Lok Sabha Election 2024 Phase 2 Voting Highlights: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳ ಮೊದಲ ಹಂತದ ಮತದಾನ ಅಂತ್ಯ: ಹೀಗಿದೆ ಕ್ಷೇತ್ರವಾರು ಮತದಾನದ ವಿವರ

| Updated By: ಗಂಗಾಧರ​ ಬ. ಸಾಬೋಜಿ

Updated on: Apr 26, 2024 | 8:09 PM

Lok Sabha Election 2024 Phase 2 Voting Highlights News and Updates in Kannada: ತೀವ್ರ ಕುತೂಹಲ ಮೂಡಿಸಿದ್ದ ಕರ್ನಾಟಕದ ಲೋಕಸಭಾ ಚುನಾವಣೆಯ 14 ಕ್ಷೇತ್ರಗಳ ಮೊದಲ ಹಂತದ ಮತದಾನ ಇಂದು (ಏಪ್ರಿಲ್ 26, ಶುಕ್ರವಾರ) ಸಂಜೆ ಮುತ್ತಾಯವಾಗಿದೆ. ಸಣ್ಣ ಪುಟ್ಟ ಗೊಂದಲಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಕಡೆ ಶಾಂತಿಯುತ ಮತದಾನವಾಗಿದೆ. ಹಾಗಾದ್ರೆ, ಯಾವ್ಯಾವ ಲೋಕಸಭಾ ಕ್ಷೇತ್ರದಲ್ಲಿ ಎಷ್ಟೆಷ್ಟು ಮತದಾನವಾಗಿದೆ ಎನ್ನುವ ವಿವರ ಇಲ್ಲಿದೆ.

Lok Sabha Election 2024 Phase 2 Voting Highlights: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳ ಮೊದಲ ಹಂತದ ಮತದಾನ ಅಂತ್ಯ: ಹೀಗಿದೆ ಕ್ಷೇತ್ರವಾರು ಮತದಾನದ ವಿವರ
ಲೋಕಸಭೆ ಚುನಾವಣೆ ಎರಡನೇ ಹಂತದ ಮತದಾನದ ಲೈವ್ ಅಪ್​​ಡೇಟ್ಸ್

ಬೆಂಗಳೂರು, ಏಪ್ರಿಲ್ 26: ಲೋಕಸಭಾ ಚುನಾವಣೆಯ (Lok Sabha Elections) ಎರಡನೇ ಹಂತದ ಮತದಾನ ಅಂತ್ಯವಾಗಿದೆ. ಇದರಲ್ಲಿ ಕರ್ನಾಟಕದ (Karnataka Voting) 14 ಕ್ಷೇತ್ರಗಳು ಸೇರಿದಂತೆ 13 ರಾಜ್ಯಗಳ 89 ಲೋಕಸಭಾ ಕ್ಷೇತ್ರಗಳು (Lok Sabha Constituencies) ಸೇರಿವೆ. ಎರಡನೇ ಹಂತದ ಚುನಾವಣೆಯಲ್ಲಿ ಅಸ್ಸಾಂನ 5, ಬಿಹಾರದ 5, ಛತ್ತೀಸ್‌ಗಢದ 3, ಕರ್ನಾಟಕದ 14, ಕೇರಳದ 20, ಮಧ್ಯಪ್ರದೇಶದ 7, ಮಹಾರಾಷ್ಟ್ರದ 8, ಮಣಿಪುರದ 1, ರಾಜಸ್ಥಾನದ 13, ತ್ರಿಪುರಾದ 1, ಉತ್ತರ ಪ್ರದೇಶದ 8, ಪಶ್ಚಿಮ ಬಂಗಾಳದ 3 ಮತ್ತು ಜಮ್ಮು ಮತ್ತು ಕಾಶ್ಮೀರದ 1 ಲೋಕಸಭಾ ಕ್ಷೇತ್ರಗಳಲ್ಲಿ ಇಂದು(ಏಪ್ರಿಲ್ 26) ನಡೆದಿದ್ದ  ಮತದಾನ ಪ್ರಕ್ರಿಯೆ ಅಂತ್ಯವಾಗಿದೆ. ಜೂನ್ 1ರಂದು ಅಂತಿಮ ಹಂತದ ಮತದಾನ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ಅದೇ ದಿನ ಫಲಿತಾಂಶ ಪ್ರಕಟಗೊಳ್ಳಲಿದೆ. ಎರಡನೇ ಹಂತದ ಮತದಾನದ ಸಂಪೂರ್ಣ ವಿವರ ಇಲ್ಲಿದೆ.

ಚುನಾವಣೆ ಸಂಬಂಧಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

LIVE NEWS & UPDATES

The liveblog has ended.
  • 26 Apr 2024 08:08 PM (IST)

    ಯಾವ ಕ್ಷೇತ್ರದಲ್ಲಿ ಶೇಕಡವಾರು ಮತದಾನ ಎಷ್ಟಾಗಿದೆ?

