Karnataka Polls 2023: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರಿಂದ ಇಂದು ಭರ್ಜರಿ ಪ್ರಚಾರ: ಯಾರು ಎಲ್ಲೆಲ್ಲಿ? ಇಲ್ಲಿದೆ ಡಿಟೇಲ್ಸ್

ಕಾಂಗ್ರೆಸ್-ಬಿಜೆಪಿ ಕೇಂದ್ರ ನಾಯಕರು ರಾಜ್ಯದಲ್ಲೇ ವಾಸ್ತವ್ಯ ಹೂಡಿ ಮತದಾರರನ್ನು ಸೆಳೆಯಲು ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಈ ಬಾರಿ ಸಿನಿಮಾ ತಾರೆಯರ ಪ್ರಚಾರವು ಚುನಾವಣೆಗೆ ಮತ್ತಷ್ಟು ರಂಗನ್ನು ಹೆಚ್ಚು ಮಾಡಿದೆ.

Karnataka Polls 2023: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರಿಂದ ಇಂದು ಭರ್ಜರಿ ಪ್ರಚಾರ: ಯಾರು ಎಲ್ಲೆಲ್ಲಿ? ಇಲ್ಲಿದೆ ಡಿಟೇಲ್ಸ್
ಬಿಜೆಪಿ, ಕಾಂಗ್ರೆಸ್, ಜೆಡಿಎಸ್
Follow us
|

Updated on:May 01, 2023 | 7:58 AM

ಬೆಳಗಾವಿ: 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ(Karnataka Assembly Elections 2023) ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಮತದಾನಕ್ಕೆ ಕೇವಲ 9 ದಿನಗಳು ಬಾಕಿ ಇದ್ದು ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್-ಬಿಜೆಪಿ ಕೇಂದ್ರ ನಾಯಕರು ರಾಜ್ಯದಲ್ಲೇ ವಾಸ್ತವ್ಯ ಹೂಡಿ ಮತದಾರರನ್ನು ಸೆಳೆಯಲು ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಈ ಬಾರಿ ಸಿನಿಮಾ ತಾರೆಯರ ಪ್ರಚಾರವು ಚುನಾವಣೆಗೆ ಮತ್ತಷ್ಟು ರಂಗನ್ನು ಹೆಚ್ಚು ಮಾಡಿದೆ. ಅದರಲ್ಲೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Sudeep) ಅವರು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಸತತವಾಗಿ ರೋಡ್ ಶೋ ಮೂಲಕ ಮತಯಾಚನೆ ಮಾಡುತ್ತಿದ್ದಾರೆ. ಇಂದು ಯಾವ ಯಾವ ನಾಯಕರು ಎಲ್ಲೆಲ್ಲಿ ಪ್ರಚಾರ ನಡೆಸಲಿದ್ದಾರೆ ಎಂಬ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಕುಂದಾನಗರಿಯಲ್ಲಿ ಕಿಚ್ಚು ಹತ್ತಿಸಲಿರುವ ಸುದೀಪ್

ಇಂದು ಕುಂದಾನಗರಿ ಬೆಳಗಾವಿಯಲ್ಲಿ ಕಿಚ್ಚ ಸುದೀಪ್ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿ ಕಿಚ್ಚು ಹತ್ತಿಸಲಿದ್ದಾರೆ. ಹಾಗೂ ಸ್ಯಾಂಡಲ್ ವುಡ್ ಕ್ವೀನ್, ಮಾಜಿ ಸಂಸದೆ ರಮ್ಯಾ ವಿಜಯಪುರ, ಮಂಡ್ಯ, ರಾಮನಗರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ನಟ ಸುದೀಪ್ ಅವರು ಕಿತ್ತೂರು, ಬೆಳಗಾವಿ ಗ್ರಾಮಾಂತರ, ಯಮಕನಮರಡಿ ಕ್ಷೇತ್ರ, ಚಿಕ್ಕೋಡಿ ಸೇರಿದಂತೆ ಐದಾರು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದು ಇಂದು ರಾತ್ರಿ ಬೆಳಗಾವಿಯಲ್ಲಿ ವಾಸ್ತವ್ಯ ಹೂಡುವ ಸಾಧ್ಯತೆ ಇದೆ. ಇನ್ನು ಮಾಜಿ ಸಂಸದೆ, ನಟಿ ರಮ್ಯಾ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ​ ಮಾಡಲಿದ್ದಾರೆ. ವಿಜಯಪುರ, ಮಂಡ್ಯ, ರಾಮನಗರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಚಾರ ನಡೆಸಲಿದ್ದಾರೆ.

