ಕೀವ್: ರಷ್ಯಾ ದಾಳಿಯಿಂದಾಗಿ ತಲೆದೋರಿರುವ ಯುದ್ಧ ಪರಿಸ್ಥಿತಿಯಿಂದಾಗಿ ಅನಿವಾರ್ಯವಾಗಿ ದೇಶ ಬಿಟ್ಟು ಹೋಗಿರುವ ವಿದೇಶಿ ವಿದ್ಯಾರ್ಥಿಗಳು ತಮ್ಮ ಸ್ವದೇಶಗಳಲ್ಲಿಯೇ ಪ್ರಾಯೋಗಿಕ ತರಬೇತಿ ಪಡೆದುಕೊಳ್ಳಬಹುದು. ಸ್ಥಳೀಯ ಆಸ್ಪತ್ರೆಗಳ ಆಡಳಿತಾಧಿಕಾರಿಗಳು ಅಥವಾ ವೈದ್ಯರು ಕೊಡುವ ಪ್ರಮಾಣ ಪತ್ರಗಳಿಗೆ ಈ ಶೈಕ್ಷಣಿಕ ವರ್ಷದ ಅವಧಿಗೆ ಮಾನ್ಯತೆ ನೀಡಲಾಗುವುದು ಎಂದು ಉಕ್ರೇನ್ನ ವೈದ್ಯಕೀಯ ವಿಶ್ವವಿದ್ಯಾಲಯಗಳು ಭರವಸೆ ನೀಡಿವೆ. ಉಕ್ರೇನ್ ಶಿಕ್ಷಣ ಇಲಾಖೆ ಮತ್ತು ವಿಶ್ವವಿದ್ಯಾಲಯಗಳ ಈ ನಿರ್ಧಾರವು ಭಾರತವೂ ಸೇರಿದಂತೆ ವಿಶ್ವದ ಹಲವೆಡೆ ಇರುವ ಸಾವಿರಾರು ವಿದ್ಯಾರ್ಥಿಗಳಿಗೆ ನೆಮ್ಮದಿ ನೀಡಿದೆ. ವಿದ್ಯಾರ್ಥಿಗಳಿಗೆ ನೆರವಾಗಬೇಕು ಎಂದು ವಿದೇಶಗಳ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಗಳನ್ನು ಉಕ್ರೇನ್ ಆಡಳಿತ ಕೋರಿದೆ.
ಉಕ್ರೇನ್ನಲ್ಲಿ ಭದ್ರತಾ ಪರಿಸ್ಥಿತಿ ತೀವ್ರ ಹದಗೆಟ್ಟ ಕಾರಣ ಅಲ್ಲಿನ ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳು ಆಫ್ಲೈನ್ ಕ್ಲಾಸ್ಗಳನ್ನು ರದ್ದುಪಡಿಸಿ, ಆನ್ಲೈನ್ ಕ್ಲಾಸ್ಗಳಿಗೆ ಒತ್ತು ನೀಡುತ್ತಿವೆ. ತಮ್ಮ ದೇಶಗಳಿಗೆ ವಾಪಸ್ ಬಂದಿರುವ ಉಕ್ರೇನ್ ವಿದ್ಯಾರ್ಥಿಗಳಿಗೆ ಅಗತ್ಯ ಪ್ರಾಯೋಗಿಕ ತರಗತಿಗಳು ಹಾಗೂ ಇಂಟರ್ನ್ಶಿಪ್ ಅಭ್ಯಾಸ ಕಲ್ಪಿಸಲು ಹಲವು ದೇಶಗಳ ಸರ್ಕಾರಗಳು ಮುಂದಾಗಿವೆ.
ಉಕ್ರೇನ್ನ ಪ್ರಸ್ತುತ ಸ್ಥಿತಿ ಗಮನಿಸಿ, ತಂತ್ರಜ್ಞಾನದ ನೆರವಿನೊಂದಿಗೆ ಪಾಠ-ಪ್ರವಚನಗಳನ್ನು ಮುಂದುವರಿಸಲಾಗುತ್ತಿದೆ. ಆದರೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕೌಶಲ ಗಳಿಸಿಕೊಳ್ಳಲು ಸದ್ಯಲ್ಲೆ ಅವಲಾಶ ಸಿಗುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳು ತಾವು ನೆಲೆಸಿರುವ ಸ್ಥಗಳಲ್ಲಿಯೇ ಅಗತ್ಯ ತರಬೇತಿ ಪಡೆದುಕೊಳ್ಳಬೇಕು ಎಂದು ಉಕ್ರೇನ್ನ ಡಿಜಿಪ್ರೊ ವೈದ್ಯಕೀಯ ವಿಶ್ವವಿದ್ಯಾಲಯಗಳ ಸಂಯೋಜಕ ಡಿನಿಪ್ರೊ ಹೇಳಿದ್ದಾರೆ. ಖಾರ್ಕಿವ್ ರಾಷ್ಟ್ರೀಯ ವಿಶ್ವವಿದ್ಯಾಲಯವು ಸಹ ಇತರ ದೇಶಗಳ ಸರ್ಕಾರಿಗಳಿಗೆ ಇಂಥದ್ದೇ ಮನವಿ ಮಾಡಿಕೊಂಡಿದೆ. ಉಕ್ರೇನ್ ವಿಶ್ವವಿದ್ಯಾಲಯಗಳಲ್ಲಿ ಕಲಿಯುತ್ತಿದ್ದ ವಿದೇಶಿ ವಿದ್ಯಾರ್ಥಿಗಳಿಗೆ ಸ್ಥಳೀಯ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಾಯೋಗಿಕ ತರಬೇತಿಗೆ ಅವಕಾಶ ಕಲ್ಪಿಸಬೇಕು. ಸ್ಥಳೀಯ ವೈದ್ಯಕೀಯ ವಿದ್ಯಾರ್ಥಿಗಳೊಂದಿಗೆ ಉಕ್ರೇನ್ನ ವೈದ್ಯಕೀಯ ವಿವಿಗಳಲ್ಲಿ ಓದುತ್ತಿದ್ದವರಿಗೂ ಅವಕಾಶ ಮಾಡಿಕೊಡಬೇಕು ಎಂದು ಕೋರಿದೆ. ಳೀಯ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ತರಬೇತಿ ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ಸಂಪೂರ್ಣ ಅನುಮತಿಯಿದೆ. ನಮ್ಮ ವಿಶ್ವವಿದ್ಯಾಲಯದ ಸಂಯೋಜನೆ ಹೊಂದಿರದ ಶಿಕ್ಷಣ ಸಂಸ್ಥೆ ಅಥವಾ ಆಸ್ಪತ್ರೆಗಳಲ್ಲಿ ಪ್ರಾಯೋಗಿಕ ತರಬೇತಿ ಪಡೆದುಕೊಂಡು ಪ್ರಮಾಣ ಪತ್ರಗಳನ್ನು ಹಾಜರುಪಡಿಸಿದರೂ, ಅದಕ್ಕೆ ಮಾನ್ಯತೆ ಇರುತ್ತದೆ ಎಂದು ವಿನ್ನಿಟ್ಸಿಯಾ ವಿವಿ ತನ್ನ ಅದೇಶದಲ್ಲಿ ತಿಳಿಸಿದೆ.
