Karnataka News Highlights: ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವ ಮೂಲಕ ಉದ್ಯೋಗ ಸೃಷ್ಟಿಸುವೆ: ಹೆಚ್.ಡಿ.ಕುಮಾರಸ್ವಾಮಿ
Excerpt: Karnataka Assembly Elections 2023 Highlights News Updates: ಕರ್ನಾಟಕದಲ್ಲಿ ರಥಯಾತ್ರೆ ರಾಜಕಾರಣ ಚುರುಕಾಗುತ್ತಿದೆ. ಜೆಡಿಎಸ್ನ ಪಂಚರತ್ನ ಯಾತ್ರೆ, ಕಾಂಗ್ರೆಸ್ನ ಪ್ರಜಾಧ್ವನಿ ಯಾತ್ರೆಯ ಬೆನ್ನಿಗೇ ಬಿಜೆಪಿಯು ರಥಯಾತ್ರೆ ಆರಂಭಿಸುವ ಸೂಚನೆ ಸಿಕ್ಕಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಗಣ್ಯರು, ಪ್ರಭಾವಿಗಳಿಗೆ ಆಹ್ವಾನ ನೀಡಲಾಗಿದೆ. ಕರ್ನಾಟಕ ರಾಜಕಾರಣದ ಪ್ರಮುಖ ಬೆಳವಣಿಗೆಗಳ ತಾಜಾ ಮಾಹಿತಿ ಇಲ್ಲಿ ಲಭ್ಯ.
![Karnataka News Highlights: ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವ ಮೂಲಕ ಉದ್ಯೋಗ ಸೃಷ್ಟಿಸುವೆ: ಹೆಚ್.ಡಿ.ಕುಮಾರಸ್ವಾಮಿ](https://images.tv9kannada.com/wp-content/uploads/2023/02/Karnataka-Politics.jpg?w=1280)
Karnataka, Bangalore Live News Updates: ಕರ್ನಾಟಕದಲ್ಲಿ ರಥಯಾತ್ರೆ ರಾಜಕಾರಣ (Karnataka Politics) ಚುರುಕಾಗುತ್ತಿದೆ. ಜೆಡಿಎಸ್ನ (JDS) ಪಂಚರತ್ನ ಯಾತ್ರೆ, ಕಾಂಗ್ರೆಸ್ನ (Congress) ಪ್ರಜಾಧ್ವನಿ ಯಾತ್ರೆಯ ಬೆನ್ನಿಗೇ ಬಿಜೆಪಿಯು (BJP) ರಥಯಾತ್ರೆ ಆರಂಭಿಸುವ ಸೂಚನೆ ಸಿಕ್ಕಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಗಣ್ಯರು, ಪ್ರಭಾವಿಗಳಿಗೆ ಆಹ್ವಾನ ನೀಡಲಾಗಿದೆ. ಕರ್ನಾಟಕ ರಾಜಕಾರಣದ ಪ್ರಮುಖ ಬೆಳವಣಿಗೆಗಳ ತಾಜಾ ಮಾಹಿತಿ ಇಲ್ಲಿ ಲಭ್ಯ. ಜೆಡಿಎಸ್ನ ಪಂಚರತ್ನ ಯಾತ್ರೆ ಇಂದು ಉತ್ತರ ಕನ್ನಡದಲ್ಲಿ ಸಂಚರಿಸಲಿದೆ. ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಶಿವಮೊಗ್ಗದಲ್ಲಿ ಪ್ರಚಾರ ನಡೆಸುತ್ತಿದ್ದಾರೆ.
ರಾಜಕಾರಣಕ್ಕೆ ಸಂಬಂಧಿಸಿದ ಮತ್ತಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
LIVE NEWS & UPDATES
-
Karnataka News Live: ಬಿಜೆಪಿ ಪ್ರತಿಯೊಬ್ಬರಿಗೂ ಧ್ವನಿಯಾಗಿರುವ ಪಕ್ಷವಲ್ಲ: ಕುಮಾರಸ್ವಾಮಿ
ಉತ್ತರ ಕನ್ನಡ: ನಾವು ಮುಂದು, ನೀವು ಹಿಂದೂ ಎಂದು ಹೇಳಿಕೊಳ್ಳೋರು ಯಾರು ಎಂದು ಮಾಜಿ ಸಿಎಂ H.D.ಕುಮಾರಸ್ವಾಮಿ ಪ್ರಶ್ನಿಸಿದರು. ಜಿಲ್ಲೆಯ ಹೊನ್ನಾವರದಲ್ಲಿ ಮಾತನಾಡಿ, ಸರ್ಕಾರ ಬಂದ ತಕ್ಷಣ ಅವರು ಮಾತ್ರ ಮುಂದೆ ಹೋಗುತ್ತಾರೆ. ಬಿಜೆಪಿ ಪ್ರತಿಯೊಬ್ಬರಿಗೂ ಧ್ವನಿಯಾಗಿರುವ ಪಕ್ಷವಲ್ಲ ಎಂದು ಹೇಳಿದರು.
-
Karnataka News Live: ಹೊಳಲ್ಕೆರೆಯಲ್ಲಿ 14 ಜನ ಕಾಂಗ್ರೆಸ್ ಟಿಕೆಟ್ ಗೆ ಅರ್ಜಿ ಸಲ್ಲಿಸಿದ್ದಾರೆ
ಚಿತ್ರದುರ್ಗ: ಹೊಳಲ್ಕೆರೆಯಲ್ಲಿ 14ಜನ ಕಾಂಗ್ರೆಸ್ ಟಿಕೆಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆ ಅವರನ್ನು ಎಲ್ಲರೂ ಸೇರಿ ಗೆಲ್ಲಿಸಬೇಕು. ನರೇಂದ್ರ ಮೋದಿ ಅಚ್ಚೇ ದಿನ ಬರಲಿವೆ ಎಂದು ಹೇಳಿದ್ದರು.ರೈತರ ಆದಾಯ ದ್ವಿಗುಣದ ಭರವಸೆ ನೀಡಿದ್ದರು. ಯುವಕರಿಗೆ ಉದ್ಯೋಗ ನೀಡುತ್ತೇವೆ ಎಂದು ಹೇಳಿದ್ದರು. ನರೇಂದ್ರ ಮೋದಿ ಕೊಟ್ಟ ಮಾತು ಉಳಿಸಿಕೊಳ್ಳಲು ಆಗಿಲ್ಲ ಎಂದು ಕೆಪಿಸಿಸಿ ಅದ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
-
Karnataka News Live: ಸಚಿವ ಬಿ.ಸಿ.ಪಾಟೀಲ್ ಎಚ್ಚರಿಕೆ ನೀಡಿದ H.D.ಕುಮಾರಸ್ವಾಮಿ
ಉತ್ತರ ಕನ್ನಡ: ಸಚಿವ ಬಿ.ಸಿ.ಪಾಟೀಲ್ ತರ ನನಗೆ ಯಾವುದೇ ಚಟ ಇಲ್ಲ. ನಾಲಗೆ ಬಿಗಿಹಿಡಿದು ಮಾತಾಡಲಿ, ಹುಷಾರ್ ಎಂದು H.D.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಹೊನ್ನಾವರದಲ್ಲಿ ಮಾತನಾಡಿ, ಇವನ ಯೋಗ್ಯತೆಗೆ ತನ್ನ ಕ್ಷೇತ್ರದಲ್ಲಿ ಬಣವೆಗೆ ಬೆಂಕಿ ಬಿದ್ದಿತ್ತು. ಆಗ ರೈತನಿಗೆ ದುಡ್ಡು ಕೊಟ್ಟಿದ್ದು ನಾನು ಎಂದು ಹೆಚ್ಡಿಕೆ ವಾಗ್ದಾಳಿ ಮಾಡಿದರು. ನಾನು ರೈತನಿಗೆ ಹಣ ಕೊಡುವಾಗ ಇವನು ಹಿಂದೆ ಕೈಕಟ್ಟಿ ನಿಂತಿದ್ದ. ನನ್ನ ಜೀವನ ತೆರೆದ ಪುಸ್ತಕ, ಇವರಿಂದ ಕಲಿಯಬೇಕಾದದ್ದು ಏನೂ ಇಲ್ಲ. ನನ್ನ ವೈಯಕ್ತಿಕ ವಿಷಯಕ್ಕೆ ಬಂದರೆ ಹುಷಾರ್ ಎಂದು ಎಚ್ಚರಿಕೆ ನೀಡಿದರು.
