ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Election 2023) ಕೇವಲ ಒಂದು ಅಷ್ಟೇ ಬಾಕಿಯಿದ್ದು, ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೇ 10 ರಂದು ರಾಜ್ಯಾದ್ಯಂತ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಇದೇ ಮೊದಲ ಬಾರಿಗೆ ವಿಶೇಷ ಮತಗಟ್ಟೆಗಳನ್ನು ತೆರೆಯಲು ಚುನಾವಣಾ ಆಯೋಗ ನಿರ್ಧರಿಸಿತ್ತು. ಈ ಹಿನ್ನೆಲೆ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ವ್ಯಾಪ್ತಿಯಲ್ಲಿ ವಿನೂತನ ಥೀಮ್ ಬೇಸ್ಡ್ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಪಿಂಕ್ ಮತಗಟ್ಟೆ, ಯುವ ಮತದಾರರ ಮತಗಟ್ಟೆ, ಸಿರಿಧಾನ್ಯ ಮತಗಟ್ಟೆ, ವಿಶೇಷ ಚೇತನ ಮತಗಟ್ಟೆ, ಸಂಸ್ಕೃತಿ ಮತಗಟ್ಟೆ, ಪರಿಸರ ಮತಗಟ್ಟೆ, ವಿಜ್ಞಾನ ಮತ್ತು ತಂತ್ರಜ್ಞಾನ ಮತಗಟ್ಟೆ, ಮಾಜಿ ಸೈನಿಕ ಮತಗಟ್ಟೆ, ತೃತೀಯ ಲಿಂಗಿ ಮತಗಟ್ಟೆ, ಕ್ರೀಡಾ ಮತಗಟ್ಟೆಗಳೆಂಬ ವಿಶೇಷ ವಿನ್ಯಾಸದ ಮತಗಟ್ಟೆಗಳನ್ನು ಸ್ಥಾಪಿಸುವ ಮೂಲಕ ಮತದಾರರನ್ನು ಸೆಳೆಯಲಾಗುತ್ತಿದೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಬುಡಕಟ್ಟು ಸಮುದಾಯಕ್ಕೆ ಪ್ರತ್ಯೇಕ 40 ಸಾಂಪ್ರದಾಯಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 9 ಜಿಲ್ಲೆಗಳಲ್ಲಿ ಅರಣ್ಯ ಮತ್ತು ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಆದಿವಾಸಿ ಜನಾಂಗದವರಾದ ಎರವ, ಪಣಿಯ, ಹಕ್ಕಿ-ಪಿಕ್ಕಿ, ಗೌಡಲು, ಹಸಲರು, ಕಾಡುಕುರುಬ , ಜೇನುಕುರುಬ, ಕೊರಗ, ಮಲೈಕುಡಿ, ಸಿದ್ದಿ ಜನಾಂಗದ ಮತದಾರರಿಗಾಗಿ ಸಾಂಪ್ರದಾಯಿಕ ಮತಗಟ್ಟೆ ಸಿದ್ಧಪಡಿಸಲಾಗಿದೆ.
ಇದನ್ನೂ ಓದಿ: ಮತದಾನ ಮಾಡಿದವರಿಗೆ ಈ ಹೋಟೆಲ್ನಲ್ಲಿ ಸಿಗಲಿದೆ ಉಚಿತ ತಿಂಡಿ, ಸಿನಿಮಾ ಟಿಕೆಟ್: ಮತದಾರರಿಗೆ ಬಂಪರ್ ಆಫರ್
ಚಾಮರಾಜನಗರ ಜಿಲ್ಲೆಯಲ್ಲಿ 9, ಉಡುಪಿ ಜಿಲ್ಲೆಯಲ್ಲಿ 1, ಕೊಡಗು ಜಿಲ್ಲೆಯಲ್ಲಿ 5, ಉತ್ತರ ಕನ್ನಡ ಜಿಲ್ಲೆಯಲ್ಲಿ 5, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5, ಮೈಸೂರು ಜಿಲ್ಲೆಯಲ್ಲಿ 9, ಶಿವಮೊಗ್ಗ ಜಿಲ್ಲೆಯಲ್ಲಿ 3, ಚಿಕ್ಕಮಗಳೂರು ಜಿಲ್ಲೆಯಲ್ಲಿ 2 ಮತ್ತು ಹಾಸನ ಜಿಲ್ಲೆಯಲ್ಲಿ 1 ಮತಗಟ್ಟೆ ಸ್ಥಾಪಿಸಲಾಗಿದೆ.
ಚುನಾವಣೆಯ ಮತದಾನಕ್ಕೆ ಮೈಸೂರಿನಿಂದ ಅಳಿಸಲಾಗದ ಶಾಯಿ ಪೂರೈಕೆ ಮಾಡಲಾಗಿದೆ. ಮೈಸೂರು ಪೈಂಟ್ಸ್ ಮತ್ತು ವಾರ್ನಿಸ್ ಸಂಸ್ಥೆಯಿಂದ ಶಾಯಿ ಪೂರೈಕೆ ಮಾಡಲಾಗಿದೆ ಎಂದು ಟಿವಿ9ಗೆ ಮೈಲ್ಯಾಕ್ ಸಂಸ್ಥೆಯ ಎಂ.ಡಿ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ. 1937ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಈ ಸಂಸ್ಥೆ ಸ್ಥಾಪಿಸಿದ್ದಾರೆ. ಚುನಾವಣಾ ಆಯೋಗದ ಬೇಡಿಕೆ ಹಿನ್ನೆಲೆ 1 ಲಕ್ಷದ 20 ಸಾವಿರ ರೂ. ಬಾಟಲ್ ಪೂರೈಕೆ ಮಾಡಲಾಗಿದೆ ಎಂದರು.
ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಚುನಾವಣೆ ಯಾವಾಗ? ಮತದಾನ, ಫಲಿತಾಂಶದ ದಿನಾಂಕ ಇತರೆ ಮಾಹಿತಿ ಇಲ್ಲಿದೆ
1962ರಲ್ಲಿ ಆರಂಭವಾದ ಅಳಿಸಲಾಗದ ಶಾಯಿ ತಯಾರಿಕೆ, ಕೇವಲ ನಮ್ಮ ರಾಜ್ಯ ಮಾತ್ರವಲ್ಲ ಹೊರ ರಾಜ್ಯದ ಮತ್ತು ಬೇರೆ ದೇಶದ ಚುನಾವಣೆಗೂ ಇಲ್ಲಿಂದಲೇ ಶಾಯಿ ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:06 pm, Mon, 8 May 23