ಉಕ್ರೇನ್ನ ವಿಶ್ವವಿದ್ಯಾಲಯಗಳು ಆದೇಶಗಳನ್ನು ಹೊರಡಿಸಿದ ನಂತರ ಹಲವು ಆಸ್ಪತ್ರೆಗಳು ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ತರಬೇತಿ ಒದಗಿಸಲು ಮುಂದೆ ಬಂದಿವೆ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ‘ಕೆಲ ಸಂಸ್ಥೆಗಳು ಉಚಿತವಾಗಿ ತರಬೇತಿ ನೀಡುತ್ತಿದ್ದರೆ, ಕೆಲವು ಶುಲ್ಕ ವಿಧಿಸುತ್ತಿವೆ’ ಎಂದು ಭಾರತೀಯ ವಿದ್ಯಾರ್ಥಿಗಳು ಹೇಳಿದ್ದಾರೆ. ನೊಯ್ಡಾ ಮೂಲದ ನಿಕ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯು ಪ್ರಾಯೋಗಿಕ ತರಬೇತಿಗೆ ವ್ಯವಸ್ಥೆ ಮಾಡಿದೆ. ‘ನಾವು 6 ತಿಂಗಳ ಇಂಟರ್ನ್ಶಿಪ್ಗೆ ಅವಕಾಶ ಮಾಡಿಕೊಟ್ಟಿದ್ದು, ಸರ್ಟಿಫಿಕೇಟ್ಗಳನ್ನೂ ನೀಡುತ್ತಿದ್ದೇವೆ. ಕೆಲ ವಿದ್ಯಾರ್ಥಿಗಳು ಈಗಾಗಲೇ ಭೇಟಿ ನೀಡಿದ್ದಾರೆ. ಕಲಿಕೆಗೆ ಆಸಕ್ತಿಯನ್ನೂ ತೋರುತ್ತಿದ್ದಾರೆ’ ಎಂದು ನೊಯ್ಡಾದ ನಿಕ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.
ಉಕ್ರೇನ್ನ ಸುಮಿ ನಗರದ ವೈದ್ಯಕೀಯ ಶಿಕ್ಷಣ ಸಂಸ್ಥೆಯು ಈವರೆಗೆ ಇಂಥ ಪತ್ರವನ್ನು ಕೊಟ್ಟಿಲ್ಲ. ಖಾರ್ಕಿವ್ ವಿಶ್ವವಿದ್ಯಾಲಯದ ಮಾದರಿಯಲ್ಲಿ ಇತರ ವಿಶ್ವವಿದ್ಯಾಲಯಗಳು ಪತ್ರಗಳನ್ನು ಕೊಟ್ಟರೆ ನಮಗೆ ಪ್ರಾಯೋಗಿಕ ತರಬೇತಿಗಾಗಿ ಭಾರತದ ಶಿಕ್ಷಣ ಸಂಸ್ಥೆಗಳನ್ನು ಎಡತಾಕಲು ಅನುಕೂಲವಾಗುತ್ತದೆ ಎಂದು ವಿದ್ಯಾರ್ಥಿ ಸಂಯೋಜಕ ಅಶದ್ ಅಲಿ ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ರಷ್ಯಾ ಸುಪರ್ದಿಯಲ್ಲಿದ್ದ ಉಕ್ರೇನ್ ನಗರಗಳಲ್ಲಿ ನರಮೇಧದ ಸಾಕ್ಷ್ಯ ಪತ್ತೆ: ಸೇಡು ತೀರಿಸುತ್ತೇನೆಂದು ಶಪಥ ಮಾಡಿದ ಝೆಲೆನ್ಸ್ಕಿ
ಇದನ್ನೂ ಓದಿ: Infosys: ನಾರಾಯಣ ಮೂರ್ತಿ ಅಳಿಯ ರಿಶಿ ಸುನಕ್ಗೆ ಮುಜುಗರ ತಪ್ಪಿಸಲು ರಷ್ಯಾದಲ್ಲಿ ಕಾರ್ಯಾಚರಣೆ ನಿಲ್ಲಿಸಲಿದೆ ಇನ್ಫೋಸಿಸ್