Karnataka News Live: JDS ಗೆಲ್ಲುವವರೆಗೂ ನಾನು ನಿದ್ದೆ ಮಾಡಲ್ಲ ಎಂದ ಪ್ರಜ್ವಲ್ ರೇವಣ್ಣ
ಹಾಸನ: ಅರಸೀಕೆರೆಯಲ್ಲಿ ಮತ್ತೆ JDS ಗೆಲ್ಲುವವರೆಗೂ ನಾನು ನಿದ್ದೆ ಮಾಡಲ್ಲ. ಏನಾಗುತ್ತೋ ನೋಡೇ ಬಿಡೋಣ, ನಾವು ಸುಮ್ಮನೇ ಕೂರುವುದಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ತೊಡೆತಟ್ಟಿದಂತೆ ಕಾಣುತ್ತಿದೆ. ಜಿಲ್ಲೆಯ ಅರಸೀಕೆರೆಯಲ್ಲಿ ಜೆಡಿಎಸ್ ಕಛೇರಿ ಉದ್ಘಾಟನೆ ಮಾಡಿದ ಬಳಿಕ ಅವರು ಮಾತನಾಡಿ, ಫೆಬ್ರವರಿ 12ರಂದು ಅರಸೀಕೆರೆ ಕಾರ್ಯಕರ್ತರ ಸಭೆ ನಿಗದಿಯಾಗಿದೆ ಎಂದು ಹೇಳಿದರು.
Karnataka News Live: ಜಾತಿಯ ರಾಜಕಾರಣ ಕುಮಾರಸ್ವಾಮಿ ಮನಸ್ಥಿತಿಯಲ್ಲೇ ಬಂದಿದೆ
ಬೆಂಗಳೂರು: ಬ್ರಾಹ್ಮಣರು ಸಿಎಂ ಆಗಬಾರದು ಅಂತಾ ಎಲ್ಲೂ ಪಾಲಿಸಿ ಇಲ್ಲ. ನಮ್ಮಲ್ಲಿ ಅರ್ಹತೆ ಆಧಾರದ ಮೇಲೆ ಪರಿಗಣಿಸ್ತಾರೆ ಎಂದು ಕುಮಾರಸ್ವಾಮಿಗೆ ಶಾಸಕ ರಘುಪತಿ ಭಟ್ ತಿರುಗೇಟು ನೀಡಿದು. ಯಾರು ಸಿಎಂ ಆಗಬೇಕು ಅಂತಾ ನಾನು ನಿರ್ಧಾರ ಮಾಡುವುದಿಲ್ಲ. ಹೈಕಮಾಂಡ್, ಶಾಸಕಾಂಗ ಪಕ್ಷದ ಅಭಿಪ್ರಾಯ ಪಡೆದು ತೀರ್ಮಾನ ಮಾಡಲಾಗುತ್ತದೆ. ಬ್ರಾಹ್ಮಣರು ಅಂತಾ ಅಲ್ಲ ಅರ್ಹತೆ ಇದ್ದವರನ್ನು ಸಿಎಂ ಮಾಡುತ್ತಾರೆ. ಜಾತಿಯ ರಾಜಕಾರಣ ಕುಮಾರಸ್ವಾಮಿ ಮನಸ್ಥಿತಿಯಲ್ಲೇ ಬಂದಿದೆ ಎಂದರು.
Karnataka News Live: ಕುಮಾರಸ್ವಾಮಿ ವಿರುದ್ಧ ಬಿ.ಸಿ.ಪಾಟೀಲ್ ಕಿಡಿ
ಕಾರವಾರ: ಹೆಚ್.ಡಿ.ಕುಮಾರಸ್ವಾಮಿ ಬಗ್ಗೆ ಹೇಳೋಕೆ ಹೋದ್ರೆ ಬೇಕಾದಷ್ಟು ಇದೆ. ತಾಜ್ ವೆಸ್ಟೆಂಡ್ ಹೋಟೆಲ್ ಯಾತ್ರೆ ನೋಡಿದ್ರೆ ಬೇಕಾದಷ್ಟು ಆಗುತ್ತೆ. ತನ್ನ ಚಟ ಬಿಟ್ಟು ಗಾಂಧೀಜಿ ಬೇರೆಯವರಿಗೆ ಹೇಳಿದರಂತೆ ಅದೇ ರೀತಿ ಮೊದಲು ಇವರಿಗೆ ಇರುವ ಚಟ ಬಿಡಲಿ ಎಂದು ಬಿ.ಸಿ.ಪಾಟೀಲ್ ಕಿಡಿಕಾರಿದರು.
Karnataka News Live: ರಾಜ್ಯ ಬಿಜೆಪಿ ಸರ್ಕಾರಕ್ಕೆ ಲಂಚದ ಕಳಂಕ: ಡಿ.ಕೆ.ಶಿವಕುಮಾರ್
ಚಿತ್ರದುರ್ಗ: ಭ್ರಷ್ಟಾಚಾರದ ಬಗ್ಗೆ ಶಾಸಕ ಗೂಳಿಹಟ್ಟಿ ಶೇಖರ್ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಪಕ್ಷ ಕೇಳಿದ ಪ್ರಶ್ನೆಗಳಿಗೆ ಬಿಜೆಪಿ ಉತ್ತರಿಸಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಬಿಜೆಪಿ ಈವರೆಗೆ ನೋಟಿಸ್ ನೀಡಿಲ್ಲ, ಪಕ್ಷದಿಂದ ತೆಗೆದುಹಾಕಿಲ್ಲ. ಅವರ ಪಕ್ಷದ ಮುತ್ತು, ರತ್ನ ಅವರಿಟ್ಟುಕೊಳ್ಳಲಿ ಅಭ್ಯಂತರವಿಲ್ಲ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಲಂಚದ ಕಳಂಕವಿದೆ ಎಂದು ಕಿಡಿಕಾರಿದರು.
Karnataka News Live: ನಮ್ಮ ಪಕ್ಷದ ಮುಖ್ಯಮಂತ್ರಿ ನಿರ್ಧರಿಸೋಕೆ ಹೆಚ್.ಡಿ. ಕುಮಾರಸ್ವಾಮಿ ಯಾರು?
ಉತ್ತರ ಕನ್ನಡ: ನಮ್ಮ ಪಕ್ಷದ ಮುಖ್ಯಮಂತ್ರಿ ನಿರ್ಧರಿಸೋಕೆ ಹೆಚ್.ಡಿ. ಕುಮಾರಸ್ವಾಮಿ ಯಾರು ಎಂದು ಕೃಷಿ ಇಲಾಖೆ ಸಚಿವ ಬಿ.ಸಿ.ಪಾಟೀಲ್ ಪ್ರಶ್ನಿಸಿದರು. ಈ ದೇಶದಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು. ಮುಖ್ಯಮಂತ್ರಿ ಆಗಲು 25 ವರ್ಷ ಆಗಿರಬೇಕು, ತಲೆಸರಿ ಇರಬೇಕು. ಚುನಾವಣೆಯಲ್ಲಿ ಗೆದ್ದು ಬಂದು ಯಾರು ಬೇಕಾದ್ರೂ ಸಿಎಂ ಆಗಬಹುದು. ನಮ್ಮ ಪಕ್ಷದ ಬಗ್ಗೆ ಮಾತನಾಡಲು ಹೆಚ್ಡಿಕೆಗೆ ಯಾವ ನೈತಿಕ ಹಕ್ಕಿದೆ ಎಂದು ಪ್ರಶ್ನಿಸಿದರು.
