Karnataka Election: ಗೌರಿಬಿದನೂರಿನಲ್ಲಿ ಶಿವಶಂಕರ ರೆಡ್ಡಿ ಗೆಲುವಿನ ಕುದುರೆ ಕಟ್ಟಿ ಹಾಕುತ್ತಾರಾ ಶಾಸಕ ಶರತ್ ಬಚ್ಚೇಗೌಡ ಮಾವ ಪುಟ್ಟಸ್ವಾಮಿಗೌಡ? 

|

Updated on: Apr 03, 2023 | 5:29 PM

ಗೌರಿಬಿದನೂರು ಕ್ಷೇತ್ರದಲ್ಲಿ ಈವರೆಗೆ ಪಕ್ಷೇತರ ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚು ಗೆಲುವು ದಾಖಲಿಸಿದ್ದಾರೆ. ಇದರ ಹೊರತಾಗಿ ಜೆಡಿಎಸ್ ಒಂದು ಬಾರಿ ಕ್ಷೇತ್ರವನ್ನು ಗೆದ್ದುಕೊಂಡಿತ್ತು. ಆದರೆ ಈ ಕ್ಷೇತ್ರದಲ್ಲಿ ಒಮ್ಮೆಯೂ ಬಿಜೆಪಿ ಗೆಲುವು ದಾಖಲಿಸಿಲ್ಲ.

Karnataka Election: ಗೌರಿಬಿದನೂರಿನಲ್ಲಿ ಶಿವಶಂಕರ ರೆಡ್ಡಿ ಗೆಲುವಿನ ಕುದುರೆ ಕಟ್ಟಿ ಹಾಕುತ್ತಾರಾ ಶಾಸಕ ಶರತ್ ಬಚ್ಚೇಗೌಡ ಮಾವ ಪುಟ್ಟಸ್ವಾಮಿಗೌಡ? 
ಎನ್​ ಹೆಚ್​ ಶಿವಶಂಕರ ರೆಡ್ಡಿ ಮತ್ತು ಕೆ ಹೆಚ್ ಪುಟ್ಟಸ್ವಾಮಿ ಗೌಡ
Follow us on

ಚಿಕ್ಕಬಳ್ಳಾಫುರ: ಕರ್ನಾಟಕ ವಿಧಾನಸಭೆ ಚುನಾವಣೆಯ (Karnataka Assembly Election 2023) ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪ್ರತಿಸ್ಪರ್ಧಿಯನ್ನು ಕಟ್ಟಿಹಾಕಲು ವಿವಿಧ ಪಕ್ಷಗಳ ರಾಜಕೀಯ ನಾಯಕರು ತಂತ್ರ ಪ್ರತಿತಂತ್ರಗಳನ್ನು ನಡೆಸುತ್ತಿದ್ದಾರೆ. ಇದೀಗ ಗೌರಿಬಿದನೂರಿನಲ್ಲಿ (Gowribidanuru) ಎರಡೂವರೆ ದಶಕಗಳಿಂದ ಗೆಲುವಿನ ಗೆದ್ದು ಬೀಗುತ್ತಿರುವ ಕಾಂಗ್ರೆಸ್ ಶಾಸಕ ಎನ್.ಎಚ್ ಶಿವಶಂಕರ ರೆಡ್ಡಿ (NH Shivashankara Reddy) ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ ಮಾವನ ಸಜ್ಜಾಗುತ್ತಿದ್ದಾರೆ. ಹೌದು, ಶರತ್ ಬಚ್ಚೇಗೌಡ ಮಾವ ಕೆ.ಎಚ್.ಪುಟ್ಟಸ್ವಾಮಿಗೌಡ ಅವರು ಗೌರಿಬಿದನೂರು ಕ್ಷೇತ್ರದಿಂದ ಸ್ಪರ್ಧಿಸಲು ಸಜ್ಜಾಗುತ್ತಿದ್ದಾರೆ. ಯಾವುದೇ ರಾಜಕೀಯ ಪಕ್ಷದಿಂದ ಕಣಕ್ಕಿಳಿಯದೆ ಪಕ್ಷೇತರವಾಗಿ ಸ್ಪರ್ಧಿಸಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

