ಮೋಹನ್‌ಲಾಲ್ ಪಡೆಯದ ಗೆಲುವು ಅಜಯ್ ದೇವಗನ್ ಪಾಲಾಗುವುದೇ? ‘ದೃಶ್ಯಂ 3’ ಮೇಲೆ ಹೆಚ್ಚಿದ ನಿರೀಕ್ಷೆ
ಮೋಹನ್‌ಲಾಲ್ ನಟನೆಯ ‘ದೃಶ್ಯಂ 3’ ಮಲಯಾಳಂ ಚಿತ್ರವು ಕ್ಲೈಮ್ಯಾಕ್ಸ್ ವಿಷಯದಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆದರೆ ಈಗ ರಿಲೀಸ್ ಆಗುತ್ತಿರುವ ಅಜಯ್ ದೇವಗನ್ ಅವರ ಹಿಂದಿ ಆವೃತ್ತಿಯು ಸರಣಿಯ ಅಂತಿಮ ಭಾಗವಾಗಿದ್ದು. ಪ್ರೇಕ್ಷಕರಿಗೆ ಪರಿಪೂರ್ಣ ಹಾಗೂ ತೃಪ್ತಿಕರ ಮುಕ್ತಾಯ ನೀಡುವ ಮೂಲಕ ಗೆಲುವಿನ ನಗೆ ಬೀರಲಿದೆಯೇ ಎಂಬ ಕುತೂಹಲ ಹೆಚ್ಚಾಗಿದೆ.

ಮುಖ್ಯಾಂಶಗಳು
- ಮೋಹನ್‌ಲಾಲ್‌ಗೆ ಎದುರಾದ ಅತೃಪ್ತಿ
- ಅಜಯ್ ದೇವಗನ್‌ಗೆ ಒಲಿಯುವುದೇ ಗೆಲುವು?
- ಸರಣಿಗೆ ಬೀಳಲಿದೆ ಸಂಪೂರ್ಣ ತೆರೆ
ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ಥ್ರಿಲ್ಲರ್ ಫ್ರಾಂಚೈಸಿಗಳಲ್ಲಿ ‘ದೃಶ್ಯಂ’ ಸಿನಿಮಾ ಸರಣಿಗೆ ಪ್ರಮುಖ ಸ್ಥಾನವಿದೆ. ಮಲಯಾಳಂನಲ್ಲಿ ಮೋಹನ್‌ಲಾಲ್ ಅಭಿನಯದ ‘ದೃಶ್ಯಂ 3‘ ಸಿನಿಮಾ ಇತ್ತೀಚೆಗೆ ತೆರೆಕಂಡು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು. ಆದರೆ ಕಥೆಯ ಅಂತ್ಯದ ವಿಷಯದಲ್ಲಿ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ಹಿಂದಿ ಆವೃತ್ತಿಯ ‘ದೃಶ್ಯಂ 3’ ಸಿನಿಮಾ ರಿಲೀಸ್ ಆಗುತ್ತಿದೆ. ಮೋಹನ್‌ಲಾಲ್ ಹಿನ್ನಡೆ ಕಂಡ ಜಾಗದಲ್ಲಿ ಅಜಯ್ ದೇವಗನ್ ಗೆದ್ದು ಬೀಗುತ್ತಾರಾ ಎಂಬ ಕುತೂಹಲ ಎಲ್ಲರಲ್ಲಿದೆ.
ಮಲಯಾಳಂ ಅವತರಣಿಕೆಯ ‘ದೃಶ್ಯಂ 3’ ಸಿನಿಮಾ ಜಾರ್ಜ್‌ಕುಟ್ಟಿಯ ಸುದೀರ್ಘ ಹೋರಾಟಕ್ಕೆ ಸೂಕ್ತವಾದ ಮುಕ್ತಾಯ ನೀಡಲಿಲ್ಲ ಎನ್ನುವುದು ಹಲವರ ದೂರು. ಮುಂದಿನ ಸೀಕ್ವೆಲ್ ನಿರ್ಮಿಸುವ ಉದ್ದೇಶದಿಂದ ಕಥೆಯನ್ನು ಅಲ್ಲಿಗೆ ಬಾಕಿ ಉಳಿಸಲಾಗಿತ್ತು. ಇದು ಕ್ಲೈಮ್ಯಾಕ್ಸ್‌ನಲ್ಲಿ ಪ್ರೇಕ್ಷಕರಿಗೆ ಸಂಪೂರ್ಣ ತೃಪ್ತಿ ನೀಡಲು ವಿಫಲವಾಗಿತ್ತು. ಸಿನಿಮಾ ಪ್ರೇಕ್ಷಕರಲ್ಲಿ ಅನೇಕ ಪ್ರಶ್ನೆಗಳನ್ನು ಹಾಗೆಯೇ ಉಳಿಸಿತ್ತು.