Karnataka News Live: ಅಧಿಕಾರಕ್ಕಾಗಿ ಸಮಾಜ, ಧರ್ಮ, ವರ್ಗಗಳನ್ನು ಒಡೆಯುತ್ತಾರೆ: ಕುಮಾರಸ್ವಾಮಿ
ಕಾರವಾರ: ಅಧಿಕಾರಕ್ಕಾಗಿ ಸಮಾಜ, ಧರ್ಮ, ವರ್ಗಗಳನ್ನು ಒಡೆಯುತ್ತಾರೆ. 2 ಬಾರಿ ನಾನು ಲಾಟರಿ ಮುಖಾಂತರ ಮುಖ್ಯಮಂತ್ರಿ ಆಗಿದ್ದೇನೆ. ಜನರ ಹಣ ಲೂಟಿ ಮಾಡಿಲ್ಲ, ಜನ ಪರವಾಗಿ ಕೆಲಸ ಮಾಡಿದ್ದೇನೆ. ಅನುಕಂಪ ಪಡೆದು ಅಧಿಕಾರಕ್ಕೆ ಬಂದವರು ಲೂಟಿ ಮಾಡುತ್ತಿದ್ದಾರೆ. ರಾಜ್ಯವನ್ನು ಲೂಟಿ ಮಾಡಿದ್ದನ್ನು ನೋಡಿದ್ದೇನೆ. ನಾನು ಆ ಕೆಟಗರಿಗೆ ಸೇರಿದವನಲ್ಲ ಎಂದು ಚಂದಾವರದಲ್ಲಿ ಟಿವಿ9ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.
Karnataka News Live: ಬಿಜೆಪಿಯವರು ಇರುವುದೇ ಒಂದು ವರ್ಗಕ್ಕೆ: ಕುಮಾರಸ್ವಾಮಿ
ಉತ್ತರ ಕನ್ನಡ: ಜಾತ್ಯತೀತ ಎಂಬುದು ನಮ್ಮ ನಡವಳಿಯಲ್ಲೇ ಗೊತ್ತಾಗುತ್ತದೆ ಎಂದು ಜಿಲ್ಲೆಯ ಕುಮಟಾ ತಾಲೂಕಿನ ಚಂದಾವರ ಗ್ರಾಮದಲ್ಲಿ ಟಿವಿ9ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು. ಇಲ್ಲಿಯವರೆಗೂ ಜಾತ್ಯತೀತರಂತೆ ನಡೆದುಕೊಂಡು ಬಂದಿದ್ದೇವೆ. ಬಿಜೆಪಿಯವರು ಇರುವುದೇ ಒಂದು ವರ್ಗಕ್ಕೆ. ಬಿಜೆಪಿಯವರು ಒಂದೇ ವರ್ಗ ಪೋಷಣೆ ಮಾಡ್ತಾ ಬಂದಿದ್ದಾರೆ. ನಾವು ಸರ್ವೇಜನ ಸುಖಿನೋ ಭವಂತು ಅನ್ನೋರು ಎಂದು ಹೇಳಿದರು.
Bagalkot Politics: ಕೊರೊನಾ ಕಷ್ಟಕಾಲದಲ್ಲಿ ಏನೂ ಕೊಡಲಿಲ್ಲ; ನಿರಾಣಿ ಬೆಂಬಲಿಗರ ಸಕ್ಕರೆ ಚೀಲ ವಾಪಸ್ ಕೊಟ್ಟ ಮಹಿಳೆ
ಬಾಗಲಕೋಟೆ: ಸಚಿವ ಮುರುಗೇಶ್ ನಿರಾಣಿ ಅವರು ಕೊಟ್ಟ ಸಕ್ಕರೆ ಚೀಲವನ್ನು ಬೀಳಗಿ ಕ್ಷೇತ್ರ ಗಲಗಲಿ ಗ್ರಾಮದ ಮತದಾರರಾದ ಅನ್ನಪೂರ್ಣ ಬಗಲಿ ನಿರಾಕರಿಸಿದರು. ಕೊರೊನಾದಿಂದ ಕಷ್ಟ ಪಡುತ್ತಿದ್ದೆವು. ಆಗ ಯಾರೂ ನಮಗೆ ಸಹಾಯ ಮಾಡಲಿಲ್ಲ. ಈಗ ಚುನಾವಣೆ ಬಂದಿದೆ ಎಂದು ಸಕ್ಕರೆ ಕೊಟ್ಟಿದ್ದಾರೆ. ಅದು ಬೇಡ ಅಂತ ಅವರಿಗೆ ವಾಪಸ್ ಕೊಟ್ಟಿದ್ದೇನೆ ಎಂದು ಪ್ರತಿಕ್ರಿಯಿಸಿದರು. ನಮಗೆ ಬೇಡ ಎಂದ ಮೇಲೆಯೂ ಅವರು ಮನೆಯಲ್ಲಿ ಸಕ್ಕರೆ ಇರಿಸಿ ಹೋದರು. ‘ಇದು ವೈಯಕ್ತಿಕ (ಸಕ್ಕರೆ) ಇದೆ, ತಗೋಳ್ರಿ’ ಎಂದು ಇಟ್ಟಿದ್ದರು. ನಾನು ಬೇಡವೆಂದು ಮರಳಿ ಅವರ ಚೀಲದಲ್ಲಿ ಇಟ್ಟೆ. ಬಂದವರು ಯಾರೆಂದು ನನಗೆ ಗೊತ್ತಿಲ್ಲ.
Bagalkot Politics: ಯಾರು ಯಾರಿಗೆ ಹುಳು; ತಮ್ಮನಿಗೆ ಚಾಟಿ ಬೀಸಿದ ಶಾಸಕ ವೀರಣ್ಣ ಚರಂತಿಮಠ
ಬಾಗಲಕೋಟೆ: ಪದೇಪದೆ ಹುಳು ಎಂದು ಜರಿಯುತ್ತಿದ್ದ ತಮ್ಮನ ಮೇಲೆ ಶಾಸಕ ವೀರಣ್ಣ ಚರಂತಿಮಠ ಗುರುವಾರ (ಫೆ 9) ಹರಿಹಾಯ್ದರು. ಶಾಸಕರ ಸಹೋದರ ಮಲ್ಲಿಕಾರ್ಜುನ ಚರಂತಿಮಠ ಆಗಾಗ ಅಣ್ಣನ ಹೆಸರು ಹೇಳದೇ ಹುಳಕ್ಕೆ ಹೋಲಿಕೆ ಮಾಡುತ್ತಿದ್ದರು. ಇಂದು ತಮ್ಮನ ಹೆಸರು ಹೇಳದೇ ಗುಡುಗಿದ ಶಾಸಕ, ಯಾರು ಯಾರಿಗೆ ಹುಳ? ಈ ಲೈಟಿಗೆ ಹುಳ ಏಳ್ತಾವಲ್ಲ, ಅವು ಎಷ್ಟು ದಿವಸ ಇರ್ತಾವು? ಗಾಳಿ ಬಿಟ್ಟ ಕೂಡಲೇ ಹೋಗ್ತಾವು. ಯಾರು ಹುಳ, ಏನು ಎಲ್ಲಾನೂ ಮೇ ತಿಂಗಳಲ್ಲಿ ಎಲೆಕ್ಷನ್ ಮುಗಿದ ಮೇಲೆ ಗೊತ್ತಾಗುತ್ತೆ ಎಂದು ಸಹೋದರನನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.
ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಮಲ್ಲಿಕಾರ್ಜುನ ಚರಂತಿಮಠ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ. ಈ ಬಗ್ಗೆ ಅನೇಕ ಸಲ ವೀರಣ್ಣ ಚರಂತಿಮಠ ವಿರುದ್ಧ ಆಕ್ರೋಶ ಹೊರಹಾಕಿದ್ದರು.
Karnataka Politics Live: ಕರ್ನಾಟಕ ಸಿಎಂ ಆಯ್ಕೆ ನಿರ್ಧಾರ ಮೋದಿ ಅವರದ್ದು: ಯಡಿಯೂರಪ್ಪ
ಪ್ರಲ್ಹಾದ ಜೋಶಿ ಅವರನ್ನು ಮುಖ್ಯಮಂತ್ರಿ ಗಾದಿಗೆ ತರಲು ಆರ್ಎಸ್ಎಸ್ ಹುನ್ನಾರ ಮಾಡುತ್ತಿದೆ ಎಂಬ ಹೇಳಿಕೆ ಕುರಿತು ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಸಿಂಧನೂರಿನಲ್ಲಿ ಪ್ರತಿಕ್ರಿಯಿಸಿದರು. ‘ಕರ್ನಾಟಕದಲ್ಲಿ ಬಿಜೆಪಿಯು 140 ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ. ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ಬಗ್ಗೆ ಪ್ರಧಾನಿ ಮೋದಿ ಕೈಗೊಳ್ಳುವ ನಿರ್ಧಾರವೇ ಅಂತಿಮ. ಈ ವಿಚಾರದ ಬಗ್ಗೆ ನಾನು ಹೆಚ್ಚು ಚರ್ಚೆ ಮಾಡುವುದಿಲ್ಲ. ಯಾರೇ ಸಿಎಂ ಆದರೂ ನಮಗೆ ಅಭ್ಯಂತರ ಇಲ್ಲ. ಎಚ್ಡಿಕೆ ಹೇಳಿಕೆಗಳಿಗೆ ಬೆಲೆ ಕೊಡಬೇಕಿಲ್ಲ’ ಎಂದು ನುಡಿದರು.
