AICC Press Conference: ಸಿದ್ದರಾಮಯ್ಯ, ಡಿಕೆಶಿ ಇಬ್ಬರೂ ಸಿಎಂ ಆಗಲು ಸಮರ್ಥರು, ಅದರೆ ಒಬ್ಬರಿಗೇ ಅವಕಾಶ; ಇದು ಅಧ್ಯಕ್ಷರ ನಿರ್ಧಾರ ಎಂದ ಕಾಂಗ್ರೆಸ್
Congress Leaders on Karnataka CM Race: ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ರಾಜ್ಯವನ್ನು ಮುನ್ನಡೆಸಲು ಸಮರ್ಥರಿದ್ದಾರೆ. ಆದರೆ, ಒಬ್ಬರಿಗೆ ಮಾತ್ರ ಸಿಎಂ ಅಗಲು ಸಾಧ್ಯ. ಎಐಸಿಸಿ ಅಧ್ಯಕ್ಷರು ಸಿದ್ದರಾಮಯ್ಯರನ್ನು ಸಿಎಂ ಆಗಿ ಆಯ್ಕೆ ಮಾಡಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ರಣದೀಪ್ ಸುರ್ಜೆವಾಲ ಮತ್ತು ವೇಣುಗೋಪಾಲ್ ಹೇಳಿದ್ದಾರೆ.
ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah) ಆಯ್ಕೆಯಾಗಿದ್ದಾರೆ. ಡಿಕೆ ಶಿವಕುಮಾರ್ (DK Shivakumar) ಅವರೊಬ್ಬರೇ ಉಪ ಮುಖ್ಯಮಂತ್ರಿ ಆಗಲಿದ್ದಾರೆ. ಈ ನಿರ್ಧಾರವನ್ನು ಕಾಂಗ್ರೆಸ್ ವರಿಷ್ಠರಾದ ಕೆಸಿ ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೆವಾಲ ಪ್ರಕಟಿಸಿದ್ದಾರೆ. ಇಲ್ಲಿ ಮೇ 18, ಗುರುವಾರ ಎಐಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಇಬ್ಬರು ವರಿಷ್ಠರು ಕರ್ನಾಟಕ ಸಿಎಂ ಮತ್ತು ಡಿಸಿಎಂ ಆಯ್ಕೆ ನಿರ್ಧಾರವನ್ನು ತಿಳಿಸಿದ್ದಾರೆ. ಆದರೆ ಈ ಹಿಂದೆ ವರದಿಗಳು ಅಂದಾಜು ಮಾಡಲಾದಂತೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮಧ್ಯೆ ತಲಾ 30ತಿಂಗಳ ಅಧಿಕಾರ ಹಂಚಿಕೆ ಆಗುವುದಿಲ್ಲ. ಅಂದರೆ ಸಿದ್ದರಾಮಯ್ಯ ಅವರೇ ಪೂರ್ಣಾವಧಿಗೆ ಸಿಎಂ ಆಗಿರಲಿದ್ದಾರೆ. ರಣದೀಪ್ ಸುರ್ಜೆವಾಲ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ಮೇ 20 ಮಧ್ಯಾಹ್ನ 12ಗಂಟೆಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕೆಲ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
‘ಸಿದ್ದರಾಮಯ್ಯ, ಡಿಕೆಶಿ ಇಬ್ಬರೂ ಸಿಎಂ ಆಗಲು ಸಮರ್ಥರು; ಒಳ್ಳೆಯ ಜೋಡಿಗಳಾಗಿ ಕಾಂಗ್ರೆಸ್ ಗೆಲ್ಲಿಸಿದ್ದಾರೆ’
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ರಾಜ್ಯವನ್ನು ಮುನ್ನಡೆಸಲು ಸಮರ್ಥರಿದ್ದಾರೆ. ಕಾಂಗ್ರೆಸ್ನಲ್ಲಿ ಇನ್ನೂ ಕೆಲವರು ಸಿಎಂ ಆಗಲು ಅರ್ಹರಿದ್ದಾರೆ. ಆದರೆ, ಒಬ್ಬರಿಗೆ ಮಾತ್ರ ಸಿಎಂ ಅಗಲು ಸಾಧ್ಯ. ಎಐಸಿಸಿ ಅಧ್ಯಕ್ಷರು (ಮಲ್ಲಿಕಾರ್ಜುನ ಖರ್ಗೆ) ಸಿದ್ದರಾಮಯ್ಯರನ್ನು ಸಿಎಂ ಆಗಿ ಆಯ್ಕೆ ಮಾಡಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ರಣದೀಪ್ ಸುರ್ಜೆವಾಲ ಹೇಳಿದರು.