ಕೆ.ಎಚ್.ಪುಟ್ಟಸ್ವಾಮಿಗೌಡ ಅವರು ಬಿಜೆಪಿಗೆ ಬರದೆ ಕಾಂಗ್ರೇಸ್ ಪಕ್ಷಕ್ಕೂ ಹೋಗದೆ ಗೌರಿಬಿದನೂರು ಕ್ಷೇತ್ರದ ಶಾಸಕ ಕಾಂಗ್ರೇಸ್ ಶಾಸಕ ಎನ್.ಎಚ್ ಶಿವಶಂಕರ ರೆಡ್ಡಿಗೆ ಪ್ರಬಲ ಪೈಪೋಟಿ ನೀಡಲು ತಯಾರಿ ನಡೆಸುತ್ತಿದ್ದಾರೆ. ಇದಕ್ಕಾಗಿ ಸ್ಥಳಿಯ ಕಾಂಗ್ರೇಸ್ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರುಗಳನ್ನು ಸೆಳೆಯುತ್ತಿದ್ದಾರೆ. ವೃತ್ತಿಯಲ್ಲಿ ರಿಯಲ್ ಎಸ್ಟೇಟ್ ಹಾಗೂ ಕೈಗಾರಿಕೋದ್ಯಮಿಯಾಗಿರುವ ಪುಟ್ಟಸ್ವಾಮಿಗೌಡ, ಬಿಜೆಪಿಯಿಂದ ಆಹ್ವಾನ ಬಂದರೂ ಅತ್ತ ಮುಖ ಮಾಡಿಲ್ಲ. ಸದ್ಯ ಪುಟ್ಟಸ್ವಾಮಿಗೌಡ ಅವರ ಗೌರಿಬಿದನೂರಿನಲ್ಲಿನ ರಾಜಕೀಯ ಆರ್ಭಟಕ್ಕೆ ಐದು ಬಾರಿ ಶಾಸಕರಾಗಿರುವ ಶಿವಶಂಕರ ರೆಡ್ಡಿಗೆ ನಡುಕ ಉಂಟಾಗಿದೆ.

ಗೌರಿಬಿದನೂರು ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಆ್ಯಕ್ಟಿವ್ ಆಗಿರುವ ಪುಟ್ಟಸ್ವಾಮಿ ಗೌಡರು, ಕಷ್ಟದಲ್ಲಿರುವ ಜನರಿಗೆ ದಾನದ ಮೂಲಕ ನೆರವಾಗುತ್ತಾ ಬಂದಿದ್ದಾರೆ. ಹೆಚ್ಚಿನ ಸಂಖ್ಯೆ ಬೆಂಬಲಿಗರನ್ನು ಹೊಂದಿರುವ ಇವರು ಹಲವು ಬೆಂಬಲಿಗರಿಗೆ ನಗರಸಭೆಯಲ್ಲಿ ಅಧಿಕಾರ ದೊರಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಬೆಂಬಲಿಗರ ಸಂಖ್ಯೆಯಲ್ಲಿ ಕಡಿಮೆ ಇಲ್ಲ.

