ಕೋಲಾರ-ಚಿಕ್ಕಬಳ್ಳಾಪುರ-ಬೆಂಗಳೂರು ಗ್ರಾಮಾಂತರದಲ್ಲಿ ಸುಧಾಕರ್ ರಣತಂತ್ರ! ಕಾಂಗ್ರೆಸ್- ಜೆಡಿಎಸ್ ಕೋಟೆಯಲ್ಲಿ ಬಿಜೆಪಿಯ ಕಮಲ ಅರಳಿಸಲು ತಂತ್ರ!
Dr K Sudhakar: ಕೆಲವು ಕ್ಷೇತ್ರಗಳು ಕಾಂಗ್ರೆಸ್ ಭದ್ರಕೋಟೆ ಆಗಿದ್ರೆ, ಇನ್ನು ಕೆಲವು ಜೆಡಿಎಸ್ ತೆಕ್ಕೆಯಲ್ಲಿವೆ. ಇನ್ನು ಕಳೆದ ವಿಧಾನಸಭೆಯ ಚಿಕ್ಕಬಳ್ಳಾಪುರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ ಕೈ ಕೊಟ್ಟು ಬಿಜೆಪಿ ಸೇರುವುದರ ಮೂಲಕ ಡಾ. ಕೆ. ಸುಧಾಕರ್ ಪ್ರಸ್ತುತ ರಾಜ್ಯ ಸರಕಾರದಲ್ಲಿ ಪ್ರಭಾವಿ ಸಚಿವರಾಗಿರುವುದು ಇತಿಹಾಸ.
ಕೋಲಾರ-ಚಿಕ್ಕಬಳ್ಳಾಪುರ- ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬಿಜೆಪಿ ಪಕ್ಷ ಇದ್ದೂ ಇಲ್ಲದಂತಿದೆ. ಮೂರು ಜಿಲ್ಲೆಗಳಲ್ಲಿ ಬಿಜೆಪಿಯ ಅಂಗ ಸಂಘಗಳು ಎಂದೆ ಹೇಳಲಾಗುತ್ತಿರುವ ವಿಶ್ವಹಿಂದೂ ಪರಿಷತ್, ಭಜರಂಗದಳ, ಆರ್‌ಎಸ್‌ಎಸ್ ಸಂಘಟನೆ ಅಷ್ಟಕಷ್ಟೆ. ಮತ್ತೊಂದೆಡೆ ಬಿಜೆಪಿ ಕಾರ್ಯಕರ್ತರು, ಮುಖಂಡರುಗಳ ಸಂಖ್ಯೆಯೂ ಅಷ್ಟೆ. ಇದರಿಂದ ಚಿಕ್ಕಬಳ್ಳಾಪುರ- ಕೋಲಾರ- ಬೆಂಗಳೂರು ಗ್ರಾಮಾಂತರಲ್ಲಿ ಜಿಲ್ಲೆಗಳಲ್ಲಿ ಬಿಜೆಪಿ ಪಕ್ಷ ಅಷ್ಟಕಷ್ಟೆ. ಈ ಮೂರು ಜಿಲ್ಲೆಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳದೆ ಪಾರುಪತ್ಯ.
ಕೆಲವು ಕ್ಷೇತ್ರಗಳು ಕಾಂಗ್ರೆಸ್ ಭದ್ರಕೋಟೆ ಆಗಿದ್ರೆ, ಇನ್ನು ಕೆಲವು ಜೆಡಿಎಸ್ ತೆಕ್ಕೆಯಲ್ಲಿವೆ. ಇನ್ನು ಕಳೆದ ವಿಧಾನಸಭೆಯ ಚಿಕ್ಕಬಳ್ಳಾಪುರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ ಕೈ ಕೊಟ್ಟು ಬಿಜೆಪಿ ಸೇರುವುದರ ಮೂಲಕ ಡಾ. ಕೆ. ಸುಧಾಕರ್ ಪ್ರಸ್ತುತ ರಾಜ್ಯ ಸರಕಾರದಲ್ಲಿ ಪ್ರಭಾವಿ ಸಚಿವರಾಗಿರುವುದು ಇತಿಹಾಸ.
