
“ಮನಸ್ಸಿದ್ದರೆ ಮಾರ್ಗ” ಎಂಬ ನಾಣ್ಣುಡಿಯನ್ನು ಸಾಬೀತುಪಡಿಸಿದ್ದಾರೆ ಉತ್ತರ ಪ್ರದೇಶದ ವಿಜಯ್ ಕುಮಾರ್ ಶರ್ಮಾ. ಸತತ 27 ವರ್ಷಗಳ ಸುದೀರ್ಘ ಹೋರಾಟ ಮತ್ತು ಕಠಿಣ ಪರಿಶ್ರಮದ ನಂತರ, ತಮ್ಮ 59ನೇ ವಯಸ್ಸಿನಲ್ಲಿ ಅವರು ಸರ್ಕಾರಿ ಶಿಕ್ಷಕರಾಗಿ ಆಯ್ಕೆಯಾಗುವ ಮೂಲಕ ಸಮಾಜಕ್ಕೆ ದೊಡ್ಡ ಪ್ರೇರಣೆಯಾಗಿದ್ದಾರೆ. ಇತ್ತೀಚೆಗೆ ಲಕ್ನೋದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿಜಯ್ ಕುಮಾರ್ ಶರ್ಮಾ ಅವರಿಗೆ ನೇಮಕಾತಿ ಪತ್ರವನ್ನು ಪ್ರದಾನ ಮಾಡಿದರು. ಅಂದಿನಿಂದ ಈ ಸಾಧಕನ ಯಶಸ್ಸಿನ ಕಥೆ ದೇಶಾದ್ಯಂತ ವ್ಯಾಪಕ ಸುದ್ದಿಯಲ್ಲಿದೆ.
ಬಾಗ್‌ಪತ್‌ನಲ್ಲಿರುವ ಅನುದಾನಿತ (ಸರ್ಕಾರೇತರ) ಶಾಲೆಯೊಂದರಲ್ಲಿ ಟಿಜಿಟಿ (TGT – Trained Graduate Teacher) ಸಂಸ್ಕೃತ ಹುದ್ದೆಗೆ ವಿಜಯ್ ಕುಮಾರ್ ಶರ್ಮಾ ಅವರು ನೇಮಕಗೊಂಡಿದ್ದಾರೆ. ಸಾಮಾನ್ಯವಾಗಿ ಸರ್ಕಾರೇತರ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಗೆ ಕನಿಷ್ಠ ವಯೋಮಿತಿ ನಿಗದಿಯಾಗಿರುತ್ತದೆ ಹೊರತು, ಹೆಚ್ಚಿನ ಶಾಲೆಗಳಿಗೆ ಗರಿಷ್ಠ ವಯೋಮಿತಿಯ ಕಟ್ಟುಪಾಡುಗಳು ಅನ್ವಯಿಸುವುದಿಲ್ಲ. ಹೀಗಾಗಿ ತಮ್ಮ 59ನೇ ವಯಸ್ಸಿನಲ್ಲಿಯೂ ಅವರಿಗೆ ಈ ಸರ್ಕಾರಿ ಉದ್ಯೋಗ ಒಲಿದು ಬಂದಿದ್ದು, ಸಾಧನೆಗೆ ವಯಸ್ಸು ತಡೆಯಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ವಿಜಯ್ ಕುಮಾರ್ ಶರ್ಮಾ ಅವರು 1999 ರಲ್ಲಿ ಪ್ರಥಮ ಬಾರಿಗೆ ಸರ್ಕಾರಿ ಶಿಕ್ಷಕ ಹುದ್ದೆಗೆ ತಯಾರಿ ಆರಂಭಿಸಿದ್ದರು. ಅಲ್ಲಿಂದೀಚೆಗೆ ನಡೆದ ವಿವಿಧ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ನಿರಂತರವಾಗಿ ಹಾಜರಾಗುತ್ತಿದ್ದರು. ತಮ್ಮ ಈ ಸುದೀರ್ಘ ಪಯಣದಲ್ಲಿ ಅವರು ಆರು ಬಾರಿ ಟಿಜಿಟಿ (TGT) ಲಿಖಿತ ಪರೀಕ್ಷೆಯಲ್ಲಿ ಮತ್ತು ನಾಲ್ಕು ಬಾರಿ ಪಿಜಿಟಿ (PGT) ಲಿಖಿತ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದರು. ಅಲ್ಲದೆ, ಸುಮಾರು ಎಂಟು ಬಾರಿ ಸಂದರ್ಶನಗಳಿಗೂ ಕರೆಯಲ್ಪಟ್ಟಿದ್ದರು. ಆದರೆ ಪ್ರತಿ ಬಾರಿಯೂ ಒಂದಲ್ಲ ಒಂದು ಕಾರಣಕ್ಕೆ ಅಂತಿಮ ಆಯ್ಕೆಯಾಗದೆ ನೇಮಕಾತಿಯನ್ನು ಕಳೆದುಕೊಳ್ಳುತ್ತಿದ್ದರು. ಆದಾಗ್ಯೂ ಧೃತಿಗೆಡದೆ ತಮ್ಮ ತಯಾರಿಯನ್ನು ಮುಂದುವರಿಸಿದ್ದರು.
