ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ: ಯಾರಾಗ್ತಾರೆ ಶಾಸಕಾಂಗ ಪಕ್ಷದ ನಾಯಕ?
ಚುನಾವಣಾ ಸಮೀಕ್ಷೆಗಳ ವರದಿಯನ್ನು ಮೀರಿ ರಾಜ್ಯದಲ್ಲಿ ಕಾಂಗ್ರೆಸ್ ಭಾರಿ ಗೆಲುವು ಸಾಧಿಸಿದೆ. ಆದ್ರೆ, ಇದೀಗ ಮುಖ್ಯಮಂತ್ರಿ ಯಾರು ಆಗುತ್ತಾರೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.
ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಕೊನೆಗೂ ಹಿಡಿದ ಗುರಿ ಸಾಧಿಸಿದೆ. ರಾಜ್ಯ ವಿಧಾನಸಭೆ ಚುನಾವಣೆ ಅಖಾಡದಲ್ಲಿ ಮೋದಿಯ ಬಿರುಸಿನ ಪ್ರಚಾರದ ಅಲೆಯನ್ನು ಮೆಟ್ಟಿ ಬಿಜೆಪಿಯನ್ನು ಮಖಾಡೆ ಮಲಗಿಸಿದೆ. 135 ಸ್ಥಾನಗಳಲ್ಲಿ ಸ್ಪಷ್ಟ ಬಹುಮತ ಸಿಗುತ್ತಿದ್ದಂತೆ ಸರ್ಕಾರ ರಚನೆಗೆ ಕಸರತ್ತು ಆರಂಭಿಸಿದೆ. ಹೌದು.. ಕಾಂಗ್ರೆಸ್ ಗೆದ್ದ ಬೆನ್ನಲ್ಲೇ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಇಂದು(ಮೇ 14) ಸಂಜೆ 5.30ಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಈ ಸಭೆಯಲ್ಲಿ ವೀಕ್ಷಕರ ಸಮ್ಮುಖದಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ರೇಸ್ನಲ್ಲಿದ್ದಾರೆ. ಇನ್ನು ಇವರರಿಬ್ಬರ ಮಧ್ಯೆ ಡಾ. ಪರಮೇಶ್ವರ್ ಸಹ ಒಳಗಿಂದೊಳಗೇ ಕಸರತ್ತು ನಡೆಸಿದ್ದಾರೆ.
ಇದನ್ನೂ ಓದಿ: ಕರುನಾಡಲ್ಲೇ ಆವರಿಸಿದ ಕಾಂಗ್ರೆಸ್ ಸುನಾಮಿ, ಕರಾವಳಿಯಲ್ಲಿ ಮಾತ್ರ ಅರಳಿದ ಕಮಲ
ಈ ಕುರಿತಂತೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಮಾಹಿತಿ ನೀಡಿದ್ದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ಮೊದಲ ಸಭೆಯನ್ನು ಭಾನುವಾರ(ಮೇ 14) ಸಂಜೆ 5.30ಕ್ಕೆ ಕರೆಯಲಾಗಿದೆ ಎಂದಿದ್ದಾರೆ. ಹೀಗಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಯಾರು ಆಗುತ್ತಾರೆ? ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಚುನಾವಣಾ ಪೂರ್ವದಲ್ಲೇ ಈ ಇಬ್ಬರ ನಡುವೆ ಮುಖ್ಯಮಂತ್ರಿ ಹುದ್ದೆಯ ಭಾರೀ ಪೈಪೋಟಿ ನಡೆದಿತ್ತು. ಇದರನ್ನು ಹತೋಟಿಯಲ್ಲಿಡಲು ಕಾಂಗ್ರೆಸ್ ಹೈಕಮಾಂಡ್ ಯಶಸ್ವಿಯಾಗಿತ್ತು. ಒತ್ತಾಯಪೂರ್ವಕವೋ ಅಥವಾ ಪ್ರಬುದ್ಧ ನಡೆಯೋ ಗೊತ್ತಿಲ್ಲ. ಆದರೆ, ಉಭಯ ನಾಯಕರು ತಮ್ಮ ಆಕಾಂಕ್ಷೆಗಳನ್ನು ಹತೋಟಿಯಲ್ಲಿಟ್ಟುಕೊಂಡೇ ಒಗ್ಗಟ್ಟು ಪ್ರದರ್ಶಿಸಿದ್ದರು.
ಇದೀಗ ಕಾಂಗ್ರೆಸ್ ಗಳಿಸಿರುವ ಭಾರಿ ಬಹುಮತ ಈ ಒಗ್ಗಟ್ಟನ್ನು ಛಿದ್ರಗೊಳಿಸಲಿದೆ. ಏಕೆಂದರೆ, ಉಭಯ ನಾಯಕರು ತಾವೇ ಮುಖ್ಯಮಂತ್ರಿಯಾಗಬೇಕು ಎಂಬ ಪಟ್ಟು ಹಿಡಿಯಲು ಅಣಿಯಾಗಿದ್ದಾರೆ. ವಾಸ್ತವವಾಗಿ ನೂತನವಾಗಿ ಆಯ್ಕೆಯಾಗಿರುವ ಶಾಸಕರು ತಮ್ಮ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಬೇಕು. ಶಾಸಕರ ಈ ಅಭಿಪ್ರಾಯದ ಆಧಾರದ ಮೇಲೆ ಹೈಕಮಾಂಡ್ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಬೇಕು ಎಂಬುದು ಪ್ರಕ್ರಿಯೆ. ಆದರೆ, ಈ ಪ್ರಕ್ರಿಯೆ ಇಷ್ಟು ಸರಳವಾಗಿ ನಡೆಯುವ ಸಾಧ್ಯತೆಯಿಲ್ಲ. ಹೀಗಾಗಿ ಯಾರು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.