Kalaburagi: ಮಳೆ ಲೆಕ್ಕಿಸದ ರಾಹುಲ್ ಗಾಂಧಿ; ಛತ್ರಿಯಡಿಯಲ್ಲೇ ಸಾಗಿತು ಚುನಾವಣಾ ಪ್ರಚಾರ
ರಸ್ತೆ ಮಾರ್ಗವಾಗಿ ಜೇವರ್ಗಿಗೆ ತೆರಳಿದ ರಾಹುಲ್ ಗಾಂಧಿ, ಸುರಿಯುವ ಮಳೆಯಲ್ಲೇ ಛತ್ರಿಯ ಆಸರೆಯೊಂದಿಗೆ ಮತದಾರರನ್ನು ಉದ್ದೇಶಿಸಿ ಮಾತನಾಡಿದ್ದು ಕಂಡುಬಂತು.
ಕಲಬುರಗಿ: ರಾಜ್ಯ ವಿಧಾನಸಭೆ ಚುನಾವಣೆ (Karnataka Assembly Elections 2023) ಪ್ರಯುಕ್ತ ರಾಜ್ಯದಾದ್ಯಂತ ಪ್ರಚಾರ ತೀವ್ರಗೊಳಿಸಿರುವ ರಾಹುಲ್ ಗಾಂಧಿ (Rahul Gandhi) ಅವರಿಗೆ ಕಲಬುರಗಿಯಲ್ಲಿ ಮಳೆ ಅಡ್ಡಿಯುಂಟುಮಾಡಿತು. ಪ್ರತಿಕೂಲ ಹವಾಮಾನದ ಕಾರಣ ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್ ತೆರಳುವುದು ಸಾಧ್ಯವಾಗಲಿಲ್ಲ. ನಂತರ ರಸ್ತೆ ಮಾರ್ಗವಾಗಿ ಜೇವರ್ಗಿಗೆ ತೆರಳಿದ ರಾಹುಲ್ ಗಾಂಧಿ, ಸುರಿಯುವ ಮಳೆಯಲ್ಲೇ ಛತ್ರಿಯ ಆಸರೆಯೊಂದಿಗೆ ಮತದಾರರನ್ನು ಉದ್ದೇಶಿಸಿ ಮಾತನಾಡಿದ್ದು ಕಂಡುಬಂತು. ಜತೆಗಿದ್ದ ನಾಯಕರು ರಾಹುಲ್ ಗಾಂಧಿಗೆ ಕೊಡೆ ಹಿಡಿದು ಭಾಷಣ ಮಾಡಲು ಅನುವು ಮಾಡಿಕೊಟ್ಟರು.
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ
ಮಳೆಯಿಂದ ಜನರಿಗೆ ಕಷ್ಟ ಆಗಿದೆ, ಇದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಭಾಷಣ ಆರಂಭಿಸಿದ ರಾಹುಲ್ ಗಾಂಧಿ, ಕರ್ನಾಟಕದಲ್ಲಿರುವುದು ಅತ್ಯಂತ ಭ್ರಷ್ಟ ಸರ್ಕಾರ ಎಂದು ಟೀಕಿಸಿದರು. ಕಮಿಷನ್ ಬಗ್ಗೆ ಗುತ್ತಿಗೆದಾರರ ಸಂಘ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿತ್ತು. ಆದರೆ, ಭ್ರಷ್ಟಾಚಾರದ ವಿರುದ್ಧ ಅವರು ಕ್ರಮ ಕೈಗೊಳ್ಳಲಿಲ್ಲ. ನಾವು 150 ಸ್ಥಾನ ಗೆಲ್ಲುತ್ತೇವೆ, ಬಿಜೆಪಿ 40 ಸ್ಥಾನ ಗೆಲ್ಲುತ್ತದೆ. ಬಿಜೆಪಿ ಸರ್ಕಾರ ಸರಿಯಾಗಿ 371ಜೆ ಅನುಷ್ಠಾನಕ್ಕೆ ತರಲಿಲ್ಲ. ನಾವು ಅಧಿಕಾರಕ್ಕೆ ಬಂದ್ರೆ ಪ್ರತಿ ಗ್ರಾ.ಪಂ.ಗೆ 1 ಕೋಟಿ ರೂ. ಅನುದಾನ ನೀಡಲಿದ್ದೇವೆ. ನಾವು ಘೋಷಿಸಿದ ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸುತ್ತೇವೆ. 40% ಸರ್ಕಾರದಿಂದ ಇಂತಹ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಮಧ್ಯೆ, ಹವಾಮಾನ ವೈಪರೀತ್ಯ ಹಿನ್ನಲೆಯಲ್ಲಿ ಕುಷ್ಟಗಿಯಲ್ಲಿ ನಡೆಯಬೇಕಿದ್ದ ರಾಹುಲ್ ಗಾಂಧಿ ಕಾರ್ಯಕ್ರಮ ರದ್ದಾಗುವ ಸಾಧ್ಯತೆ ಇದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಆಯೋಜಿಸಿರುವ ಮಹಿಳಾ ಸಂವಾದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಗಿಯಾಗಬೇಕಿತ್ತು. ಹವಾಮಾನ ವೈಪರೀತ್ಯದ ಹಿನ್ನಲೆಯಲ್ಲಿ ಹೆಲಿಕಾಪ್ಟರ್ ಹಾರಾಟ ಕಷ್ಟಸಾಧ್ಯವಾಗಿದ್ದರಿಂದ ರಾಹುಲ್ ಅಲ್ಲಿಗೆ ತೆರಳುವುದು ಅನುಮಾನವಾಗಿದೆ. ಇತ್ತ ಕುಷ್ಟಗಿಯಲ್ಲೂ ಮೋಡ ಕವಿದ ವಾತವರಣ ಇದೆ. ಹೀಗಾಗೇ ಕೊನೆ ಕ್ಷಣದಲ್ಲಿ ರಾಹುಲ್ ಗಾಂಧಿ ಕಾರ್ಯಕ್ರಮ ರದ್ದಾಗುವ ಸಾಧ್ಯತೆ.
ಇದನ್ನೂ ಓದಿ: ಜೆಡಿಎಸ್ಗೆ ಮತ ನೀಡಿದರೆ ಬಿಜೆಪಿಗೆ ನೀಡಿದಂತೆಯೇ; ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಅಚ್ಚರಿಯ ಹೇಳಿಕೆ
ರಾಹುಲ್ ಗಾಂಧಿ ಅವರು ಗುರುವಾರ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಹಲವೆಡೆ ಪ್ರಚಾರದಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ಕಾಂಗ್ರೆಸ್ ತನ್ನ ಐದನೇ ಗ್ಯಾರಂಟಿ ಘೋಷಿಸಿತ್ತು. ಅಧಿಕಾರಕ್ಕೆ ಬಂದರೆ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವುದಾಗಿ ರಾಹುಲ್ ಗಾಂಧಿ ಘೋಷಿಸಿದ್ದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:32 pm, Fri, 28 April 23