ಮತದಾರರ ಬಳಿಗೆ ಹೋಗುವ ಮುನ್ನ ಕರ್ನಾಟಕದ 50 ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ ನಾಳೆ ಮೋದಿ ಮಾತು!
ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಮತದಾರರನ್ನು ಸೆಳೆಯಲು ಬಿಜೆಪಿಯ ರಾಷ್ಟ್ರೀಯ , ರಾಜ್ಯ ನಾಯಕರು ಭರ್ಜರಿ ಪ್ರಚಾರಕ್ಕೆ ಸಜ್ಜಾಗಿದ್ದಾರೆ. ಜೊತೆಗೆ ಮುಖ್ಯವಾಗಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಪಾತ್ರ ಬಹುಮುಖ್ಯವಾಗಿರುತ್ತದೆ. ಇದನ್ನು ಅರಿತ ಪ್ರಧಾನಿ ನರೇಂದ್ರ ಮೋದಿ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದಾರೆ.
ಬೆಂಗಳೂರು: ಕರ್ನಾಟಕದಲ್ಲಿ (Karnataka) ಮತ್ತೊಮ್ಮೆ ಅಧಿಕಾರ ಹಿಡಿಯುವ ಕಸರತ್ತಿನಲ್ಲಿರುವ ಬಿಜೆಪಿ(BJP)ನಾಯಕರು ನಾನಾ ಮತದಾರರನ್ನು ಸೆಳೆಯಲು ನಾನಾ ಪ್ರಯೋಗಳನ್ನು ಮಾಡುತ್ತಿದ್ದಾರೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಏಪ್ರಿಲ್ 29ರಿಂದ ಮೇ 7ರ ವರೆಗೂ ಕರ್ನಾಟಕದ ನಾನಾ ಭಾಗಗಳಲ್ಲಿ ರೋಡ್ ಶೋ, ಸಮಾವೇಶಗಳನ್ನು ಮಾಡುವ ಮೂಲಕ ಮತಬೇಟೆ ನಡೆಸಲಿದ್ದಾರೆ. ತಮ್ಮ ವರ್ಚಸ್ಸಿನ ಮೂಲಕ ಕರ್ನಾಟಕದ ಮತದಾರರನ್ನು ಸೆಳೆಯಲಿದ್ದಾರೆ. ಇನ್ನು ತಾವು ಪ್ರಚಾರ ಮಾಡುವುದರ ಜೊತೆಗೆ ಮತ್ತೊಂದು ಪ್ರಯತ್ನಕ್ಕೆ ಪ್ರಧಾನಿ ಕೈ ಹಾಕಿದ್ದಾರೆ. .ಮತದಾರರ ಬಳಿಗೆ ಹೋಗುವ ಮುನ್ನ ಪ್ರಧಾನಿ ಮೋದಿ ರಾಜ್ಯದ 50 ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ ತಮ್ಮ ಮನದ ಮಾತುಗಳನ್ನು ಹಂಚಿಕೊಳ್ಳಲಿದ್ದಾರೆ. ಹೌದು. ನಾಳೆ ಅಂದರೆ ಏಪ್ರಿಲ್ 27ರಂದು 50 ಲಕ್ಷ ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ. ಇದರಿಂದ ಕಾರ್ಯಕರ್ತರಲ್ಲಿಉತ್ಸಾಹ ಹೆಚ್ಚಿಸಿದೆ.