‘ಶೇ 90ರಷ್ಟು ವೀರಶೈವ ಸಮಾಜ ನನ್ನ ಜೊತೆಗಿದೆ. ಅದರ ಬಗ್ಗೆ ಚರ್ಚೆ ಮಾಡಲು ಇಷ್ಟಪಡುವುದಿಲ್ಲ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೂ ನನ್ನ ಹೆಸರು ಇಡುವುದು ಬೇಡ ಎಂದಿದ್ದೇನೆ’ ಎಂದರು.
Karnataka Politics Live: ಬುದ್ಧ, ಬಸವ, ಅಂಬೇಡ್ಕರ್ ಹೇಳಿದ್ದನ್ನೇ ನಾನೂ ಹೇಳಿದ್ದೇನೆ; ಪೇಶ್ವೆ ಹೇಳಿಕೆಗೆ ಎಚ್ಡಿಕೆ ಸ್ಪಷ್ಟನೆ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಟೀಕಿಸುವ ಭರದಲ್ಲಿ ಬ್ರಾಹ್ಮಣ ಸಮುದಾಯದ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ನೀಡಿದ್ದ ಹೇಳಿಕೆ ದೊಡ್ಡ ವಿವಾದವಾಗಿತ್ತು. ಈ ಕುರಿತು ಟ್ವೀಟ್ ಮೂಲಕ ಸ್ಪಷ್ಟನೆ ಕೊಟ್ಟಿರುವ ಎಚ್ಡಿಕೆ, ‘ಜಗಜ್ಯೋತಿ ಬಸವೇಶ್ವರರು, ಗೌತಮ ಬುದ್ಧ, ಮಹಾತ್ಮ ಗಾಂಧೀಜಿ, ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದನ್ನೇ ನಾನೂ ಹೇಳಿದ್ದೇನೆ. ಬ್ರಾಹ್ಮಣ ಸಮೂಹವನ್ನು ನಿಂದಿಸುವ ಪ್ರಶ್ನೆ ಎಲ್ಲಿದೆ? ನಾನು ನಿಂದಿಸಿಲ್ಲ, ನಿಂದಿಸುವುದೂ ಇಲ್ಲ. ಮತ್ತೆಮತ್ತೆ ಸ್ಪಷ್ಟನೆ ಅನಗತ್ಯ’ ಎಂದು ಟ್ವೀಟ್ ಮಾಡಿದ್ದಾರೆ.
‘ಪೇಶ್ವೆಗಳ ವಂಶಾವಳಿಗೆ ಸಂಬಂಧಪಟ್ಟ ವ್ಯಕ್ತಿಯನ್ನು ಬಿಜೆಪಿ ಮುಂದಿನ ಮುಖ್ಯಮಂತ್ರಿ ಮಾಡಲು ಹುನ್ನಾರ ನಡೆಸಿದೆ ಎಂಬುದು ನನ್ನ ಹೇಳಿಕೆ ಆಗಿತ್ತು. ನನ್ನ ಹೇಳಿಕೆಯಲ್ಲಿ ಗೊಂದಲ ಇಲ್ಲ, ಸ್ಪಷ್ಟತೆ ಇತ್ತು’ ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದ ಮೇಲೆ, ಅದರಲ್ಲೂ ನಾವೆಲ್ಲರೂ ಶ್ರದ್ಧೆ, ಭಕ್ತಿಯಿಂದ ನಡೆದುಕೊಳ್ಳುವ ಶ್ರೀ ಶೃಂಗೇರಿ ಪೀಠ, ಮತ್ತೂ ಅಲ್ಲಿನ ದೇವಾಲಯಗಳ ಮೇಲೆ ಪೇಶ್ವೆಗಳಿಂದ ಪೈಶಾಚಿಕ ದಾಳಿ ನಡೆದಿತ್ತು. ಇದು ಇತಿಹಾಸ. ಈ ಇತಿಹಾಸವನ್ನು ತಿರುಚಿ ಹೇಳುವ ಅಗತ್ಯ ನನಗಿಲ್ಲ.2/8
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) February 9, 2023
Kolar Politics Live: ಕೋಲಾರದ ಉದ್ದಾರಕ್ಕೆಂದು ಸಿದ್ದರಾಮಯ್ಯ ಬರುತ್ತಿಲ್ಲ; ಸಿಟಿ ರವಿ
ಕೋಲಾರ: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸುವ ಬಗ್ಗೆ ಸಿ.ಟಿ.ರವಿ ಮತ್ತೆ ಹರಿಹಾಯ್ದಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಸ್ಪರ್ಧೆ ಮಾಡಬಹುದು. ಜನರೇನು ದಡ್ಡರಲ್ಲ ಜನರಿಗೆ ಕಷ್ಟ ಸುಖಕ್ಕೆ ಆಗುವವರು ಯಾರೆಂದು ಗೊತ್ತಿದೆ. ಕೋವಿಡ್ ವ್ಯಾಪಿಸಿದ್ದಾಗ ಅವರು ಬಂದಿದ್ದರೆ ಸಹಾಯವಾಗುತ್ತಿತ್ತು. ಕಷ್ಟ ಇದ್ದಾಗ ಬಾರದೆ ಈಗ ವೋಟಿಗಾಗಿ ಬಂದಿದ್ದಾರೆ. ಚಾಮುಂಡಿ ಕ್ಷೇತ್ರದಲ್ಲಿ ಸೋತರು, ಬಾದಾಮಿಯಲ್ಲಿ ಇವರಿಗೆ ಸಿಕ್ಕ ಲೀಡ್ ಎಷ್ಟು ಎಂದು ಪ್ರಶ್ನಿಸಿದರು.
ಬಾದಾಮಿಯಲ್ಲಿ ಶ್ರೀರಾಮುಲು ಮನಸ್ಸಿಟ್ಟು ಪ್ರಚಾರ ಮಾಡಿದ್ದ ಏನಾಗುತ್ತಿತ್ತು? ಕುಮಾರಸ್ವಾಮಿ ಲಿಂಗಾಯತ ಅಭ್ಯರ್ಥಿ ಹಾಕಿರಲಿಲ್ಲ ಅಂದಿದ್ದರೆ ಏನಾಗುತ್ತಿತ್ತು ಎಂಬುದನ್ನು ನೆನಪಿಸಿಕೊಳ್ಳಬೇಕು. ಕೋಲಾರದ ಉದ್ದಾರಕ್ಕೆಂದು ಸಿದ್ದರಾಮಯ್ಯ ಬರುತ್ತಿದ್ದಾರೆ ಎಂದು ಯಾರೂ ಭಾವಿಸುವುದು ಬೇಡ. ಯಾರೋ ಕೆಲವರ ಮಾತು ಕೇಳಿ ಸುರಕ್ಷಿತ ಕ್ಷೇತ್ರ ಎಂದು ಕೋಲಾರಕ್ಕೆ ಬರುತ್ತಿದ್ದಾರೆ ಎಂದು ತಿಳಿಸಿದರು.
