34 ಕೇಂದ್ರಗಳಲ್ಲಿ ಮತಗಳ ಎಣಿಕೆಗೆ ಕ್ಷಣಗಣನೆ, 2615 ಅಭ್ಯರ್ಥಿಗಳ ಭವಿಷ್ಯ ಇಂದೇ ನಿರ್ಧಾರ
ಅಭ್ಯರ್ಥಿಗಳಲ್ಲಿ ಕ್ಷಣಕ್ಷಣಕ್ಕೂ ತಳಮಳ.. ರಾಜಕೀಯ ನಾಯಕರಲ್ಲಿ ಟೆನ್ಷನ್.. ಕರುನಾಡ ಜನತೆಯಲ್ಲಿ ಹೆಚ್ಚಿದ ಕೌತುಕ.. ಅಭಿಮಾನಿಗಳು, ಕಾರ್ಯಕರ್ತರಲ್ಲೂ ತವಕ.. ಹೌದು ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ರಾಜ್ಯದ ಭವಿಷ್ಯ ನಿರ್ಧರಿಸುವ ಮಹಾತೀರ್ಪಿಗೆ ಕೌಂಟ್‌ಡೌನ್ ಶುರುವಾಗಿದೆ. ಇಡೀ ದೇಶದ ಚಿತ್ತ ಇದೀಗ ಕರ್ನಾಟಕದತ್ತ ನೆಟ್ಟಿದೆ..
ಬೆಂಗಳೂರು: ಕರ್ನಾಟಕ ರಾಜಕೀಯದ ದಿಕ್ಕನ್ನು ಬದಲಿಸುವ ಕ್ಷಣ ಬಂದೇ ಬಿಟ್ಟಿದೆ. ಮೇ10 ರಂದು ಒಂದೇ ಹಂತದಲ್ಲಿ ಕರ್ನಾಟಕದ 224 ಕ್ಷೇತ್ರಗಳಿಗೆ ನಡೆದಿದ್ದ ವಿಧಾನಸಭೆ ಚುನಾವಣೆಯ ಮತಗಳ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಕೆಲವೇ ಹೊತ್ತಲ್ಲಿ ಘಟಾನುಘಟಿ ರಾಜಕೀಯ ನಾಯಕರ ಭವಿಷ್ಯ ಬಯಲಾಗಲಿದೆ. ಬಹು ನಿರೀಕ್ಷಿತ ಮತ ಎಣಿಕೆ ಬೆಳಗ್ಗೆ 8 ಗಂಟೆಯಿಂದಲೇ ಆರಂಭವಾಗಲಿದೆ.. ಯಾವ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುತ್ತೆ.. ಮತದಾನೋತ್ತರ ಸಮೀಕ್ಷೆಗಳ ಭವಿಷ್ಯ ನಿಜವಾಗುತ್ತಾ.. ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರುತ್ತಾ.. ರಾಜ್ಯದಲ್ಲಿ ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರುತ್ತಾ. ಜೆಡಿಎಸ್ ಕಿಂಗ್ ಮೇಕರ್ ಆಗುತ್ತಾ ಹೀಗೆ ನಾನಾ ಲೆಕ್ಕಾಚಾರಗಳು ಗರಿಗೆದರಿವೆ.
615 ಅಭ್ಯರ್ಥಿಗಳ ಭವಿಷ್ಯ ಇಂದೇ ನಿರ್ಧಾರ
ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು 5,30,85,566 ಮತದಾರರ ಪೈಕಿ 3,88,51,807 ಜನರಿಂದ ಮತದಾನ. 26682156 ಪುರುಷರ ಪೈಕಿ 19658398 ಪುರುಷರಿಂದ ಹಕ್ಕು ಚಲಾವಣೆ ಮಾಡಲಿದ್ದಾರೆ. ಇನ್ನು 26398483 ಮಹಿಳಾ ಮತದಾರರ ಪೈಕಿ 19192372 ಸ್ತ್ರೀಯರಿಂದ ಮತದಾನವಾಗಿದ್ದು, 4927 ಮಂಗಳಮುಖಿಯರ ಪೈಕಿ 1037 ಮಂಗಳಮುಖಿಯರಿಂದ ಮತ ಚಲಾಯಿಸಿದ್ದಾರೆ. ರಾಜ್ಯದಲ್ಲಿ ಈ ಬಾರಿ ದಾಖಲೆ ಪ್ರಮಾಣದಲ್ಲಿ ಶೇ. 73.19ರಷ್ಟು ಮತಚಲಾವಣೆಯಾಗಿದೆ. ಕರ್ನಾಟಕದ 224 ಕ್ಷೇತ್ರಗಳಲ್ಲಿ ರಾಜ್ಯದ ಮತದಾರರು ಬರೆದಿರುವ 2615 ಅಭ್ಯರ್ಥಿಗಳ ಹಣೆಬರಹ ಈಗಾಗಲೇ ವಿದ್ಯುನ್ಮಾನ ಮತಯಂತ್ರಗಳಲ್ಲಿ ಭದ್ರವಾಗಿದೆ. ಇನ್ನು ಕೆಲವೇ ಹೊತ್ತಲ್ಲಿ ಅವರೆಲ್ಲರ ಹಣೆಬರಹ ನಿರ್ಧಾರವಾಗಲಿದೆ. ಬೆಳಗ್ಗೆ 8 ಗಂಟೆ ವೇಳೆಗೆ ಮತಗಳ ಎಣಿಕೆ ಪ್ರಕ್ರಿಯೆಗೆ ಚಾಲನೆ ದೊರೆಯಲಿದ್ದು, ಮೊದಲಿಗೆ ಅಂಚೆ ಮತಗಳ ಎಣಿಕೆ ಶುರುವಾಗಲಿದೆ. ನಂತರ ಇವಿಎಂ ಯಂತ್ರಗಳಲ್ಲಿನ ಮತಗಳ ಎಣಿಕೆ ಆರಂಭವಾಗಲಿದೆ. ಬೆಳಗ್ಗೆ 10 ಗಂಟೆಯ ವೇಳೆ ಯಾವ ಪಕ್ಷದ ಹಣೆಬರಹ ಏನಾಗಲಿದೆ. ಯಾವ ಪಕ್ಷಕ್ಕೆ ಮುನ್ನಡೆ ಸಾಧಿಸಲಿದೆ ಅನ್ನೋದ್ರ ಅಂದಾಜು ಟ್ರೆಂಡ್ ಗೊತ್ತಾಗಲಿದೆ..
