ಮಾದಕ ವಸ್ತು ಹೊಂದಿದ್ದ ಆರೋಪ; ಗೋವಾ ಚುನಾವಣೆಗೆ ಕೆಲವೇ ದಿನಗಳ ಮೊದಲು ಪ್ರಶಾಂತ್ ಕಿಶೋರ್ ತಂಡದ ಓರ್ವ ಬಂಧನ
Goa Assemly Election 2022: ಗೋವಾ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳ ಮುನ್ನ ಪ್ರಶಾಂತ್ ಕಿಶೋರ್ ನೇತೃತ್ವದ ಐ-ಪಿಎಸಿ ಸಂಸ್ಥೆಯ ಸದಸ್ಯನೋರ್ವನನ್ನು ಮಾದಕ ವಸ್ತುಗಳನ್ನು ಹೊಂದಿದ್ದ ಆರೋಪದ ಮೇಲೆ ಬಂಧಿಸಲಾಗಿದೆ.
ಗೋವಾ ವಿಧಾನಸಭಾ ಚುನಾವಣೆಗೆ (Goa Assembly Elections) ಕೆಲವೇ ದಿನಗಳ ಮೊದಲು, ಖಾಸಗಿ ನಿವಾಸದಲ್ಲಿ ದಾಳಿ ನಡೆಸಿದ ನಂತರ ಶಂಕಿತ ಮಾದಕವಸ್ತುಗಳನ್ನು (ಗಾಂಜಾ) ಹೊಂದಿದ್ದ ಆರೋಪದ ಮೇಲೆ ಭಾರತೀಯ ರಾಜಕೀಯ ಕ್ರಿಯಾ ಸಮಿತಿ (ಐ-ಪಿಎಸಿ) ಸದಸ್ಯನನ್ನು ರಾಜ್ಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. I-PAC ಸಂಸ್ಥೆಯು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ (Prashanth Kisore) ನಡೆಸುತ್ತಿರುವ ರಾಜಕೀಯ ಸಲಹಾ ಸಂಸ್ಥೆಯಾಗಿದ್ದು, ಗೋವಾದಲ್ಲಿ ತೃಣಮೂಲ ಕಾಂಗ್ರೆಸ್ (TMC) ಗೆಲುವಿಗೆ ಸಹಾಯ ಮಾಡುತ್ತಿದೆ. ಉತ್ತರ ಗೋವಾದ ಡೆಪ್ಯುಟಿ ಸೂಪರಿಂಟೆಂಡೆಂಟ್ ವಿಶ್ವೇಶ್ ಖಾರ್ಪೆ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ‘‘ಇಂದು ಸುಕೂರ್ ಪ್ರದೇಶದಲ್ಲಿ ಐ-ಪಿಎಸಿ ಸದಸ್ಯರು ತಂಗಿದ್ದ ಸುಮಾರು 8 ವಿಲ್ಲಾಗಳಲ್ಲಿ ಶೋಧ ನಡೆಸಿದಾಗ ಅಲ್ಲಿ ಶಂಕಿತ ಡ್ರಗ್ಸ್ (ಗಾಂಜಾ) ಪತ್ತೆಯಾಗಿದೆ’’ ಎಂದಿದ್ದಾರೆ.
ಐ-ಪ್ಯಾಕ್ ಸದಸ್ಯರಲ್ಲಿ ಒಬ್ಬರಾದ 28 ವರ್ಷದ ವಿಕಾಸ್ ನಾಗಲ್ ಅವರನ್ನು ಬಂಧಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವಿಶ್ವೇಶ್ ಖಾರ್ಪೆ ಹೇಳಿದ್ದಾರೆ. ನಾಗಲ್ ಹರಿಯಾಣ ಮೂಲದವರಾಗಿದ್ದು, ಚುನಾವಣೆಗಾಗಿ ಗೋವಾದಲ್ಲಿ IPAC ತಂಡದೊಂದಿಗೆ ಕೆಲಸ ಮಾಡುತ್ತಿದ್ದಾರೆ.