ಸಿದ್ದರಾಮಯ್ಯ ಒಬ್ಬ ಅನುಭವಿ ಮತ್ತು ಸಮರ್ಥ ನಾಯಕರಿದ್ದಾರೆ. ಚುನಾವಣೆಯಲ್ಲಿ ಅವರು ದಣಿವಿಲ್ಲದೇ ಓಡಾಡಿದ್ದಾರೆ. ಡಿಕೆ ಶಿವಕುಮಾರ್ ಅದ್ಭುತವಾಗಿ ಸಂಘಟನೆ ಕಟ್ಟಿದ್ದಾರೆ. ಕಾರ್ಯಕರ್ತರಿಗೆ ಉತ್ಸಾಹ ತುಂಬಿದ್ದಾರೆ. ಸಿಎಲ್ಪಿ ನಾಯಕರಾಗಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಒಳ್ಳೆಯ ಜೋಡಿಯಾಗಿ ಶ್ರಮಿಸಿ ಕಾಂಗ್ರೆಸ್ ಅನ್ನು ಗೆಲ್ಲಿಸಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್ನ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹೇಳಿದರು.
ಭಾರತ್ ಜೋಡೋ ಯಾತ್ರೆಯಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿಗೆ ಶಕ್ತಿ ಎಂದ ವರಿಷ್ಠರು
ಕರ್ನಾಟಕ ಚುನಾವಣೆ ಬಡವರು ಮತ್ತು ಶ್ರೀಮಂತರ ನಡುವಿನ ಯುದ್ಧವಾಗಿತ್ತು. ರಾಜ್ಯದಲ್ಲಿ ನಾವು ಬಡವರು ಮತ್ತು ಮಧ್ಯಮವರ್ಗದವರ ಪರ ನಿಂತೆವು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಎಲ್ಲಾ ಹಿರಿಯ ನಾಯಕರು ಈ ಗೆಲುವಿಗೆ ಅಪಾರ ಶ್ರಮಿಸಿದ್ದಾರೆ ಎಂದು ವೇಣುಗೋಪಾಲ್ ತಿಳಿಸಿದರು.
ಇದನ್ನೂ ಓದಿ: DK Shivakumar Profile: ಕಾಂಗ್ರೆಸ್ನ ಟ್ರಬಲ್ ಶೂಟರ್, ಗಟ್ಟಿ ನಿಲುವಿನ ರಾಜಕಾರಣಿ ಡಿಕೆ ಶಿವಕುಮಾರ್
ಇನ್ನು, ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿಗೆ ಮುನ್ನುಡಿ ಬರೆದದ್ದು ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ಎಂದು ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೆವಾಲ ಇಬ್ಬರೂ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮೂಲಕ ಬಹಳ ಶ್ರಮಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ಗೆ ಈ ಯಾತ್ರೆ ಶಕ್ತಿ ತುಂಬಿತ್ತು. ಸೋನಿಯಾ ಗಾಂಧಿ ಅವರ ಸಲಹೆ ಕರ್ನಾಟಕದ ಕಾಂಗ್ರೆಸ್ಗೆ ಬಲ ನೀಡಿತು. ಪ್ರಿಯಾಂಕಾ ಗಾಂಧಿ ಅವರ ರೋಡ್ ಶೋಗಳು ಕರ್ನಾಟಕದಲ್ಲಿ ಭರ್ಜರಿ ಸ್ಪಂದನೆ ಪಡೆದವು ಎಂದು ಈ ಇಬ್ಬರು ವರಿಷ್ಠರು ಹೊಗಳಿದರು.
ಕರ್ನಾಟಕ ಚುನಾವಣೆ ಮತ್ತು ರಾಜಕೀಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