ಬಳ್ಳಾರಿ ಗಣಿಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಸಂಸದ ಇ ತುಕಾರಾಂ ಪತ್ನಿ ಅನ್ನಪೂರ್ಣ ತುಕಾರಾಮ ಅವರು ವಿಜಯಶಾಲಿಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರಿಗೆ ಸೋಲಾಗಿದೆ.
2023ರಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದಿಂದ ಇ ತುಕಾರಾಂ ಸ್ಪರ್ಧಿಸಿ ಗೆಲವು ಸಾಧಿಸಿದ್ದರು. ಆದರೆ, 2024ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಇ ತುಕಾರಾಂ ಅವರು ಲೋಕಸಭೆಗೆ ಸ್ಪರ್ಧಿಸಿ ಗೆಲವು ಸಾಧಿಸಿದರು. ಬಳಿಕ, ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದರು.
ಹೀಗಾಗಿ, ತೆರುವಾಗಿದ್ದ ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರಿಗೆ ವಿಜಯಲಕ್ಷ್ಮಿ ಒಲೆದಿದ್ದಾಳೆ. ಇನ್ನು, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಆಪ್ತ, ಪಕ್ಷಕ್ಕೆ ನಿಷ್ಠಾವಂತನಾಗಿರುವ ಬಂಗಾರು ಹನುಮಂತು ಅವರಿಗೆ ಸೋಲಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಈ ಅನ್ನಪೂರ್ಣ ಅವರು ಬಿಜೆಪಿಯ ಬಂಗಾರ ಹನುಮಂತ ಅವರಿಗಿಂತ 9,645 ಕ್ಕೂ ಹೆಚ್ಚು ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಭರ್ಜರಿ ಬಹುಮತಗಳ ಮೂಲಕ ಗೆಲವು ಸಾಧಿಸಿರುವ ಅನ್ನಪೂರ್ಣ ಅವರಿಗೆ ಹಲವು ಅಂಶಗಳು ವರವಾಗಿವೆ. ಅನ್ನಪೂರ್ಣ ತುಕಾರಾಂ ಪತಿ ಇ ತುಕಾರಾಂ ಕಳೆದ 20 ವರ್ಷಗಳಿಂದ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಅಲ್ಲದೇ, ಸಂಸದ ತುಕಾರಾಂ ಕ್ಷೇತ್ರದ ಪ್ರತಿ ಮನೆಗೆ ಚಿರ ಪರಿಚಿತರಾಗಿದ್ದಾರೆ. ಹಾಗೇ ವೈಯಕ್ತಿವಾಗಿ ಅನ್ನಪೂರ್ಣ ತುಕಾರಾಂ ಅವರು ಕೂಡ ಕ್ಷೇತ್ರದಲ್ಲಿ ತಮ್ಮ ಪ್ರಭಾವವನ್ನು ಹೊಂದಿದ್ದಾರೆ. ಇದೇ ಪ್ರಭಾವವನ್ನು ಇಟ್ಟುಕೊಂಡು ಚುನಾವಣೆ ಸಂದರ್ಭದಲ್ಲಿ ಅನ್ನಪೂರ್ಣ ಅವರು ಮಹಿಳಾ ಮತದಾರರನ್ನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಗೆಲವಿಗೆ ಪ್ರಮುಖ ಕಾರಣವಾಗಿದೆ.
ಜೊತೆಗೆ, ಬಿಜೆಪಿ ಹೊರಗಿನ ವ್ಯಕ್ತಿಯನ್ನು ಕರೆತಂದು ಕ್ಷೇತ್ರದಲ್ಲಿ ಟಿಕೆಟ್ ಕೊಟ್ಟಿದ್ದು ಕೂಡ ಕಾಂಗ್ರೆಸ್ಗೆ ವರದಾನವಾಗಿದೆ. ಹಾಗೇ, ಸಚಿವ ಸಂತೋಷ್ ಲಾಡ್ ಅವರ ವೈಯಕ್ತಿಕ ವರ್ಚಸ್ಸು ಕೆಲಸ ಮಾಡಿದೆ. ಇದರಿಂಧ ಕಾರ್ಮಿಕರ ಮತಗಳು ಕಾಂಗ್ರೆಸ್ಗೆ ಬಂದಿವೆ.
ಸಂಡೂರಿನ ರಾಜಮನೆತನದ ಕಾರ್ತಿಕ್ ಘೋರ್ಪಡೆ ಬಿಜೆಪಿ ಪರ ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ. ಇದು ಬಿಜೆಪಿಯ ಬಂಗಾರು ಹನುಮಂತು ಸೋಲಿಗೆ ಕಾರಣವಾಗಿದೆ ಎಂಬ ಚರ್ಚೆ ಇದೆ. ಇನ್ನು ಜನಾರ್ದನ ರೆಡ್ಡಿ ಬಂದಿದ್ದನ್ನೇ ಅಸ್ತ್ರ ಮಾಡಿಕೊಂಡ ಕಾಂಗ್ರೆಸ್ ರೆಡ್ಡಿ ಮತ್ತು ಗಣಿಗಾರಿಕೆ ವಿಚಾರ ಇಟ್ಟುಕೊಂಡು ಕ್ಯಾಂಪೇನ್ ಮಾಡಿತ್ತು. ಇದರ ಜೊತೆಗೆ ರೆಡ್ಡಿ ಆಪ್ತ ಕೆ.ಎಸ್.ದಿವಾಕರ್ಗೆ ಟಿಕೆಟ್ ನಿಡದ ಅಸಮಾಧಾನವೂ ತಳಮಟ್ಟದ ಕಾರ್ಯಕರ್ತರಲ್ಲಿ ಇತ್ತು. ಇದನ್ನು ಶಮನ ಮಾಡುವಲ್ಲಿ ಬಿಜೆಪಿ ವಿಫಲವಾಗಿದೆ. ಅಲ್ಲದೇ, ಸಚಿವ ಸಂತೋಷ್ ಲಾಡ್ ಸಂಡೂರಿನಲ್ಲಿ ಹಿಡಿತ ಹೊಂದಿದ್ದು, ಅವರೇ ಕ್ಷೇತ್ರದ ಉಸ್ತುವಾರಿ ವಹಿಸಿದ್ದು ಬಿಜೆಪಿಗೆ ಮೈನಸ್ ಆಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಚುನಾವಣೆ ಫಲಿತಾಂಶದ ಲೈವ್ ಅಪ್ಡೇಟ್ ಇಲ್ಲಿದೆ
ಚುನಾವಣೆ ಫಲಿತಾಂಶ ಸಂಬಂಧಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:55 am, Sat, 23 November 24