Bommanahalli Election Results: ಬೊಮ್ಮನಹಳ್ಳಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಬಿಜೆಪಿ ಹಾಲಿ ಶಾಸಕ ಸತೀಶ್ ರೆಡ್ಡಿ ನಾಲ್ಕನೇ ಬಾರಿಯೂ ಜಯಭೇರಿ
Bommanahalli Assembly Election Result 2023 Live Counting Updates: ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಬಿಜೆಪಿ ಹಾಲಿ ಶಾಸಕ ಸತೀಶ್ ರೆಡ್ಡಿ ನಾಲ್ಕನೇ ಬಾರಿಯೂ ಜಯಭೇರಿ ಬಾರಿಸಿದ್ದಾರೆ.

Bommanahalli Assembly Election Result 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections 2023) ಫಲಿತಾಂಶ ಪ್ರಕಟಗೊಂಡಿದೆ. ಮೇ 10 ಬುಧವಾರದಂದು ನಡೆದ ಚುನಾವಣೆಯಲ್ಲಿ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ (Bommanahalli Assembly Elections 2023) ಶೇ. 47.36ರಷ್ಟು ಮತದಾನವಾಗಿತ್ತು. ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಬಿಜೆಪಿ ಹಾಲಿ ಶಾಸಕ ಸತೀಶ್ ರೆಡ್ಡಿ ನಾಲ್ಕನೇ ಬಾರಿಯೂ ಜಯಭೇರಿ ಬಾರಿಸಿದ್ದಾರೆ.
ಬೊಮ್ಮನಹಳ್ಳಿ ಕ್ಷೇತ್ರ ದಲ್ಲಿ ಬಹುವಾಗಿ ಎರಡು ರಾಷ್ಟ್ರೀಯ ಪಕ್ಷಗಳದ್ದೇ ಹಣಾಹಣಿ. ಬಿಜೆಪಿ-ಕಾಂಗ್ರೆಸ್ ನಡುವೆ ಪೈಪೋಟಿ ನಡೆಯುತ್ತೆ. ಹ್ಯಾಟ್ರಿಕ್ ಸಾಧಿಸಿರುವ ಹಾಲಿ ಶಾಸಕ ಸತೀಶ್ ರೆಡ್ಡಿ ನಾಲ್ಕನೇ ಬಾರಿಯೂ ಜಯಭೇರಿ ಬಾರಿಸಲು ಮುಂದಡಿ ಇಟ್ಟಿದ್ದಾರೆ. ಕಳೆದ ಬಾರಿ ಬೊಮ್ಮನಹಳ್ಳಿಯಲ್ಲಿ ಬಿಜೆಪಿ ಹಾಲಿ ಶಾಸಕ ಸತೀಶ್ ರೆಡ್ಡಿ 1,11,863 ಮತಗಳನ್ನು ಗಳಿಸಿದ್ದರು. ಸತೀಶ್ ರೆಡ್ಡಿ ಕಳೆದ ಬಾರಿ ಒಟ್ಟು ಮತದಾನದ ಪೈಕಿ 57% ಮತ ಪಾಲು ಪಡೆದಿದ್ದಾರೆ.
