ತಮ್ಮದೇ ಮದುವೆಗೆ ಎರಡು ಬಾರಿ ಗೈರಾಗಿದ್ದ ಖ್ಯಾತ ನಟ ಕೆಕೆ ಗೋಸ್ವಾಮಿ
ಕುಬ್ಜ ಎತ್ತರದ ಕಾರಣಕ್ಕೆ ಹಲವು ಅಪಹಾಸ್ಯ ಅನುಭವಿಸಿದ ಪ್ರಸಿದ್ಧ ನಟ ಕೆ.ಕೆ. ಗೋಸ್ವಾಮಿ, ಪ್ರೀತಿಯಲ್ಲಿ ತೀವ್ರ ಅವಮಾನ ಎದುರಿಸಿದ್ದರು. ನಿರಾಕರಣೆಯ ಭಯದಿಂದ ತಮ್ಮದೇ ಮದುವೆಯನ್ನು ಎರಡು ಬಾರಿ ಕ್ಯಾನ್ಸಲ್ ಮಾಡಿದ್ದ ಅವರು, ಕೊನೆಗೆ ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾದ ಆಸಕ್ತಿಕರ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಮುಖ್ಯಾಂಶಗಳು
- ಪ್ರೀತಿಸಿದ ಹುಡುಗಿಯಿಂದ ಕಹಿ ಅವಮಾನ
- ಮದುವೆ ಹೆಸರೆತ್ತಿದರೆ ಬೆಚ್ಚಿಬೀಳುತ್ತಿದ್ದ ನಟ
- ದೇವಸ್ಥಾನದಲ್ಲಿ ಮದುವೆ ನಡೆಯುವಾಗ ಪೊಲೀಸರ ಎಂಟ್ರಿ
ಚಿಕ್ಕ ಎತ್ತರದ ಕಾರಣಕ್ಕೆ ಸಮಾಜದಿಂದ ಎದುರಾದ ಅಪಹಾಸ್ಯ, ಹೇಳಿಕೆ ಮತ್ತು ತಿರಸ್ಕಾರಗಳನ್ನು ಮೆಟ್ಟಿ ನಿಂತು ಚಿತ್ರರಂಗದಲ್ಲಿ ತಮ್ಮದೇ ಆದ ಗುರುತು ಮೂಡಿಸಿದ ಹಿರಿಯ ನಟ ಕೆ.ಕೆ. ಗೋಸ್ವಾಮಿ ಅವರ ಜೀವನ ಪಯಣ ಅತ್ಯಂತ ರೋಚಕವಾಗಿದೆ. ‘ಶಕ್ತಿಮಾನ್’, ‘ವಿಕ್ರಾವ್ ಔರ್ ಗಬ್ರಾಲ್’ ನಂತಹ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿ ಮನೆಮಾತಾಗಿದ್ದ ಇವರು, ವೈಯಕ್ತಿಕ ಜೀವನದಲ್ಲಿ ಅನುಭವಿಸಿದ ಕಷ್ಟಗಳು ಹಾಗೂ ನಿರಾಕರಣೆಯ ಭಯದಿಂದ ಎರಡು ಬಾರಿ ತಮ್ಮದೇ ಮದುವೆಯನ್ನು ರದ್ದುಗೊಳಿಸಿದ್ದರು.
ಆರಂಭಿಕ ದಿನಗಳಲ್ಲಿ ಪ್ರೀತಿಸಿದ ಹುಡುಗಿಯಿಂದ ತೀವ್ರ ಅವಮಾನ ಎದುರಿಸಿದ್ದ ಗೋಸ್ವಾಮಿ ಅವರಿಗೆ ಮದುವೆಯಾಗುವ ಭರವಸೆಯೇ ಹೊರಟುಹೋಗಿತ್ತು. ಎತ್ತರದ ನೆಪ ಹೇಳಿ ಗೆಳತಿಯೇ ತಿರಸ್ಕರಿಸಿದ್ದರಿಂದ, ಮುಂದೆ ಮದುವೆಯಾದರೆ ಎಲ್ಲರೂ ತಮ್ಮನ್ನು ನಿರಾಕರಿಸಬಹುದು ಎಂಬ ಭಯ ಅವರ ಮನಸ್ಸಿನಲ್ಲಿ ಆಳವಾಗಿ ಬೇರೂರಿತ್ತು. ಹೀಗಾಗಿ ತಂದೆ ನಿಶ್ಚಯಿಸಿದ್ದ ಮದುವೆಗೆ ಹೋಗದೆ ಕೆಲಸದ ನೆಪ ಹೇಳಿ ಎರಡು ಬಾರಿ ತಪ್ಪಿಸಿಕೊಂಡಿದ್ದರು. ಕೊನೆಗೆ ಪೋಷಕರ ಒತ್ತಾಯಕ್ಕೆ ಮಣಿದು ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾಗಲು ಒಪ್ಪಿಕೊಂಡಿದ್ದರು.
