
ಬೆಂಗಳೂರು, ಜುಲೈ 09: ಕನ್ನಡ ಸೇರಿದಂತೆ ಎಸ್‌ಎಸ್‌ಎಲ್‌ಸಿ (SSLC) ಪ್ರಥಮ ಭಾಷಾ ಪರೀಕ್ಷೆಯ ಅಂಕವನ್ನು 125ರ ಬದಲು 100ಕ್ಕೆ ಸೀಮಿತಗೊಳಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮುಂದಾಗಿದೆ. ಸದ್ಯ ಈ ವಿಚಾರವಾಗಿ ಸಾಕಷ್ಟು ವಿರೋಧ ಕೇಳಿಬರುತ್ತಿದೆ. ಸಾಹಿತಿ ಬರಗೂರು ರಾಮಚಂದ್ರಪ್ಪ (Baraguru Ramachandrappa) ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಈ ನಿರ್ಧಾರವನ್ನು ಕೈಬಿಡುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಪತ್ರ ಬರೆದಿದ್ದು, ಅಂಕಗಳನ್ನ 100ಕ್ಕೆ ಇಳಿಕೆ ಮಾಡುವುದು ಬೇಡವೆಂದು ಮನವಿ ಮಾಡಿದ್ದಾರೆ.
ಕನ್ನಡ ಸೇರಿದಂತೆ ಎಸ್‌ಎಸ್‌ಎಲ್‌ಸಿ ಪ್ರಥಮ ಭಾಷಾ ಪರೀಕ್ಷೆಯ ಅಂಕಗಳನ್ನು 125ರ ಬದಲು 100ಕ್ಕೆ ಸೀಮಿತಗೊಳಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ಧರಿಸಿದೆ ಎಂಬ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದಿ ಅಚ್ಚರಿ ಆಯಿತು. ಈ ನಿರ್ಧಾರವು ತೀವ್ರ ಖಂಡನೀಯ.
ಇದನ್ನೂ ಓದಿ: ವಿದ್ಯಾರ್ಥಿ, ಪೋಷಕರು ಗಮನಕ್ಕೆ: SSLC ಪರೀಕ್ಷಾ ನಿಯಮದಲ್ಲಿ ಮಹತ್ವದ ಬದಲಾವಣೆ
ಕನ್ನಡ ಸೇರಿದಂತೆ ಪ್ರಥಮ ಭಾಷೆಗಳಿಗೆ 125 ಅಂಕಗಳನ್ನು ನಿಗದಿ ಪಡಿಸಿದ ತೀರ್ಮಾನವು ಗೋಕಾಕ್ ಚಳವಳಿಯೆಂದೇ ಪ್ರಸಿದ್ಧವಾದ ಕನ್ನಡಪರ ಆಂದೋಲನದ ಫಲವಾಗಿ ಮೂಡಿ ಬಂದಿತ್ತು. ಕರ್ನಾಟಕ ಸಾಹಿತಿ ಕಲಾವಿದರು, ಹೋರಾಟಗಾರರು ನಡೆಸುತ್ತಿದ್ದ ಈ ಚಳುವಳಿಗೆ ಡಾ. ರಾಜಕುಮಾರ್ ಅವರ ನೇತೃತ್ವ ದೊರೆತು ರಾಜ್ಯಾದ್ಯಂತ ತೀವ್ರವಾಗಿ ವ್ಯಾಪಿಸಿದ ಫಲವಾಗಿ ಅಂದಿನ ಶ್ರೀ ಗುಂಡೂರಾವ್ ನೇತೃತ್ವದ ಸರ್ಕಾರವು ಕನ್ನಡ ಪ್ರಥಮ ಭಾಷೆಯನ್ನು ಒಳಗೊಂಡಂತೆ ಮೂರು ಭಾಷೆಗಳಿಗೂ ತಲಾ 100 ಅಂಕ ನಿಗದಿ ಪಡಿಸುವ ಸೂತ್ರವನ್ನು ರೂಪಿಸಿತ್ತು.
ಇದನ್ನೂ ಓದಿ: ಇನ್ಮುಂದೆ ಶಾಲೆಗಳಲ್ಲಿ ಹೊಸ ರೂಲ್ಸ್: ವಿದ್ಯಾರ್ಥಿಗಳು, ಪೋಷಕರು ಇದನ್ನ ತಿಳಿದುಕೊಳ್ಳಲೇಬೇಕು!
ಈ ಸೂತ್ರಕ್ಕೆ ತೀವ್ರ ವಿರೋಧ ವ್ಯಕ್ತವಾಗಿ ದೀರ್ಘ ಚರ್ಚೆ, ಚಿಂತನೆಗಳ ನಂತರ ಕನ್ನಡವೂ ಸೇರಿದಂತೆ ಪ್ರಥಮ ಭಾಷೆಗಳಿಗೆ 125 ಅಂಕಗಳನ್ನು ನಿಗದಿ ಮಾಡಲಾಯಿತು. ಆಗ ಚಳುವಳಿಯ ಫಲವಾಗಿ ರೂಪುಗೊಂಡ ಈ ಸರ್ವ ಸಮ್ಮತ ನಿರ್ಧಾರವನ್ನು ಈಗ ಬದಲಾಯಿಸಿ 100 ಅಂಕಗಳನ್ನು ನಿಗದಿ ಮಾಡುವುದು ಯಾವ ತರ್ಕ? ಇದರ ಹಿಂದೆ ತರ್ಕವೂ ಇಲ್ಲ. ತತ್ವವೂ ಇಲ್ಲ. ಇದು ಕನ್ನಡವೂ ಸೇರಿದಂತೆ ಮಾತೃಭಾಷೆಗಳ ಮಹತ್ವವನ್ನು ಕುಗ್ಗಿಸುವ ಕೆಲಸ. ಕನ್ನಡ ವಿರೋಧಿ ನಿರ್ಧಾರ. ಈ ನಿರ್ಧಾರವನ್ನು ಕೂಡಲೇ ವಾಪಸ್ ಪಡೆಯಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:20 pm, Wed, 9 July 25