Shiggaon Results 2024: ಶಿಗ್ಗಾಂವಿ ಫಲಿತಾಂಶ, ಯಾಸಿರ್ ಅಹಮದ್ ಖಾನ್ ಪಠಾಣ್ ಗೆಲುವು; ಮುಗ್ಗರಿಸಿದ ಭರತ್
ಶಿಗ್ಗಾಂವಿ ಉಪಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ನ ಯಾಸಿರ್ ಅಹಮದ್ ಖಾನ್ ಪಠಾಣ್ ಬಿಜೆಪಿಯ ಭರತ್ ಬೊಮ್ಮಾಯಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಬೊಮ್ಮಾಯಿ ಕುಟುಂಬದ ಮೂರನೇ ತಲೆಮಾರು ವಿಧಾನಸಭೆ ಪ್ರವೇಶಿಸುವುದು ತಪ್ಪಿದೆ. ಶಿಗ್ಗಾಂವಿ ಫಲಿತಾಂಶದ ವಿವರ ಇಲ್ಲಿದೆ.
ಹಾವೇರಿ, ನವೆಂಬರ್ 23: ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿಗೆ ಪ್ರತಿಷ್ಠೆಯ ಕಣವಾಗಿದ್ದ ಶಿಗ್ಗಾಂವಿಯಲ್ಲಿ ಬಿಜೆಪಿಯ ಭರತ್ ಬೊಮ್ಮಾಯಿಗೆ ಸೋಲಾಗಿದೆ. ಈ ಮೂಲಕ ಬೊಮ್ಮಾಯಿ ಕುಟುಂಬದ ಮೂರನೇ ತಲೆಮಾರು ವಿಧಾನಸಭೆ ಪ್ರವೇಶಿಸುವುದು ತಪ್ಪಿಹೋಗಿದೆ. ಬಂಡಾಯದ ಬಿಸಿಯ ನಡುವೆಯೂ ಸ್ಪರ್ಧಿಸಿದ್ದ ಕಾಂಗ್ರೆಸ್ನ ಯಾಸಿರ್ ಅಹಮದ್ ಖಾನ್ ಪಠಾಣ್ ಗೆಲುವು ಸಾಧಿಸಿದ್ದಾರೆ.
ಅಜ್ಜಂಪೀರ್ ಖಾದ್ರಿ ಅವರ ಬಂಡಾಯ ಕಾಂಗ್ರೆಸ್ಗೆ ಆರಂಭದಲ್ಲಿ ತುಸು ಹಿನ್ನಡೆ ತಂದಿತ್ತು. ಆದರೆ ಅದನ್ನು ಶಮನಗೊಳಿಸಿ ಚುನಾವಣೆಯಲ್ಲಿ ಯಶಸ್ಸು ಕಾಣುವಲ್ಲಿ ಕಾಂಗ್ರೆಸ್ ಸಫಲವಾಗಿದೆ. ಮತ್ತೊಂದೆಡೆ, ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಇಡೀ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮುಗ್ಗರಿಸಿತ್ತು. ಆದರೆ, ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಬೀಗಿದ್ದರು. ಈಗ ಅವರ ರಾಜೀನಾಮೆಯಿಂದ ತೆರವಾದ ಕ್ಷೇತ್ರದಲ್ಲಿ ಅವರ ಪುತ್ರ ಭರತ್ ಅಭ್ಯರ್ಥಿಯಾಗಿದ್ದರಿಂದ ಸಹಜವಾಗಿಯೇ ಬೈ–ಎಲೆಕ್ಷನ್ ರಿಸಲ್ಟ್ ಕಡೆ ಹೆಚ್ಚು ಗಮನ ಇತ್ತು.
13,448 ಮತಗಳ ಅಂತರದ ಗೆಲುವು
ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್ನ ಯಾಸೀರ್ ಪಠಾಣ್ಗೆ 13,448 ಮತಗಳ ಅಂತರದಲ್ಲಿ ಗೆಲುವು ದೊರೆತಿದೆ. ಅವರಿಗೆ 1,00,587 ಮತಗಳು ದೊರೆತಿದ್ದರೆ, ಶಿಗ್ಗಾಂವಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿಗೆ 86,960 ಮತಗಳು ದೊರೆತಿವೆ.