1680 ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ವರ್ಚುವಲ್ ಸಂವಾದ
ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಪಾತ್ರ ಬಹುಮುಖ್ಯವಾಗಿರುತ್ತದೆ. ಇದನ್ನು ಅರಿತ ಪ್ರಧಾನಿ ನರೇಂದ್ರ ಮೋದಿ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ಸಂವಾದ ಮಾಡುವ ಮೂಲಕ ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದು, ಏಪ್ರಿಲ್ 27 ರಂದು ಬೆಳಗ್ಗೆ 9.30ಕ್ಕೆ ಕರ್ನಾಟಕದಲ್ಲಿ ವರ್ಚುವಲ್ ಆಗಿ 50 ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದತ್ಮಕ ಸಭೆ ನಡೆಸಲಿದ್ದಾರೆ. ಇದರಲ್ಲಿ 58,112 ಬೂತ್‌ಗಳ ಪಕ್ಷದ ಕಾರ್ಯಕರ್ತರು ಸೇರಲಿದ್ದಾರೆ. 1680 ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ವರ್ಚುವಲ್ ಸಂವಾದ ವ್ಯವಸ್ಥೆ ಇರಲಿದ್ದು, ಬೆಂಗಳೂರು ಸೇರಿದಂತೆ ನಾನಾ ಜಿಲ್ಲೆಗಳ 15 ಕಡೆ ಪ್ರಧಾನಿಯವರು ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.
24 ಲಕ್ಷ ಮಂದಿ ಆ್ಯಪ್ ಡೌನ್‌ಲೋಡ್
ಬೂತ್ ಮಟ್ಟದಲ್ಲಿ 58,000 ಸ್ಥಳಗಳಲ್ಲಿಈ ಆ್ಯಪ್ ಮೂಲಕ ಕಾರ್ಯಕರ್ತರು ಆ್ಯಪ್ ಡೌನ್‌ಲೋಡ್ ಮಾಡಿ ಸಂವಾದ ವೀಕ್ಷಿಸಲಿದ್ದಾರೆ. ಎಲ್‌ಇಡಿ ಪರದೆ ಅಳವಡಿಸುವ ಕಡೆ 1,000 ಹಾಗೂ ಬೂತ್‌ಗಳಲ್ಲಿ200 ಕಾರ್ಯಕರ್ತರನ್ನು ಸಂಯೋಜಿಸಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ನಮೋ ಆ್ಯಪ್ 5,000 ಮಂದಿ ಡೌನ್‌ಲೋಡ್ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದ್ದು, ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳ 15 ಕಡೆ ಪ್ರಧಾನಿ ಮೋದಿ ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.
ಚುನಾವಣೆಗಳಲ್ಲಿ ಸಂದರ್ಭದಲ್ಲಿ ನಾಯಕರು ಬಂದು ಭಾಷಣ, ರೋಡ್ ಶೋ ಮಾಡಿ ಹೋಗುತ್ತಾರೆ. ಆದ್ರೆ, ಎಲೆಕ್ಷನ್ ಮುಗಿಯುವವರೆಗೂ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಕೆಲಸ ಬಹಳ ಮುಖ್ಯವಾಗಿರುತ್ತದೆ. ಸ್ಥಳೀಯವಾಗಿ ಹಳ್ಳಿ, ಪಟ್ಟಣ, ಏರಿಯಾ, ಓಣಿಗಳಲ್ಲಿ ಸರ್ಕಾರ ಜನಪ್ರಿಯ ಯೋಜನೆಗಳ ಬಗ್ಗೆ ಮನೆ ಮನೆಗೆ ಮನವರಿಕೆ ಮಾಡಿಕೊಡುವುದು ಕಾರ್ಯಕರ್ತರ ಕೆಲಸವಾಗಿರುತ್ದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕಾರ್ಯಕರ್ತರನ್ನು ಚುನಾವಣೆಗಾಗಿ ಅಣಿಗೊಳಿಸಲು ಸಂವಾದದ ಹುರಿದುಂಬಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಇನ್ನೊಂದೆಡೆ ಕಾರ್ಯಕರ್ತರು ಸಹ ತಮ್ಮ ನೆಚ್ಚಿನ ನಾಯಕನ ಮಾತುಗಳನ್ನು ಆಲಿಸಲು ಉತ್ಸುಕರಾಗಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:57 pm, Wed, 26 April 23