ದೆಹಲಿ ಫಲಿತಾಂಶ: ‘ಆಪ್​​ದಾ ಸೇ ಮುಕ್ತಿ’, ಅಶ್ವಿನಿ ವೈಷ್ಣವ್ ಮಾರ್ಮಿಕ ಟ್ವೀಟ್

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುವ ಸುಳಿವು ದೊರೆಯುತ್ತಿದ್ದಂತೆಯೇ ಆಮ್ ಆದ್ಮಿ ಪಕ್ಷದ ವಿರುದ್ಧ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ವಾಗ್ದಾಳಿ ನಡೆಸಿದ್ದಾರೆ. ಮೈಕ್ರೋಬ್ ಬ್ಲಾಗಿಂಗ್ ತಾಣ ಎಕ್ಸ್​​ನಲ್ಲಿ ಸಂದೇಶ ಪ್ರಕಟಿಸಿರುವವರು, ದೆಹಲಿಗೆ ವಿಪತ್ತಿನಿಂದ ಮುಕ್ತಿ ದೊರೆತಿದೆ ಎಂದು ಉಲ್ಲೇಖಿಸಿದ್ದಾರೆ.

ದೆಹಲಿ ಫಲಿತಾಂಶ: ‘ಆಪ್​​ದಾ ಸೇ ಮುಕ್ತಿ’, ಅಶ್ವಿನಿ ವೈಷ್ಣವ್ ಮಾರ್ಮಿಕ ಟ್ವೀಟ್
ಅಶ್ವಿನಿ ವೈಷ್ಣವ್

Updated on: Feb 08, 2025 | 2:47 PM

ನವದೆಹಲಿ, ಫೆಬ್ರವರಿ 8: ದೆಹಲಿಯಲ್ಲಿ ಬಿಜೆಪಿಯ 27 ವರ್ಷಗಳ ಅಧಿಕಾರ ವನವಾಸ ಕೊನೆಗೊಂಡಿದೆ. ಬಿಜೆಪಿ ಭಾರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುವ ಲಕ್ಷಣ ಕಾಣಿಸುತ್ತಿದ್ದು, ಆಮ್ ಆದ್ಮಿ ಪಕ್ಷದ ಅನೇಕ ಪ್ರಮುಖ ನಾಯಕರು ಹೀನಾಯವಾಗಿ ಸೋತಿದ್ದಾರೆ. ಬಿಜೆಪಿಯ ಗೆಲುವಿನೊಂದಿಗೆ, ಆಮ್ ಆದ್ಮಿ ಪಕ್ಷದ ಭದ್ರಕೋಟೆ ಕುಸಿದು ಬಿದ್ದಂತಾಗಿದೆ. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾರ್ಮಿಕವಾಗಿ ಟ್ವೀಟ್ ಮಾಡುವ ಮೂಲಕ ಎಎಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಚುನಾವಣಾ ಆಯೋಗದ ವೆಬ್​ಸೈಟ್​​ನಲ್ಲಿ, ದೆಹಲಿ ವಿಧಾನಸಭೆ ಚುನಾವಣೆಗೆ ಸಂಬಂಧಿಸಿ ಹಂಚಿಕೊಳ್ಳಲಾದ ಮಾಹಿತಿಯ (ಶನಿವಾರ ಮಧ್ಯಾಹ್ನದ ವರೆಗಿನ) ಸ್ಕ್ರೀನ್​ಶಾಟ್ ಅನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಅಶ್ವಿನಿ ವೈಷ್ಣವ್ ‘ಆಪ್​​ದಾ ಸೇ ಮುಕ್ತಿ’ (ವಿಪತ್ತಿನಿಂದ ಮುಕ್ತಿ) ಎಂದು ಉಲ್ಲೇಖಿಸಿದ್ದಾರೆ. ಅಂದರೆ, ದೆಹಲಿಗೆ ಅಪಾಯದಿಂದ, ಆಪತ್ತಿನಿಂದ ಮುಕ್ತಿ ಎಂಬರ್ಥದಲ್ಲಿ ಅವರು ಉಲ್ಲೇಖಿಸಿದ್ದಾರೆ.

ಶನಿವಾರ ಮಧ್ಯಾಹ್ನ 2.30 ವರೆಗಿನ ಟ್ರೆಂಡ್ ಪ್ರಕಾರ, ಚುನಾವಣಾ ಆಯೋಗದ ವೆಬ್​ಸೈಟ್​ನಲ್ಲಿ ಪ್ರಕಟಿಸಿದ ಮಾಹಿತಿ ಪ್ರಕಾರ ಬಿಜೆಪಿ 47 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ, ಎಎಪಿ ಕೇವಲ 23 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇದರೊಂದಿಗೆ ಎಎಪಿಯ ದಶಕದ ಆಡಳಿತ ದೆಹಲಿಯಲ್ಲಿ ಕೊನೆಗೊಳ್ಳುವುದು ನಿಚ್ಚಳವಾಗಿದೆ.

ಅಶ್ವಿನಿ ವೈಷ್ಣವ್ ಟ್ವೀಟ್


2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಯಶಸ್ಸು ಸಿಗದ ನಂತರ, ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಕುಸಿಯುತ್ತಿದೆ ಎಂಬ ಮಾತುಗಳು ಕೇಳಿಬಂದವು. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಈಗ ಪ್ರಬಲ ಪರ್ಯಾಯವಾಗಬಹುದೆಂಬ ಊಹಾಪೋಹಗಳೂ ಇದ್ದವು. ಆದರೆ ಹರಿಯಾಣ ಮತ್ತು ಮಹಾರಾಷ್ಟ್ರದ ನಂತರ ದೆಹಲಿಯಲ್ಲಿ ಬಿಜೆಪಿ ಆಮ್ ಆದ್ಮಿ ಪಕ್ಷವನ್ನು ಸೋಲಿಸಿದ ರೀತಿ, ಪ್ರಧಾನಿ ಮೋದಿಯವರ ನಾಯಕತ್ವದ ಸಾಮರ್ಥ್ಯ ಇನ್ನೂ ಹಾಗೆಯೇ ಇದೆ ಮತ್ತು ಅವರ ಮುಂದೆ ಯಾವುದೇ ಬಲವಾದ ಪರ್ಯಾಯವಿಲ್ಲ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: ದೆಹಲಿ ಚುನಾವಣೆಯಲ್ಲಿ ಅರವಿಂದ್​ ಕ್ರೇಜಿವಾಲ್​ಗೆ ಸೋಲು, ಎಎಪಿ ವರಿಷ್ಠಗೆ ಭಾರೀ ಮುಖಭಂಗ

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