ಯಾಸಿರ್ ಖಾನ್ ‘ಕೈ’ ಹಿಡಿದ ಅಂಶಗಳು
ಅಜ್ಜಂಪೀರ್ ಖಾದ್ರಿ ಬಂಡಾಯ ಶಮನ ಆಗಿದ್ದು ಪಠಾಣ್ಗೆ ಪ್ಲಸ್ ಆಯಿತು. ಇಷ್ಟೇ ಅಲ್ಲ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿನ ರಣತಂತ್ರ ಹೆಣೆದಿದ್ದು, ವಾಲ್ಮೀಕಿ, ದಲಿತ ಮತದಾರರು ‘ಕೈ’ ಹಿಡಿದ ಲೆಕ್ಕಾಚಾರ ನಾಯಕರಿಗೆ ಇದೆ. ಸಚಿವ ಜಮೀರ್ ಮುಸ್ಲಿಂ ಮತದಾರರ ಓಲೈಕೆ ಮಾಡಿದ್ದು, ಪಠಾಣ್ ಪರ ಅಜ್ಜಂಪೀರ್ ಖಾದ್ರಿ ಪ್ರಚಾರ ಮಾಡಿದ್ದು, ಸಿಎಂ ಮುಡಾ ಸಂಕಷ್ಟದ ಅನುಕಂಪ ವರ್ಕೌಟ್ ಆಗಿದ್ದಲ್ಲದೇ, ಕುರುಬ ಸಮಾಜದ ಮತ ಕಾಂಗ್ರೆಸ್ಗೆ ವಾಲಿದ ನಂಬಿಕೆ ಆ ಪಕ್ಷದ ನಾಯಕರಲ್ಲಿದೆ.
ಭರತ್ ಬೊಮ್ಮಾಯಿಗೆ ಹಿನ್ನಡೆಯಾದ ಅಂಶಗಳೇನು?
ವಕ್ಫ್ ಅಸ್ತ್ರವನ್ನ ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿದ್ದು ಭರತ್ ಬೊಮ್ಮಾಯಿಗೆ ಮೈನಸ್ ಆಗಿರುವ ಸಾಧ್ಯತೆ ಇದೆ. ಅಲ್ಲದೇ ಮುಸ್ಲಿಮರ ಕಾರ್ಯಕ್ರಮದಲ್ಲಿ ವಕ್ಫ್ ಕುರಿತು ಬೊಮ್ಮಾಯಿ ಆಡಿದ್ದ ಮಾತುಗಳೂ ದುಬಾರಿಯಾಗಿಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನು ಕಾಂಗ್ರೆಸ್ ಅಹಿಂದ ಅಸ್ತ್ರ ಕೂಡ ಭರತ್ಗೆ ಕಗ್ಗಂಟಾಯಿತು ಎನ್ನಲಾಗುತ್ತಿದೆ. ಇದೆಲ್ಲಕ್ಕಿಂತಲೂ ಹೆಚ್ಚಾಗಿ, ಇಡೀ ಚುನಾವಣೆಯಲ್ಲಿ ಬೊಮ್ಮಾಯಿ ಕುಟುಂಬದ್ದೇ ಪಾರುಪತ್ಯ ಇತ್ತು. ಘಟಾನುಘಟಿ ನಾಯಕರು ಕೇವಲ ಭಾಷಣಕ್ಕಷ್ಟೇ ಸೀಮಿತರಾಗಿರುವುದು ಕೂಡಾ ಭರತ್ಗೆ ಹಿನ್ನಡೆಯುಂಟು ಮಾಡಿತು ಎನ್ನಲಾಗಿದೆ.
ಇದನ್ನೂ ಓದಿ: ಚುನಾವಣೆ ಫಲಿತಾಂಶದ ಲೈವ್ ಅಪ್ಡೇಟ್ ಇಲ್ಲಿದೆ
ಚುನಾವಣೆ ಫಲಿತಾಂಶ ಸಂಬಂಧಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