ದೇವಸ್ಥಾನದಲ್ಲಿ ಮದುವೆ ನಡೆಯುವಾಗಲೂ ದೊಡ್ಡ ಹೈಡ್ರಾಮಾವೇ ನಡೆದಿತ್ತು. ನಟನ ಎತ್ತರವನ್ನು ನೋಡಿ ಯಾರೋ ಬಲವಂತವಾಗಿ ಹುಡುಗಿಯನ್ನು ಮದುವೆ ಮಾಡುತ್ತಿದ್ದಾರೆ ಎಂದು ಭಾವಿಸಿದ ಪೊಲೀಸರು ಸ್ಥಳಕ್ಕೆ ಬಂದಿದ್ದರು. ಬಳಿಕ ವಧು ಸ್ವಇಚ್ಛೆಯಿಂದ ಮದುವೆಯಾಗುತ್ತಿರುವುದಾಗಿ ಸ್ಪಷ್ಟಪಡಿಸಿದ ನಂತರವೇ ವಿವಾಹ ನೆರವೇರಿತು. ಸಂಕಷ್ಟದ ಸಮಯದಲ್ಲಿದ್ದಾಗ ಪತ್ನಿ ನೀಡಿದ ಆರ್ಥಿಕ ಬೆಂಬಲವೇ ನನ್ನನ್ನು ಈ ಹಂತಕ್ಕೆ ತರಲು ನೆರವಾಯಿತು ಎಂದು ಗೋಸ್ವಾಮಿ ಸ್ಮರಿಸುತ್ತಾರೆ.
ಕೇವಲ ವೈಯಕ್ತಿಕ ಜೀವನ ಮಾತ್ರವಲ್ಲದೆ ಶಾಲಾ ದಿನಗಳು ಮತ್ತು ವೃತ್ತಿಜೀವನದಲ್ಲೂ ಗೋಸ್ವಾಮಿ ಹಲವು ಸವಾಲುಗಳನ್ನು ಎದುರಿಸಿದರು. ಸಹಪಾಠಿಗಳ ಕಿರುಕುಳದಿಂದಾಗಿ ಶಿಕ್ಷಣ ತೊರೆದ ಇವರು, ಆ ಬಳಿಕ ಬಾಲಿವುಡ್‌ನಲ್ಲಿ ಹೀರೊ ಆಗುವ ಕನಸ ಹೊತ್ತು ಮುಂಬೈಗೆ ಬಂದರು. ಅನೇಕರು ಇವರ ಕನಸನ್ನು ನೋಡಿ ಗೇಲಿ ಮಾಡಿದರು. ಆದರೆ ತಮ್ಮ ಶ್ರಮದಿಂದ ಕಿರುತೆರೆಯಲ್ಲಿ ದೊಡ್ಡ ಸಕ್ಸಸ್ ಕಂಡು ‘ಮಿಷನ್ ಗಬ್ರಾಲ್’ ಮತ್ತು ‘ಶಕ್ತಿಮಾನ್’ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದರು.
ಇದನ್ನೂ ಓದಿ: ‘ಶಕ್ತಿಮಾನ್ ಪಾತ್ರಕ್ಕೆ ರಣವೀರ್ ಸಿಂಗ್ ಬೇಡ ಎಂದಿದ್ದು ನನ್ನ ಮೂರ್ಖತನ’: ಮುಕೇಶ್ ಖನ್ನಾ
ಇಂದಿಗೂ ರಸ್ತೆಯಲ್ಲಿ ಹೋಗುವಾಗ ಜನರು ತಮ್ಮನ್ನು ವಿಚಿತ್ರವಾಗಿ ನೋಡುವುದು ಮತ್ತು ಗೇಲಿ ಮಾಡುವುದನ್ನು ಅವರು ಎದುರಿಸುತ್ತಿದ್ದಾರೆ. ಆದರೂ ಎದೆಗುಂದದೆ ತಮ್ಮದೇ ಆದ ಕಾರು ಚಾಲನೆ ಮಾಡುತ್ತಾ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಸದ್ಯ ಇಬ್ಬರು ಹೆಣ್ಣುಮಕ್ಕಳ ತಂದೆಯಾಗಿರುವ ಗೋಸ್ವಾಮಿ, ಶೀಘ್ರದಲ್ಲೇ ಪಂಕಜ್ ತ್ರಿಪಾಠಿ ಮತ್ತು ಕುನಾಲ್ ಖೇಮು ಅವರೊಂದಿಗೆ ದೊಡ್ಡ ವೆಬ್ ಸಿರೀಸ್ ಒಂದರಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