Karnataka Politics Live: ನಾನು ಕೈಜೋಡಿಸದಿದ್ದರೆ ಯಡಿಯೂರಪ್ಪ ನಿರ್ನಾಮವಾಗುತ್ತಿದ್ದರು: ಎಚ್ಡಿ ಕುಮಾರಸ್ವಾಮಿ
ಕಾರವಾರ: ಲಿಂಗಾಯತ ಸಮಾಜಕ್ಕೆ ಜೆಡಿಎಸ್ ಏನು ಮಾಡಿದೆ ಎಂದು ವಿಜಯೇಂದ್ರ ಕೇಳಿದ್ದಾರೆ. ಪಾಪ ಅವರಿಗೆ ಗೊತ್ತಿಲ್ಲ ನಾನು ಯಡಿಯೂರಪ್ಪ ಜೊತೆ ಕೈ ಜೋಡಿಸದಿದ್ದರೆ ಅವರು ನಿರ್ನಾಮ ಆಗುತ್ತಿದ್ದರು. ವಿಜಯೇಂದ್ರ ಆಗ ಎಲ್ಲಿ ಬರುತ್ತಿದ್ದರು ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು. ವೀರಶೈವ-ಲಿಂಗಾಯದ ಸಮಾಜದೊಂದಿಗಿನ ಒಡನಾಟದ ಬಗ್ಗೆ ಪ್ರಸ್ತಾಪಿಸಿದ ಅವರು,
ಯಡಿಯೂರಪ್ಪ ಅವರನ್ನ ಮಂತ್ರಿ ಮಾಡುವಂತೆ ಸಿದ್ದಲಿಂಗಯ್ಯ ಎನ್ನುವವರು ಮನವಿ ಮಾಡಿಕೊಂಡಿದ್ದರು. ಆಗ ನಾನು ನಿಮ್ಮ ನಾಯಕತ್ವ ಇರಲಿ ಎಂದು ಸಮ್ಮಿಶ್ರ ಸರ್ಕಾರ ಮಾಡಿದ್ದೆ. ವೀರಶೈವರಿಗೆ ಜೆಡಿಎಸ್ ಏನು ಮಾಡಿದೆ ಎಂದು ವಿಜಯೇಂದ್ರನವರಿಗೆ ಗೊತ್ತಿಲ್ಲ. ನಮ್ಮ ತಂದೆ ವಿಧಾನಸಭೆ ವಿಸರ್ಜನೆ ಮಾಡಲು ಹೋಗಿದ್ದರು. ಆಗ ಯಡಿಯೂರಪ್ಪ ಜೊತೆ ಸೇರಿ ಸರ್ಕಾರ ಮಾಡಿದ್ದೆವು. ಅಧಿಕಾರ ಇದ್ದ ವೇಳೆ ಬಿಜೆಪಿಗರನ್ನ ಗೌರವದಿಂದ ಕಂಡಿದ್ದೇನೆ. ಬಿಜೆಪಿ ಬೆಳವಣಿಗೆಗೆ ಇದೇ ಸಹಕಾರಿ ಆಗಿತ್ತು ಎಂದು ವಿವರಿಸಿದರು.
ಪೇಶ್ವೆ ವಂಶಸ್ಥರು ಯಡಿಯೂರಪ್ಪ ಅವರಿಗೆ ಅಧಿಕಾರ ಕೊಡಲು ಬಿಡಲಿಲ್ಲ. ಅವರೇ ಯಡಿಯೂರಪ್ಪ ಸರ್ಕಾರವನ್ನು ತೆಗೆದರು. ಎರಡನೇ ಬಾರಿ ಕಷ್ಟ ಪಟ್ಟು ಯಡಿಯೂರಪ್ಪ ಸಿಎಂ ಆದರು. ಅವರನ್ನ ಹೇಗೆ ನಡೆಸಿಕೊಂಡಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ. ವಂಶಾಡಳಿತ ಬಿಜೆಪಿಯಲ್ಲಿ ಇಲ್ಲವೇ? ಕಾಂಗ್ರೆಸ್ನಲ್ಲಿ ಇಲ್ಲವೇ? ನನ್ನ ಕುಟುಂಬದ ಮೇಲೆ ಟಾರ್ಗೆಟ್ ಮಾಡಿದ್ದಾರೆ. ಜನರ ಮೇಲೆ ಕುಟುಂಬದ ಪ್ರೀತಿಯನ್ನು ನೋಡಿ ಟಾರ್ಗೆಟ್ ಮಾಡ್ತಾ ಇದ್ದಾರೆ ಎಂದು ಅಭಿಪ್ರಾಯಪಟ್ಟರು.
Kolar Politics Live: ಮೋಸದಿಂದ ಒಡೆಯರ್ ಸಂಸ್ಥಾನ ಕಬಳಿಸಿದ್ದ ಟಿಪ್ಪು ಸುಲ್ತಾನ್ ಹುಟ್ಟು ರಾಜನಲ್ಲ; ಸಿಟಿ ರವಿ
ಕೋಲಾರ: ಬಿಜೆಪಿ ನಾಯಕ ಸಿ.ಟಿ.ರವಿ ಮತ್ತೆ ಟಿಪ್ಪು ಸುಲ್ತಾನ್ ವಿಚಾರ ಪ್ರಸ್ತಾಪಿಸಿದ್ದಾರೆ. ಸಿದ್ದರಾಮಯ್ಯ ಸ್ಪರ್ಧಿಸುವ ಕ್ಷೇತ್ರ ಎಂದು ಬಿಂಬಿಸಲಾಗುತ್ತಿರುವ ಕೋಲಾರದಲ್ಲಿ ಮಾತನಾಡಿರುವ ಅವರು, ‘ಟಿಪ್ಪು ಸುಲ್ತಾನ್ ಹುಟ್ಟು ರಾಜನಲ್ಲ. ಒಡೆಯರ್ಗೆ ಸೇರಿರುವ ಸಂಸ್ಥಾನದಲ್ಲಿ ಟಿಪ್ಪುವಿನ ತಂದೆ ಸಾಮಾನ್ಯ ಸೈನಿಕರಾಗಿದ್ದರು. ನಂತರ ಸೇನಾಧಿಪತಿಯಾದರು. ಮೋಸದಿಂದ ಒಡೆಯರ್ ಸಂಸ್ಥಾನ ಕಬಳಿಸಿದ್ದು ಟಿಪ್ಪು ಎಂದು ತೀಕ್ಷ್ಣ ಆರೋಪ ಮಾಡಿದರು.
ಕನ್ನಡ ನಮ್ಮ ಆಡಳಿತ ಭಾಷೆ. ಪಾರ್ಸಿಗೂ ನಮಗೂ ಏನು ಸಂಬಂಧ. ಟಿಪ್ಪು ಪಾರ್ಸಿ ಭಾಷೆಯನ್ನು ಬಲವಂತವಾಗಿ ಹೇಳಿದ. ಭಾಷೆಯನ್ನು ಬದಲಿಸಿದ್ದು ಟಿಪ್ಪುವಿನ ಸಿದ್ದಾಂತ. ರಾಜ-ರಾಣಿಯನ್ನು ಸೆರೆಮನೆಯಲ್ಲಿಟ್ಟಿದ್ದು ಟಿಪ್ಪುವಿನ ಸಿದ್ದಾಂತ. ಸತ್ಯದ ಪರಧ್ವನಿ ಎತ್ತಿದವರ ನರಮೇಧ ಮಾಡಿದ್ದು ಟಿಪ್ಪು ಸಿದ್ದಾಂತ. ಆ ಸಿದ್ದಾಂತವನ್ನು ಪ್ರತಿಪಾದನೆ ಮಾಡುತ್ತಿರುವವರು ಕಾಂಗ್ರೆಸ್ ಪಕ್ಷದವರು. ಆ ಸಿದ್ದಾಂತಕ್ಕೆ ನಮ್ಮ ವಿರೋಧ ಇದ್ದೇ ಇದೆ ಎಂದು ವಿವರಿಸಿದರು.
