ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿದೆ. ಮುದ್ದಾದ ಬೊಂಬೆಗಳಿಂದ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿರುವ ಚನ್ನಪಟ್ಟಣದಲ್ಲಿ ಈ ಬಾರಿ ಕದನ ಕಣ ರಂಗೇರಲಿದೆ. ಹೆಚ್ಚು ರೇಷ್ಮೆ, ತೆಂಗನ್ನ ಕ್ಷೇತ್ರದಲ್ಲಿ ಬೆಳೆಯಲಾಗುತ್ತದೆ. ಒಕ್ಕಲಿಗರು ಪ್ರಾಬಲ್ಯ ಹೊಂದಿರೋ ಕ್ಷೇತ್ರದಲ್ಲಿ ಇಬ್ಬರು ಮದಗಜಗಳ ಕಾಳಗಕ್ಕೂ ವೇದಿಕೆಯಾಗಲಿದೆ. ಗೊಂಬೆನಗು ಚನ್ನಪಟ್ಟಣದಲ್ಲಿ ಗೊಂಬೆ ಆಡಿಸುವವರಾರು? ಎಂಬ ಪ್ರಶ್ನೆಗೆ ಮೇ 13ರಂದು ಉತ್ತರ ಸಿಗಲಿದೆ. ಹೈವೋಲೇಜ್ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್ ಭಗೀರಥ ಹೋರಾಟಕ್ಕೆ ಇಳಿದಿದ್ದರೆ, ಕಾಂಗ್ರೆಸ್ ನಿಂದ ಗಂಗಾಧರ ಎಸ್ ಸ್ಪರ್ಧಿಸಿದ್ದಾರೆ.
ಒಂದೆಡೆ ಮಾಜಿ ಸಿಎಂ ಕುಮಾರಸ್ವಾಮಿ ಈ ಕ್ಷೇತ್ರದಿಂದ, ಇದು ನನ್ನ ಕಡೇ ಚುನಾವಣೆ ಮುಂದಿನ ಭಾರಿ ಇಲ್ಲಿ ಸ್ಥಳೀಯ ಕಾರ್ಯಕರ್ತರನ್ನು ನಿಲ್ಲಿಸುತ್ತೇನೆ ಎನ್ನುವ ಮೂಲಕ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿದ್ದಾರೆ. ಪಂಚರತ್ನ, ಬಮೂಲ್ ಉತ್ಸವಗಳ ಮೂಲಕ ಅಬ್ಬರಿಸುತ್ತಿದ್ದರೆ, ಸಿಪಿವೈ ಸಹ ಸ್ವಾಭಿಮಾನಿ ಸಂಕಲ್ಪ ನಡಿಗೆ ಮೂಲಕ ಮನೆಮನೆಗೆ ತೆರಳುತ್ತಿದ್ದಾರೆ. ಮಹದೇಶ್ವರ ದೇವಾಲಯ ಜಿರ್ಣೋದ್ದಾರದ ಮೂಲಕ ನಾನು ಬಿಜೆಪಿ ಕಟ್ಟಾಳು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ಗೆ ಒಳ ಏಟು ನೀಡಿರುವ ಕೆಪಿಸಿಸಿ ಅಧ್ಯಕ್ಷರ ಭಾವ ಶರತ್ ಚಂದ್ರ ಈಗಾಗಲೇ ಆಮ್ ಆದ್ಮಿ ಕಡೆ ವಾಲಿದ್ದಾರೆ. ಇನ್ನು ಕಳೆದ ಆರು ತಿಂಗಳಿಂದ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಮಾಡುತ್ತಿದ್ದ ಕಾಂಗ್ರೆಸ್ ಟಿಕೆಟ್ ಆಕ್ಷಾಂಕಿ ಪ್ರಸನ್ನ ಗೌಡ, ಮೊದಲ ಪಟ್ಟಿಯಲ್ಲಿ ಹೆಸರು ಘೋಷಣೆಯಾಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆ ಕೈ ಕೊಟ್ಟು, ತೆನೆ ಹೊತ್ತಿದ್ದಾರೆ.
ಇನ್ನು ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಹೆಚ್ ಡಿ ಕುಮಾರಸ್ವಾಮಿಗೆ, ಮಾಜಿ ಪ್ರಧಾನಿ ದೇವೇಗೌಡರ ನಾಮಬಲವು ಇದೆ. ಇದಲ್ಲದೇ, ಒಕ್ಕಲಿಗ ಪ್ರಾಬಲ್ಯವಿರುವ ಜಿಲ್ಲೆಯಲ್ಲಿ ಕುಮಾರಸ್ವಾಮಿ ಅವರಿಗೆ ಪ್ರತ್ಯೇಕ ಮತ ಬ್ಯಾಂಕ್ ಇದೆ. ಹೀಗಾಗಿ ಕುಮಾರಸ್ವಾಮಿ ನಾಮಬಲದ ಮೇಲೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಇನ್ನು ಕುಮಾರಸ್ವಾಮಿ ಸಿಎಂ ಆದರೆ, ಕ್ಷೇತ್ರಕ್ಕೆ ಅನೇಕ ಸವಲತ್ತುಗಳು ದೊರೆಯುತ್ತವೆ ಎಂಬ ನಿರೀಕ್ಷೆಯು ಮತದಾರರಿಗಿದೆ. ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕುಮಾರಸ್ವಾಮಿ ಅವರಿಗೆ ಚುನಾವಣೆಯಲ್ಲಿ ಗೆಲ್ಲುವುದು ಸಹ ಅನಿವಾರ್ಯ.
