ಕಾಂಗ್ರೆಸ್ ಗೆದ್ದಿರುವುದರಿಂದ ಕರೆಂಟ್ ಬಿಲ್ ಕಟ್ಟಲ್ಲ: ವಿದ್ಯುತ್ ಬಿಲ್ ನೀಡಲು ಬಂದ ಸಿಬ್ಬಂದಿಗೆ ಗ್ರಾಮಸ್ಥರಿಂದ ತರಾಟೆ
ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಯದಲ್ಲಿ ಉಚಿತವಾಗಿ 200ಯೂನಿಟ್ವರೆಗೆ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿತ್ತು. ಇದೀಗ ಕಾಂಗ್ರೆಸ್ ಗೆದ್ದಿರುವ ಹಿನ್ನೆಲೆ, ವಿದ್ಯುತ್ ಬಿಲ್ ನೀಡಲು ಬಂದ ಬಿಲ್ ಕಲೆಕ್ಟರ್ಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೊಪ್ಪಳ: ಮೇ.10 ರಂದು ನಡೆದಿದ್ದ ರಾಜ್ಯ ವಿಧಾನಸಭೆ ಚುನಾವಣೆ ಮತದಾನದ ಫಲಿತಾಂಶ(Karnataka Assembly Elections 2023 Result) ಮೇ.13 ರಂದು ಬಂದಿದ್ದು, ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆಯುವುದರೊಂದಿಗೆ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲು ಇದೀಗ ಸಜ್ಜಾಗಿದೆ. ಅದು ಒಂದು ಕಡೆಯಾದರೆ ಇತ್ತ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಯದಲ್ಲಿ ಉಚಿತವಾಗಿ 200ಯೂನಿಟ್ವರೆಗೆ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿತ್ತು. ಇದೀಗ ಕಾಂಗ್ರೆಸ್ ಗೆದ್ದಿರುವ ಹಿನ್ನೆಲೆ, ವಿದ್ಯುತ್ ಬಿಲ್ ನೀಡಲು ಬಂದ ಬಿಲ್ ಕಲೆಕ್ಟರ್ಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಹೌದು ಜಿಲ್ಲೆಯ ಕಾರಟಗಿ ತಾಲೂಕಿನ ಜಮಾಪುರ ಗ್ರಾಮದ ಗ್ರಾಮಸ್ಥರು ಕರೆಂಟ್ ಬಿಲ್ ಕಟ್ಟಲ್ಲವೆಂದು ಹೇಳುತ್ತಿದ್ದಾರೆ. ನಿನಗೆ ಬಿಲ್ ಬೇಕಾದರೆ ಕಾಂಗ್ರೆಸ್ ಸರ್ಕಾರ ಬಂದಿದೆ ಅವರ ಬಳಿಯೆ ತಗೆದುಕೋ ಹಾಗೂ ಬೇಕಾದರೆ ಕಮರ್ಷಿಯಲ್ ಮೀಟರ್ಗೆ ಮಾತ್ರ ಬಿಲ್ ಕೇಳು ಎಂದು ತಾಕೀತು ಹಾಕಿದ್ದು, ನಮ್ಮ ತಂಟೆಗೆ ಬರದಂತೆ ಬಿಲ್ ಕಲೆಕ್ಟರ್ಗೆ ಗಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಗೃಹಜ್ಯೋತಿ ಯೋಜನೆ; 200 ಯೂನಿಟ್ ಉಚಿತ ವಿದ್ಯುತ್ ಭರವಸೆ ಬಗ್ಗೆ ತಿಳಿಯಲೇಬೇಕಾದ ಮಾಹಿತಿ
ಪಕ್ಷವು ಘೋಷಿಸಿದ ಐದು ‘ಗ್ಯಾರಂಟಿ’ಗಳು ನಮ್ಮ ಪರವಾಗಿ ಕೆಲಸ ಮಾಡಿವೆ ಮತ್ತು ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನು ಪಡೆಯಲು ಸಹಾಯ ಮಾಡಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದರು. ಈ ಮಧ್ಯೆ, ನೂತನ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಎಲ್ಲ ಐದು ಭರವಸೆಗಳನ್ನು ಜಾರಿಗೊಳಿಸಲಾಗುವುದು ಎಂದು ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದರು. ಈ ವರ್ಷದ ಜನವರಿಯಲ್ಲಿ ಪಕ್ಷವು ಘೋಷಿಸಿದ ಮೊದಲ ಗ್ಯಾರಂಟಿ ‘ಗೃಹ ಜ್ಯೋತಿ’ ಯೋಜನೆ. ಇದರಡಿ ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಬೇಕಾಗುತ್ತದೆ. ಈ ಯೋಜನೆ ಬಗ್ಗೆ ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ.
ಯಾರಿಗೆಲ್ಲ ಉಚಿತ ವಿದ್ಯುತ್?
ಈ ವರ್ಷದ ಜನವರಿಯಲ್ಲಿ ಕಾಂಗ್ರೆಸ್ ‘ಪ್ರಜಾಧ್ವನಿ ಯಾತ್ರೆ’ಯ ಆರಂಭಿಸಿದಾಗ, ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿತ್ತು. ಇದು ಕಾಂಗ್ರೆಸ್ನ ಮೊದಲ ಗ್ಯಾರಂಟಿಯಾಗಿತ್ತು. ನಮ್ಮ ಮೊದಲ ಗ್ಯಾರಂಟಿ ಗೃಹ ಜ್ಯೋತಿ ಯೋಜನೆಯಿಂದ ಪ್ರತಿ ಮನೆಯನ್ನು ಬೆಳಕಿನಿಂದ ಬೆಳಗಿಸಲು ಬಯಸುತ್ತೇವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಈಚೆಗೆ ಬೆಳಗಾವಿಯಲ್ಲಿ ಹೇಳಿದ್ದರು.
ಉಚಿತ ವಿದ್ಯುತ್ ದಲಿತರು, ಒಬಿಸಿಗಳು ಮತ್ತು ಅಲ್ಪಸಂಖ್ಯಾತರಿಗೆ ಸೀಮಿತವಾಗಿರದೆ ಎಲ್ಲರಿಗೂ ನೀಡಲಾಗುವುದು. ಯಾವುದೇ ಬೆಲೆ ತೆತ್ತಾದರೂ ಭರವಸೆ ಈಡೇರಿಸುತ್ತೇವೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಹೇಳಿದ್ದರು. ಆದರೆ, 200 ಯೂನಿಟ್ ಮೇಲ್ಪಟ್ಟು ವಿದ್ಯುತ್ ಬಳಸಿದಲ್ಲಿ ಹೆಚ್ಚಿನ ಯೂನಿಟ್ಗೆ ಮಾತ್ರ ದರ ವಿಧಿಸುತ್ತಾರೆಯೇ ಅಥವಾ 200ಕ್ಕಿಂತ ಕಡಿಮೆ ಬಳಸಿದವರಿಗೆ ಮಾತ್ರ ಉಚಿತ ಭರವಸೆ ಅನ್ವಯವಾಗುತ್ತದೆಯೇ ಎಂಬುದನ್ನು ಪಕ್ಷ ಇನ್ನೂ ಸ್ಪಷ್ಟಪಡಿಸಿಲ್ಲ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