ಮತದಾನ ಮಾಡುವಾಗ ಇವಿಎಂ ತೋರಿಸಿದ ಬಿಎಸ್‌ಪಿಯ ಫಿರೋಜ್‌ಪುರ ಅಭ್ಯರ್ಥಿ, ವಿಡಿಯೊ ವೈರಲ್
ಸುರಿಂದರ್ ಕಾಂಬೋಜ್ ಅವರ ಪುತ್ರ ಜಗದೀಪ್ ಸಿಂಗ್ ಗೋಲ್ಡಿ ಬೆಹ್ಲ್ ಪಂಜಾಬ್‌ನ ಜಲಾಲಾಬಾದ್‌ನಿಂದ ಆಮ್ ಆದ್ಮಿ ಪಕ್ಷದ ಶಾಸಕರಾಗಿದ್ದಾರೆ. ಸುರಿಂದರ್ ಕಾಂಬೋಜ್ ವಿರುದ್ಧ ವಂಚನೆ ಮತ್ತು ಸುಲಿಗೆ ಸೇರಿದಂತೆ ಸುಮಾರು 14 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಏಪ್ರಿಲ್ 21 ರಂದು ಸುಲಿಗೆ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು.
ದೆಹಲಿ ಜೂನ್ 01: ಲೋಕಸಭೆ ಚುನಾವಣೆಯ ಏಳನೇ ಮತ್ತು ಕೊನೆಯ ಹಂತದ ಮತದಾನ ದೇಶಾದ್ಯಂತ ನಡೆಯುತ್ತಿದ್ದು ಫಿರೋಜ್‌ಪುರದ (Firozpur) ಬಹುಜನ ಸಮಾಜ ಪಕ್ಷದ (BSP) ಅಭ್ಯರ್ಥಿ ಸುರಿಂದರ್ ಕಾಂಬೋಜ್ (Surinder Kamboj)ಅವರು ಇವಿಎಂ ತೋರಿಸಿ ಮತ ಚಲಾಯಿಸುತ್ತಿರುವ ವಿಡಿಯೊ ವೈರಲ್ ಆಗಿದೆ. ಸುರಿಂದರ್ ಕಾಂಬೋಜ್ ಅವರ ಪುತ್ರ ಜಗದೀಪ್ ಸಿಂಗ್ ಗೋಲ್ಡಿ ಬೆಹ್ಲ್ ಪಂಜಾಬ್‌ನ ಜಲಾಲಾಬಾದ್‌ನಿಂದ ಆಮ್ ಆದ್ಮಿ ಪಕ್ಷದ (AAP) ಶಾಸಕರಾಗಿದ್ದಾರೆ. ಸುರಿಂದರ್ ಕಾಂಬೋಜ್ ವಿರುದ್ಧ ವಂಚನೆ ಮತ್ತು ಸುಲಿಗೆ ಸೇರಿದಂತೆ ಸುಮಾರು 14 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಏಪ್ರಿಲ್ 21 ರಂದು ಸುಲಿಗೆ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು.
ಅದೇ ವರ್ಷ ಅಕ್ಟೋಬರ್‌ನಲ್ಲಿ ಅವರು ಜಾಮೀನಿನ ಮೇಲೆ ಹೊರಬಂದರು. ಇದಕ್ಕೂ ಮೊದಲು 2007 ರಲ್ಲಿ, ಫಿರೋಜ್‌ಪುರದ ಬಿಎಸ್‌ಪಿ ಅಭ್ಯರ್ಥಿ ವಿರುದ್ಧ ಚಂಡೀಗಢ ಪೊಲೀಸರು ವೇಶ್ಯಾವಾಟಿಕೆ ದಂಧೆಯಲ್ಲಿ ಮತ್ತು ವಾಹನ ಕಳ್ಳತನಕ್ಕೆ ಸಂಬಂಧಿಸಿದ ಪ್ರಕರಣ ದಾಖಲಿಸಿದ್ದರು. ತಂದೆ-ಮಗ ಈ ಹಿಂದೆ ಕಾಂಗ್ರೆಸ್‌ನೊಂದಿಗೆ ಸಂಬಂಧ ಹೊಂದಿದ್ದರು. ಸುರೀಂದರ್ ಕಾಂಬೋಜ್ ಈ ಹಿಂದೆ ಜಲಾಲಾಬಾದ್‌ನ ಲ್ಯಾಂಡ್ ಮಾರ್ಟ್‌ಗೇಜ್ ಬ್ಯಾಂಕ್‌ನ ಅಧ್ಯಕ್ಷರಾಗಿದ್ದರು. ಫಾಜಿಲ್ಕಾದಲ್ಲಿ ಜಿಲ್ಲಾ ಕುಂದುಕೊರತೆ ಪರಿಹಾರ ಸಮಿತಿಯ ಸದಸ್ಯರೂ ಆಗಿದ್ದರು.
ಅವರ ಪುತ್ರ ಗೋಲ್ಡಿ ರಾಷ್ಟ್ರೀಯ ಮಟ್ಟದ ಯುವ ಕಾಂಗ್ರೆಸ್ ನಾಯಕರಾಗಿದ್ದರು. ಜಲಾಲಾಬಾದ್ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷವು ಅವರಿಗೆ ಟಿಕೆಟ್ ನಿರಾಕರಿಸಿದ ನಂತರ ಅವರು 2019 ರಲ್ಲಿ ಕಾಂಗ್ರೆಸ್ ತೊರೆಯಲು ನಿರ್ಧರಿಸಿದರು. ನಂತರ ಅವರು ಫೆಬ್ರವರಿ 2020 ರಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರಿದರು.
ಕಳೆದ ತಿಂಗಳು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬಿಜೆಪಿ ಮುಖಂಡರೊಬ್ಬರ ಅಪ್ರಾಪ್ತ ಪುತ್ರ ತನ್ನ ತಂದೆಯ ಪರವಾಗಿ ಮತ ಚಲಾಯಿಸಿದ ವಿಡಿಯೊ ವೈರಲ್ ಆಗಿತ್ತ. ಈ ಬಾಲಕ ಬಿಜೆಪಿಯ ಪಂಚಾಯತ್ ನಾಯಕ ವಿನಯ್ ಮೆಹರ್ ಅವರ ಪುತ್ರ ಎಂದು ವರದಿಯಾಗಿದೆ. ಭೋಪಾಲ್ ಮೂರನೇ ಹಂತದಲ್ಲಿ ಮೇ 7 ರಂದು ಮತದಾನ ನಡೆದಿತ್ತು. ತನ್ನ ತಂದೆಯ ಪರವಾಗಿ ಮಗ ಇವಿಎಂನಲ್ಲಿ ಮತ ಚಲಾಯಿಸುತ್ತಿದ್ದಾಗ, ಮೆಹರ್ ವಿಡಿಯೊವನ್ನು ಕ್ಲಿಕ್ ಮಾಡಿದ್ದರು. ವಿಡಿಯೊದ ಕೊನೆಯಲ್ಲಿ, “ಇನ್ನು ಸಾಕು” ಎಂದು ಮೆಹಕ್ ಹೇಳುವುದನ್ನು ಸಹ ಕೇಳಬಹುದು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