ತುಮಕೂರು, ಶಿವಮೊಗ್ಗದಲ್ಲಿ ಅಮಿತ್ ಶಾ ಹವಾ

ಇಂದು ತುಮಕೂರು ಜಿಲ್ಲೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಮತಬೇಟೆ ಮಾಡಲಿದ್ದಾರೆ. ಗುಬ್ಬಿ ಮತ್ತು ತಿಪಟೂರು ಕ್ಷೇತ್ರದಲ್ಲಿ ಅಮಿತ್ ಶಾ ರೋಡ್​ಶೋ ನಡೆಸಿ ಗುಬ್ಬಿ ಬಿಜೆಪಿ ಅಭ್ಯರ್ಥಿ ದಿಲೀಪ್ ಕುಮಾರ್, ತಿಪಟೂರು ಬಿಜೆಪಿ ಅಭ್ಯರ್ಥಿ ಬಿ.ಸಿ.ನಾಗೇಶ್ ಪರ ಮತಯಾಚನೆ ಮಾಡಲಿದ್ದಾರೆ. ಗುಬ್ಬಿಯ ಚನ್ನಬಸವೇಶ್ವರ ದೇವಸ್ಥಾನದಿಂದ ಶಾ ರೋಡ್​ಶೋ ನಡೆಯಲಿದ್ದು ಗುಬ್ಬಿ ಪಟ್ಟಣದ ಸರ್ಕಾರಿ ಆಸ್ಪತ್ರೆವರೆಗೂ ರೋಡ್​ಶೋ ಇರಲಿದೆ. ಇನ್ನು ಸಂಜೆ 6 ಗಂಟೆಗೆ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಶಾ ರೋಡ್​ಶೋ ನಡೆಸಲಿದ್ದಾರೆ. ಶಿವಮೊಗ್ಗದ ಶಿವಪ್ಪ ನಾಯಕ ವೃತ್ತ, ನೆಹರು ರಸ್ತೆ, ದುರ್ಗಿ ಗುಡಿ, ಜೈಲ್ ರಸ್ತೆ, ಲಕ್ಷ್ಮೀ ಟಾಕೀಸ್​ವರೆಗೂ ರೋಡ್​​ಶೋ ನಡೆಸಲಿದ್ದಾರೆ. ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಪರ ಮತಯಾಚನೆ ಮಾಡಲಿದ್ದಾರೆ. ಇನ್ನು ಮತ್ತೊಂದೆಡೆ ಬಿಜೆಪಿ‌ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ಯಶವಂತಪುರ ಕ್ಷೇತ್ರಗಳಲ್ಲಿ ರೋಡ್ ಶೋ ಮೂಲಕ ಪ್ರಚಾರ ನಡೆಸಲಿದ್ದಾರೆ.

ಇದನ್ನೂ ಓದಿ: Karnataka Election 2023 Live: ಚುನಾವಣಾ ಪ್ರಚಾರ ಬಿರುಸು, ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ​

ತುಮಕೂರಿನಲ್ಲಿ ಬಿಎಸ್​ವೈ ಪ್ರಚಾರ

ತುಮಕೂರು ಜಿಲ್ಲೆಯಲ್ಲಿ ಇಂದು ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಪ್ರಚಾರ ನಡೆಸಲಿದ್ದಾರೆ. ಬೆಳಗ್ಗೆ 10ಕ್ಕೆ ಕುಣಿಗಲ್‌ನಲ್ಲಿ ರೋಡ್‌ ಶೋ ನಡೆಸಿ ಮತಯಾಚನೆ ಮಾಡಲಿದ್ದಾರೆ. ಕುಣಿಗಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೃಷ್ಣ ಕುಮಾರ್ ಪರ ಪ್ರಚಾರ ನಡೆಸಿ ಬಳಿಕ ತುಮಕೂರು ಗ್ರಾಮಾಂತರ ಕ್ಷೇತ್ರದ ಸಮಾವೇಶದಲ್ಲಿ ಭಾಗಿಯಾಗಿ ತುಮಕೂರು ಗ್ರಾಮಾಂತರ ಅಭ್ಯರ್ಥಿ ಸುರೇಶ್ ಗೌಡ ಪರ ಪ್ರಚಾರ ಮಾಡಲಿದ್ದಾರೆ. ನಂತರ ತುಮಕೂರು ನಗರ ಕ್ಷೇತ್ರದಲ್ಲಿ ರೋಡ್‌ ಶೋ, ಸಮಾವೇಶ ನಡೆಸಲಿದ್ದಾರೆ. ತುಮಕೂರು ನಗರ ಅಭ್ಯರ್ಥಿ ಜ್ಯೋತಿ ಗಣೇಶ್ ಪರ ಕೂಡ ಮತಯಾಚನೆ ಮಾಡಲಿದ್ದಾರೆ.