ಈಗ ಎಲ್ಲರ ಚಿತ್ತ ಹಿಂದಿ ಆವೃತ್ತಿಯ ‘ದೃಶ್ಯಂ 3’ ಚಿತ್ರದತ್ತ ನೆಟ್ಟಿದೆ. ಚಿತ್ರತಂಡ ಈಗಾಗಲೇ ಅಧಿಕೃತವಾಗಿ ಇದು ಸರಣಿಯ ಅಂತಿಮ ಭಾಗ ಎಂದು ಘೋಷಿಸಿದೆ. ಹೀಗಾಗಿ ಈ ಬಾರಿಯ ಕಥೆಗೆ ಸಂಪೂರ್ಣ ಹಾಗೂ ಸ್ಪಷ್ಟವಾದ ತೆರೆ ಬೀಳಲಿದೆ ಎಂಬ ನಿರೀಕ್ಷೆ ಮೂಡಿದೆ. ಇದು ಪ್ರೇಕ್ಷಕರಲ್ಲಿ ಕ್ಲೈಮ್ಯಾಕ್ಸ್ ಬಗ್ಗೆ ಭಾರಿ ಕುತೂಹಲ ಮೂಡಿಸಿದೆ.
ಚಿತ್ರತಂಡಕ್ಕೆ ಪ್ರೇಕ್ಷಕರಿಗೆ ನೀಡಬೇಕಾದ ಪರಿಪೂರ್ಣ ಕ್ಲೈಮ್ಯಾಕ್ಸ್ ತಲುಪಿಸುವುದೇ ದೊಡ್ಡ ಸವಾಲಾಗಿದೆ. ವರ್ಷಗಳಿಂದ ಈ ಪಾತ್ರಗಳನ್ನು ಪ್ರೀತಿಸಿದ ಜನರಿಗೆ ಗೊಂದಲಗಳಿಲ್ಲದ ಸ್ಪಷ್ಟ ಮುಕ್ತಾಯ ಬೇಕಿದೆ. ಭಾವನಾತ್ಮಕವಾಗಿ ಕನೆಕ್ಟ್ ಆಗುವ ಬಲವಾದ ಅಂತ್ಯ ಮಾತ್ರ ಸಿನಿಮಾವನ್ನು ಗೆಲ್ಲಿಸಲು ಸಾಧ್ಯ. ಒಂದು ಸೂಕ್ತ ಅಂತ್ಯವು ಚಿತ್ರದ ಮೇಲಿನ ಇಮೇಜ್ ಅನ್ನು ಮತ್ತಷ್ಟು ಹೆಚ್ಚಿಸಲಿದೆ.
ಇದನ್ನೂ ಓದಿ: ಮೋಹನ್‌ಲಾಲ್ ಸಿನಿಮಾಗಿಂತ ಡಿಫರೆಂಟ್ ಆಗಿರಲಿದೆ ಹಿಂದಿಯ ‘ದೃಶ್ಯಂ 3’: ಅಜಯ್ ದೇವಗನ್ ಭರವಸೆ
ಅಜಯ್ ದೇವಗನ್ ಮತ್ತು ಅವರ ತಂಡ ಪ್ರೇಕ್ಷಕರು ಮೆಚ್ಚುವಂತಹ ಕ್ಲೈಮ್ಯಾಕ್ಸ್ ನೀಡಿದರೆ ಸಿನಿಮಾ ಕಮರ್ಷಿಯಲ್ ಆಗಿ ಗೆಲ್ಲುವುದು ನಿಶ್ಚಿತ. ಈಗಾಗಲೇ ಚಿತ್ರದ ಮುಂಗಡ ಬುಕಿಂಗ್‌ಗೆ ಅತ್ಯುತ್ತಮ ಪ್ರತಿಯಾಗ ಸಿಗುತ್ತಿದೆ. ಈ ಮೂಲಕ ‘ದೃಶ್ಯಂ’ ಸರಣಿಗೆ ಹಿಂದಿಯಲ್ಲಿ ಸುಂದರ ಹಾಗೂ ಅರ್ಥಪೂರ್ಣ ಮುಕ್ತಾಯ ಸಿಗುವ ಲಕ್ಷಣಗಳು ಎದ್ದು ಕಾಣುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