    ಕರ್ನಾಟಕದ ಲೋಕಸಭಾ ಚುನಾವಣೆಯ 14 ಕ್ಷೇತ್ರಗಳ ಮೊದಲ ಹಂತದ ಮತದಾನ ಇಂದು (ಏಪ್ರಿಲ್ 26, ಶುಕ್ರವಾರ) ಸಂಜೆ ಮುತ್ತಾಯವಾಗಿದೆ. ಸಂಜೆ 7.30ರವರೆಗಿನ ಮತ ಲೆಕ್ಕಾಚಾರದಲ್ಲಿ ರಾಜ್ಯದ 14 ಕ್ಷೇತ್ರದಲ್ಲಿ ಶೇಕಡಾ 65ರಷ್ಟು ಮತದಾನವಾಗಿದೆ. ಇದರಲ್ಲಿ ಅತಿ ಕಡಿಮೆ ಬೆಂಗಳೂರು ಸೆಂಟ್ರಲ್‌ನಲ್ಲಿ 49 ಪರ್ಸೆಂಟ್ ವೋಟಿಂಗ್ ಆಗಿದೆ. ಬೆಂಗಳೂರು ಉತ್ತರದಲ್ಲಿ 51 ಪರ್ಸೆಂಟ್, ಬೆಂಗಳೂರು ಗ್ರಾಮಾಂತರದಲ್ಲಿ ಶೇಕಡಾ 61ರಷ್ಟು ಮತದಾನವಾಗಿದೆ. ಇನ್ನೂ ಬೆಂಗಳೂರು ದಕ್ಷಿಣದಲ್ಲಿ 49ರಷ್ಟು ವೋಟಿಂಗ್ ಆಗಿದೆ. ಚಾಮರಾಜನಗರದಲ್ಲಿ 69, ಚಿಕ್ಕಬಳ್ಳಾಪುರದಲ್ಲಿ 71, ಚಿತ್ರದುರ್ಗದಲ್ಲಿ 67, ದಕ್ಷಿಣ ಕನ್ನಡದಲ್ಲಿ 72, ಹಾಸನದಲ್ಲಿ 72, ಕೋಲಾರದಲ್ಲಿ 73ರಷ್ಟು ಮತದಾನವಾಗಿದೆ. ಇನ್ನೂ ಮಂಡ್ಯದಲ್ಲಿ ಅತಿ ಹೆಚ್ಚು ಅಂದ್ರೆ, 74.87ರಷ್ಟು ವೋಟಿಂಗ್ ಆಗಿದೆ. ಮೈಸೂರಲ್ಲಿ 66, ತುಮಕೂರು ಮತ್ತು ಚಿಕ್ಕಮಗಳೂರಲ್ಲಿ 72ರಷ್ಟು ಮತದಾನವಾಗಿದೆ.

  • 26 Apr 2024 06:49 PM (IST)

    ಮತದಾನದ ಅವಧಿ ಮುಕ್ತಾಯ

    ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ ಎರಡನೇ ಹಂತದಲ್ಲಿ ನಡೆದ ಮತದಾನ ಪ್ರಕ್ರಿಯೆ ಅವಧಿ ಮುಕ್ತಾಯವಾಗಿದೆ.  ಚಾಮರಾನಗರ ಜಿಲ್ಲೆಯ ಇಂಡಿಗನತ್ತ ಗ್ರಾಮದಲ್ಲಿ ಗಲಾಟೆ ನಡೆದಿರುವುದು ಬಿಟ್ಟರೆ ಕೆಲವೆಡೆ ಮಾತಿನ ಚಕಮಕಿಗಳು ಆಗಿವೆ ಅಷ್ಟೇ. ಇನ್ನುಳಿದಂತೆ ಯಾವುದೇ ಅಹಿತಕರ ಘಟನೆಗಳು ನಡೆಯದೆ ಶಾಂತಿಯುತವಾಗಿ ಮತದಾನವಾಗಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ.


  • 26 Apr 2024 05:43 PM (IST)

    ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ 5 ಗಂಟೆವರೆಗೆ ಶೇ 63.90ರಷ್ಟು ಮತದಾನ

    ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಸಂಜೆ 5 ಗಂಟೆವರೆಗೆ ಶೇಕಡಾ 63.90ರಷ್ಟು ಮತದಾನವಾಗಿದೆ. ಇನ್ನು ಯಾವ್ಯಾವ ಕ್ಷೇತ್ರಗಳಲ್ಲಿ ಎಷ್ಟೆಷ್ಟು ಮತದಾನವಾಗಿದೆ ಎನ್ನುವುದು ಈ ಕೆಳಗಿನಂತಿದೆ.

    • ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಶೇಕಡಾ 48.61ರಷ್ಟು ಮತದಾನ
    • ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಶೇಕಡಾ 50.04ರಷ್ಟು ಮತದಾನ
    • ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಶೇಕಡಾ 61.78ರಷ್ಟು ಮತದಾನ
    • ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಶೇಕಡಾ 49.37ರಷ್ಟು ಮತದಾನ
    • ಚಾಮರಾಜನಗರ ಕ್ಷೇತ್ರದಲ್ಲಿ ಶೇಕಡಾ 69.60ರಷ್ಟು ಮತದಾನ
    • ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 70.97ರಷ್ಟು ಮತದಾನ
    • ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 67ರಷ್ಟು ಮತದಾನ
    • ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 71.83ರಷ್ಟು ಮತದಾನ
    • ಹಾಸನ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 72.13ರಷ್ಟು ಮತದಾನ
    • ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 71.26ರಷ್ಟು ಮತದಾನ
    • ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 74.87ರಷ್ಟು ಮತದಾನ
    • ಮೈಸೂರು-ಕೊಡಗು ಕ್ಷೇತ್ರದಲ್ಲಿ ಶೇಕಡಾ 65.85ರಷ್ಟು ಮತದಾನ
    • ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 72.10ರಷ್ಟು ಮತದಾನ
    • ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೇಕಡಾ 72.13ರಷ್ಟು ಮತದಾನ
  • 26 Apr 2024 05:03 PM (IST)

