ನಿಷೇಧಿಸುವುದಿದ್ದರೆ 2000 ರೂ. ನೋಟು ಚಲಾವಣೆಗೆ ತಂದಿದ್ದೇಕೆ; ಸಿದ್ದರಾಮಯ್ಯ ಪ್ರಶ್ನೆ
ಎಲ್ಲಾ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರ್ಧರಿಸಿರುವ ಬೆನ್ನಲ್ಲೇ ಆ ನಿರ್ಧಾರದ ವಿರುದ್ಧ ಕರ್ನಾಟಕದ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನೋಟನ್ನು ನಿಷೇಧಿಸುವುದಿದ್ದರೆ ಅದನ್ನು ಚಲಾವಣೆಗೆ ತಂದಿದ್ದೇಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಬೆಂಗಳೂರು: ಎಲ್ಲಾ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರ್ಧರಿಸಿರುವ ಬೆನ್ನಲ್ಲೇ ಆ ನಿರ್ಧಾರದ ವಿರುದ್ಧ ಕರ್ನಾಟಕದ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನೋಟನ್ನು ನಿಷೇಧಿಸುವುದಿದ್ದರೆ ಅದನ್ನು ಚಲಾವಣೆಗೆ ತಂದಿದ್ದೇಕೆ ಎಂದು ಅವರು ಪ್ರಶ್ನಿಸಿದ್ದಾರೆ.
‘ಈಗ 2000 ರೂ. ಮೌಲ್ಯದ ನೋಟುಗಳನ್ನು ನಿಷೇಧ ಮಾಡಿರುವ ಪ್ರಧಾನಿಯವರು (ನೋಟು ಚಲಾವಣೆ ಹಿಂಪಡೆದಿರುವುದು ಆರ್ಬಿಐ), 2016ರಲ್ಲಿ 500 ರೂ. ಮತ್ತು 1000 ರೂ.ನೋಟುಗಳನ್ನು ನಿಷೇಧ ಮಾಡಿದಾಗ ತಿಳಿಸಿದ್ದ ಯಾವ ಉದ್ದೇಶಗಳು ಈಡೇರಿವೆ ಎನ್ನುವುದನ್ನು ದೇಶದ ಜನರಿಗೆ ಮೊದಲು ತಿಳಿಸಬೇಕು. ಈಗ 2000 ರೂ. ಮೌಲ್ಯದ ನೋಟು ನಿಷೇಧಿಸುವುದಿದ್ದರೆ 2016ರಲ್ಲಿ ಅದನ್ನು ಚಲಾವಣೆಗೆ ತಂದದ್ದು ಯಾಕೆ? ಯಾವ ಕಾರಣಕ್ಕಾಗಿ ಈಗ ಇದನ್ನು ನಿಷೇಧಿಸಲಾಗಿದೆ? ಕಪ್ಪು ಹಣವನ್ನು ನಿಯಂತ್ರಿಸುವ ನೋಟು ನಿಷೇಧ ಎಂಬ ಪ್ರಬಲ ಅಸ್ತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಈಗ ರೂ.2000 ಮೌಲ್ಯದ ನೋಟು ನಿಷೇಧಿಸುವುದಿದ್ದರೆ 2016ರಲ್ಲಿ ಅದನ್ನು ಚಲಾವಣೆಗೆ ತಂದದ್ದು ಯಾಕೆ? ಯಾವ ಕಾರಣಕ್ಕಾಗಿ ಈಗ ಇದನ್ನು ನಿಷೇಧಿಸಲಾಗಿದೆ? ಕಪ್ಪು ಹಣವನ್ನು ನಿಯಂತ್ರಿಸುವ ನೋಟು ನಿಷೇಧ ಎಂಬ ಪ್ರಬಲ ಅಸ್ತ್ರವನ್ನು ಪ್ರಧಾನಿ @narendramodi ಅವರು ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. 2/2
— Siddaramaiah (@siddaramaiah) May 19, 2023
2000 ರೂಪಾಯಿ ನೋಟುಗಳನ್ನು ಈಗ ಚಲಾವಣೆಯಿಂದ ಹಿಂಪಡೆಯಲಾಗುತ್ತದೆ. ಆದರೆ, 2000 ರೂಪಾಯಿ ನೋಟುಗಳ ಸಿಂಧುತ್ವವು ಹಾಗೆಯೇ ಉಳಿಯುತ್ತದೆ. ಅಂದರೆ ನಿಮ್ಮ ಬಳಿ 2000 ರೂಪಾಯಿ ನೋಟು ಇದ್ದರೆ ಗಾಬರಿ ಪಡುವ ಅಗತ್ಯವಿಲ್ಲ. ನೀವು ಅವುಗಳನ್ನು ಮೇ 23 ರಿಂದ ಸೆಪ್ಟೆಂಬರ್ 30 ರವರೆಗೆ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಬಹುದು ಎಂದು ಆರ್ಬಿಐ ತಿಳಿಸಿದ ಬೆನ್ನಲ್ಲೇ ಸಿದ್ದರಾಮಯ್ಯ ಈ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Rs. 2,000 ನೋಟು ಹಿಂಪಡೆದ ಆರ್ಬಿಐ; ನಿಮ್ಮಲ್ಲಿ ಆ ನೋಟಿದ್ದರೆ ಏನು ಏನು ಕಥೆ? ಇಲ್ಲಿದೆ ಡೀಟೇಲ್ಸ್
ಸಿದ್ದರಾಮಯ್ಯ ಅವರು ಶನಿವಾರ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ಕೆಲವು ಮಂದಿ ಶಾಸಕರು ಹಾಗೂ ಸಚಿವರೂ ಅಧಿಕಾರ ಸ್ವೀಕರಿಸುವ ನಿರೀಕ್ಷೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