೇನೆ ಎಂದು ಭಾವಿಸಿದ ನಂತರ ಮರುಪರೀಕ್ಷೆಗೆ ಮನವಿ ಸಲ್ಲಿಸಬಹುದು. ಭಾನುವಾರ ಸೇರಿದಂತೆ ತಮ್ಮ ಅನುಕೂಲಕರ ಸಮಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಅಲ್ಲದೆ, ತಮ್ಮ ಇಚ್ಛೆಯ ಪರೀಕ್ಷಾ ಕೇಂದ್ರವನ್ನೂ ಆಯ್ಕೆ ಮಾಡಿಕೊಳ್ಳಲು ಅವಕಾಶವಿರಲಿದೆ. ಪರೀಕ್ಷೆಗೆ ಮನವಿ ಮಾಡುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ VTU ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಲಿದೆ. ವಿಶ್ವವಿದ್ಯಾಲಯದ ಬಳಿ ಈಗಾಗಲೇ 500–600 ಪ್ರಶ್ನೆಪತ್ರಿಕೆಗಳ ಪ್ರಶ್ನೆ ಬ್ಯಾಂಕ್ ಇದ್ದು, ಕೃತಕ ಬುದ್ಧಿಮತ್ತೆ (AI) ಬಳಸಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಲಾಗುವುದು ಎಂದು VTU ತಿಳಿಸಿದೆ.
VTU ನಿಯಮಗಳ ಪ್ರಕಾರ, ನಾಲ್ಕು ವರ್ಷಗಳ ಬ್ಯಾಚುಲರ್ ಆಫ್ ಎಂಜಿನಿಯರಿಂಗ್ (BE) ಪದವಿಯನ್ನು ಪ್ರವೇಶ ಪಡೆದ ದಿನದಿಂದ ಗರಿಷ್ಠ ಎಂಟು ವರ್ಷಗಳಲ್ಲಿ ಪೂರ್ಣಗೊಳಿಸಬೇಕು. ಲ್ಯಾಟರಲ್ ಎಂಟ್ರಿ ವಿದ್ಯಾರ್ಥಿಗಳಿಗೆ ಈ ಅವಧಿ ಆರು ವರ್ಷ, ಆರ್ಕಿಟೆಕ್ಚರ್ ವಿದ್ಯಾರ್ಥಿಗಳಿಗೆ 10 ವರ್ಷವಾಗಿದೆ. ಆದರೆ ವಿದ್ಯಾರ್ಥಿಯೊಬ್ಬರು ಎಷ್ಟು ಬಾರಿ ಮರುಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು ಎಂಬುದಕ್ಕೆ ಯಾವುದೇ ಮಿತಿ ಇರಲಿದೆಯೇ ಎಂಬುದನ್ನು VTU ಇನ್ನೂ ಸ್ಪಷ್ಟಪಡಿಸಿಲ್ಲ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