    ಮತದಾನ ಬಹಿಷ್ಕಾರಿಸಿದ್ದ ಸಿದ್ದಾಪುರ ಗ್ರಾಮಸ್ಥರ ಮನವೊಲಿಸಿದ ಸ್ವಾಮೀಜಿ

    ಗಣಿಬಾಧಿತ ಪ್ರದೇಶ ಪಟ್ಟಿಗೆ ಸೇರಿಸುವಂತೆ ಚಿತ್ರದುರ್ಗ ತಾಲೂಕಿನ ಸಿದ್ದಾಪುರ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅಲ್ಲದೇ ಡಿಎಂಎಫ್ ಫಂಡ್ ಇಲ್ಲದೆ ಗ್ರಾಮ ಅಭಿವೃದ್ಧಿ ಆಗಿಲ್ಲ ಎಂದು ಇಂದು ಮತದಾನ ಮಾಡದೆ ಬಹಿಷ್ಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದಾಪುರದ ಮತಗಟ್ಟೆ ಸಂಖ್ಯೆ 76ರಲ್ಲಿ ಈವರೆಗೆ ಮತದಾನವಾಗಿಲ್ಲ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸಿದ್ಧಾಪುರ ಗ್ರಾಮಕ್ಕೆ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀ ಭೇಟಿ ನೀಡಿ ಮತದಾನ ಮಾಡುವಂತೆ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದ್ರೆ, ಈ ವೇಳೆ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊನೆಗೆ ಶ್ರೀಗಳು ಗ್ರಾಮದ ಅಭಿವೃದ್ಧಿ ಬಗ್ಗೆ ಭರವಸೆ ನೀಡುವ ಮೂಲಕ ಜನರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಸಿದ್ದಾಪುರ ಗ್ರಾಮಸ್ಥರು ಮತದಾನ ಮಾಡಲು ಮತಗಟ್ಟೆಗೆ ಬಂದಿದ್ದಾರೆ.

  • 26 Apr 2024 04:25 PM (IST)

    ಇಂಡಿಗನತ್ತ ಗ್ರಾಮದ ಮತಗಟ್ಟೆ ಧ್ವಂಸ

    ಚಾಮರಾಜನಗರ ಲೋಕಸಭಾ ಕ್ಷೇತ್ರದ (Chamarajanagar Lok Sabha constituency) ಮಹದೇಶ್ವರಬೆಟ್ಟ ವ್ಯಾಪ್ತಿಯ ಐದು ಗ್ರಾಮಗಳಲ್ಲಿ ಮತದಾನವನ್ನು ಬಹಿಷ್ಕರಿಸಲಾಗಿದೆ. ಇದೇ ವೇಳೆ ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆಯನ್ನೇ ಧ್ವಂಸ ಮಾಡಲಾಗಿದೆ. ಯಾವುದೇ ಮೂಲ ಸೌಕರ್ಯವಿಲ್ಲವೆಂದು ರೊಚ್ಚಿಗೆದ್ದ ಇಂಡಿಗನತ್ತ ಗ್ರಾಮಸ್ಥರು ಮತಗಟ್ಟೆ ಮೇಲೆ ದಾಳಿ ಮಾಡಿ ಮತಯಂತ್ರಗಳನ್ನು ಪೀಸ್ ಪೀಸ್ ಮಾಡಿದ್ದಾರೆ.

    ಮತದಾನದಿಂದ ದೂರ ಉಳಿದ ಗ್ರಾಮಸ್ಥರಿಂದ ಈ ಕೃತ್ಯ ನಡೆದಿದೆ. ಈ ವೇಳೆ ಗ್ರಾಮಸ್ಥರ ಮನವೊಲಿಕೆಗೆ ತೆರಳಿದ್ದ ಅಧಿಕಾರಿಗಳ ಮೇಲೆಯೂ ಹಲ್ಲೆ ನಡೆಸಲಾಗಿದೆ. ಆಕ್ರೋಶಗೊಂಡ ಹಲವರು ಇವಿಎಂ, ಮೇಜು ಕುರ್ಚಿ ಮತಗಟ್ಟೆ ಸಾಮಗ್ರಿಗಳನ್ನು ಧ್ವಂಸ ಮಾಡಿದ್ದಾರೆ. ಬಳಿಕ ಸ್ಥಳದಲ್ಲಿ ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಇದೇ ವೇಳೆ ತಿರುಗಿಬಿದ್ದ ಜನರು ಸಹ ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ.

  • 26 Apr 2024 03:42 PM (IST)

    Lok Sabha Election Voting LIVE: ರಾಜ್ಯದ 14 ಕ್ಷೇತ್ರಗಳಲ್ಲಿ 3 ಗಂಟೆ ವರೆಗೆ ಶೇ 50.93ರಷ್ಟು ಮತದಾನ

    ಲೋಕಸಭೆ ಚುನಾವಣೆಯ 2ನೇ ಹಂತದ ಮತದಾನ ನಡೆಯುತ್ತಿದ್ದು, ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದೆ. ರಾಜ್ಯದ 14 ಕ್ಷೇತ್ರಗಳಲ್ಲಿ ಮಧ್ಯಾಹ್ನ 3 ಗಂಟೆಯ ವರೆಗೆ ಶೇಕಡಾ 50.93ರಷ್ಟು ಮತದಾನವಾಗಿದೆ. ಹಾಗಾದ್ರೆ, ಯಾವ್ಯಾವ ಕ್ಷೇತ್ರಗಳಲ್ಲಿ ಎಷ್ಟೆಷ್ಟು ಮತದಾನವಾಗಿದೆ ಎನ್ನುವುದನ್ನು ನೋಡುವುದಾದರೆ

    • ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಶೇಕಡಾ 40.10ರಷ್ಟು ಮತದಾನ
    • ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಶೇಕಡಾ 41.12ರಷ್ಟು ಮತದಾನ
    • ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಶೇಕಡಾ 49.62ರಷ್ಟು ಮತದಾನ
    • ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಶೇಕಡಾ 40.77ರಷ್ಟು ಮತದಾನ
    • ಚಾಮರಾಜನಗರ ಕ್ಷೇತ್ರದಲ್ಲಿ ಶೇಕಡಾ 54.82ರಷ್ಟು ಮತದಾನ
    • ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 55.90ರಷ್ಟು ಮತದಾನ
    • ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 52.14ರಷ್ಟು ಮತದಾನ
    • ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 58.76ರಷ್ಟು ಮತದಾನ
    • ಹಾಸನ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 55.92ರಷ್ಟು ಮತದಾನ
    • ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 54.66ರಷ್ಟು ಮತದಾನ
    • ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 57.44ರಷ್ಟು ಮತದಾನ
    • ಮೈಸೂರು-ಕೊಡಗು ಕ್ಷೇತ್ರದಲ್ಲಿ ಶೇಕಡಾ 53.55ರಷ್ಟು ಮತದಾನ
    • ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 56.62ರಷ್ಟು ಮತದಾನ
    • ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೇಕಡಾ 57.49ರಷ್ಟು ಮತದಾನ
  • 26 Apr 2024 02:32 PM (IST)

    Lok Sabha Election Voting LIVE: ಕರ್ನಾಟಕದ 14 ಕ್ಷೇತ್ರಗಳಲ್ಲಿ ಶೇ 38.23ರಷ್ಟು ಮತದಾನ

    ಲೋಕಸಭೆ ಚುನಾವಣೆಯ 2ನೇ ಹಂತದ ಮತದಾನ ನಡೆಯುತ್ತಿದ್ದು, ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದೆ. ರಾಜ್ಯದ 14 ಕ್ಷೇತ್ರಗಳಲ್ಲಿ ಮಧ್ಯಾಹ್ನ 1 ಗಂಟೆಯ ವರೆಗೆ ಶೇ 38.23ರಷ್ಟು ಮತದಾನವಾಗಿದೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಶೇಕಡಾ 30.10ರಷ್ಟು, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಶೇಕಡಾ 32.25ರಷ್ಟು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಶೇಕಡಾ 36.09ರಷ್ಟು, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಶೇಕಡಾ 31.51ರಷ್ಟು, ಚಾಮರಾಜನಗರ ಕ್ಷೇತ್ರದಲ್ಲಿ ಶೇಕಡಾ 39.57ರಷ್ಟು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 39.85ರಷ್ಟು, ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 39.05ರಷ್ಟು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 48.10ರಷ್ಟು, ಹಾಸನ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 40.99ರಷ್ಟು, ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 38.42ರಷ್ಟು, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 40.70ರಷ್ಟು, ಮೈಸೂರು-ಕೊಡಗು ಕ್ಷೇತ್ರದಲ್ಲಿ ಶೇಕಡಾ 41.58ರಷ್ಟು, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 41.91ರಷ್ಟು ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೇಕಡಾ 46.43ರಷ್ಟು ಮತದಾನವಾಗಿದೆ.

  • 26 Apr 2024 02:29 PM (IST)

    Lok Sabha Election Voting LIVE: ಬೆಂಗಳೂರು ದಕ್ಷಿಣದಲ್ಲಿ ಶೇ 31.51 ರಷ್ಟು ಮತದಾನ

    ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇ 31.51 ರಷ್ಟು ಮತದಾನವಾಗಿದೆ. ಕ್ಷೇತ್ರದ ವ್ಯಾಪ್ತಿಯ ಬಿಟಿಎಂ ಲೇಔಟ್ ಶೇ 28.77, ಬಸವನಗುಡಿ ಶೇ 34.27, ಬೊಮ್ಮನಹಳ್ಳಿ ಶೇ 28.79, ಚಿಕ್ಕಪೇಟೆ ಶೇ 32.20, ಗೋವಿಂದರಾಜನಗರ ಶೇ 31.07, ಜಯನಗರ ಶೇ 35.80, ಪದ್ಮನಾಭ ನಗರ ಶೇ.35.82, ವಿಜಯನಗರ ಶೇ.28.97 ಮತದಾನಕ್ಕೆ ಸಾಕ್ಷಿಯಾದವು.

  • 26 Apr 2024 01:52 PM (IST)

    Lok Sabha Election Voting LIVE: ನೋಟಾಗೆ ಹೆಚ್ಚು ಮತ ಬಂದರೆ ಮರುಚುನಾವಣೆ; ಆಯೋಗಕ್ಕೆ ಸುಪ್ರೀಂ ನೋಟಿಸ್

    ನೋಟಾಗೆ ಹೆಚ್ಚು ಮತ ಬಂದರೆ ಮರುಚುನಾವಣೆ ನಡೆಸುವ ಬಗ್ಗೆ ಸಲ್ಲಿಕೆಯಾಗಿರುವ ಅರ್ಜಿಯನ್ನು ಗಣನೆಗೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್, ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿದೆ. ಚುನಾವಣೆಯಲ್ಲಿ ನೋಟಾಗೆ ಅತಿ ಹೆಚ್ಚು ಮತ ಬಂದರೆ, ಆ ಕ್ಷೇತ್ರದಲ್ಲಿ ಹೊಸದಾಗಿ ಮರುಚುನಾವಣೆ ನಡೆಸಬೇಕು ಹಾಗೂ ನೋಟಾಗಿಂತ ಕಡಿಮೆ ಮತ ಪಡೆಯುವ ಅಭ್ಯರ್ಥಿಯನ್ನು ಮರು ಚುನಾವಣೆಗೆ ನಿಷೇಧಿಸಬೇಕು. ಚುನಾವಣೆಯಲ್ಲಿ ಸ್ಪರ್ಧಿಸದಂತೆ ಸೂಚಿಸಬೇಕೆಂದು ಕೋರಿ ಅರ್ಜಿ ಸಲ್ಲಿಕೆಯಾಗಿತ್ತು.