ಪ್ರತಿ ಎಣಿಕೆಯ ಕೊಠಡಿಗೆ 10-18ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಕ್ಷೇತ್ರಕ್ಕನುಗುಣವಾಗಿ ಟೇಬಲ್‌ಗಳ ಸಂಖ್ಯೆ ಹೆಚ್ಚಳ ಮಾಡಲಾಗುತ್ತೆ. 2-3ಟೇಬಲ್‌ಗಳು ಪೋಸ್ಟಲ್ ಬ್ಯಾಲೆಟ್ ಮತಗಳ ಎಣಿಕೆಗೆ ಮೀಸಲಿಡಲಾಗಿದೆ. ಪ್ರತಿ ಟೇಬಲ್‌ಗೂ ವೆಬ್ ಕಾಸ್ಟಿಂಗ್ ವ್ಯವಸ್ಥೆಯಿದ್ದು, ಪ್ರತಿ ಎಣಿಕಾ ಕೇಂದ್ರದಲ್ಲಿ ಎಲ್ಲಾ ಕಡೆ ಸಿಸಿಟಿವಿ ಕಣ್ಗಾವಲು ಹಾಕಲಾಗಿದೆ. ಮತಎಣಿಕೆ ಕೇಂದ್ರದ ಪ್ರವೇಶಕ್ಕೆ ಪ್ರವೇಶ ಪತ್ರ, ಗುರುತಿನ ಚೀಟಿ ಕಡ್ಡಾಯ ಮಾಡಲಾಗಿದೆ. ಮೊಬೈಲ್, ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ನಿಷೇಧಿಸಲಾಗಿದೆ.
ಮತ ಎಣಿಕೆಗಾಗಿ 317 ಎಆರ್‌ಗಳ ನಿಯೋಜನೆ ಮಾಡಲಾಗಿದೆ. 4,256 ಕೌಂಟಿಂಗ್ ಉಸ್ತುವಾರಿಗಳು, 4,256 ಎಣಿಕೆ ಸಹಾಯಕರು, ಮೈಕ್ರೋ ಅಬ್ಸರ್ವರ್‌ಗಳ ನಿಯೋಜನೆ ಮಾಡಲಾಗಿದೆ. ಮತ ಎಣಿಕೆ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಹೇರಲಾಗಿದೆ. ಮತ ಎಣಿಕೆ ಕೇಂದ್ರದ 200 ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತೆ. 3ಹಂತದಲ್ಲಿ ಪೊಲೀಸ್ ಭದ್ರತಾ ವ್ಯವಸ್ಥೆ ಇರಲಿದೆ.
ಪ್ರತಿ ಕೇಂದ್ರದಲ್ಲಿ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯನ್ನ ನಿಯೋಜಿಸಲಾಗಿದೆ. ಹಾಗಾಗಿ ಮತ ಎಣಿಕೆ ಕೇಂದ್ರಗಳ ಬಳಿ 5ಕ್ಕಿಂತಲೂ ಹೆಚ್ಚು ಜನ ಗುಂಪು ಸೇರುವಂತಿಲ್ಲ. ಮೆರವಣಿಗೆ, ಸಮಾರಂಭ, ವಿಜಯೋತ್ಸವ, ಸಮಾವೇಶ ನಡೆಸುವಂತಿಲ್ಲ. ನಿನ್ನೆ ರಾತ್ರಿ 10ರಿಂದಲೇ ಇಂದು ಮಧ್ಯರಾತ್ರಿ 12ಗಂಟೆ ವರೆಗೂ ರಾಜ್ಯಾದ್ಯಂತ ಮದ್ಯ ಮಾರಾಟ ನಿರ್ಬಂಧಿಸಲಾಗಿದೆ.
ಚುನಾವಣಾ ಫಲಿತಾಂಶದ ನೇರಪ್ರಸಾರ
Published On - 6:56 am, Sat, 13 May 23