ಪರಂಬೂರಿನಲ್ಲಿ ಮಂಡ್ಯ ಅಯ್ಯಂಗಾರ್ ಕುಟುಂಬವನ್ನು ನರಮೇಧ ಮಾಡಿದ್ದು ಟಿಪ್ಪು. ಕರ್ನಾಟಕಕ್ಕೆ ಟಿಪ್ಪುವಿನ ಕೊಡುಗೆ ಏನು ಎಂದು ವಿವರಿಸಲು ಯಾರೂ ಸಿದ್ಧರಿಲ್ಲ. ಮಾರಣಹೋಮ ಮಾಡಿದ್ದು ಕೊಡುಗೆನಾ ಎಂದು ಪ್ರಶ್ನಿಸಿದರು. ನಾವು ಒಡೆಯರ್ ಸಿದ್ದಾಂತವನ್ನು ಒಳಗೊಂಡ ಸಾವರ್ಕರ್ ಸಿದ್ಧಾಂತ
Karnataka Politics Live: ಅಧಿಕಾರಕ್ಕೆ ಬಂದರೆ ಅರಣ್ಯ ಒತ್ತುವರಿ ಸಮಸ್ಯೆ ನಿವಾರಣೆ: ಎಚ್ಡಿಕೆ ಭರವಸೆ
ಕಾರವಾರ: ಅರಣ್ಯ ಒತ್ತುವರಿಗೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಜನರು ಬಹುಕಾಲದಿಂದ ಕಷ್ಟ ಅನುಭವಿಸುತ್ತಿದ್ದಾರೆ. ಇಂಥ ಜಾಗಗಳಲ್ಲಿ ಆಶ್ರಯ ಮನೆ ಕಟ್ಟಲೂ ಅವಕಾಶವಾಗುತ್ತಿಲ್ಲ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಸಮಸ್ಯೆ ಪರಿಹರಿಸಲಾಗುವುದು ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಕುಮಟಾ ತಾಲ್ಲೂಕಿನ ತಲಗೇರಿ ಗ್ರಾಮದಲ್ಲಿ ಮಾತನಾಡಿದ ಅವರು, ಇಲ್ಲಿನ ಜನರಿಗೆ ಜೆಡಿಎಸ್ ಬೆಂಬಲಿಸುವ ಮನಸ್ಸಿದೆ. ನಾನು ಸಿಎಂ ಆಗಿದ್ದಾಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಬಾರಿ ಗ್ರಾಮ ವಾಸ್ತವ್ಯ ಮಾಡಿದ್ದೇನೆ ಎಂದು ಸ್ಮರಿಸಿದರು.
Karnataka Politics Live: ಕಾಂಗ್ರೆಸ್ ಸದಾ ಅಧಿಕಾರದಲ್ಲಿರುವುದಿಲ್ಲ; ಡಿಕೆಶಿ ಕಾಲೆಳೆದ ಬಿಜೆಪಿ
ಬಿಜೆಪಿ ವಿರುದ್ಧ ತೀವ್ರವಾಗಿ ಹರಿಹಾಯುತ್ತಿರುವ ಡಿ.ಕೆ.ಶಿವಕುಮಾರ್ ವಿರುದ್ಧ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತೆ ಸರಣಿ ಟ್ವೀಟ್ಗಳ ಮೂಲಕ ಕಾಲೆಳೆದಿದೆ. ಕೊತ್ವಾಲ್ ಶಿಷ್ಯನಾದ ಡಿ.ಕೆ.ಶಿವಕುಮಾರ್ ಇಷ್ಟು ಭಾರೀ ಪ್ರಮಾಣದ ಆಸ್ತಿ ಸಂಪಾದಿಸಿದ್ದು ಹೇಗೆ ಎಂಬುದು ಕನಕಪುರದ ಪ್ರತಿ ಬಂಡೆಬಂಡೆಗೂ ತಿಳಿದಿದೆ. ಆದರೆ ಆ ಬಗ್ಗೆ ಜಾರಿ ನಿರ್ದೇಶನಾಲಯ ತಿಳಿಯಲು ಹೊರಟಾಗ ಮಾತ್ರ ಅವರಿಗೆ ಆತಂಕ ಉಂಟಾಗುತ್ತದೆ. ಗೋವಿಂದ ರಾಜು ಅವರ ಡೈರಿಯಲ್ಲಿ ಸಿಕ್ಕ ಹೆಸರುಗಳು ಮತ್ತು ಆ ಹೆಸರುಗಳ ಮುಂದಿದ್ದ ಭಾರಿ ಪ್ರಮಾಣದ ಹಣ ಯಾರಿಗೆ ಯಾಕಾಗಿ ಸಂದಾಯವಾಗಿತ್ತು ಎಂಬುದಕ್ಕೆ ಉತ್ತರ ನೀಡಬೇಕಿರುವುದು ಡಿ.ಕೆ.ಶಿವಕುಮಾರ್. ಅದನ್ನು ನಿರಂತರವಾಗಿ ತಪ್ಪಿಸಿಕೊಂಡು ಚುನಾವಣೆ ಹತ್ತಿರ ಬಂದಾಗ ಹಲುಬಿದರೆ ಕಪ್ಪು ಬಿಳಿಯಾಗುವುದಿಲ್ಲ ಎಂದು ಛೇಡಿಸಿದೆ.
ಸೋನಿಯಾ ಗಾಂಧಿ ಅವರ ಅತ್ಯಾಪ್ತರಾಗಿದ್ದ ಅಹ್ಮದ್ ಪಟೇಲ್ ಅವರನ್ನು ರಾಜ್ಯಸಭೆಗೆ ಕಳುಹಿಸಲು ಕೋಟಿ ಕೋಟಿಗಳನ್ನು ಯಾರು ಯಾರಿಗೆ ಸಂದಾಯ ಮಾಡಿದರು ಎಂಬ ವಿವರ ನೀವೇ ನೀಡಬೇಕು. ಅದಕ್ಕುತ್ತರಿಸದೆ ಎಷ್ಟೇ ರೂಪಾಯಿ ಮೌಲ್ಯದ ಮಾವು ಬೆಳೆದರೂ ಅದರ ಘಮ ನಿಮ್ಮ ಅಕ್ರಮ ಮರೆಮಾಚುವುದಿಲ್ಲ. ಅಪಾರ ಪ್ರಮಾಣದಲ್ಲಿ ಅಕ್ರಮ ಆಸ್ತಿ ಗಳಿಸಿ ಆ ಬಗ್ಗೆ ಜಾರಿ ನಿರ್ದೇಶನಾಲಯ ವಿಚಾರಣೆ ಮಾತ್ರ ಮಾಡಬಾರದು ಎಂದರೆ ಹೇಗೆ? ಡಿಕೆಶಿ ಅವರು ಬಯಸಿದಂತೆ ವಿಚಾರಣೆ ಮಾಡಲು ಅದೇನು ಕೆಪಿಸಿಸಿ ಘಟಕವಲ್ಲ, ಸ್ವಾಯತ್ತ ಸಂಸ್ಥೆ ಎಂದು ವ್ಯಂಗ್ಯವಾಡಿದೆ. ಅಕ್ರಮ ಎಸಗುವಾಗ ಜೀವಮಾನ ಪೂರ್ತಿ ಕಾಂಗ್ರೆಸ್ ಅಧಿಕಾರದಲ್ಲಿರುತ್ತದೆ ಎಂಬ ಭ್ರಮೆಯೇ ನಿಮ್ಮ ಈಗಿನ ಪರಿಸ್ಥಿತಿಗೆ ಕಾರಣ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ ಎಂದು ದೂರಿದೆ.
ಈಗ ವಿಚಾರಣೆ ಬಗ್ಗೆ ನೀವು ಕಿಡಿಕಾರುತ್ತಿದ್ದೀರಿ. ಆದರೆ, ಅಕ್ರಮ ಎಸೆಗುವಾಗ ಜೀವಮಾನ ಪೂರ್ತಿ ಕಾಂಗ್ರೆಸ್ ಅಧಿಕಾರದಲ್ಲಿರುತ್ತದೆ ಎಂಬ ಭ್ರಮೆಯೇ ನಿಮ್ಮ ಈಗಿನ ಪರಿಸ್ಥಿತಿಗೆ ಕಾರಣ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ನಮ್ಮ ವಿರುದ್ಧ ಟೀಕೆ ನಿಲ್ಲಿಸಿ.#CriminalCongress 6/6
— BJP Karnataka (@BJP4Karnataka) February 9, 2023
Karnataka Politics Live: ನನ್ನನ್ನು ಯಾರೂ ಕಡೆಗಣಿಸಿಲ್ಲ; ಯಡಿಯೂರಪ್ಪ
ರಾಯಚೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿಯೇ ಕರ್ನಾಟಕ ವಿಧಾನಸಭೆ ಚುನಾವಣೆ ಎದುರಿಸುತ್ತೇವೆ ಎಂದು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಬಿಜೆಪಿಗೆ ಸ್ಪಷ್ಟ ಬಹುಮತ ಬರಲಿದೆ. ತಾವೇ ಮುಖ್ಯಮಂತ್ರಿ ಅಂತ ಕಾಂಗ್ರೆಸ್ ಓಡಾಡುತ್ತಿರುವ ಕಾಂಗ್ರೆಸ್ ನಾಯಕರದು ತಿರುಕನ ಕನಸಾಗಲಿದೆ ಎಂದು ವ್ಯಂಗ್ಯವಾಡಿದರು.