ವರುಣದಲ್ಲಿ ಸಿಎಂ ಬೊಮ್ಮಾಯಿ ಪ್ರಚಾರ

ಇಂದು ಮತ್ತೆ ವರುಣ ಅಖಾಡಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಧುಮಕಲಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಕಟ್ಟಿ ಹಾಕಲು ರಣತಂತ್ರ ಹೆಣೆಯಲಾಗಿದ್ದು ಬೆಳಗ್ಗೆ 12.35ಕ್ಕೆ ವಿಶೇಷ ವಿಮಾನದ ಮೂಲಕ ಮೈಸೂರಿಗೆ ಆಗಮಿಸಿ ಬಳಿಕ 1 ಗಂಟೆಗೆ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಬೊಮ್ಮಾಯಿ ರೋಡ್ ಶೋ ನಡೆಸಲಿದ್ದಾರೆ. ವಿ ಸೋಮಣ್ಣ ಪರ ಮತಯಾಚನೆ ಮಾಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಚಾಮರಾಜ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿ ನಂತರ ಸಭೆ ಮಾಡಿ ಬಿಜೆಪಿ ಅಭ್ಯರ್ಥಿ ಎಲ್ ನಾಗೇಂದ್ರ ಪರ ಮತಯಾಚನೆ ಮಾಡಿ 4.15ಕ್ಕೆ ಕೃಷ್ಣರಾಜ ಕ್ಷೇತ್ರದಲ್ಲಿ ರೋಡ್ ಶೋ ಹಾಗೂ ಸಭೆ ನಡೆಸಿ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಪರ ಮತಯಾಚನೆ ಮಾಡಲಿದ್ದಾರೆ.

ತುರುವೇಕೆರೆ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಮತಯಾಚನೆ

ತುಮಕೂರು ಜಿಲ್ಲೆ ತುರುವೇಕೆರೆ ಪಟ್ಟಣದಲ್ಲಿ ಕಾಂಗ್ರೆಸ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ಬೆಳಗ್ಗೆ 10 ಗಂಟೆಗೆ ತುರುವೇಕೆರೆಗೆ ರಾಹುಲ್ ಗಾಂಧಿ ಆಗಮಿಸಿ ಕಾಂಗ್ರೆಸ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಸಿದ್ದರಾಮಯ್ಯ ಕೂಡ ತುಮಕೂರು ಜಿಲ್ಲೆಯಲ್ಲಿ ಮತಯಾಚನೆ ಮಾಡಲಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಮಧುಗಿರಿಗೆ ಆಗಮಿಸಿ ಮಧುಗಿರಿ ಕ್ಷೇತ್ರದ ಅಭ್ಯರ್ಥಿ ಕೆ.ಎನ್.ರಾಜಣ್ಣ ಪರ ಮತಯಾಚನೆ ಮಾಡಲಿದ್ದಾರೆ. ಬಳಿಕ ಮಧ್ಯಾಹ್ನ 1.30ಕ್ಕೆ ಪಾವಗಡ ಕ್ಷೇತ್ರದಲ್ಲಿ ಪಾವಗಡ ‘ಕೈ’ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್ ಪರ ಪ್ರಚಾರ ಮಾಡಲಿದ್ದಾರೆ. ಬಳಿಕ ಮಧ್ಯಾಹ್ನ 3.30ಕ್ಕೆ ಕೊರಟಗೆರೆಗೆ ಆಗಮಿಸಿ ಕೊರಟಗೆರೆ ‘ಕೈ’ ಅಭ್ಯರ್ಥಿ ಡಾ.ಜಿ.ಪರಮೇಶ್ವರ್ ಪರ ಮತಯಾಚನೆ ಮಾಡಿ ಸಂಜೆ 5.30ಕ್ಕೆ ಗುಬ್ಬಿ ಕ್ಷೇತ್ರಕ್ಕೆ ಬಂದು ಅಲ್ಲಿ ಗುಬ್ಬಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ S.R.ಶ್ರೀನಿವಾಸ್ ಪರ ಪ್ರಚಾರ ಮಾಡಿ ರಾತ್ರಿ 9 ಗಂಟೆಗೆ ಬೆಂಗಳೂರಿಗೆ ಹಿಂದಿರುಗಲಿದ್ದಾರೆ.

