ಬೆಂಗಳೂರು, ಜೂನ್ 4: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಅಭ್ಯರ್ಥಿ ಮಲ್ಲೇಶ್ ಬಾಬು ಗೆಲುವು ಸಾಧಿಸಿದ್ದಾರೆ. 45, 000ಕ್ಕೂ ಅಧಿಕ ಮತಗಳ ಅಂತರದಿಂದ ವಿಜಯಪತಾಕೆ ಹಾರಿಸಿದ್ದಾರೆ. ಇವರ ಸ್ಪರ್ಧಿಸಿದ್ದ ಬೆಂಗಳೂರು ಮೂಲದ ಮಾಜಿ ಮೇಯರ್ ವಿಜಯ್ ಕುಮಾರ್ ಅವರ ಪುತ್ರ ಕೆ.ವಿ. ಗೌತಮ್ ಪರಾಭವಗೊಂಡಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 1984 ರಲ್ಲಿ ಡಾ. ವೆಂಕಟೇಶ್ ಜೆ.ಡಿ.ಎಸ್ ಪಕ್ಷದಿಂದ ಜಯಗಳಿಸಿದ್ದನ್ನು ಹೊರತು ಪಡಿಸಿ ಅಲ್ಲಿಂದ ಈ ಕ್ಷೇತ್ರ ಕಾಂಗ್ರೆಸ್ ಮಯವಾಗಿತ್ತು. 1989ರಿಂದ 8 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಕೋಲಾರ ಲೋಕಸಭಾ ವ್ಯಾಪ್ತಿಯಲ್ಲಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಕ್ಷೇತ್ರದಲ್ಲಿ 1984ರಲ್ಲಿ ಡಾ. ವೆಂಕಟೇಶ್ ಜೆಡಿಎಸ್ ಅಭ್ಯರ್ಥಿಯಾಗಿ ಆಯ್ಕೆಗೊಂಡ ನಂತರ 2019ರ ವರೆಗೆ ಬೇರೆ ಯಾವುದೇ ಪಕ್ಷ ಕೋಲಾರ ಕ್ಷೇತ್ರದಲ್ಲಿ ಜಯಗಳಿಸಿಲ್ಲ. 1989ರಲ್ಲಿ ರಾಮಕೃಷ್ಣ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾದರು.
ಅದಾದ ನಂತರ 1991 ರಲ್ಲಿ ಬಂದ ಉಪಚುನಾವಣೆಯಲ್ಲಿ ಹಾಲಿ ಆಹಾರ ಸಚಿವ ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಸ್ಪರ್ಧಿಸಿ ಸತತವಾಗಿ 7 ಬಾರಿ ಸಂಸದರಾಗಿ ಆಯ್ಕೆಯಾಗುವ ಮೂಲಕ ಕೋಲಾರವನ್ನು ಕಾಂಗ್ರೆಸ್ ಪಕ್ಷದ ಭದ್ರಕೋಟೆಯನ್ನಾಗಿ ಮಾಡಿದ್ದರು. ನಂತರ ಅವರು ಕಳೆದ 2019 ರ ಚುನಾವಣೆಯಲ್ಲಿ ಕೆಹೆಚ್ ಮುನಿಯಪ್ಪ ವಿರೋಧಿ ಅಲೆ ಹಾಗೂ ಕಾಂಗ್ರೆಸ್ ಪಕ್ಷದಲ್ಲಿನ ಗುಂಪುಗಾರಿಕೆ ಪರಿಣಾಮವಾಗಿ ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ಎಸ್. ಮುನಿಸ್ವಾಮಿ ವಿರುದ್ದ ಕೆ.ಹೆಚ್. ಮುನಿಯಪ್ಪ ಸೋಲು ಅನುಭವಿಸುವ ಮೂಲಕ ಕಾಂಗ್ರೆಸ್ ಭದ್ರಕೋಟೆಯಲ್ಲಿ ಕಮಲ ಅರಳಿತ್ತು.
