ಚುನಾವಣೆ ಫಲಿತಾಂಶದ ಬಳಿಕ ಪಟಾಕಿ ಸಿಡಿಸಿದ್ದಕ್ಕೆ ಬಜರಂಗದಳ ಕಾರ್ಯಕರ್ತನ ಮೇಲೆ ಕಾಂಗ್ರೆಸ್ ಕಾರ್ಯಕರ್ತನಿಂದ ಹಲ್ಲೆ ಆರೋಪ
ಚುನಾವಣೋತ್ತರ ಹಿಂಸೆ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದು ಪಟಾಕಿ ಸಿಡಿಸಲಾಗಿತ್ತು. ಆಗ ಗಲಾಟೆ ಕೂಡ ನಡೆದಿತ್ತು. ಇದೇ ದ್ವೇಷದಲ್ಲಿ ಮರುದಿನ ಬಜರಂಗದಳ ಕಾರ್ಯಕರ್ತನಿಗೆ ಕಾಂಗ್ರೆಸ್ ಕಾರ್ಯಕರ್ತ ಹಲ್ಲೆ ಮಾಡಿದ್ದಾನೆ. ಕುಂಪಲ ಕೇಸರಿನಗರ ಎಂಬಲ್ಲಿ ಘಟನೆ ನಡೆದಿದೆ.
ಮಂಗಳೂರು, ಜೂನ್.06: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುಂಪಲ ಎಂಬಲ್ಲಿ ಚುನಾವಣೋತ್ತರ ಹಿಂಸೆ ನಡೆದಿದೆ. ಲೋಕಸಭಾ ಚುನಾವಣೆಯ ಫಲಿತಾಂಶ (Lok Sabha Election) ಹೊರ ಬಿದ್ದ ಬಳಿಕ ಸಂಭ್ರಮಕ್ಕಾಗಿ ಪಟಾಕಿ ಸಿಡಿಸಿದಕ್ಕೆ ಗಲಾಟೆಯಾಗಿದ್ದು ಮರು ದಿನ ಬಜರಂಗದಳ (Bajrang Dal) ಕಾರ್ಯಕರ್ತನಿಗೆ ಕಾಂಗ್ರೆಸ್ (Congress) ಕಾರ್ಯಕರ್ತನಿಂದ ಹಲ್ಲೆ ನಡೆದಿರುವ ಆರೋಪ ಕೇಳಿ ಬಂದಿದೆ. ಕುಂಪಲ ನಿವಾಸಿಯಾಗಿರುವ ಬಜರಂಗದಳ ಕಾರ್ಯಕರ್ತ ಪ್ರವೀಣ್ ಪೂಜಾರಿ ಯಾನೆ ಪಿಟ್ಟಿ (39) ಹಲ್ಲೆಗೊಳಗಾದ ವ್ಯಕ್ತಿ.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿರುವ ಸ್ಥಳೀಯ ಕೇಸರಿ ಮಿತ್ರ ವೃಂದ ಸಂಘಟನೆಯ ಸದಸ್ಯ ಗೌತಮ್ ಎಂಬಾತನಿಂದ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದ್ದು, ಗಾಯಾಳು ಪ್ರವೀಣ್ ಪೂಜಾರಿಯನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಬೋವಿ ನಿಗಮದಲ್ಲಿ ₹100 ಕೋಟಿ ಅವ್ಯವಹಾರ; ಕೋಟ ಶ್ರೀನಿವಾಸ್ ಪೂಜಾರಿ ವಿರುದ್ಧ ಗೂಳಿಹಟ್ಟಿ ಶೇಖರ್ ಆರೋಪ
ಜೂನ್ .04ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಈ ಹಿನ್ನೆಲೆ ಬಜರಂಗದಳ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಈ ವಿಚಾರದಲ್ಲಿ ಬಜರಂಗದಳ ಹಾಗೂ ಕೇಸರಿ ಮಿತ್ರ ವೃಂದದ ಸದಸ್ಯರ ನಡುವೆ ವಾಗ್ವಾದ ನಡೆದಿತ್ತು. ಈ ಘಟನೆ ಸಂಬಂಧ ದ್ವೇಷವಿದ್ದು ನಿನ್ನೆ ಪ್ರವೀಣ್ ಪೂಜಾರಿ ಕೆಲಸ ಮುಗಿಸಿ ವಾಪಸಾಗುತ್ತಿದ್ದ ವೇಳೆ ಅಡ್ಡಗಟ್ಟಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಗೌತಮ್ಗೆ ಹಲ್ಲೆ ನಡೆಸಿ ದೂಡಿದ್ದು, ಚರಂಡಿಗೆ ಬಿದ್ದ ಪ್ರವೀಣ್ ತಲೆಗೆ ಗಾಯಗಳಾಗಿವೆ.
ಹಲ್ಲೆ ನಡೆಸಿದ ಗೌತಮ್ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ಪಟಾಕಿ ಸಿಡಿಸಿದ ದ್ವೇಷಕ್ಕೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆ ವೇಳೆ ಚರಂಡಿಗೆ ಬಿದ್ದ ಕಾರಣ ಪ್ರವೀಣ್ ತಲೆಗೆ ಗಾಯಗಳಾಗಿವೆ ಎಂದು ಹೇಳಲಾಗಿದೆ. ಉಳ್ಳಾಲ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:20 am, Thu, 6 June 24