ಸಿಎಂ ಆಯ್ಕೆ ಕಗ್ಗಂಟು ನಡುವೆ ಡಿಸಿಎಂ ಸ್ಥಾನಕ್ಕೆ ಬಿಗಿಪಟ್ಟು: ಲಿಂಗಾಯತ ಸಮಾಜದ ಶಾಸಕನಿಗೆ ಉಪಮುಖ್ಯಮಂತ್ರಿ ಮಾಡುವಂತೆ ಮಠಾಧೀಶರ ಆಗ್ರಹ
ವಿವಿಧ ಸಮುದಾಯಗಳ ನಾಯಕರು ಮತ್ತು ಸ್ವಾಮೀಜಿಗಳು ನಮ್ಮ ಸಮಾಜದ ಶಾಸಕನಿಗೆ ಸಿಎಂ, ಡಿಸಿಎಂ ಮತ್ತು ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಅದರಂತೆ ಈಗ ಅತಿದೊಡ್ಡ ಸಮಾಜವಾದ ಲಿಂಗಾಯತ ಸಮುದಾಯದ ಮಠಾಧೀಶರು ಕೂಡ ಆಗ್ರಹಿಸುತ್ತಿದ್ದಾರೆ.
ಬಾಗಲಕೋಟೆ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮತ್ತು ಸಿದ್ದರಾಮಯ್ಯ (Siddaramaiah) ಮಧ್ಯೆ ಮುಖ್ಯಮಂತ್ರಿ ಖುರ್ಚಿಗಾಗಿ ಪೈಪೋಟಿ ಏರ್ಪಟ್ಟಿದೆ. ಇಬ್ಬರು ನಾಯಕರು ಮೊಂಡುತನ ಬಿಡದೆ ಸಿಎಂ ಕುರ್ಚಿಗಾಗಿ ಹವಣಿಸುತ್ತಿದ್ದಾರೆ. ಈ ಮಧ್ಯೆ ವಿವಿಧ ಸಮುದಾಯಗಳ ನಾಯಕರು ಮತ್ತು ಸ್ವಾಮೀಜಿಗಳು ನಮ್ಮ ಸಮಾಜದ ಶಾಸಕನಿಗೆ ಸಿಎಂ, ಡಿಸಿಎಂ ಮತ್ತು ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಅದರಂತೆ ಈಗ ಅತಿದೊಡ್ಡ ಸಮಾಜವಾದ ಲಿಂಗಾಯತ (Lingayat) ಸಮುದಾಯದ ಕೂಡಲಸಂಗಮ (Kudalasangam) ಪಂಚಮಸಾಲಿ (Panchamasali) ಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿ “ಪಂಚಮಸಾಲಿ ಸಮಾಜದ ಓರ್ವ ಶಾಸಕನಿಗೆ ಉಪಮುಖ್ಯಮಂತ್ರಿ ಮಾಡಬೇಕು ಜೊತೆಗೆ ಮೂವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಕೂಡಲಸಂಗಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರೂ ಶ್ರೀಪಿಠದ ಸಂಪರ್ಕದಲ್ಲಿದ್ದಾರೆ. ಪಕ್ಷದ ವರಿಷ್ಠರು ಯಾರನ್ನು ಮಾಡ್ತಾರೆ ಮಾಡಲಿ. ಇನ್ನು ಉಪಮುಖ್ಯಮಂತ್ರಿ ಸ್ಥಾನವನ್ನು ಜನಾಂಗದ ಮೇಲೆ ಹಂಚಿಕೆ ಮಾಡುತ್ತಿದ್ದಾರಂತೆ. ಒಂದು ವೇಳೆ ಹಾಗೆ ನೀಡುವುದಾದರೇ, ಲಿಂಗಾಯತ ಕೋಟಾದಲ್ಲಿ ಪಂಚಮಸಾಲಿ ಸಮಾಜಕ್ಕೂ ಒಂದು ಅವಕಾಶ ಕೊಡಬೇಕು. ಜೊತೆಗೆ ಪಂಚಮಸಾಲಿ ಸಮಾಜದ ಮೂವರಿಗೆ ಸಚಿವ ಸ್ಥಾನ ನೀಡಬೇಕೆಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರಗೆ ಸಚಿವ ಸ್ಥಾನ ನೀಡಬೇಕು. ವಿಜಯಾನಂದ ಕಾಶಪ್ಪನವರ ತಂದೆ ಎಸ್ ಆರ್ ಕಾಶಪ್ಪನವರ ನಂತರ, ಕಾಂಗ್ರೆಸ್ನಲ್ಲಿ ಬಾಗಲಕೋಟೆ ಜಿಲ್ಲೆಯಿಂದ ಯಾರೂ ಪಂಚಮಸಾಲಿ ಶಾಸಕರು ಸಚಿವರಾಗಿಲ್ಲ ಎಂದರು.
