ಹಾಸನ ಟಿಕೆಟ್ ಗೊಂದಲ: ಮತ್ತೊಮ್ಮೆ ದೇವೇಗೌಡರನ್ನು ಭೇಟಿಯಾದ ರೇವಣ್ಣ ಮಾಧ್ಯಮಗಳಿಗೆ ಹೇಳಿದ್ದೇನು?
ಮಾಜಿ ಸಚಿವ ಹೆಚ್.ಡಿ ರೇವಣ್ಣ ಇಂದು (ಏ.11) ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನು ಭೇಟಿಯಾಗಿ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಯಾರಿಗೆಂದು ಚರ್ಚಿಸಿದ್ದಾರೆ.
ಹಾಸನ: ರಾಜ್ಯ ವಿಧಾನಸಭೆ ಚುನಾವಣೆ ಸಂಬಂಧ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಪಂಚರತ್ನ ಯಾತ್ರೆ ಮಾಡುತ್ತಾ ಜಿಲ್ಲಾ ಪ್ರವಾಸದಲ್ಲಿ ಫುಲ್ ಬ್ಯುಸಿಯಾಗಿದ್ದರು. ಇದರಲ್ಲೇ ಫುಲ್ ಆಕ್ಟಿವ್ ಆಗಿದ್ದ ಕುಮಾರಸ್ವಾಮಿಯವರಿಗೆ ಬರ ಸಿಡಿಲಿನಂತೆ ಬಡೆದಿದ್ದು, ಭವಾನಿ ರೇವಣ್ಣವರು (Bhavani Revanna) ಹಾಸನ (Hassan) ಕ್ಷೇತ್ರದ ಅಭ್ಯರ್ಥಿ ನಾನೇ ಎಂಬ ಹೇಳಿಕೆ. ಇದಾದ ನಂತರ ಅಣ್ಣ-ತಮ್ಮಂದಿರ ನಡುವೆ ಸಣ್ಣದಾಗಿ ಬಿರುಕು ಮೂಡಲು ಶುರುವಾಯ್ತು. ಅತ್ತ ಭವಾನಿ ರೇವಣ್ಣ ಹಾಸನ ಟಿಕೆಟ್ ನನಗೇ ನೀಡಬೇಕು ಎಂದು ಪಟ್ಟು ಹಿಡಿದಿದ್ದರೇ, ಇತ್ತ ಹೆಚ್ ಡಿ ಕುಮಾರಸ್ವಾಮಿಯವರು ಟಿಕೆಟ್ ಪಕ್ಷಕ್ಕಾಗಿ ದುಡಿದ ಸಾಮಾನ್ಯ ಕಾರ್ಯಕರ್ತನಿಗೆ ಎಂದು ಘೋಷಿಸಿದರು. ಇದರಿಂದ ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡರ (H D Devegowda) ಕುಟುಂಬದಲ್ಲಿ ಸುಂಟರಾಗಾಳಿ ಏಳಲು ಶರುವಾಯ್ತು. ನಂತರ ದಿನಗಳಲ್ಲಿ ಕುಟುಂಬದ ಮಕ್ಕಳು ಕೂಡ ವಾಗ್ದಾಳಿ ಮಾಡಲು ಶುರು ಮಾಡಿಕೊಂಡರು. ಈ ಹಗ್ಗ-ಜಗ್ಗಾಟದ ಮಧ್ಯೆ ಟಿಕೆಟ್ ವಿಚಾರ ದೊಡ್ಡಗೌಡರ ಅಂಗಳ ತಲುಪಿದ್ದು ಹೆಚ್.ಡಿ ದೇವೇಗೌಡರು ಯಾರತ್ತ ಬ್ಯಾಟ್ ಬೀಸುತ್ತಾರೋ ಅವರಿಗೆ ಟಿಕೆಟ್ ಎಂಬುವುದು ಫೈನಲ್ ಆಯ್ತು.
ಈಗ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ದೊಡ್ಡಗೌಡರ ಒಲವು ಯಾರತ್ತ ಎಂದು ಕುತೂಹಲ ಮೂಡಿಸಿದೆ. ಈ ಹಿನ್ನೆಲೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಇಂದು (ಏ.11) ತಂದೆ ದೇವೇಗೌಡರನ್ನು ಭೇಟಿಯಾಗಿದ್ದಾರೆ. ಹೆಚ್.ಡಿ.ದೇವೇಗೌಡರನ್ನು ಭೇಟಿಯಾಗಿ ಎಲ್ಲವನ್ನೂ ಚರ್ಚಿಸಿದ್ದೇನೆ. ಎಲ್ಲವನ್ನೂ ಹೇಳಿದ್ದೇನೆ, ಅವರೇ ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೆಚ್.ಡಿ ರೇವಣ್ಣ ಹೇಳಿದ್ದಾರೆ.
ಇದನ್ನೂ ಓದಿ: ಚುನಾವಣೆ ಹೊಸ್ತಿಲಲ್ಲೇ ಸಿದ್ದರಾಮಯ್ಯ ಆಪ್ತನ ಸೊಸೆಗೆ ಡಿಸಿ ಬಿಗ್ ಶಾಕ್, ಎಲೆಕ್ಷನ್ಗೆ ನಿಲ್ಲುವ ಆಸೆ ನುಚ್ಚುನೂರು
ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಆನೆಕೆರೆಯಮ್ಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಹೆಚ್.ಡಿ.ದೇವೇಗೌಡರ ನಿರ್ಧಾರಕ್ಕೆ ನಾವೆಲ್ಲರೂ ಬದ್ಧವಾಗಿದ್ದೇವೆ. ಸಾಮಾನ್ಯ ಕಾರ್ಯಕರ್ತ ಯಾರು ಅಂತ ದೇವೇಗೌಡರಿಗೆ ಗೊತ್ತಿದೆ. ರಾಜಕೀಯದಲ್ಲಿ ದೇವೇಗೌಡರಿಗೆ 60 ವರ್ಷದ ಅನುಭವ ಇದೆ. ನಾನು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಿಲ್ಲ. ಹೊಳೆನರಸೀಪುರ ಬಿಟ್ಟು ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡಿದರೆ ಗೆಲ್ಲಲ್ಲ
ಅತ್ತ ರೇವಣ್ಣ ಅವರು ಹೇಳಿಕೆ ಒಂದಾದರೇ ಇತ್ತ ಹೆಚ್.ಡಿ ಕುಮಾರಸ್ವಾಮಿಯವರ ಹೇಳಿಕೆ ಬೇರೆಯದ್ದೇಯಾಗಿದೆ. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡಿದರೆ ಗೆಲ್ಲಲ್ಲ. ಹಾಸನ ಕ್ಷೇತ್ರದಲ್ಲಿ ಕಾರ್ಯಕರ್ತರ ತೀರ್ಮಾನವೇ ಅಂತಿಮ. ವಾಸ್ತವಿಕ, ಗ್ರೌಂಡ್ ರಿಯಾಲಿಟಿ ಮೇಲೆ ಟಿಕೆಟ್ ನೀಡುತ್ತೇವೆ. ಒಂದೂವರೆ ವರ್ಷದ ಹಿಂದೆ ಹಾಸನದ ಶಾಸಕರು ಸವಾಲು ಹಾಕಿದ್ದರು. ಹಾಗಾಗಿ ಸಾಮಾನ್ಯ ಕಾರ್ಯಕರ್ತನ ನಿಲ್ಲಿಸಿ ಗೆಲ್ಲುತ್ತೇನೆ ಎಂದಿದ್ದೇನೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಕರ್ನಾಟಕ ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 2:08 pm, Tue, 11 April 23