ಡಾ.ಕೆ.ಸುಧಾಕರ್ ಪ್ರಭಾವದಿಂದ ಕಾರ್ಯಕರ್ತರಲ್ಲಿ ಹುಮ್ಮಸ್ಸು:
ಇನ್ನು ಚಿಕ್ಕಬಳ್ಳಾಪುರ ವಿಧಾನಸಭೆಯ ಉಪಚುನಾವಣೆಯಲ್ಲಿ ಡಾ. ಸುಧಾಕರ್ ಬಿಜೆಪಿಯಿಂದ ಗೆದ್ದು ಶಾಸಕರಾದ ಮೇಲೆ ಈ ಮೂರೂ ಜಿಲ್ಲೆಗಳ ಬಿಜೆಪಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ಇಮ್ಮಡಿಯಾಗಿದೆ. ಮತ್ತೊಂದೆಡೆ ರಾಜ್ಯ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿರುವ ಸುಧಾಕರ್ ರನ್ನು ಈ ಮೂರೂ ಜಿಲ್ಲೆಗಳಲ್ಲಿ ಬಿಜೆಪಿ ಪಕ್ಷದ ಸಂಘಟನೆ ಹಾಗೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಬಾವುಟ ಹಾರಿಸಲು ಜವಾಬ್ದಾರಿ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಡಬಲ್ ಖಾತೆಗಳ ಸಚಿವ ಡಾ. ಸುಧಾಕರ್ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪ್ರತಿದಿನ ಪ್ರವಾಸ, ಸಭೆ, ಸಮಾರಂಭ ಮತ್ತು ಕಾರ್ಯಕ್ರಮಗಳ ನೆಪದಲ್ಲಿ ಎಲ್ಲೆಡೆ ಸಂಚರಿಸುತ್ತಿದ್ದಾರೆ.
ಯಾವ ಯಾವ ಕ್ಷೇತ್ರಗಳು ಸಚಿವ ಸುಧಾಕರ್ ಗೆ ಟಾರ್ಗೆಟ್:
ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಶಿಡ್ಲಘಟ್ಟ, ಬಾಗೇಪಲ್ಲಿ, ಗೌರಿಬಿದನೂರು ಮತ್ತು ಕೋಲಾರ ಜಿಲ್ಲೆಯ ಕೋಲಾರ, ಮಾಲೂರು, ಬಂಗಾರುಪೇಟೆ, ಶ್ರೀನಿವಾಸಪುರ, ಕೆಜಿಎಫ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೋಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಕ್ಷೇತ್ರಗಳಲ್ಲಿ ಬಿಜೆಪಿ ಅರಳಿಸಲು ಈಗಿನಿಂದಲೇ ಸಚಿವ ಡಾ.ಕೆ.ಸುಧಾಕರ್ ಚುನಾವಣಾ ರಣತಂತ್ರ ಹೂಡಿದ್ದಾರೆ ಎನ್ನಲಾಗಿದೆ.
ಎಲ್ಲೆಲ್ಲಿ ಹೇಗೆ ರಣತಂತ್ರ ಹೂಡಿದ್ದಾರೆ:
ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ಆದ ಹಿನ್ನೆಲೆ ಜನೋತ್ಸವ ನೆಪದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಜನೋತ್ಸವ ನೆಪದಲ್ಲಿ ಹೊಬಳಿ ಕೇಂದ್ರಗಳಿಗೆ ಭೇಟಿ ನೀಡಿ ಮುಖಂಡರುಗಳನ್ನು ಟಾರ್ಗೆಟ್ ಮಾಡಿದ್ದಾರೆ. ಜೆಡಿಎಸ್- ಕಾಂಗ್ರೆಸ್, ಮುಖಂಡರುಗಳನ್ನು ಬಿಜೆಪಿಗೆ ಸೆಳೆಯಲು ರಣತಂತ್ರ ರೂಪಿಸಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್‌ನ ಮಾಜಿ ಶಾಸಕ ಮಂಜುನಾಥಗೌಡರನ್ನು ಈಗಾಗಲೇ ಬಿಜೆಪಿಗೆ ಸೆಳೆದಿದ್ದು, ಅವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವ ಭರವಸೆ ನೀಡಿ ಪಕ್ಷಕ್ಕೆ ಕರೆತಂದಿದ್ದಾರೆ ಎನ್ನಲಾಗಿದೆ. ಕೋಲಾರ ಜಿಲ್ಲೆಯ ಬಂಗಾರುಪೇಟೆಯಲ್ಲಿ ಮಾಜಿ ಶಾಸಕ ನಾರಾಯಣಸ್ವಾಮಿಗೆ ಪಕ್ಷ ಸಂಘಟನೆಗೆ ಹಾಗೂ ಈಗಿನಿಂದಲೇ ಚುನಾವಣೆ ತಯಾರಿ ಮಾಡಿಕೊಳ್ಳಲು ಸೂಚಿಸಿರುವುದಾಗಿ ಮಾಹಿತಿ ತಿಳಿದಿಬಂದಿದೆ.