ವಿಧಾನಸಭೆ ಅಧಿವೇಶನ ಬಳಿಕ ನಾಲ್ಕು ಕಡೆಗಳಿಂದ ರಥಯಾತ್ರೆ ಆರಂಭಿಸುತ್ತೇವೆ. ಇಡೀ ರಾಜ್ಯದಲ್ಲಿ ಪ್ರವಾಸ ಮಾಡುತ್ತೇವೆ. ನನ್ನನ್ನು ಯಾರೂ ಸೈಡ್ಲೈನ್ ಮಾಡುತ್ತಿಲ್ಲ. ಪಕ್ಷವು ನನಗೆ ಎಲ್ಲವನ್ನೂ ಕೊಟ್ಟಿದೆ. ನನಗೆ ಸಂತೃಪ್ತಿದೆ ಎಂದರು.
Hoskote Politics: ಹೊಸಕೋಟೆ ಶಾಸಕ ಶರತ್ ನಡೆ ವಿರೋಧಿಗೆ ಬಿಜೆಪಿ ಸೇರಲು ಮುಂದಾದ ಕಾಂಗ್ರೆಸ್ ನಾಯಕರು
ಹೊಸಕೋಟೆ: ಶಾಸಕ ಶರತ್ ಮತ್ತು ಇತರ ಮುಖಂಡರು ಮೂಲ ಕಾಂಗ್ರೆಸಿಗರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಸ್ಥಳಿಯ ನಾಯಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ನಿರ್ಧರಿಸಿದ್ದಾರೆ. ಫೆ 13ರಂದು ಎಂಟಿಬಿ ನಾಗರಾಜ್ ಸಮಕ್ಷಮ ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
Karnatala Assembly Elecions 2023: ಕರ್ನಾಟಕ ವಿಧಾನಸಭಾ ಚುನಾವಣೆಗೆ ಆಯೋಗದಿಂದ ಭರದ ಸಿದ್ಧತೆ
ಮೈಸೂರು: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಸಿದ್ಧತೆ ಚುರುಕಾಗಿದೆ. ಮತದಾನದ ನಂತರ ಬಳಕೆಯಾಗುವ ಅಳಿಸಲಾಗದ ಇಂಕು, ಅರಗು ತಯಾರಿಸಲು ಮೈಸೂರಿನ ಐತಿಹಾಸಿಕ ‘ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ’ಯಲ್ಲಿ (ಮೈಲ್ಯಾಕ್) ಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಬಾರಿಯ ಚುನಾವಣೆಗೆ 1.30 ಲಕ್ಷ ಬಾಟಲ್ ಅಳಿಸಲಾಗದ ಶಾಯಿ, 3,90,000 ಅರಗು ಸ್ಟಿಕ್ (ಮೇಣ) ತಯಾರಿಕೆಸಲು ಆಯೋಗವು ಸೂಚಿಸಿದೆ. ಈ ವಿಶಿಷ್ಟ ಮೇಣವನ್ನು ಮತಯಂತ್ರಗಳ ಪ್ಯಾಕಿಂಗ್ಗೆ ಬಳಸಲಾಗುತ್ತದೆ. ಪಾರ್ಲಿಮೆಂಟ್‌ನಿಂದ ಪಂಚಾಯಿತಿವರೆಗೆ ದೇಶದ ಎಲ್ಲ ಚುನಾವಣೆಗಳಿಗೂ ಮೈಸೂರಿನಿಂದ ಸರಬರಾಜಾಗುವ ಶಾಯಿಯನ್ನೇ ಬಳಸಲಾಗುತ್ತದೆ. ಮೈಸೂರು ಯದುವಂಶದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಮೈಲ್ಯಾಕ್ ಕಾರ್ಖಾನೆ ಸ್ಥಾಪನೆಯಾಗಿದೆ.
Karnataka Politics Live: ಫೆ 11ಕ್ಕೆ ಪುತ್ತೂರಿಗೆ ಅಮಿತ್ ಶಾ; ಕರಾವಳಿಯಲ್ಲಿ ಬಿಜೆಪಿ ಸಂಘಟನೆ ಚುರುಕು
ಕರ್ನಾಟಕ ಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ತೆಗೆದುಕೊಂಡಿದೆ. ಒಬ್ಬರ ನಂತರ ಮತ್ತೊಬ್ಬ ಬಿಜೆಪಿ ರಾಷ್ಟ್ರೀಯ ನಾಯಕರು ಕರ್ನಾಟಕಕ್ಕೆ ಬರುತ್ತಲೇ ಇದ್ದಾರೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದ ವಿವಿಧೆಡೆ ಮೋದಿ-ಅಮಿತ್ ಶಾ ಕಾರ್ಯಕ್ರಮಗಳು ನಡೆದಿವೆ. ಇದೀಗ ಅಮಿತ್ ಶಾ ಮತ್ತೊಮ್ಮೆ ಕರ್ನಾಟಕಕ್ಕೆ ಬರುತ್ತಿದ್ದು, ಫೆ 11ರಂದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ. ಈ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದೆ. ರೈತರ ಪರ ಬಿಜೆಪಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಸಂದೇಶ ನೀಡಲು ಸಮಾವೇಶವನ್ನು ಬಳಸಿಕೊಳ್ಳುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಉಂಟಾದ ಕಾರ್ಯಕರ್ತರ ಆಕ್ರೋಶವನ್ನು ತಣಿಸುವುದಕ್ಕೂ ಕಾರ್ಯತಂತ್ರ ರೂಪಿಸಲಾಗಿದೆ. ಜಿಲ್ಲೆಯಲ್ಲಿ ಕಳೆದ ಬಾರಿಯ ಗೆಲುವನ್ನು ಉಳಿಸಿಕೊಳ್ಳುವ ಬಗ್ಗೆಯೂ ಅಮಿತ್ ಶಾ ಪರಾಮರ್ಶೆ ನಡೆಸಲಿದ್ದಾರೆ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳರಲ್ಲಿ ಬಿಜೆಪಿ ಜಯ ಸಾಧಿಸಿತ್ತು. ಕಾಂಗ್ರೆಸ್ ಪಕ್ಷವು ಕೆಲ ದಿನಗಳ ಹಿಂದಷ್ಟೇ ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ಕರ್ನಾಟಕದಲ್ಲಿ ಪ್ರತಿಪಕ್ಷಗಳ ಪ್ರತಿ ನಡೆಯನ್ನೂ ಬಿಜೆಪಿ ನಾಯಕರೂ ಅವಲೋಕಿಸುತ್ತಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತವರು ಜಿಲ್ಲೆಯಲ್ಲಿಯೇ ಗೆಲುವ ಉಳಿಸಿಕೊಳ್ಳುವ ಸವಾಲು ಬಿಜೆಪಿಗೆ ಎದುರಾಗಿದೆ.
