ಗೊಂದಲದ ಗೂಡಾದ ಜಯನಗರ ಕ್ಷೇತ್ರದ ಮತ ಎಣಿಕೆ; ಮೂರನೇ ಮರು ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮುನ್ನಡೆ
ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಫಲಿತಾಂಶ ಹೊರಬಿದಿದ್ದು, ಕಾಂಗ್ರೆಸ್ ಪಕ್ಷಕ್ಕೆ ಬಹುಮತ ದೊರಕಿದೆ. ಆದರೆ ಬೆಂಗಳೂರಿನ ಜಯನಗರ ಕ್ಷೇತ್ರದ ಮತ ಎಣಿಕೆ ಗೊಂದಲದ ಗೂಡಾಗಿದ್ದು, ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಫಲಿತಾಂಶ (Karnataka Assembly Election Result 2023) ಹೊರಬಿದಿದ್ದು, ಕಾಂಗ್ರೆಸ್ ಪಕ್ಷಕ್ಕೆ ಬಹುಮತ ದೊರಕಿದೆ. ಆದರೆ ಬೆಂಗಳೂರಿನ ಜಯನಗರ (Jayanagara) ಕ್ಷೇತ್ರದ ಮತ ಎಣಿಕೆ ಗೊಂದಲದ ಗೂಡಾಗಿದೆ. ಆರಂಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ (Sowmya Reddy) ಅವರು ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ (CK Ramamurthy) ವಿರುದ್ಧ ಅಲ್ಪ ಮತಗಳ ಅಂತರದಲ್ಲಿ ಗೆದ್ದಿದ್ದರು. ಹೀಗಾಗಿ ರಾಮಮೂರ್ತಿ ಅವರು ಮರು ಮತ ಎಣಿಕೆಗೆ ಮನವಿ ಮಾಡಿದ್ದು, 2ನೇ ಬಾರಿಯೂ ಸೌಮ್ಯಾ ಅವರ ಮತಗಳ ಸಂಖ್ಯೆ ಕಡಿಮೆಯಾದವು. ಆದರೆ ಮೂರನೇ ಬಾರಿ ನಡೆದ ಮರು ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮುನ್ನಡೆ ಸಿಕ್ಕಿದೆ.
ಕಾಂಗ್ರೆಸ್ನ ಸೌಮ್ಯ ರೆಡ್ಡಿ ಅವರು 119 ಮತಗಳ ಅಂತರದಲ್ಲಿ ಬಿಜೆಪಿ ರಾಮಮೂರ್ತಿ ವಿರುದ್ಧ ಗೆಲುವಿನ ನಗೆ ಬೀರಿದ್ದರು. ಆದರೆ ಅಲ್ಪಮತಗಳಿಂದ ಸೋಲಾಗಿರುವ ಹಿನ್ನೆಲೆ ರಾಮಮೂರ್ತಿ ಅವರು ಮರು ಮತ ಎಣಿಕೆಗೆ ಮನವಿ ಮಾಡಿದ್ದರು. ಅದರಂತೆ ನಡೆದ ಮತ ಎಣಿಕೆಯಲ್ಲಿ ಸೌಮ್ಯ ರೆಡ್ಡಿ ಅವರ ಮತಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದರೂ ಅವರೇ ಗೆಲುವು ಸಾಧಿಸಿದ್ದರು.
ಆದರೂ ಅನುಮಾನಗೊಂಡ ರಾಮಮೂರ್ತಿ ಅವರು ಮೂರನೇ ಬಾರಿ ಮರು ಮತ ಎಣಿಕೆಗೆ ಪಟ್ಟುಹಿಡಿದರು. ಅದರಂತೆ ನಡೆದ ಮತ ಎಣಿಕೆಯಲ್ಲಿ ರಾಮಮೂರ್ತಿ ಅವರಿಗೆ 17 ಮತಗಳ ಅಂತರದ ಮುನ್ನಡೆ ಸಿಕ್ಕಿದೆ. ಇದೀಗ ಕಾಂಗ್ರೆಸ್ ಅಭ್ಯರ್ಥಿ ಮರು ಮತ ಎಣಿಕೆಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ಗೆ ಬಹುಮತ; ಭಟ್ಕಳದಲ್ಲಿ ಕೇಸರಿ ಧ್ವಜದ ಪಕ್ಕ ಇಸ್ಲಾಂ ಬಾವುಟ ಹಾರಿಸಿದ ಮುಸ್ಲಿಂ ಯುವಕರು
ಸದ್ಯ ಜಯನಗರ ವಿಧಾನಸಭೆ ಫಲಿತಾಂಶ ಗೊಂದಲ ಹಿನ್ನಲೆ ಜಯನಗರ SSMRV ಕಾಲೇಜ್ ಬಳಿ ಜಮಾಯಿಸಿದ ಕಾಂಗ್ರೆಸ್ ಕಾಯರ್ಕತರು ಪತ್ರಿಭಟನೆ ನಡೆಸುತ್ತಿದ್ದಾರೆ. ಸಂಸದ ತೇಜಸ್ವಿ ಸೂರ್ಯಗೆ ದಿಕ್ಕಾರ ಕೂಗುತ್ತಿರುವ ಕಾಂಗ್ರೆಸ್ ಬೆಂಬಲಿಗರು, ಅನಧಿಕೃತವಾಗಿ ತೇಜಸ್ವಿ ಸೂರ್ಯ ಮತ ಏಣಿಕೆ ಕೇಂದ್ರಕ್ಕೆ ಪ್ರವೇಶ ಮಾಡಿ ಒತ್ತಡ ಹಾಕಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ಕ್ಷಣಕ್ಷಣಕ್ಕೂ ಪ್ರತಿಭಟನೆ ಕಾವು ಹೆಚ್ಚಾಗುತ್ತಿರುವ ಹಿನ್ನೆಲೆ ಸ್ಥಳದಲ್ಲಿ ಹೆಚ್ಚಿನ ಪೊಲೀಸರು ಬೀಡುಬಿಟ್ಟಿದ್ದು, ಪರಿಸ್ಥಿತಿ ತಿಳಿಗೊಳಿಸಲು ಹರಸಾಹಸ ಪಡುತ್ತಿದ್ದಾರೆ. 200ಕ್ಕೂ ಹೆಚ್ಚು ಪೊಲೀಸರನ್ನು ಮತ ಎಣಿಕಾ ಕೇಂದ್ರಕ್ಕೆ ಭದ್ರತೆಗಾಗಿ ನಿಯೋಜಿಸಲಾಗಿದೆ.
ಇತ್ತ, ಕಾಂಗ್ರೆಸ್ ಕಾರ್ಯಕರ್ತರಿಗೆ ಸೆಡ್ಡು ಹೊಡೆದ ಬಿಜೆಪಿ ಕಾರ್ಯಕರ್ತರು, ಪಕ್ಷದ ಧ್ವಜಗಳನ್ನು ಹಿಡಿದುಕೊಂಡು ಬಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಎದುರಾಗಿ ನಿಂತಿದ್ದಾರೆ. SSMRV ಕಾಲೇಜು ಬಳಿ ಹೈಡ್ರಾಮ ನಡೆಯುತ್ತಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಘೋಷಣೆಗಳನ್ನು ಕೂಗುತ್ತಿದ್ದಾರೆ. ಈ ಎರಡು ಗುಂಪನ್ನು ಪೊಲೀಸರು ಚದುರಿಸುವ ಪ್ರಯತ್ನ ಮಾಡುತ್ತಿದ್ದಾರೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