  • 26 Apr 2024 12:51 PM (IST)

    Lok Sabha Election Voting LIVE: ಮಹಾರಾಷ್ಟ್ರದಲ್ಲಿ ಅತಿಕಡಿಮೆ, ತ್ರಿಪುರಾದಲ್ಲಿ ಗರಿಷ್ಠ ಮತದಾನ

    ಬೆಳಗ್ಗೆ 11:30 ರವರೆಗಿನ ಅಂಕಿಅಂಶ ಪ್ರಕಾರ ಮಹಾರಾಷ್ಟ್ರದಲ್ಲಿ ಅತಿಕಡಿಮೆ, ಅಂದರೆ ಶೇ 18.83 ಹಾಗೂ ತ್ರಿಪುರಾದಲ್ಲಿ ಗರಿಷ್ಠ ಶೇ 36.42ರಷ್ಟು ಮತದಾನವಾಗಿದೆ.

  • 26 Apr 2024 12:42 PM (IST)

    Lok Sabha Election Voting LIVE: ದೇಶ ಚೆನ್ನಾಗಿ ನಡೆಸಿಕೊಂಡು ಹೋಗುವ ನಾಯಕ ಅಧಿಕಾರಕ್ಕೆ ಬರಬೇಕು; ರಕ್ಷಿತ್ ಶೆಟ್ಟಿ

    ಐದು ವರ್ಷದಲ್ಲಿ ಏನು ಅಭಿವೃದ್ಧಿಯಾಗಿದೆ ಎಂಬುದನ್ನು ನೋಡಿ ವೋಟ್ ಹಾಕುತ್ತೇನೆ ಎಂದು ನಟ ರಕ್ಷಿತ್ ಶೆಟ್ಟಿ ಹೇಳಿದರು. ಮುಂದಿನ ಐದು ವರ್ಷ ಯಾವ ನಾಯಕ ಅಧಿಕಾರಕ್ಕೆ ಬರಬೇಕು ಎಂದು ಓಟ್ ಮಾಡ್ತೇನೆ. ಯೋಚನೆ ಮಾಡಿ ರಾಜಕೀಯ ತಿಳಿದವರ ಜೊತೆ ತರ್ಕ ಮಾಡಿ ಮತ ಹಾಕುತ್ತೇನೆ. ಯಾವಾಗಲೂ ನಾನು ಒಂದು ನಿರ್ಧಾರಕ್ಕೆ ಬಂದು ಮತ ಹಾಕುತ್ತೇನೆ. ದೇಶವನ್ನು ಚೆನ್ನಾಗಿ ನಡೆಸಿಕೊಂಡು ಹೋಗುವ ನಾಯಕ ಅಧಿಕಾರಕ್ಕೆ ಬರಬೇಕು ಎಂದು ಅವರು ಹೇಳಿದರು.

    ನೆನ್ನೆ ರಾತ್ರಿ ಬೆಂಗಳೂರಿಂದ ಹೊರಟು ಉಡುಪಿಗೆ ಬಂದಿದ್ದೇನೆ. ನಾನು ಬೆಂಗಳೂರು ಸೇರಿ 18 ವರ್ಷ ಆಯ್ತು. ಪ್ರತಿ ಬಾರಿ ವೋಟಿಗೆ ನಾನು ಉಡುಪಿಗೆ ಬರುತ್ತೇನೆ. ಮತದಾನ ನಮ್ಮ ಹಕ್ಕು ನಮ್ಮ ಜವಾಬ್ದಾರಿ. ಮತದಾನಗೋಸ್ಕರ ಬೆಂಗಳೂರಿಂದ ಊರಿಗೆ ಬರುವುದು ಖುಷಿ. ನನ್ನ ಊರು, ನನ್ನ ದೇಶ, ನಮ್ಮ ಜವಾಬ್ದಾರಿ, ಇದರಲ್ಲಿ ಏನೋ ಖುಷಿ ಇದೆ ಎಂದು ಅವರು ಹೇಳಿದ್ದಾರೆ.

  • 26 Apr 2024 12:20 PM (IST)

    Lok Sabha Election Voting LIVE: ವಿವಿಪ್ಯಾಟ್ ಎಣಿಕೆಗೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

    ಇವಿಎಂಗಳಲ್ಲಿ ಚಲಾವಣೆಯಾದ ಎಲ್ಲ ಮತಗಳನ್ನು ವಿವಿಪ್ಯಾಟ್ ಜೊತೆ ತುಲನೆ ಮಾಡಿ ನೋಡಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್​ ತಿರಸ್ಕರಿಸಿದೆ.