Karnataka Politics Live: ಬ್ರಾಹ್ಮಣ ಸಿಎಂ ವಿವಾದ, ಮೌನವೇ ಕಾಂಗ್ರೆಸ್ನ ಅಸ್ತ್ರ
ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ನಾಯಕ ಪ್ರಲ್ಹಾದ್ ಜೋಶಿ ಅವರನ್ನು ಟೀಕಿಸುವ ಭರದಲ್ಲಿ ನೀಡಿರುವ ಬ್ರಾಹ್ಮಣ ಸಿಎಂ ಹಾಗೂ ಪೇಶ್ವೆಗಳ ಡಿಎನ್ಎ ವಿವಾದಕ್ಕೆ ಸಂಬಂಧಿಸಿದಂತೆ ಈವರೆಗೆ ಕಾಂಗ್ರೆಸ್ ಪ್ರತಿಕ್ರಿಯಿಸಿಲ್ಲ. ಬದಲಿಗೆ ಕಾದು ನೋಡುವ ತಂತ್ರಕ್ಕೆ ಶರಣಾಗಿದೆ. ಎಚ್ಡಿಕೆ ಹೇಳಿಕೆಯಿಂದ ಕಾಂಗ್ರೆಸ್ಗೆ ನೇರವಾಗಿ ಡ್ಯಾಮೇಜ್ ಆಗುವ ಸಾಧ್ಯತೆ ಕಂಡುಬಂದಿಲ್ಲ. ಕೇವಲ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಮತಗಳ ಮೇಲೆ ಜೆಡಿಎಸ್ ಹಿಡಿತ ಸಾಧಿಸಲು ಈ ಹೇಳಿಕೆ ನೆರವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಎಚ್ಡಿಕೆ ಹೇಳಿಕೆ ವಿಚಾರಕ್ಕೆ ಮೌನವನ್ನೇ ಕಾಂಗ್ರೆಸ್ ತನ್ನ ಅಸ್ತ್ರವಾಗಿಸಿಕೊಂಡಿದೆ. ಎಚ್ಡಿಕೆ ಹೇಳಿಕೆ ವಿರೋಧಿಸಿದರೆ ಹಳೇ ಮೈಸೂರು ಭಾಗದ ಒಕ್ಕಲಿಗರ ಮತ ಕಳೆದುಕೊಳ್ಳಬೇಕಾದ ಅಪಾಯವಿದೆ. ಎಚ್ಡಿಕೆ ಹೇಳಿಕೆ ಪ್ರಭಾವದಿಂದ ಲಿಂಗಾಯತರು ಮುನಿಸಿಕೊಂಡು ಬಿಜೆಪಿಯಿಂದ ದೂರವಾದರೆ ಅದರ ಲಾಭ ತನಗೆ ಆಗಬಹುದು ಎಂದು ಕಾಂಗ್ರೆಸ್ ನಿರೀಕ್ಷಿಸಿದೆ. ಇದರ ಜೊತೆಗೆ ಜೆಡಿಎಸ್ ಯಾವ ಕ್ಷಣದಲ್ಲಿ ಬೇಕಾದರೂ ತನ್ನ ನಿಲುವು ಬದಲಿಸಬಹುದು. ಬ್ರಾಹ್ಮಣರನ್ನು ಟೀಕಿಸುವ ವಿಚಾರದಲ್ಲಿ ಜೆಡಿಎಸ್
Mysore Politics Live: ವರುಣ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ; ಯತೀಂದ್ರ
ಮೈಸೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ ನಾನೇ ಅಭ್ಯರ್ಥಿಯಾಗುತ್ತೇನೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು. ವರುಣ ಕ್ಷೇತ್ರದ ಮೆಲ್ಲಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ನಮ್ಮ ತಂದೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದಿದ್ದಾರೆ. ಹಾಗಾಗಿ ವರುಣಾ ಕ್ಷೇತ್ರದಲ್ಲಿ ನಾನೇ ಸ್ಪರ್ಧೆ ಮಾಡುತ್ತೇನೆ. ವರುಣಾ ಕ್ಷೇತ್ರ ಯಾವಾಗಲೂ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಬಿಜೆಪಿಯಿಂದ ಯಾರೇ ಸ್ಪರ್ಧಿಸಿದರೂ ನಮಗೆ ಭಯವಿಲ್ಲ ಎಂದರು.
Karnataka Politics Live: ಜನಾರ್ದನ ರೆಡ್ಡಿ ವಿರುದ್ಧ ಇಕ್ಬಾಲ್ ಅನ್ಸಾರಿ ವಾಗ್ದಾಳಿ
ಗಂಗಾವತಿ: ಬಳ್ಳಾರಿಯ ರಸ್ತೆಗಳಿಗೆ ಅವriMd ಒಂದು ಬುಟ್ಟಿ ಮಣ್ಣು ಹಾಕೋಕೆ ಆಗಿಲ್ಲ. ಇಲ್ಲೇನು ಅಭಿವೃದ್ಧಿ ಮಾಡುತ್ತಾರೆ ಎಂದು ರಾಜಕೀಯ ಎದುರಾಳಿ ಜನಾರ್ದನ ರೆಡ್ಡಿ ವಿರುದ್ಧ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಪರೋಕ್ಷ ವಾಗ್ದಾಳಿ ನಡೆಸಿದರು. ಕೊಪ್ಪಳ ಜಿಲ್ಲೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಚಿಲಕಮುಕ್ಕಿ ಗ್ರಾಮದಲ್ಲಿ ಆಯೋಜಿಸಿದ್ದ ‘ಅಭಿವೃದ್ಧಿ ಕಡೆಗೆ ಅನ್ಸಾರಿ ಆಗಮನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಮನೆ ಕೊಡ್ತೀನಿ ಎಂದು ಸುಳ್ಳು ಹೇಳಿದ್ದಾರೆ. ಎರಡು ತಿಂಗಳಲ್ಲಿ ಹೇಗೆ ಜಿಪಿಎಸ್ ಮಾಡಲು ಸಾಧ್ಯ? ಶುದ್ಧ ಸುಳ್ಳುಗಳನ್ನ ಹೇಳುವ ಜನರನ್ನು
Congress Prajadhwani Yatra Live: ಚಿತ್ರದುರ್ಗದಲ್ಲಿ ಪ್ರಜಾಧ್ವನಿ ಯಾತ್ರೆ, ಕಾಂಗ್ರೆಸ್ ಸಮಾವೇಶ
ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಇಂದು (ಫೆ 9) ಇಂದು ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ನಡೆಯಲಿದೆ. ಕೆಪಿಸಿಸಿ ಅದ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಯಾತ್ರೆ ಸಂಚರಿಸಲಿದ್ದು, ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆಯಲ್ಲಿ ಸಮಾವೇಶಗಳು ನಡೆಯಲಿವೆ. ಬಸ್ ಯಾತ್ರೆ ಮೂಲಕ ಡಿಕೆಶಿ ಮತ್ತು ತಂಡ ಜಿಲ್ಲೆಯಲ್ಲಿ ಸಂಚರಿಸಲಿದೆ. ಬೆಳಿಗ್ಗೆ 11ಕ್ಕೆ ಹೊಸದುರ್ಗ, ಮಧ್ಯಾಹ್ನ 2ಕ್ಕೆ ಹೊಳಲ್ಕೆರೆ, ಸಂಜೆ 5ಕ್ಕೆ ಚಿತ್ರದುರ್ಗ ನಗರದಲ್ಲಿ ಪ್ರಜಾಧ್ವನಿ ಸಮಾವೇಶ ನಡೆಯಲಿದೆ.
Karnataka Politics Live: ವರುಣ ಕ್ಷೇತ್ರದಲ್ಲಿ ಡಾ ಯತೀಂದ್ರ ರೌಂಡ್ಸ್
ಚುನಾವಣೆ ಸಮೀಪಿಸುತ್ತಿದ್ದಂತೆ ಚುರುಕಾಗಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಪುತ್ರ ಡಾ ಯತೀಂದ್ರ ವರುಣ ಕ್ಷೇತ್ರದ ಮೆಲ್ಲಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದಾರೆ. ಕ್ಷೇತ್ರದ ಪ್ರತಿಯೊಬ್ಬರ ಸಮಸ್ಯೆ ಆಲಿಸಲು ದ್ವಿಚಕ್ರ ವಾಹನದಲ್ಲಿ ತೆರಳಬೇಕಾಗಿದೆ ಎಂದು ತಮ್ಮ ಓಡಾಟದ ಬಗ್ಗೆ ಯತೀಂದ್ರ ಸ್ಪಷ್ಟನೆ ಕೊಟ್ಟಿದ್ದಾರೆ.
Karnataka Politics Live: ಅಮಿತ್ ಶಾ ಭೇಟಿಗೆ ಸಮಯ ಕೋರಿದ ರಮೇಶ್ ಜಾರಕಿಹೊಳಿ
ಅಶ್ಲೀಲ ಸಿಡಿ ಬಹಿರಂಗ ಪ್ರಕರಣದ ವಿಸ್ತೃತ ತನಿಖೆ ನಡೆಯಬೇಕು ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ. ಆಪ್ತರ ಜೊತೆಗೆ ದೆಹಲಿಗೆ ಹೋಗಿರುವ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗಮನ ಸೆಳೆಯಲು ಕೇಂದ್ರ ಸಚಿವ ಅಮಿತ್ ಶಾ ಭೇಟಿಗೆ ಸಮಯ ಕೇಳಿದ್ದಾರೆ.
Published On - Feb 09,2023 10:22 AM