ಕೋಲಾರ ಜಿಲ್ಲೆಯ ಕೆಜಿಎಫ್‌ನಲ್ಲಿ ಮಾಜಿ ಶಾಸಕ ವೈ.ಸಂಪಂಗಿ ಸಕ್ರಿಯರಾಗಿದ್ದಾರೆ. ಇನ್ನು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮೇಲೆ ಡಾ.ಕೆ. ಸುಧಾಕರ್ ಕಣ್ಣಿದ್ದು, ಕಾಂಗ್ರೆಸ್‌ನ ಶಾಸಕ ಕೆ.ಆರ್.ರಮೇಶ್ ಕುಮಾರ್ ವಿರುದ್ಧ ಜೆಡಿಎಸ್‌ನ ಮಾಜಿ ಶಾಸಕ ವೆಂಕಟಶಿವರೆಡ್ಡಿ ಜೊತೆ ಸುಧಾಕರ್ ಒಡನಾಟ ಇಟ್ಟುಕೊಂಡಿದ್ದಾರೆ. ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಬಲವಾಗಿರುವ ಜೆಡಿಎಸ್- ಕಾಂಗ್ರೆಸ್ ಅನ್ನು ಸೋಲಿಸಲು ಚುನಾವಣಾ ತಂತ್ರ ರೂಪಿಸಿದ್ದು, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಜೆಡಿಎಸ್- ಕಾಂಗ್ರೆಸ್ ಮುಖಂಡರು ತಲೆ ಎತ್ತದಂತೆ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಪುಟ್ಟಸ್ವಾಮಿಗೌಡ ಎನ್ನುವವರಿಗೆ ಫೀಲ್ಡಿಗೆ ಇಳಿಸಿದ್ದು, ಅವರಿಗೆ ಸಚಿವ ಸುಧಾಕರ್ ಆಶಿರ್ವಾದ ಇದೆ ಎನ್ನಲಾಗಿದೆ. ಸ್ಥಳೀಯ ಪ್ರಭಾವಿ ಮುಖಂಡರುಗಳನ್ನು ಬಿಜೆಪಿ ಸೆಳೆಯುವ ಯತ್ನ ನಡೆಸಿದೆ. ಇನ್ನು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಮುನಿರಾಜು ಹಾಗೂ ರಾಮಲಿಂಗಪ್ಪರನ್ನು ಮುಂದೆ ಬಿಟ್ಟು ಚುನಾವಣಾ ತಯಾರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಶಿಡ್ಲಘಟ್ಟ ಹಾಗೂ ಚಿಂತಾಮಣಿ ಕ್ಷೇತ್ರಗಳಲ್ಲಿ ಜೆಡಿಎಸ್ ನಾಯಕರನ್ನು ಬಿಜೆಪಿಗೆ ಸೆಳೆಯುವುದು, ಇಲ್ಲ ಅವರನ್ನು ಪರೋಕ್ಷವಾಗಿ ಬೆಂಬಲಿಸಿ ಕಾಂಗ್ರೆಸ್ ಅನ್ನು ಸೋಲಿಸುವ ಚಿಂತನೆಯಲ್ಲಿ ಇದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೋಸಕೋಟೆಯಲ್ಲಿ ಸಚಿವ ಎಂಟಿಬಿ ನಾಗರಾಜ್ ಮಗ ರಾಜೇಶ್‌ರನ್ನು ಕಣಕ್ಕೆ ಇಳಿಸಿದ್ದಾರೆ. ದೇವನಹಳ್ಳಿಯಲ್ಲಿ ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಅವರಿಗೆ ಬಿಜೆಪಿ ಕಡೆ ಒಲವಿದೆ. ದೊಡ್ಡಬಳ್ಳಾಪುದಲ್ಲಿ ಧೀರಜ್ ಹಾಗೂ ಐಎಎಸ್ ಅಧಿಕಾರಿಯೊಬ್ಬರು ಕಣಕ್ಕೆ ಇಳಿಸಿದ್ದಾರೆ. ಇದರಿಂದ ಈಗಿನಿಂದಲೇ ಚುನಾವಣಾ ತಂತ್ರದಲ್ಲಿ ತೊಡಗಿದ್ದಾರೆ.
ಇನ್ನು ಮೂರು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಸ್ಥಳೀಯ ನಾಯಕರನ್ನು ಬಿಜೆಪಿಗೆ ಸೆಳೆಯುವ ಯತ್ನ ನಡೆಸಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ಗುನ್ನ ನೀಡಲು ರಾಜಕೀಯ ಚಾಣಾಕ್ಷತನ ಮೆರೆಯಲು ಮುಂದಾಗಿದ್ದಾರೆ. ಆದ್ರೆ ಚುನಾವಣಾ ಚಾಣಾಕ್ಷ ಎಂದೆ ಬಿಂಬಿಸಿಕೊಂಡಿರುವ ಸಚಿವ ಡಾ.ಕೆ.ಸುಧಾಕರ್ ರವರ ಪ್ರಯತ್ನ ಎಷ್ಟರ ಮಟ್ಟಿಗೆ ವರ್ಕಹೌಟ್ ಆಗುತ್ತೆ ಕಾದು ನೋಡಬೇಕು.
– ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