ಆದರೆ ಈ ಬಾರಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬದಲಾದ ಬೆಳವಣಿಗೆಯಿಂದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾದ ಪರಿಣಾಮ ಈ ಬಾರಿ ಹಾಲಿ ಬಿಜೆಪಿ ಸಂಸದ ಎಸ್. ಮುನಿಸ್ವಾಮಿ ಅವರಿಗೆ ಟಿಕೆಟ್ ಕೈತಪ್ಪಿದ್ದು, ಅದಕ್ಕೆ ಬದಲಾಗಿ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ಪಕ್ಷದ ಎಂ ಮಲ್ಲೇಶ್ ಬಾಬು ಅವರು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಇನ್ನು ಕಾಂಗ್ರೆಸ್ನಿಂದ ಹೊಸ ಮುಖ ಬೆಂಗಳೂರು ಮೂಲದ ಮಾಜಿ ಮೇಯರ್ ವಿಜಯ್ ಕುಮಾರ್ ಅವರ ಪುತ್ರ ಕೆ.ವಿ. ಗೌತಮ್ ಅವರನ್ನು ಕಣಕ್ಕಿಳಿಸಲಾಗಿತ್ತು.
Also Read: Election Results 2024 Live – ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಕೌಂಟ್ ಡೌನ್, ಕ್ಷಣ ಕ್ಷಣದ ಅಪ್ಡೇಟ್ಸ್ ಇಲ್ಲಿದೆ
ಸದ್ಯ ಚುನಾವಣೆಯಲ್ಲಿ ಸ್ಥಳೀಯ ಹಾಗೂ ಹೊರಗಿನ ಅಭ್ಯರ್ಥಿ ಎನ್ನುವ ಮೂಲಕ ಚುನಾವಣೆಯಲ್ಲಿ ಪ್ರಚಾರ ನಡೆಯಿತು. ಕಾಂಗ್ರೆಸ್ ತಮ್ಮ ಗ್ಯಾರಂಟಿಗಳ ಆಧಾರದಲ್ಲಿ ಮತಯಾಚನೆ ಮಾಡಿದ್ದು, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳು ಮೋದಿ ಹೆಸರಲ್ಲಿ ಪ್ರಚಾರ ಮಾಡಿ ಬಿಜೆಪಿ ಹಾಗೂ ಜೆಡಿಎಸ್ ಸಾಧನೆಗಳನ್ನು ಹಾಗೂ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಟ್ಟು ಮತ ಕೇಳಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕ್ಷೇತ್ರ, ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಒಳಪಡುತ್ತವೆ. ಕೋಲಾರ ಇಲ್ಲಿಯ ಆರು ವಿಧಾನಸಭಾ ಕ್ಷೇತ್ರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳನ್ನು ಒಂದುಗೂಡಿಸಿ ಕೋಲಾರ ಲೋಕಸಭಾ ಕ್ಷೇತ್ರವನ್ನು ಮಾಡಲಾಗಿದೆ. ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಕೋಲಾರ, ಮಾಲೂರು, ಬಂಗಾರಪೇಟೆ, ಕೆಜಿಎಫ್, ಶ್ರೀನಿವಾಸಪುರ, ಮುಳಬಾಗಿಲು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಹಾಗೂ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಗಳು ಇದರ ವ್ಯಾಪ್ತಿಗೆ ಒಳಪಡುತ್ತವೆ. ಅಂದಹಾಗೆ ಕ್ಷೇತ್ರದಲ್ಲಿ 17,26,914 ಮತದಾರರಿದ್ದು ಏಪ್ರಿಲ್ 26 ಶುಕ್ರವಾರದಂದು ನಡೆದಿದ್ದ ಮೊದಲ ಹಂತದ ಮತದಾನದಲ್ಲಿ ಶೇಕಡಾ 78.27 ಪ್ರಮಾಣದ ಮತದಾನವಾಗಿತ್ತು.
