Kichcha Sudeep: ಕಿಚ್ಚ ಸುದೀಪ್ ಸಿನಿಮಾ, ಜಾಹೀರಾತಿಗೆ ತಡೆ ನೀಡಲು ಕೇಂದ್ರ ಚುನಾವಣಾ ಆಯೋಗ ನಕಾರ

ನಟ ಕಿಚ್ಚ ಸುದೀಪ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಚುನಾವಣಾ ಪ್ರಚಾರ ಮಾಡುವುದಾಗಿ ಹೇಳಿದ ಕಾರಣ ಅವರು ನಟಿಸಿರುವ ಜಾಹೀರಾತು, ಸಿನಿಮಾಗಳ ಪ್ರಸಾರಕ್ಕೆ ನಿಷೇಧ ಹೇರಬೇಕು ಎಂಬ ಮನವಿಗಳನ್ನು ಕೇಂದ್ರ ಚುನಾವಣಾ ಆಯೋಗ ತಿರಸ್ಕರಿಸಿದೆ.

Kichcha Sudeep: ಕಿಚ್ಚ ಸುದೀಪ್ ಸಿನಿಮಾ, ಜಾಹೀರಾತಿಗೆ ತಡೆ ನೀಡಲು ಕೇಂದ್ರ ಚುನಾವಣಾ ಆಯೋಗ ನಕಾರ
ಸುದೀಪ್
Follow us
|

Updated on:Apr 10, 2023 | 8:22 PM

ಬೆಂಗಳೂರು: ನಟ ಕಿಚ್ಚ ಸುದೀಪ್ (Kichcha Sudeep) ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಚುನಾವಣಾ ಪ್ರಚಾರ ಮಾಡುವುದಾಗಿ ಹೇಳಿದ ಕಾರಣ ಅವರು ನಟಿಸಿರುವ ಜಾಹೀರಾತು, ಸಿನಿಮಾಗಳ ಪ್ರಸಾರಕ್ಕೆ ನಿಷೇಧ ಹೇರಬೇಕು ಎಂಬ ಜೆಡಿಎಸ್ (JDS) ಮನವಿಯನ್ನು ಕೇಂದ್ರ ಚುನಾವಣಾ ಆಯೋಗ (Election Commission of India) ತಿರಸ್ಕರಿಸಿದೆ. ಸುದೀಪ್ ನಟನೆಯ ಸಿನಿಮಾ, ಜಾಹೀರಾತಿಗೆ ತಡೆ ನೀಡಲು ಆಯೋಗ ನಿರಾಕರಿಸಿದೆ. ಚುನಾವಣಾ ನೀತಿ ಸಂಹಿತೆಯ ಅಡಿಯಲ್ಲಿ ನಟನ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದನ್ನು ತಡೆಯುವ ಯಾವುದೇ ಕಾನೂನು ಇಲ್ಲ ಎಂದು ಆಯೋಗ ಹೇಳಿದೆ. ರಾಜ್ಯದಲ್ಲಿ ಚುನಾವಣೆ ಮುಗಿಯುವವರೆಗೆ ಸುದೀಪ್ ನಟನೆಯ ಶೋಗಳ ಪ್ರದರ್ಶನ ಮತ್ತು ಚಲನಚಿತ್ರಗಳನ್ನು ನಿಷೇಧಿಸುವಂತೆ ಕರ್ನಾಟಕದಿಂದ ವಕೀಲರ ಸಂಘ ಕೂಡ ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಚುನಾವಣಾ ಪ್ರಚಾರ ಮಾಡುವುದಾಗಿ ಸುದೀಪ್ ಇತ್ತೀಚೆಗೆ ಘೋಷಿಸಿದ್ದರು. ಆದರೆ, ಬಿಜೆಪಿ ಸೇರಲಿದ್ದಾರೆ ಎಂಬ ವರದಿಗಳನ್ನು ಅಲ್ಲಗಳೆದಿದ್ದ ಅವರು, ರಾಜಕೀಯ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಜತೆಗೆ, ತನ್ನ ಕಷ್ಟ ಕಾಲದಲ್ಲಿ ನೆರವಾದವರ ಪರ ಪ್ರಚಾರ ಮಾಡುವೆ ಎಂದಿದ್ದರು. ಬೊಮ್ಮಾಯಿ ಅವರಿಗೆ ಸುದೀಪ್ ಬೆಂಬಲ ನೀಡಿದ ನಂತರ ಜೆಡಿಎಸ್ ಮತ್ತು ಕಾಂಗ್ರೆಸ್ ಬಿಜೆಪಿಯನ್ನು ಟೀಕಿಸಿದ್ದವು. ಚಲನಚಿತ್ರ ನಟರನ್ನು ಬಳಸಿಕೊಂಡು ಬಿಜೆಪಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದ್ದವು.

ಇದನ್ನೂ ಓದಿ: ಇತ್ತ ಬಿಜೆಪಿ ಪರ ಕಿಚ್ಚನ ಅಬ್ಬರದ ಪ್ರಚಾರಕ್ಕೆ ಮುಹೂರ್ತ ಫಿಕ್ಸ್: ಅತ್ತ ಜೆಡಿಎಸ್​ನಿಂದ​ ಸುದೀಪ್​ಗೆ ಶಾಕ್!

ಚುನಾವಣೆ ಮುಗಿಯುವವರೆಗೆ ಸುದೀಪ್ ನಟನೆಯ ಯಾವುದೇ ಶೋ ಮತ್ತು ಅವರ ಭಾವಚಿತ್ರವಿರುವ ಜಾಹೀರಾತುಗಳ ಪ್ರಸಾರಕ್ಕೆ ತಡೆ ಹಿಡಿಯಬೇಕು ಎಂದು ಜೆಡಿಎಸ್‌ ಕಾನೂನು ಘಟಕ ಮೂಲಕ ಚುನಾವಣೆ ಆಯೋಗಕ್ಕೆ ಮನವಿ ಮಾಡಿತ್ತು.

ಕಿಚ್ಚ ಸುದೀಪ್ ಅವರ​ ಚಲನಚಿತ್ರಗಳನ್ನು, ಟಿ.ವಿ.ಶೋಗಳನ್ನು ಮತ್ತು ಅವರು ಇರುವ ಜಾಹಿರಾತುಗಳ ಪ್ರದರ್ಶನಕ್ಕೆ ತಡೆ ಹಿಡಿಯಬೇಕೆಂದು ಶಿವಮೊಗ್ಗದ ವಕೀಲರೊಬ್ಬರು ಕೂಡ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮನವಿ ಮಾಡಿದ್ದರು.

ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಯಾರ ಪರ ಕೂಡ ನಾನು ಟಿಕೆಟ್​ ಕೇಳಿಲ್ಲ. ಪಕ್ಷದಿಂದ ಟಿಕೆಟ್ ಕೊಡಿಸುವಷ್ಟು ನಾನು ದೊಡ್ಡವನೂ ಅಲ್ಲ. ನಮ್ಮವರಿಗೋಸ್ಕರ ಕೆಲವು ನಿಲುವು ತೆಗೆದುಕೊಳ್ಳಬೇಕಾಗುತ್ತದೆ. ಬೊಮ್ಮಾಯಿ ಪರ ಪ್ರಚಾರದಲ್ಲಷ್ಟೇ ಭಾಗವಹಿಸುತ್ತೇನೆ ಎಂದು ಸುದೀಪ್ ಹೇಳಿದ್ದರು.

ಇನ್ನಷ್ಟು ಕರ್ನಾಟಕ ವಿಧಾನಸಭೆ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 7:36 pm, Mon, 10 April 23