ಅಧಿಕೃತ ಮೂಲಗಳ ಪ್ರಕಾರ ತನಿಖೆ ಎರಡು ದಿಕ್ಕುಗಳಲ್ಲಿ ಸಾಗುತ್ತಿದೆ. ಒಂದು ಡ್ರಗ್ಸ್ ಅನ್ನು ಎಲ್ಲಿ ಖರೀದಿಸಲಾಗಿದೆ ಮತ್ತು ಎರಡನೆಯದಾಗಿ ಇತರ ಯಾವುದೇ ಸದಸ್ಯರು ಅದನ್ನು ಸೇವಿಸುತ್ತಿದ್ದಾರೆಯೇ ಎಂದು ತನಿಖೆ ಮಾಡಲಾಗುತ್ತದೆ. ‘ಇದೊಂದು ಸೂಕ್ಷ್ಮ ವಿಷಯವಾಗಿದ್ದು, ನಾವು ಖರೀದಿಯ ಮೂಲವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ ಮತ್ತು ಇದು ದೊಡ್ಡ ಜಾಲವನ್ನು ಹೊಂದಿದೆಯೇ ಎಂದು ತನಿಖೆ ಮಾಡುತ್ತಿದ್ದೇವೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿ ಸಿಎನ್ಎನ್-ನ್ಯೂಸ್ 18ಗೆ ಮಾಹಿತಿ ನೀಡಿದ್ದಾರೆ.
ಪೊರ್ವೊರಿಮ್ ಕ್ಷೇತ್ರವು ಒಂದು ಪ್ರಮುಖ ಕ್ಷೇತ್ರವಾಗಿದ್ದು,ರೋಹನ್ ಖೌಂಟೆ ಮೂರನೇ ಅವಧಿಗೆ ಸ್ಪರ್ಧಿಸುತ್ತಿದ್ದಾರೆ. ಅವರ ವಿರುದ್ಧ ಟಿಎಂಸಿಯ ಸಂದೀಪ್ ವಜಾರ್ಕರ್ ಸ್ಪರ್ಧಿಸಿದ್ದಾರೆ. ಇದೀಗ ತೃಣಮೂಲ ಕಾಂಗ್ರೆಸ್ಗೆ ಬೆಂಬಲ ನೀಡುತ್ತಿರುವ ಐ-ಪ್ಯಾಕ್ ಸದಸ್ಯರು ಡ್ರಗ್ಸ್ ಪ್ರಕರಣದ ಆರೋಪದಲ್ಲಿ ಬಂಧಿತರಾಗಿರುವುದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗುವ ನಿರೀಕ್ಷೆ ಇದೆ.
ಗೋವಾದಲ್ಲಿ 40 ಸ್ಥಾನಗಳಿಗೆ ವಿಧಾನಸಭಾ ಚುನಾವಣೆ ನಡೆಯಲಿದೆ.ಫೆಬ್ರವರಿ 14ರಂದು ಚುನಾವಣೆ ನಡೆಯಲಿದ್ದು, ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ:
‘ಒಬ್ಬ ವ್ಯಕ್ತಿ, ಒಂದು ಹುದ್ದೆ’ ಕುರಿತು ತೃಣಮೂಲ ಕಾಂಗ್ರೆಸ್ನಲ್ಲಿ ಅಸಮಾಧಾನ? ಏನಿದು ಗೊಂದಲ? ಇಲ್ಲಿದೆ ಮಾಹಿತಿ
ಮುಸ್ಕಾನ್ಗೆ ಸನ್ಮಾನ ಮಾಡಲು ಮುಂದಾದ ಕಾಂಗ್ರೆಸ್ ಅಲ್ಪ ಸಂಖ್ಯಾತ ನಾಯಕರು; ಪಕ್ಷದಲ್ಲೇ ವಿರೋಧ- ಕಾರಣವೇನು?