ಕ್ಷೇತ್ರದಲ್ಲಿ ಕನ್ನಡೇತರ ಮತದಾರರ ಸಂಖ್ಯೆ ಗಣನೀಯವಾಗಿದೆ. ಚುನಾವಣೆಯಲ್ಲಿ ರೆಡ್ಡಿ, ಒಕ್ಕಲಿಗ ಸಮುದಾಯದವರೇ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಕ್ಷೇತ್ರದಲ್ಲಿ ಒಟ್ಟು 4,32,752 ಮತದಾರರು ಇದ್ದಾರೆ. ಈ ಪೈಕಿ 2,32,487 ಪುರುಷ ಮತದಾರರು ಇದ್ದಾರೆ. 2,00,194 ಮಹಿಳಾ ಮತದಾರರು ಮತ್ತು ಇತರೆ 71 ಮತದಾರರಿದ್ದಾರೆ.ಇನ್ನು ಎಸ್ಸಿ, ಎಸ್ಟಿ 1,23,300 ಮತದಾರರು, ಒಕ್ಕಲಿಗರು 95,000 ಮತದಾರರು, ಲಿಂಗಾಯತರು ಸುಮಾರು 25,000 ಮತದಾರರು, ಬ್ರಾಹ್ಮಣರು ಮತದಾರರ ಸಂಖ್ಯೆ ಸುಮಾರು 30,000, ಒಬಿಸಿ ಸುಮಾರು 55,000, ಅಲ್ಪಸಂಖ್ಯಾತ ಮತದಾರರ ಸಂಖ್ಯೆ ಸುಮಾರು 30,000, ಇತರೆ ಸಮುದಾಯದ ಮತದಾರರ ಸಂಖ್ಯೆ ಸುಮಾರು 80,000 ಇದೆ.
ಸತತ ಮೂರು ಅವಧಿ ಗೆಲುವು ಪಡೆದು, ಕ್ಷೇತ್ರದ ಮೇಲೆ ಬಿಗಿ ಹಿಡಿತ ಸಾಧಿಸಿರುವ ಬಿಜೆಪಿ ಅಭ್ಯರ್ಥಿಯನ್ನು ಮಣಿಸಲು ಒಕ್ಕಲಿಗ ಆಸ ಪ್ರಯೋಗಿಸಿರುವ ಕಾಂಗ್ರೆಸ್, ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಇದೇ ಮೊದಲ ಬಾರಿ ಪ್ರಬಲ ಸ್ಪರ್ಧೆಗೆ ಇಳಿದಿದೆ. 2008ರಿಂದ ನಡೆದ ಮೂರು ಚುನಾವಣೆಗಳಲ್ಲೂ ಅಭ್ಯ ರ್ಥಿಗಳನ್ನು ಬದಲಾಯಿಸುತ್ತ ಬಂದಿರುವ ಕಾಂಗ್ರೆಸ್, ಈ ಬಾರಿಯೂ ಹೊಸ ಮುಖಕ್ಕೆ ಟಿಕೆಟ್ ನೀಡಿದೆ. ಸುಮಾರು 90 ಸಾವಿರದಷ್ಟಿರುವ ಒಕ್ಕಲಿಗ ಮತಗಳನ್ನು ಸೆಳೆಯಲು ಅದೇ ಸಮಾಜದ ಪ್ರಭಾವಿ ಮುಖಂಡ, ಅದೇ ಕ್ಷೇತ್ರದ ಉಮಾಪತಿ ಎಸ್. ಗೌಡ ಅವರನ್ನು ಕಣಕ್ಕೆ ಇಳಿಸಿದೆ.
ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ಭಾಗವಾಗಿದ್ದ ಬೊಮ್ಮನಹಳ್ಳಿ. 2008ರಲ್ಲಿ ನೂತನ ಕ್ಷೇತ್ರವಾಗಿ ಅಸ್ತಿತ್ವಕ್ಕೆ ಬಂದಿತು. ಆ ವರ್ಷ ಬಿಜೆಪಿಯ ಎಂ. ಸತೀಶ್ ರೆಡ್ಡಿ ಕಾಂಗ್ರೆಸ್‌ನ ಕುಪೇಂದ್ರ ರೆಡ್ಡಿ ಅವರನ್ನು 13,640 ಮತಗಳ ಅಂತರದಿಂದ ಸೋಲಿಸಿದ್ದರು. 2013ರಲ್ಲಿ ಸಿ. ನಾಗಭೂಷಣ ಅವರನ್ನು 25,852 ಹಾಗೂ 2018ರಲ್ಲಿ ಸುಷ್ಮಾ ರಾಜಗೋಪಾಲ ರೆಡ್ಡಿ ಅವರನ್ನು 47,162 ಮತಗಳ ಅಂತರದಿಂದ ಪರಾಭವಗೊಳಿಸುವ ಮೂಲಕ ಸತೀಶ್ ರೆಡ್ಡಿ ಹ್ಯಾಟ್ರಿಕ್ ಗೆಲುವು ಪಡೆದಿದ್ದರು. ಸೋಲಿನ ಸರಪಳಿ ಕಳಚಲು ಹಾಗೂ ಒಮ್ಮೆಯಾದರೂ ಗೆಲುವು ಪಡೆಯಲು ಕಾಂಗ್ರೆಸ್ ಕೊನೆಗೂ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ಇದೇ ಮೊದಲ ಬಾರಿ ಬಿಜೆಪಿ ಎದುರು ಪ್ರಬಲ ಸ್ಪರ್ಧೆ ಏರ್ಪಟ್ಟಿರುವುದನ್ನು ನೋಡುತ್ತಿದ್ದೇವೆ ಎನ್ನುತ್ತಾರೆ ಕ್ಷೇತ್ರದ ಕೆಲ ಮತದಾರರು.