ಇದನ್ನೂ ಓದಿ: ಬಡವರ ಪರ ಇರೋದು ಒಬ್ಬರೇ ರಾಜಕಾರಣಿ ಅದು ಹೆಚ್​ಡಿ ಕುಮಾರಸ್ವಾಮಿ ಎಂದ ಮಾಜಿ ಪ್ರಧಾನಿ ದೇವೇಗೌಡ

ತುಮಕೂರಿನಲ್ಲಿ ಘಟಾನುಘಟಿಗಳಿಂದ ಪ್ರಚಾರ

ಇಂದು ತುಮಕೂರಿನಲ್ಲಿ ಘಟಾನುಘಟಿ ನಾಯಕರು ಪ್ರಚಾರ ನಡೆಸಲಿದ್ದಾರೆ. ಅಮಿತ್ ಶಾ, ಬಿಎಸ್​ ಯಡಿಯೂರಪ್ಪ, ರಾಹುಲ್ ಗಾಂಧಿ, ಸಿದ್ದರಾಮಯ್ಯ ತುಮಕೂರಿನಲ್ಲಿ ಪ್ರಚಾರ ನಡೆಸಲಿದ್ದಾರೆ.

ವಿಜಯಪುರ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಶೆಟ್ಟರ್ ಪ್ರಚಾರ

ವಿಜಯಪುರ ನಗರ ಕ್ಷೇತ್ರದಲ್ಲಿ ಲಿಂಗಾಯತ ಮತ ಸೆಳೆಯಲು ಪ್ಲ್ಯಾನ್‌ ನಡೆದಿದ್ದು ಇಂದು ವಿಜಯಪುರ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಜಗದೀಶ್ ಶೆಟ್ಟರ್ ಪ್ರಚಾರ ನಡೆಸಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಪರ ಶೆಟ್ಟರ್ ಮತಬೇಟೆ ಮಾಡಲಿದ್ದಾರೆ. ಇದೇ ವೇಳೆ ಸಾರ್ವಜನಿಕ ಪ್ರಚಾರ ಸಭೆ ನಡೆಸಲಿದ್ದಾರೆ. ಇನ್ನು ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಕೊಪ್ಪಳ ಜಿಲ್ಲೆ ಕೈ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ.

3 ಕ್ಷೇತ್ರಗಳಲ್ಲಿ ಇಂದು ಹೆಚ್‌ಡಿಕೆ ಪ್ರಚಾರ

ವಿಜಯಪುರ ಜಿಲ್ಲೆಯ 3 ಕ್ಷೇತ್ರಗಳಲ್ಲಿ ಇಂದು ಹೆಚ್‌ಡಿ ಕುಮಾರಸ್ವಾಮಿ ಪ್ರಚಾರ ನಡೆಸಲಿದ್ದಾರೆ. ಬಸವನಬಾಗೇವಾಡಿ, ದೇವರಹಿಪ್ಪರಗಿ ಕ್ಷೇತ್ರ ಹಾಗೂ ನಾಗಠಾಣ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಬಸವನಬಾಗೇವಾಡಿಯಲ್ಲಿ ಬೆಳಗ್ಗೆ 11 ಗಂಟೆಗೆ ಹೆಚ್‌ಡಿಕೆ ಪ್ರಚಾರ ನಡೆಸಲಿದ್ದು JDS ಅಭ್ಯರ್ಥಿ ಸೋಮನಗೌಡಪಾಟೀಲ್ ಮನಗೂಳಿ ಪರ ಪ್ರಚಾರ ಮಾಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ದೇವರಹಿಪ್ಪರಗಿಗೆ ತೆರಳಿ ಬಹಿರಂಗ ಸಮಾವೇಶ ನಡೆಸಿ ರಾಜುಗೌಡ ಪಾಟೀಲ್ ಪರ ಪ್ರಚಾರ ಮಾಡಲಿದ್ದಾರೆ. ನಂತರ ನಾಗಠಾಣ ಕ್ಷೇತ್ರದ ಚಡಚಣ ಪಟ್ಟಣಕ್ಕೆ ತೆರಳಿ ದೇವಾನಂದ ಚೌಹಾಣ್‌ ಪರ HDK ಪ್ರಚಾರ ಮಾಡಲಿದ್ದಾರೆ. ನಂತರ ಮಧ್ಯಾಹ್ನ ಕಲಬುರಗಿಗೆ ಆಗಮಿಸಿ ಕಲಬುರಗಿ ಜಿಲ್ಲೆಯ ಯಡ್ರಾಮಿ ಪಟ್ಟಣದಲ್ಲಿ ಜೆಡಿಎಸ್ ಸಮಾವೇಶ ನಡೆಸಿ ಜೇವರ್ಗಿ ಜೆಡಿಎಸ್ ಅಭ್ಯರ್ಥಿ ದೊಡ್ಡಪ್ಪಗೌಡ ಪಾಟೀಲ್ ಪರ ಮತ ಯಾಚಿಸಲಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:58 am, Mon, 1 May 23