ಇದನ್ನೂ ಓದಿ: Karnataka Assembly Election: 18-19 ವಯಸ್ಸಿನ ಯುವ ಮತದಾರರ ಸಂಖ್ಯೆಯಲ್ಲಿ ಏರಿಕೆ: ಶೇ 36ರಷ್ಟು ಹೊಸ ನೊಂದಣಿ

ಕಡಿಮೆ ಜನಸಂಖ್ಯೆ ಇರುವ ಗೌರಿಬಿದನೂರು ಕ್ಷೇತ್ರದಲ್ಲಿ ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಈವರೆಗೆ ಓರ್ವ ದಲಿತ ನಾಯಕ ಶಾಸಕನಾಗಲು ಸಾಧ್ಯವಾಗಿಲ್ಲ. ರೆಡ್ಡಿಗಳು, ಜೈನರು, ಬ್ರಾಹ್ಮಣರು, ಸಾದರು ಮತ್ತು ಗೊಲ್ಲ ಸಮುದಾಯದ ನಾಯಕರು ಈ ಕ್ಷೇತ್ರದಿಂದ ಶಾಸಕರಾಗಿದ್ದಾರೆ. ಅಲ್ಲದೆ ಆರು ಪಕ್ಷೇತ್ರರ ಅಭ್ಯರ್ಥಿಗಳು ಗೆದ್ದು ಶಾಸಕರಾಗಿದ್ದಾರೆ. ಹೀಗೆ 1999ರಲ್ಲಿ ಪಕ್ಷೇತರವಾಗಿ ಕಣಕ್ಕಿಳಿದು ಕಾಂಗ್ರೆಸ್ ಅಭ್ಯರ್ಥಿ ಅಶ್ವತ್ಥನಾರಾಯಣ ರೆಡ್ಡಿ ವಿರುದ್ಧ 862 ಮತಗಳಿಂದ ಗೆದ್ದಿದ್ದ ಶಿವಶಂಕರ ರೆಡ್ಡಿಯವರು ನಂತರ ನಡೆದ ರಾಜಕೀಯ ಬೆಳವಣಿಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ನಂತರ ನಾಲ್ಕು ಬಾರಿ ಚುನಾವಣೆ ಗೆದ್ದಿದ್ದಾರೆ.

ಹೇಗಿದೆ ಗೌರಿಬಿದನೂರು ಕ್ಷೇತ್ರದಲ್ಲಿನ ಜಾತಿ ಬಲ

ಸುಮಾರು 2ಲಕ್ಷ ಜನಸಂಖ್ಯೆ ಇರುವ ಗೌರಿಬಿದನೂರು ಕ್ಷೇತ್ರದಲ್ಲಿ ಹಿಂದುಳಿದ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕ್ಷೇತ್ರದಲ್ಲಿ ಸುಮಾರು 50 ಸಾವಿರದಷ್ಟು ಈ ಸಮುದಾಯದ ಮತದಾರರೇ ಇದ್ದಾರೆ. ನಂತರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪರಿಶಿಷ್ಟ ಜಾರಿಗೆ ಸೇರಿದ ಜನರು ಕ್ಷೇತ್ರದಲ್ಲಿ 40-50 ಸಾವಿರದಷ್ಟಿದ್ದರೆ, ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರು 35-40 ಸಾವಿರದಷ್ಟಿದ್ದಾರೆ. ಕುರುಬ ಸಮುದಾಯದ ಜನರು 25-30 ಸಾವಿರ, ಒಕ್ಕಲಿಗರು ಮತ್ತು ರೆಡ್ಡಿಗಳು 20-25 ಸಾವಿರ, ಸಾದರು 18 ಸಾವಿರದಷ್ಟು, ಮುಸ್ಲಿಂ ಮತಗಳು ಸುಮಾರು 20 ಸಾವಿರದಷ್ಟಿದೆ.

ಗೌರಿಬಿದನೂರಿನಲ್ಲಿ ಬಿಜೆಪಿ-ಜೆಡಿಎಸ್ ಕಥೆ ಏನು?