ಬಿಜೆಪಿ ಸಾಂಪ್ರದಾಯಿಕ ಮತಗಳನ್ನು ನಂಬಿಕೊಂಡಿದ್ದರೆ, ಕಾಂಗ್ರೆಸ್ ಪರಿಶಿಷ್ಟ ಜಾತಿ, ಪಂಗಡಗಳು, ಮುಸ್ಲಿಂ, ಒಕ್ಕಲಿಗೆ ಹಾಗೂ ಹಿಂದುಳಿದ ವರ್ಗದ ಮತಗಳ ಕ್ರೋಡೀಕರಣಕ್ಕೆ ಕೈ ಹಾಕಿದೆ. ಎರಡೂ ಪಕ್ಷಗಳ ಅಭ್ಯರ್ಥಿಗಳು, ಅವರ ಬೆಂಬಲಿಗರು ಕ್ಷೇತ್ರದಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದರೂ, ಎರಡೂ ಪಕ್ಷಗಳ ರಾಷ್ಟ್ರೀಯ, ರಾಜ್ಯ ನಾಯಕರು ಕ್ಷೇತ್ರದತ್ತ ಮುಖ ಮಾಡಿಲ್ಲ. ಪ್ರಧಾನಿ ಮೋದಿ ರೋಡ್ ಶೋ ನಂತರ ಇನ್ನಷ್ಟು ಲಾಭ ತರಬಹುದು ಎಂಬ ಆಶಯ ಬಿಜೆಪಿ ಕಾರ್ಯಕರ್ತರದ್ದು.
ಕ್ಷೇತ್ರದಲ್ಲಿನ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಘನತ್ಯಾಜ್ಯ ಸಂಗ್ರಹಗಾರದಿಂದ ಸ್ಥಳೀಯ ಕೆರೆಗಳು ಕಲುಷಿತವಾಗಿವೆ. ಮಳೆ ಬಂದರೆ ಇಡೀ ಕ್ಷೇತ್ರ ಜಲಾವೃತವಾಗುತ್ತದೆ. ರಸ್ತೆಗಳು ಹಾಳಾಗಿವೆ. ಇಂತಹ ಸಮಸ್ಯೆಗಳಿಗೆ ಮುಕ್ತಿ ದೊರಕಿಸಲು ಒಮ್ಮೆ ಅವಕಾಶ ಕೊಡಿ ಎನ್ನುವುದು ಕಾಂಗ್ರೆಸ್ ಮನವಿ. ಈಗಾಗಲೇ ಕೈಗೊಂಡಿರುವ ಅಭಿವೃದ್ಧಿ ಕಾರ್ಯ ಮುಗಿಸಲು ಇನ್ನೊಂದು ಬಾರಿ ಅವಕಾಶ ಕೊಡಿ, ಎಲ್ಲ ಸಮಸ್ಯೆಗೂ ಪರಿಹಾರ ದೊರಕುತ್ತದೆ ಎನ್ನುತ್ತಿದೆ ಬಿಜೆಪಿ.
Published On - 3:24 am, Sat, 13 May 23