ಶತಾಯಗತಾಯ ಶೆಟ್ಟರ್ ಸೋಲಿಸುವುದೇ ಗುರಿ; ಬಿಎಸ್ ಯಡಿಯೂರಪ್ಪ
ಯಾವುದೇ ಕಾರಣಕ್ಕೂ ಶೆಟ್ಟರ್ ಪರವಾಗಿ ನಿಲ್ಲಬೇಡಿ ಎಂದು ಮನವಿ ಮಾಡಿದ ಯಡಿಯೂರಪ್ಪ, ಚುನಾವಣೆಯಲ್ಲಿ ಶೆಟ್ಟರ್‌ಗೆ ದಯನೀಯ ಸೋಲಾಗುವಂತೆ ಮಾಡಬೇಕು. ಇದೇ ಅವರಿಗೆ ಪಾಠವಾಗಲಿದೆ ಎಂದು ಶೆಟ್ಟರ್ ವಿರುದ್ಧ ಗುಡುಗಿದರು.
ಹುಬ್ಬಳ್ಳಿ: ಪಕ್ಷ ತೊರೆದು ಕಾಂಗ್ರೆಸ್ ಸೇರಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ (Hubballi-Dharwad Central) ಕ್ಷೇತ್ರದ ಅಭ್ಯರ್ಥಿಯಾಗಿರುವ ಜಗದೀಶ್ ಶೆಟ್ಟರ್ (Jagadish Shettar) ವಿರುದ್ಧ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ (BS Yediyurappa) ಆಕ್ರೋಶ ವ್ಯಕ್ತಡಿಸಿದ್ದಾರೆ. ಶೆಟ್ಟರ್ ಅವರನ್ನು ಸೋಲಿಸಲು ಕಾರ್ಯತಂತ್ರ ರೂಪಿಸಲು ವೀರಶೈವ ಲಿಂಗಾಯತ ಮುಖಂಡರ ಸಭೆ ಕರೆದಿರುವ ಅವರು ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ನಂತರ ಮಾತನಾಡಿ, ಶೆಟ್ಟರ್ ವಿರುದ್ಧ ಕಿಡಿಕಾರಿದ್ದು ಅವರನ್ನು ಶತಾಯಗತಾಯ ಸೋಲಿಸುವುದೇ ನಮ್ಮ ಗುರಿ ಎಂದು ಹೇಳಿದ್ದಾರೆ. ವೀರಶೈವ ಲಿಂಗಾಯತ ಮುಖಂಡರ ಸಭೆ ಉದ್ದೇಶಿಸಿ ಯಡಿಯೂರಪ್ಪ ಮಾತನಾಡಿದ್ದು, ಸಭೆಯ ಇನ್‌ಸೈಡ್ ಮಾಹಿತಿ ‘ಟಿವಿ9’ಗೆ ಲಭ್ಯವಾಗಿದೆ.
ಯಡಿಯೂರಪ್ಪ ಹೇಳಿದ್ದೇನು?
ವೀರಶೈವ ಲಿಂಗಾಯತ ಮುಖಂಡರ ಸಭೆ ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ಶೆಟ್ಟರ್ ಬಗ್ಗೆ ನಡೆದ ಸತ್ಯ ಸಂಗತಿ ಕುರಿತು ಹೇಳಲು ನಿಮ್ಮನ್ನು ಕರೆದಿದ್ದೇನೆ. ಶೆಟ್ಟರ್‌ರನ್ನು ಮುಖ್ಯಮಂತ್ರಿ, ವಿಪಕ್ಷ ನಾಯಕ, ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದೆವು. ಬಿ.ಬಿ. ಶಿವಪ್ಪರನ್ನು ಬಿಟ್ಟು ಶೆಟ್ಟರ್‌ರನ್ನು ವಿಪಕ್ಷ ನಾಯಕರಾಗಿ ಮಾಡಿದ್ದೆವು. ಶೆಟ್ಟರ್‌ಗೆ ಏನು ಅನ್ಯಾಯ ಮಾಡಿದ್ದೆವು? ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಮಾತನಾಡಿದ್ದರು. ನಿಮ್ಮ ಶ್ರೀಮತಿಯವರನ್ನು ನಿಲ್ಲಿಸಿ ಅವರಿಗೆ ಟಿಕೆಟ್ ಕೊಡುತ್ತೇವೆ ಎಂದು ಹೇಳಿದ್ದರು. ರಾಜ್ಯಸಭಾ ಸದಸ್ಯ ಸ್ಥಾನ, ಕೇಂದ್ರ ಸಚಿವ ಸ್ಥಾನದ ಆಫರ್ ಕೂಡ ನೀಡಲಾಗಿತ್ತು. ಇಷ್ಟೆಲ್ಲಾ ಆದ ಮೇಲೂ ಪಕ್ಷಕ್ಕೆ ದ್ರೋಹ ಮಾಡಿ ಕಾಂಗ್ರೆಸ್‌ಗೆ ಸೇರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ಕಾರಣಕ್ಕೂ ಶೆಟ್ಟರ್ ಪರವಾಗಿ ನಿಲ್ಲಬೇಡಿ: ಯಡಿಯೂರಪ್ಪ
ಯಾವುದೇ ಕಾರಣಕ್ಕೂ ಶೆಟ್ಟರ್ ಪರವಾಗಿ ನಿಲ್ಲಬೇಡಿ ಎಂದು ಮನವಿ ಮಾಡಿದ ಯಡಿಯೂರಪ್ಪ, ಚುನಾವಣೆಯಲ್ಲಿ ಶೆಟ್ಟರ್‌ಗೆ ದಯನೀಯ ಸೋಲಾಗುವಂತೆ ಮಾಡಬೇಕು. ಇದೇ ಅವರಿಗೆ ಪಾಠವಾಗಲಿದೆ ಎಂದು ಶೆಟ್ಟರ್ ವಿರುದ್ಧ ಗುಡುಗಿದರು. ಬೆಂಗಳೂರಿನಲ್ಲೂ ಮೂವತ್ತು ಲಿಂಗಾಯತ ಮುಖಂಡರ ಸಭೆ ನಡೆಸಿದ್ದೇನೆ. ಕಾಂಗ್ರೆಸ್ ನಾಯಕರು ನನ್ನ ಬಗ್ಗೆ ಸಿಂಪಥಿ ಕ್ರಿಯೇಟ್ ಮಾಡುತ್ತಿದ್ದಾರೆ. ಬೇರೆಯವರಿಗೆ ಸಿಎಂ ಮಾಡಲು ನಾನು ಸ್ವತಃ ರಾಜೀನಾಮೆ ನೀಡಿದ್ದೇನೆ. ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ ಅನ್ನೋ ಮಾತನ್ನು ಪ್ರಧಾನಿಗೆ ಹೇಳಿದ್ದೆ. ಅದರಂತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ ಎಂದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