ಇದನ್ನೂ ಓದಿ: ತಾರಕಕ್ಕೇರಿದ ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಬೆಂಬಲಿಗರ ಜಟಾಪಟಿ, ಮುಸಿಮುಸಿ ನಗುತ್ತಿರುವ ಬಿಜೆಪಿ ಕಾರ್ಯಕರ್ತರು
ಪಂಚಮಸಾಲಿ ಹೋರಾಟ ಶುರುವಾಗಿದ್ದೆ ಕೂಡಲಸಂಗಮದಿಂದ. ಕಾಶಪ್ಪನವರ ಪಂಚಮಸಾಲಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು. ಸಮಾಜದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಧಾರವಾಡದಲ್ಲಿ ವಿನಯ ಕುಲಕರ್ಣಿ, ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳಕರ್, ಕಲ್ಯಾಣ ಕರ್ನಾಟಕದಲ್ಲಿ ಬಿ ಆರ್ ಪಾಟಿಲ್ ಸೇರಿದಂತೆ ಅನೇಕರಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ವಿಜಯಾನಂದ ಕಾಶಪ್ಪನವರ ಏಕೈಕ ಪಂಚಮಸಾಲಿ ಶಾಸಕರಿದ್ದು, ಅವರಿಗೆ ಸಚಿವ ಸ್ಥಾನ ಕೊಡಲೇಬೆಕೆಂದು ಆಗ್ರಹಿಸಿದ್ದಾರೆ. ಸಮಾಜದ ೧೩ ಜನ ಕಾಂಗ್ರೆಸ್ ನಲ್ಲಿ ಶಾಸಕರಾಗಿದ್ದಾರೆ.
ಕಾಂಗ್ರೆಸ್ನಲ್ಲಿ ಲಿಂಗಾಯತ ಮುಖ್ಯಮಂತ್ರಿ ಬಗ್ಗೆ ಚರ್ಚೆಯೇ ಇಲ್ಲ ಎಂಬ ವಿಚಾರವಾಗಿ ಮತಾನಾಡಿದ ಅವರು ಒಕ್ಕಲಿಗ ಸಮುದಾಯದ ಶ್ರೀಗಳು, ಹಾಲುಮತದ ಸಮುದಾಯದ ಶ್ರೀಗಳು ಮತ್ತು ಆಯಾ ಸಮಾಜದ ನಾಯಕರು ಮುಖ್ಯಮಂತ್ರಿಯಾಗಲಿ ಅಂತ ಒತ್ತಾಯ ಮಾಡುತ್ತಿದ್ದಾರೆ. ದೇ ತರಹ ಲಿಂಗಾಯತರಿಗೂ ಮುಖ್ಯಮಂತ್ರಿ ಸ್ಥಾನ ಬೇಕು ಎಂದು ಸಮಾಜದ ಅಪೇಕ್ಷೆಯಾಗಿದೆ ಎಂದು ಹೇಳಿದರು.
ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಾವ ರೀತಿ ವಿಚಾರ ಮಾಡುತ್ತೆ ಗೊತ್ತಿಲ್ಲ. ಜನಾಂಗದ ಆಧಾರದ ಮೇಲೆ ಸಿಎಂ ಆಯ್ಕೆ ಮಾಡುತ್ತಾರೊ? ಅಥವಾ ಶಾಸಕರ ಸಂಖ್ಯೆಗನುಣವಾಗಿ ಆಯ್ಕೆ ಮಾಡುತ್ತಾರೊ ? ಲಿಂಗಾಯತ ಸಮಾಜದ ಒಟ್ಟು 33 ಜನ ಶಾಸಕರಿದ್ದಾರೆ. ಈ ಬಗ್ಗೆ ನಾನು ಈಗ ಹೆಚ್ಚು ಪ್ರಸ್ತಾಪ ಮಾಡೋದಿಲ್ಲ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ಭಾಗಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಿ
ಕಲ್ಯಾಣ ಕರ್ನಾಟಕ ಭಾಗಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಿ. ರಾಜ್ಯದ ಜನರು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಮುಂದಿನ 5 ವರ್ಷ ಉತ್ತಮ ಆಡಳಿತ ನೀಡಲಿ. ಕ್ರಿಯಾಶೀಲ ವ್ಯಕ್ತಿ ಈಶ್ವರ್ ಖಂಡ್ರೆ ಅವರಿಗೆ ಡಿಸಿಎಂ ಸ್ಥಾನ ನೀಡಬೇಕು ಎಂದು ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಶ್ರೀ ವೀರಭದ್ರ ಶಿವಾಚಾರ್ಯ ಮತ್ತು ಶಾಂತಮಲ್ಲ ಶಿವಾಚಾರ್ಯ ಸ್ವಮೀಜಿ ಸುದ್ದಿಗೋಷ್ಠಿ ನಡೆಸಿ ನಾವು ಯಾವುದೇ ಜಾತಿ ಆಧಾರದ ಮೇಲೆ ಸ್ಥಾನಮಾನ ಕೇಳುತ್ತಿಲ್ಲ. ಅರ್ಹತೆಯ ಆಧಾರದ ಮೇಲೆ ಡಿಸಿಎಂ ಸ್ಥಾನವನ್ನು ಕೇಳಿದ್ದೇವೆ. ಹಾಗೆ ಶಾಸಕ ಹಂಪನಗೌಡ ಬಾದರ್ಲಿಗೆ ಸಚಿವ ಸ್ಥಾನ ನೀಡಲಿ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಈ ಭಾಗದ ಜನರ ಕೊಡುಗೆ ಇದೆ ಎಂದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