    ಪೂರ್ತಿ ಸುದ್ದಿ ಓದಲು: ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಚೀಟಿ ಎಣಿಕೆಗೆ ಕೋರಿದ್ದ ಅರ್ಜಿ ಸುಪ್ರೀಂಕೋರ್ಟ್​ನಲ್ಲಿ ವಜಾ

  • 26 Apr 2024 12:14 PM (IST)

    Lok Sabha Election Voting LIVE:

    ಲೋಕಸಭಾ ಚುನಾವಣೆ ಮತದಾನ ಮಾಡಲು ನಗರ ವಾಸಿಗಳು ತಮ್ಮೂರುಗಳಿಗೆ ಹೊರಟಿದ್ದು, ಬಸ್​ಗಳಲ್ಲಿ ಸ್ಥಳವಿಲ್ಲದೆ ಪರದಾಡುವಂತಾಗಿದೆ. ಸರ್ಕಾರಿ ಬಸ್ ವ್ಯವಸ್ಥೆ ಇಲ್ಲದೆ ಖಾಸಗಿ ಬಸ್​​ಗಳಲ್ಲಿ ಬೆಂಗಳೂರಿನಿಂದ-ಪಾವಗಡಕ್ಕೆ  ಜನ ಪ್ರಯಾಣ ಮಾಡಿದ್ದಾರೆ.

  • 26 Apr 2024 10:34 AM (IST)

    Lok Sabha Election Voting LIVE: ಬೆಂಗಳೂರು: ಮತಗಟ್ಟೆ ಬಳಿ ಖಾಲಿ ಚೆಂಬು ಪ್ರದರ್ಶನ

    ಬೆಂಗಳೂರಿನ ಮಂಜುನಾಥ್ ನಗರದ ಗೌತಮ್ ಕಾಲೇಜು ಬಳಿ ರಾಷ್ಟ್ರೀಯ ಯುವಕಾಂಗ್ರೆಸ್ ಅಧ್ಯಕ್ಷ ಬಿವಿ ಶ್ರೀ ನಿವಾಸ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಖಾಲಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶನ ಮಾಡಿದರು.

  • 26 Apr 2024 10:31 AM (IST)

    Lok Sabha Election Voting LIVE: ಮತಚಲಾಯಿಸಿದ ಸಿಎಂ ಸಿದ್ದರಾಮಯ್ಯ

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮೈಸೂರು ತಾಲೂಕಿನ ಸಿದ್ದರಾಮನಹುಂಡಿಯಲ್ಲಿ ಮತ ಚಲಾಯಿಸಿದರು.

  • 26 Apr 2024 09:46 AM (IST)

    Lok Sabha Election Voting LIVE: ರಾಜ್ಯದಲ್ಲಿ ಒಟ್ಟು ಶೇ 9.21ರಷ್ಟು ಮತದಾನ

    ರಾಜ್ಯದ 14 ಕ್ಷೇತ್ರಗಳಲ್ಲಿ ಬೆಳಗ್ಗೆ 9 ಗಂಟೆ ವರೆಗೆ ಒಟ್ಟು ಶೇ 9.21ರಷ್ಟು ಮತದಾನವಾಗಿದೆ.

  • 26 Apr 2024 09:33 AM (IST)

    Lok Sabha Election Voting LIVE: ಯಾವ ಜಿಲ್ಲೆಯಲ್ಲಿ ಎಷ್ಟಾಯ್ತು ಮತದಾನ?

    • ಮಂಡ್ಯ ಜಿಲ್ಲೆಯಲ್ಲಿ ಬೆಳಗ್ಗೆ 9 ಗಂಟೆವರೆಗೆ ಶೇ 7.70 ರಷ್ಟು ಮತದಾನವಾಗಿದೆ.
    • ಹಾಸನದಲ್ಲಿ ಬೆಳಗ್ಗೆ 7 ರಿಂದ 9 ಗಂಟೆವರೆಗೆ ಶೇಕಡಾ 8.2ರಷ್ಟು ಮತದಾನವಾಗಿದೆ.
    • ಚಿಕ್ಕಬಳ್ಳಾಪುರದಲ್ಲಿ ಮತದಾನ ಬೆಳಗ್ಗೆ 9 ಗಂಟೆಗೆ ಶೇ 8.70 ರಷ್ಟು ಮತದಾನವಾಗಿದೆ.
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಗ್ಗೆ 9 ಗಂಟೆವರೆಗೆ ಶೇ 12.75ರಷ್ಟು ಮತದಾನ‌ವಾಗಿದೆ.
  • 26 Apr 2024 09:29 AM (IST)

    Lok Sabha Election Voting LIVE: ಬೆಂಗಳೂರಿನಲ್ಲಿ ವಿಭಿನ್ನವಾಗಿ ಮತದಾನ ಜಾಗೃತಿ ಮೂಡಿಸಿದ ‘ಪೆಟ್ರೋಲ್ ಅಂಕಲ್’

    ಬೆಂಗಳೂರಿಲ್ಲೊಬ್ಬರು ‘ಪೆಟ್ರೋಲ್ ಅಂಕಲ್’ ಎಂದೇ ಖ್ಯಾತರಾದ ವ್ಯಕ್ತಿ ವಿಭಿನ್ನವಾಗಿ ಮತದಾನ ಜಾಗೃತಿ ಮೂಡಿಸಿದ್ದಾರೆ. ‘ಪೆಟ್ರೋಲ್ ಅಂಕಲ್’ ಎಂದೇ ಖ್ಯಾತರಾದ ಮೊಹಮ್ಮದ್ ಆರಿಫ್ ಸೇಠ್ ಕೈಯಲ್ಲಿ ಮತದಾನ ಜಾಗೃತಿ ಪ್ಲೆಕಾರ್ಡ್ ಹಿಡಿದು ವಿಧಾನಸೌಧದ ಮುಂಭಾಗದ ರಸ್ತೆಯಲ್ಲಿ ಓಡಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

  • 26 Apr 2024 09:28 AM (IST)

    Lok Sabha Election Voting LIVE: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ 12.75ರಷ್ಟು ಮತದಾನ

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಗ್ಗೆ 9 ಗಂಟೆವರೆಗೆ ಶೇ 12.75ರಷ್ಟು ಮತದಾನ‌ವಾಗಿದೆ.