ಗೌರಿಬಿದನೂರು ಕ್ಷೇತ್ರದಲ್ಲಿ ಈವರೆಗೆ ಪಕ್ಷೇತರ ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚು ಗೆಲುವು ದಾಖಲಿಸಿದ್ದಾರೆ. ಇದರ ಹೊರತಾಗಿ ಜೆಡಿಎಸ್ ಒಂದು ಬಾರಿ ಕ್ಷೇತ್ರವನ್ನು ಗೆದ್ದುಕೊಂಡಿತ್ತು. 1994ರಲ್ಲಿ ಜನತಾದಳದಿಂದ ಜ್ಯೋತಿರೆಡ್ಡಿಯವರು ಗೆದ್ದಿದ್ದರು. ಬಳಿಕ ಜೆಡಿಎಸ್ ಅಭ್ಯರ್ಥಿಗಳಿಗೆ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಈ ಬಾರಿ ಸಾದರು ಸಮುದಾಯದ ಸಿಆರ್ ನರಸಿಂಹಮೂರ್ತಿಯವರನ್ನೇ ಮತ್ತೊಮ್ಮೆ ಕಣಕ್ಕಿಳಿಸುತ್ತಿದ್ದಾರೆ. ಇನ್ನು, ಕ್ಷೇತ್ರದಲ್ಲಿ ಈವರೆಗೆ ಬಿಜೆಪಿ ಒಮ್ಮೆಯೂ ಗೆಲುವು ಸಾಧಿಸಿಲ್ಲ. ಹೀಗಾಗಿ ಈ ಬಾರಿಯಾದರೂ ಕಮಲ ಅರಳಿಸಬೇಕು ಎಂದು ನಾಯಕರು ಪಣತೊಟ್ಟಿದ್ದಾರೆ. ಚಿಕ್ಕಬಳ್ಳಾಪುರದ ಶಾಸಕ, ಸಚಿವ ಡಾ. ಕೆ ಸುಧಾಕರ್ ಅವರು ಗೌರಿಬಿದನೂರಿನಲ್ಲಿ ಕ್ಷೇತ್ರ ಪರ್ಯಟನೆ ನಡೆಸಿ ಪಕ್ಷ ಸಂಘಟಿಸುತ್ತಿದ್ದಾರೆ.

ಆರು ಪಕ್ಷೇತರ ಅಭ್ಯರ್ಥಿಗಳನ್ನು ಗೆಲ್ಲಿಸಿದ ಗೌರಿಬಿದನೂರು ಕ್ಷೇತ್ರದ ಜನರು ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯು ತಯಾರಿ ನಡೆಸಿರುವ ಶಾಸಕ ಶರತ್ ಬಚ್ಚೇಗೌಡ ಅವರ ಮಾವ ಪುಟ್ಟಸ್ವಾಮಿ ಗೌಡರ ಕೈ ಹಿಡಿಯುತ್ತಾರಾ? ಅಥವಾ ಐದು ಬಾರಿ ಶಾಸಕರಾಗಿರುವ ಶಿವಶಂಕರ ರೆಡ್ಡಿಯವರೇ 6ನೇ ಬಾರಿ ಗೆಲುವು ಸಾಧಿಸುತ್ತಾರಾ? ಅಥವಾ ಕಳೆದ ಬಾರಿ ಸ್ಪರ್ಧಿಸಿ ಸೋಲುಂಡ ಜೆಡಿಎಸ್ ಅಭ್ಯರ್ಥಿ ನರಸಿಂಹಮೂರ್ತಿಯವರು ಗೆಲವು ಸಾಧಿಸುತ್ತಾರಾ? ಅಥವಾ ಹುಮ್ಮಸ್ಸಿನಿಂದ ಕ್ಷೇತ್ರ ಸುತ್ತಾಡುತ್ತಿರುವ ಸಚಿವ ಸುಧಾಕರ್ ಶ್ರಮ ಫಲಿಸಿ ಬಿಜೆಪಿ ಮೊದಲ ಬಾರಿ ಗೆಲುವು ಸಾಧಿಸುತ್ತಾ? ಎಂಬುದನ್ನು ಕಾದುನೋಡಬೇಕಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:27 pm, Mon, 3 April 23