ಇದನ್ನೂ ಓದಿ: ಏ. 30ರಂದು ಚನ್ನಪಟ್ಟಣಕ್ಕೆ ಪ್ರಧಾನಿ ಮೋದಿ; ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಿಸಲು ಬಿಜೆಪಿ ಮಾಸ್ಟರ್ ಪ್ಲ್ಯಾನ್
2018ರ ಚುನಾವಣೆಯಲ್ಲಿ 21 ಸಾವಿರ ಮತಗಳ ಅಂತರದಿಂದ ಹೆಚ್.ಡಿ.ಕೆ. ಗೆಲುವು ಸಾಧಿಸಿದ್ದರು. ಈ ಬಾರಿ ಮತ್ತೊಮ್ಮೆ ಅದೃಷ್ಠ ಪರೀಕ್ಷೆಗೆ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದಿಂದಲೇ ಇಳಿದಿದ್ದಾರೆ. ಇನ್ನು ಪಕ್ಷಾಂತರಿ ಎನ್ನುವ ಹಣೆಪಟ್ಟಿ ಇರುವ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಈಗಾಗಲೇ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಸ್ವಾಭಿಮಾನಿ ಸಂಕಲ್ಪ ನಡಿಗೆ ಮೂಲಕ ಮನೆ ಬಾಗಿಲು ತಟ್ಟುತ್ತಿರುವ ಸಿಪಿವೈ, ನಾನು ಈ ಮಣ್ಣಿನ ಮಗ, ಸ್ವಾಭಿಮಾನಿಗಳು ನನ್ನನು ಬೆಂಬಲಿಸಿ ಎಂದು ಕೈ ಮುಗಿದು ಪ್ರಚಾರ ನಡೆಸಿದ್ದಾರೆ. ಇನ್ನು ಯೋಗೇಶ್ವರ್ ಯಾವುದೇ ಒಂದು ಪಕ್ಷಕ್ಕೆ ಸೀಮಿತರಾಗಿಲ್ಲ. 2004ರಿಂದ 2008ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ನಿಂತು ಗೆದ್ದಿದ್ದರು. ಆನಂತರ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಮತ್ತೆ 2011ರಲ್ಲಿ ಉಪಚುನಾವಣೆಯಲ್ಲಿ ಗೆದ್ದು ಮಂತ್ರಿ ಕೂಡ ಆಗಿದ್ದರು.
ನಂತರ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಮುಂದಾಗಿದ್ದರು. 2013ರಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದಿಂದ ಸ್ವರ್ಧೆ ಮಾಡಿ ಗೆಲವು ಸಾಧಿಸಿದ್ದರು. ನಂತರ 2018ರಲ್ಲಿ ಬಿಜೆಪಿಯಿಂದ ಸ್ವರ್ಧೆ ಮಾಡಿ ಕುಮಾರಸ್ವಾಮಿ ವಿರುದ್ದ ಸೋಲು ಕಂಡಿದ್ದರು.
ಇನ್ನು ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಷ್ಟಕಷ್ಟೆ ಎನ್ನುವಂತೆ ಇದೆ. ಕಳೆದ ಬಾರಿ ಚುನಾವಣೆಯಲ್ಲಿ ಹೆಚ್.ಎಂ.ರೇವಣ್ಣ ಅವರನು ಅಖಾಡಕ್ಕಿಳಿಸಿದ್ದ ಕಾಂಗ್ರೆಸ್, ಈ ಬಾರಿ ಉದ್ಯಮಿ ಪಿ. ಪ್ರಸನ್ನ ಎಂಬುವವರನ್ನು ಕಣಕ್ಕೆ ಇಳಿಸಲು ಮುಂದಾಗಿತ್ತು. ಆದರೆ ಪ್ರಸನ್ನ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಗಂಗಾಧರ ಎಸ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಒಟ್ಟಾರೆ ಈ ಎಲ್ಲ ಅಂಶಗಳಿಂದ 2023ರ ಚುನಾವಣಾ ಅಖಾಡ ಸಾಕಷ್ಟು ರಂಗುಪಡೆದಿದೆ. ಮತದಾರ ಯಾರ ಕೈ ಹಿಡಿಯಲಿದ್ದಾನೆ ಕಾದು ನೋಡಬೇಕಿದೆ.
ಚನ್ನಪಟ್ಟಣದಲ್ಲಿ ಒಕ್ಕಲಿಗರದ್ದೇ ಪ್ರಾಬಲ್ಯ. ಹೀಗಾಗಿ, ಒಕ್ಕಲಿಗರಾದ ಸಿ. ಪಿ. ಯೋಗೇಶ್ವರ್ ಹಾಗೂ ಎಚ್. ಡಿ. ಕುಮಾರಸ್ವಾಮಿ ಇಬ್ಬರೂ ಒಕ್ಕಲಿಗ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಈ ಬಾರಿ ಒಕ್ಕಲಿಗರು ಯಾರ ಪರ ವಾಲುತ್ತಾರೋ, ಅವರದ್ದೇ ಗೆಲುವು. ಇನ್ನುಳಿದಂತೆ ಮುಸ್ಲಿಂ ಮತದಾರರು ಎರಡನೇ ದೊಡ್ಡ ಸಂಖ್ಯೆಯಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ದಲಿತರಿದ್ದಾರೆ. ಹೀಗಾಗಿ, ಮುಸ್ಲಿಂ ಹಾಗೂ ದಲಿತ ಮತಗಳೂ ಯಾವುದೇ ಪಕ್ಷದ ಅಭ್ಯರ್ಥಿಯ ಗೆಲುವಿಗೆ ನಿರ್ಣಾಯಕ ಆಗಲಿವೆ.
ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