  • 26 Apr 2024 09:27 AM (IST)

    Lok Sabha Election Voting LIVE: ಕೋಲಾರ ಜಿಲ್ಲೆಯ ಮತ್ತೊಂದು ಗ್ರಾಮದಲ್ಲಿ ಚುನಾವಣಾ ಬಹಿಷ್ಕಾರ

    ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ತೊರ್ನಳ್ಳಿ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದಾರೆ. ತಹಶೀಲ್ದಾರ್ ಹಾಗೂ ಶಾಸಕರು ಭೇಟಿ ಮಾಡಿ ಮನವೊಲಿಸಲು ಪ್ರಯತ್ನಪಟ್ಟರೂ ವಿಫಲವಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಬರಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕೆ.ಸಿ ವ್ಯಾಲಿ ನೀರು ಗ್ರಾಮದ ಕೆರೆಗೆ ಹರಿಸಬೇಕು ಎಂದು ಆಗ್ರಹಿಸಿದ್ದಾರೆ. ತೊರ್ನಳ್ಳಿ ಗ್ರಾಮದಲ್ಲಿ 2200 ಮತಗಳು ಇವೆ.

  • 26 Apr 2024 08:46 AM (IST)

    Lok Sabha Election Voting LIVE: ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರಿಂದ ರಂಪಾಟ

    ಮಂಗಳೂರು: ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರಿಂದ ರಂಪಾಟ ನಡೆಯಿತು. ಈ ವೇಳೆ, ಪೊಲೀಸ್ ಅಧಿಕಾರಿಯನ್ನು ಬಿಜೆಪಿ ಕಾರ್ಯಕರ್ತರು ತಳ್ಳಾಡಿದರು‌. ನಂತರ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಓಡಿಸಿದರು. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಮತ ಚಲಾಯಿಸಿ ಹೊರ ಬಂದಾಗ ಘಟನೆ ನಡೆಯಿತು.

  • 26 Apr 2024 08:43 AM (IST)

    Lok Sabha Election Voting LIVE: ಮಂಗಳೂರು: ಮತ ಯಂತ್ರದಲ್ಲಿ ದೋಷ; ಮತದಾನಕ್ಕೆ ಅಡಚಣೆ

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಎಂಬಲ್ಲಿ ಮತ ಯಂತ್ರದಲ್ಲಿ ದೋಷಕಂಡುಬಂದು ಮತದಾನಕ್ಕೆ ಅಡಚಣೆಯಾಯಿತು. ಬೂತ್ ಸಂಖ್ಯೆ 240 ಪದ್ಯಾಣ ಕರೋಪಡಿಯಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿದೆ. ಮತಯಂತ್ರದಲ್ಲಿರುವ ಒಂದು ಬಟನ್ ಕೆಲಸ ಮಾಡದ ಹಿನ್ನೆಲೆಯಲ್ಲಿ ಮತದಾನಕ್ಕೆ ಅಡ್ಡಿಯಾಯಾಯಿತು. ಸದ್ಯ ಮತಯಂತ್ರ ಸರಿಪಡಿಸಿ ಮತದಾನ ಆರಂಭವಾಗಿದೆ.

  • 26 Apr 2024 08:38 AM (IST)

    Lok Sabha Election Voting LIVE: ಹಾಸನ; ಇವಿಎಂ ತಾಂತ್ರಿಕ ದೋಷದಿಂದ ಮತದಾನ ಸ್ಥಗಿತ

    ಹಾಸನ ನಗರದ ಸಂತೇಪೇಟೆಯ ಶಾಲೆಯ ಮತಗಟ್ಟೆ ಸಂಖ್ಯೆ 189 ರಲ್ಲಿ ತಾಂತ್ರಿಕ ದೋಷದಿಂದ ಮತದಾನ ಸ್ಥಗಿತಗೊಂಡಿದೆ. ಯಂತ್ರ ಸ್ಥಗಿತಗೊಂಡು ಒಂದು ಗಂಟೆ  ಕಳೆದರೂ ಮತಯಂತ್ರ ಸರಿಯಾಗಿಲ್ಲ ಎಂದು ಮತದಾರರು ಆರೋಪಿಸಿದ್ದಾರೆ.

  • 26 Apr 2024 08:34 AM (IST)

    Lok Sabha Election Voting LIVE: ಮತದಾನ ಮಾಡಿದ ಆಯುಕ್ತ ದಯಾನಂದ್​

    ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್  ಅವರು ​ಕುಟುಂಬದವರ ಜೊತೆ ಆಗಮಿಸಿ ಇಂದಿರಾನಗರದ ನ್ಯೂ ಹಾರಿಸನ್ ಶಾಲೆಯಲ್ಲಿ ಮತದಾನ ಮಾಡಿದರು.

  • 26 Apr 2024 08:18 AM (IST)

    Lok Sabha Election Voting LIVE: ಮತಚಲಾಯಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು  ಬೆಂಗಳೂರಿನ ಬಿಇಎಸ್ ಕಾಲೇಜು ಮತಗಟ್ಟೆಯಲ್ಲಿ ಮತದಾನ ಮಾಡಿದರು.