ಇನ್ನು ಕಳೆದ ನಾಲ್ಕು ಲೋಕಸಭಾ ಚುನಾವಣೆಯ ವಿವರ ಯಾರಿಗೆ ಎಷ್ಟೆಷ್ಟು ಮತ ಬಂದಿದೆ…
2004 ರ ಲೋಕಸಭಾ ಚುನಾವಣೆ
ಕೆ.ಎಚ್.ಮುನಿಯಪ್ಪ – ಗೆಲುವು (ಕಾಂಗ್ರೆಸ್ ಪಕ್ಷ) – ಪಡೆದ ಮತ 3,85,582
ಡಿ.ಎಸ್. ವೀರಯ್ಯ – ಸೋಲು (ಬಿಜೆಪಿ ಪಕ್ಷ) – ಪಡೆದ ಮತ 3,73,947
ಎಸ್.ಎಲ್.ಗಂಗಾಧರಪ್ಪ – ಸೋಲು (ಜೆಡಿಎಸ್ ಪಕ್ಷ) – ಪಡೆದ ಮತ 83,433
ಕಾಂಗ್ರೆಸ್ ಪಕ್ಷದ ಕೆ.ಎಚ್.ಮುನಿಯಪ್ಪಗೆ 11,635 ಮತಗಳ ಅಂತರದಿಂದ ಗೆಲುವು
2009ರ ಲೋಕಸಭಾ ಚುನಾವಣೆ
ಕೆ.ಎಚ್.ಮುನಿಯಪ್ಪ – ಗೆಲುವು (ಕಾಂಗ್ರೆಸ್ ಪಕ್ಷ) – ಪಡೆದ ಮತ 3,44,771
ಡಿ.ಎಸ್.ವೀರಯ್ಯ – ಸೋಲು (ಬಿಜೆಪಿ ಪಕ್ಷ) – ಪಡೆದ ಮತ 3,21,765
ಸಿ.ಚಂದ್ರಪ್ಪ – ಸೋಲು (ಜೆಡಿಎಸ್ ಪಕ್ಷ) – ಪಡೆದ ಮತ 1,99,896
ಕಾಂಗ್ರೆಸ್ ಪಕ್ಷದ ಕೆ.ಎಚ್.ಮುನಿಯಪ್ಪ 23,006 ಮತಗಳ ಅಂತರದಿಂದ ಗೆಲುವು
2014ರ ಲೋಕಸಭಾ ಚುನಾವಣೆ
ಕೆ.ಎಚ್.ಮುನಿಯಪ್ಪ – ಗೆಲುವು (ಕಾಂಗ್ರೆಸ್ ಪಕ್ಷ) – 4,18,926
ಕೋಲಾರ ಕೇಶವ – ಸೋಲು (ಜೆಡಿಎಸ್ ಪಕ್ಷ) – 3,71,076
ಎಂ.ನಾರಾಯಣಸ್ವಾಮಿ – ಸೋಲು (ಬಿಜೆಪಿ ಪಕ್ಷ) – 2,67,322
ಕಾಂಗ್ರೆಸ್ ಪಕ್ಷದ ಕೆ.ಎಚ್.ಮುನಿಯಪ್ಪ 47,850 ಮತಗಳ ಅಂತರದಿಂದ ಗೆಲುವು
2019ರ ಲೋಕಸಭಾ ಚುನಾವಣೆ
ಎಸ್.ಮುನಿಸ್ವಾಮಿ – ಗೆಲುವು (ಬಿಜೆಪಿ ಪಕ್ಷ) – 7,09,165
ಕೆ.ಎಚ್.ಮುನಿಯಪ್ಪ – ಸೋಲು (ಕಾಂಗ್ರೆಸ್-ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿ) – 4,99,144
ನೋಟಾ – 13,889
ಬಿಜೆಪಿ ಪಕ್ಷದ ಎಸ್.ಮುನಿಸ್ವಾಮಿ 2,10,021 ಮತಗಳ ಅಂತರದಿಂದ ಗೆಲುವು
ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:32 am, Tue, 4 June 24