ಹಲವು ಬಾರಿ ಸಂದರ್ಶನಗಳಲ್ಲಿ ಹಿನ್ನಡೆಯಾಗಿದ್ದರೂ ವಿಜಯ್ ಶರ್ಮಾ ತಮ್ಮ ಪ್ರಯತ್ನವನ್ನು ಎಂದಿಗೂ ಕೈಬಿಡಲಿಲ್ಲ. ಈ ಬಾರಿ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಸಂದರ್ಶನಗಳು ಇರಲಿಲ್ಲವಾದ್ದರಿಂದ, ಲಿಖಿತ ಪರೀಕ್ಷೆಯಲ್ಲಿ ಅವರು ಗಳಿಸಿದ ಅಂಕಗಳ ಆಧಾರದ ಮೇಲೆಯೇ ಅಂತಿಮ ಆಯ್ಕೆ ನಡೆಯಿತು. ಇದರಿಂದಾಗಿ ಅವರ 27 ವರ್ಷಗಳ ದೀರ್ಘಕಾಲದ ಸತತ ಪ್ರಯತ್ನಗಳು ಅಂತಿಮವಾಗಿ ಫಲ ನೀಡಿ, ಸರ್ಕಾರಿ ಶಿಕ್ಷಕರಾಗಬೇಕೆಂಬ ಅವರ ಕನಸು ತಮ್ಮ 59ನೇ ವಯಸ್ಸಿನಲ್ಲಿ ನನಸಾಗಿದೆ.
ಸರ್ಕಾರಿ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದರ ಜೊತೆಗೆ, ವಿಜಯ್ ಕುಮಾರ್ ಶರ್ಮಾ ಅವರು ತಮ್ಮ ಜೀವನೋಪಾಯಕ್ಕಾಗಿ ಖಾಸಗಿ ಶಾಲೆಗಳಲ್ಲಿಯೂ ಬೋಧಿಸುತ್ತಿದ್ದರು. ಸುಮಾರು 26 ವರ್ಷಗಳ ಕಾಲ ಅವರು ಬರೌತ್ ಪ್ರದೇಶದ ಖಾಸಗಿ ಶಾಲೆಗಳಾದ ವಿವೇಕಾನಂದ ವಿದ್ಯಾಪೀಠ ಮತ್ತು ಡೂನ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಿಂದಿ ಮತ್ತು ಸಂಸ್ಕೃತ ವಿಷಯಗಳನ್ನು ಬೋಧಿಸಿದರು. ಶಾಲಾ ನಿರ್ದೇಶಕ ಪ್ರಶಾಂತ್ ಜೈನ್ ಪ್ರಕಾರ, ವಿಜಯ್ ಶರ್ಮಾ ಅವರು 2000 ಮತ್ತು 2003 ರ ನಡುವೆ ಶಾಲೆಯೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡು ವಿದ್ಯಾರ್ಥಿಗಳಿಗೆ ನಿಯಮಿತವಾಗಿ ಕಲಿಸುತ್ತಾ, ಸ್ವತಃ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಿದ್ಧತೆ ನಡೆಸುತ್ತಿದ್ದರು.
ಇದನ್ನೂ ಓದಿ: ಸತತ 3 ಬಾರಿ ಸೋಲು…4ನೇ ಪ್ರಯತ್ನದಲ್ಲಿ IAS ಕನಸು ನನಸು ಮಾಡಿಕೊಂಡ ನೇಹಾ ಬ್ಯಾಡ್ವಾಲ್: ಯಶಸ್ಸಿನ ಸೀಕ್ರೆಟ್ ಇಲ್ಲಿದೆ!
59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ ಕುಮಾರ್ ಶರ್ಮಾ ಅವರು ಮಾಜಿ ಶಿಕ್ಷಕರಾದ ಲಕ್ಷ್ಮಣ್ ಸಿಂಗ್ ಅವರ ಪುತ್ರರಾಗಿದ್ದಾರೆ. ವಿಜಯ್ ಶರ್ಮಾ ಅವರಿಗೆ ಒಟ್ಟು ಐದು ಮಂದಿ ಮಕ್ಕಳಿದ್ದಾರೆ. ಅವರ ಇಬ್ಬರು ಗಂಡು ಮಕ್ಕಳು ಪ್ರಸ್ತುತ ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೆ, ಮೂವರು ಹೆಣ್ಣುಮಕ್ಕಳೂ ವಿವಿಧ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಅವರ ಒಬ್ಬ ಹೆಣ್ಣುಮಗಳು ಸಹ ಇತ್ತೀಚೆಗೆ ಬೋಧನಾ ಹುದ್ದೆಗೆ ಆಯ್ಕೆಯಾಗಿದ್ದು, ಪ್ರಸ್ತುತ ಕಾಯುವಿಕೆ ಪಟ್ಟಿಯಲ್ಲಿದ್ದಾರೆ (Waiting List).
ತಮ್ಮ ಈ ರೋಚಕ ಯಶಸ್ಸಿನ ಕುರಿತು ಮಾತನಾಡುವ ವಿಜಯ್ ಶರ್ಮಾ, “ಪ್ರತಿಯೊಂದು ವಿಫಲ ಪ್ರಯತ್ನದಿಂದಲೂ ಹೊಸದನ್ನು ಕಲಿಯಲು ಪ್ರಯತ್ನಿಸಿದೆ ಮತ್ತು ಪರೀಕ್ಷೆಯ ತಯಾರಿಯನ್ನು ಎಂದಿಗೂ ನಿಲ್ಲಿಸಲಿಲ್ಲ,” ಎಂದು ಹೇಳುತ್ತಾರೆ. ಸೋಲಿಗೆ ಹೆದರದೆ ನಡೆಸುವ ನಿರಂತರ ಶ್ರಮ ಮತ್ತು ಪ್ರಯತ್ನವೇ ಅಂತಿಮ ಯಶಸ್ಸಿಗೆ ನಿಜವಾದ ದಾರಿ ಎಂಬುದು ಅವರ ಬಲವಾದ ನಂಬಿಕೆಯಾಗಿದೆ.
ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