  • 26 Apr 2024 07:59 AM (IST)

    Lok Sabha Election Voting LIVE: ಚಿಕ್ಕಮಗಳೂರು; ಇವಿಎಂ ತಾಂತ್ರಿಕ ದೋಷದಿಂದ ಮತದಾನ ಸ್ಥಗಿತ

    ಚಿಕ್ಕಮಗಳೂರಿನ ಆರೆನೂರು ಗ್ರಾಮದ ಮತಗಟ್ಟೆ ಸಂಖ್ಯೆ 53 ರಲ್ಲಿ ಇವಿಎಂ ತಾಂತ್ರಿಕ ದೋಷದಿಂದ ಮತದಾನ ಸ್ಥಗಿತಗೊಂಡಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾದಗಿ ಕೆಲವೇ ನಿಮಿಷಗಳಲ್ಲಿ ಮತದಾನ ಸ್ಥಗಿತಗೊಂಡಿದೆ. ಆರೆನೂರು ಗ್ರಾಮದ ಮತಗಟ್ಟೆ ಸಂಖ್ಯೆ 53 ರಲ್ಲಿ ಮತದಾನ ಸ್ಥಗಿತಗೊಂಡಿದ್ದು, ಮತದಾನಕ್ಕಾಗಿ ಮತದಾರರು ಸರದಿಯಲ್ಲಿ ಕಾದು ನಿಂತಿದ್ದಾರೆ.

  • 26 Apr 2024 07:52 AM (IST)

    Lok Sabha Election Voting LIVE: ಹೆಚ್ಚಿನ ಸಂಖ್ಯೆಯ ಮತದಾನಕ್ಕೆ ಪ್ರಧಾನಿ ಮೋದಿ ಕರೆ

    ಸಾಮಾಜಿಕ ಮಾಧ್ಯಮ ಎಕ್​​ನಲ್ಲಿ ಸಂದೇಶ ಪ್ರಕಟಿಸಿರುವ ಪ್ರಧಾನಿ ನರೇಂದ್ರ ಮೋದಿ, ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ. ಕರ್ನಾಟಕದ 14 ಕ್ಷೇತ್ರಗಳಲ್ಲಿಯೂ ಮತದಾನ ನಡೆಯುತ್ತಿರುವುದರಿಂದ ಕನ್ನಡದಲ್ಲಿಯೇ ಸಂದೇಶ ಪ್ರಕಟಿಸಿ ಮೋದಿ ಮನವಿ ಮಾಡಿದ್ದಾರೆ.

    ಪೂರ್ತಿ ಓದಲು ಕ್ಲಿಕ್ ಮಾಡಿ: ಲೋಕಸಭೆ ಚುನಾವಣೆ; ಹೆಚ್ಚಿನ ಸಂಖ್ಯೆಯ ಮತದಾನಕ್ಕೆ ಪ್ರಧಾನಿ ಮೋದಿ ಕರೆ

  • 26 Apr 2024 07:17 AM (IST)

    Lok Sabha Election Voting LIVE: ಎಲ್ಲರೂ ಬಂದು ಮತದಾನ ಮಾಡಬೇಕು; ಸುಧಾಮೂರ್ತಿ

    ಎಲ್ಲರೂ ಬಂದು ಮತದಾನ ಮಾಡಬೇಕು ಎಂದು ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಕರೆ ನೀಡಿದರು. ಬೆಂಗಳೂರಿನ ಜಯನಗರದ ಬಿಇಎಸ್​ ಕಾಲೇಜಿನಲ್ಲಿ ಮತದಾನ ಮಾಡಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಬಂದು ಜನ ಮತದಾನ ಮಾಡಬೇಕು. ಮುಖ್ಯವಾಗಿ ಯುವಕ, ಯುವತಿಯರು ಮತದಾನ ಮಾಡಬೇಕು ಎಂದು ಹೇಳಿದರು.

  • 26 Apr 2024 07:16 AM (IST)

    Lok Sabha Election Voting LIVE: ವಯನಾಡಿನಲ್ಲಿ ಮತಯಂತ್ರ ಸೇರಲಿದೆ ರಾಹುಲ್ ಗಾಂಧಿ ಭವಿಷ್ಯ

    ಕರ್ನಾಟಕ ಮಾತ್ರವಲ್ಲದೇ ಒಟ್ಟು 13 ರಾಜ್ಯಗಳ 88 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಣಕ್ಕೆ ಇಳಿದಿರುವ ವಯನಾಡಿನಲ್ಲಿ ವೋಟಿಂಗ್ ನಡೆಯುತ್ತಿದೆ. ಜೊತೆಗೆ ಕೇರಳದ ತಿರುವನಂತಪುರಂ ಕ್ಷೇತ್ರದಿಂದ ಕಾಂಗ್ರೆಸ್ ಹಾಲಿ ಸಂಸದ ಶಶಿ ತರೂರ್ ಅಖಾಡದಲ್ಲಿದ್ದಾರೆ. ಅವರ ವಿರುದ್ಧ ಕೇಂದ್ರದ ಹಾಲಿ ಸಚಿವ ರಾಜೀವ್ ಚಂದ್ರಶೇಖರ್ ಇದ್ದಾರೆ.

  • 26 Apr 2024 07:08 AM (IST)

    Lok Sabha Election Voting LIVE: ಕೇರಳಕ್ಕೆ ಹೋಗುತ್ತಿದ್ದ ಬಸ್​​ಗಳ ತಡೆದ ಬಿಜೆಪಿ, ಭಜರಂಗದಳ ಕಾರ್ಯಕರ್ತರು

    ಲೋಕಸಭಾ ಚುನಾವಣೆಯ ಮತದಾನದ ಸಂದರ್ಭ ಅಕ್ರಮವಾಗಿ ಜನರನ್ನು ಕೇರಳಕ್ಕೆ ಕಳುಹಿಸುತ್ತಿದ್ದ ