ದೇಶಾದ್ಯಂತ 12ನೇ ತರಗತಿಗೆ ಏಕರೂಪ ಮೌಲ್ಯಮಾಪನ ವ್ಯವಸ್ಥೆ ಬೇಡ; ಒಬ್ಬ ವಿದ್ಯಾರ್ಥಿ ಕೊರೊನಾಕ್ಕೆ ಮೃತಪಟ್ಟರೂ ಸರ್ಕಾರವೇ ಹೊಣೆ: ಸುಪ್ರೀಂ

Second PUC 2021 Results: ದೇಶಾದ್ಯಂತ ಏಕರೂಪದ ಮೌಲ್ಯಮಾಪನ ವ್ಯವಸ್ಥೆ ಬೇಡ. ಬೋರ್ಡ್ ಪರೀಕ್ಷೆಯ ಮೌಲ್ಯಮಾಪನ ವ್ಯವಸ್ಥೆ ತೀರ್ಮಾನ ರಾಜ್ಯಗಳಿಗೆ ಬಿಟ್ಟ ವಿಚಾರ ಎಂದು ಸುಪ್ರೀಂ ಕೋರ್ಟ್​ ಹೇಳಿದೆ.

ದೇಶಾದ್ಯಂತ 12ನೇ ತರಗತಿಗೆ ಏಕರೂಪ ಮೌಲ್ಯಮಾಪನ ವ್ಯವಸ್ಥೆ ಬೇಡ; ಒಬ್ಬ ವಿದ್ಯಾರ್ಥಿ ಕೊರೊನಾಕ್ಕೆ ಮೃತಪಟ್ಟರೂ ಸರ್ಕಾರವೇ ಹೊಣೆ: ಸುಪ್ರೀಂ
ಸಾಂಕೇತಿಕ ಚಿತ್ರ
Edited By:

Updated on: Jun 24, 2021 | 1:42 PM

ದೆಹಲಿ: ಕೊರೊನಾ ಎರಡನೇ ಅಲೆ ಕಾರಣದಿಂದ ಸ್ಥಗಿತಗೊಂಡಿರುವ 12ನೇ ತರಗತಿ ಪರೀಕ್ಷೆಗಳ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಏಕರೂಪದ ಮೌಲ್ಯಮಾಪನ ವ್ಯವಸ್ಥೆ ಜಾರಿಗೊಳಿಸಲು ಭಾರತದ ಸರ್ವೋಚ್ಛ ನ್ಯಾಯಾಲಯ ನಿರಾಕರಿಸಿದೆ. ರಾಜ್ಯಗಳ ಬೋರ್ಡ್ ಪರೀಕ್ಷೆಗೆ ಏಕರೂಪ ಮೌಲ್ಯಮಾಪನ ಪದ್ಧತಿ ಬೇಡ ಎಂದಿರುವ ಘನ ನ್ಯಾಯಾಲಯ, ಮೌಲ್ಯಮಾಪನ ವ್ಯವಸ್ಥೆ ತೀರ್ಮಾನ ರಾಜ್ಯಗಳಿಗೆ ಬಿಟ್ಟ ನಿರ್ಧಾರ ಎಂದು ಅಭಿಪ್ರಾಯಪಟ್ಟಿದೆ.

ಕೊರೊನಾ ಆರಂಭವಾದಾಗಿನಿಂದ ಶೈಕ್ಷಣಿಕ ವ್ಯವಸ್ಥೆಗೆ ಅನೇಕ ಅಡೆತಡೆಗಳು ಎದುರಾಗಿದ್ದು, ಕಳೆದ ವರ್ಷವೂ ಪರೀಕ್ಷೆ ಆಯೋಜಿಸಲು ಭಾರೀ ಸಮಸ್ಯೆಯಾಗಿತ್ತು. ಆದರೆ, ತಡವಾಗಿಯಾದರೂ ಅನೇಕ ರಾಜ್ಯಗಳು ಪರೀಕ್ಷೆ ನಡೆಸುವ ಸಂಕಲ್ಪ ಮಾಡಿದ ಪರಿಣಾಮವಾಗಿ ಕೊರೊನಾ ಮೊದಲ ಅಲೆ ನಿಯಂತ್ರಣಕ್ಕೆ ಬರುತ್ತಿದ್ದಂತೆಯೇ ಪರೀಕ್ಷೆ ನಡೆಸಲಾಗಿತ್ತು. ಆದರೆ, ಈ ಬಾರಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ ಕಾರಣ ಕಳೆದ ವರ್ಷದಂತೆ ಧೈರ್ಯ ಮಾಡಿ ಮುನ್ನುಗ್ಗುವುದು ಕಷ್ಟವಿದೆ.

ಒಂದೆಡೆ ಕೊರೊನಾ ಎರಡನೇ ಅಲೆ ತಾರಕಕ್ಕೆ ಹೋಗಿರುವುದು ಪರೀಕ್ಷೆ ಹಿನ್ನೆಡೆ ಉಂಟುಮಾಡಿದ್ದರೆ ಇನ್ನೊಂದೆಡೆ ಸಂಭವನೀಯ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಆಘಾತಕಾರಿ ಎಂಬ ಅಭಿಪ್ರಾಯ ಇರುವುದು ಕೂಡಾ ಪರೀಕ್ಷೆ ವಿಚಾರದಲ್ಲಿ ಯೋಚನೆ ಮಾಡಲು ಕಾರಣವಾಗಿದೆ. ಹೀಗಾಗಿಯೇ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ದ್ವಿತೀಯ ಪಿಯು ಪರೀಕ್ಷೆಯನ್ನೇ ರದ್ದಪಡಿಸಿ ಹಿಂದಿನ ಪರೀಕ್ಷೆ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸುವುದಾಗಿ ತಿಳಿಸಿವೆ.

ಆದರೆ, ಇದಕ್ಕೆ ಸಂಬಂಧಪಟ್ಟಂತೆ ದೇಶಾದ್ಯಂತ ಏಕರೂಪ ಮೌಲ್ಯಮಾಪನ ಪದ್ಧತಿ ಜಾರಿಗೊಳಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಸದ್ಯ ಈ ನಿಲುವಿಗೆ ಹಿನ್ನೆಡೆ ಉಂಟಾಗಿದ್ದು, ದೇಶಾದ್ಯಂತ ಏಕರೂಪದ ಮೌಲ್ಯಮಾಪನ ವ್ಯವಸ್ಥೆ ಬೇಡ. ಬೋರ್ಡ್ ಪರೀಕ್ಷೆಯ ಮೌಲ್ಯಮಾಪನ ವ್ಯವಸ್ಥೆ ತೀರ್ಮಾನ ರಾಜ್ಯಗಳಿಗೆ ಬಿಟ್ಟ ವಿಚಾರ ಎಂದು ಹೇಳಿದೆ.

ಒಂದೇ ಒಂದು ಮಗು ಕೊರೊನಾಕ್ಕೆ ಬಲಿಯಾದರೂ ಸರ್ಕಾರವೇ ಹೊಣೆ
ಏತನ್ಮಧ್ಯೆ, ಆಂಧ್ರಪ್ರದೇಶದಲ್ಲಿ ಜುಲೈ ತಿಂಗಳ ಕೊನೆಯ ವಾರದಲ್ಲಿ 12ನೇ ತರಗತಿ ಪರೀಕ್ಷೆ ನಡೆಸಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್​ಗೆ ಅಫಿಡವಿಟ್ ಸಲ್ಲಿಸಿರುವ ಆಂಧ್ರ ರಾಜ್ಯ ಸರ್ಕಾರ ತನ್ನ ನಿಲುವನ್ನು ಹೇಳಿದೆ. ಆದರೆ, ಈ ವಿಚಾರದಲ್ಲಿ ಆಂಧ್ರ ಸರ್ಕಾರಕ್ಕೆ ಗಂಭೀರ ಪ್ರಶ್ನೆ ಕೇಳಿರುವ ಸರ್ವೋಚ್ಛ ನ್ಯಾಯಾಲಯ ಮಕ್ಕಳ ಜೀವದ ಜತೆ ಸರ್ಕಾರ ಆಟವಾಡುತ್ತಿದೆಯೇ? ಎಂದು ಕೇಳಿದೆ. ಅಲ್ಲದೇ, ಕೊರೊನಾಗೆ ಒಬ್ಬನೇ ಒಬ್ಬ ವಿದ್ಯಾರ್ಥಿ ಮೃತಪಟ್ಟರೂ ಆಂಧ್ರ ಸರ್ಕಾರವೇ ಸಂಪೂರ್ಣ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದೆ.

(Supreme Court decision on 2nd PUC Result 2021 says it is state board concern)

ಇದನ್ನೂ ಓದಿ:
ಸಿಬಿಎಸ್​ಇ, ಐಎಸ್​ಸಿಇ 12ನೇ ತರಗತಿ ಪರೀಕ್ಷೆ ರದ್ದತಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂಕೋರ್ಟ್ 

ICSE Board Results 2021: 6 ವರ್ಷದ ಅಂಕ ಆಧರಿಸಿ 12ನೇ ತರಗತಿ ಫಲಿತಾಂಶ; ತಾತ್ವಿಕ ಒಪ್ಪಿಗೆ ನೀಡಿದ ಸುಪ್ರೀಂಕೋರ್ಟ್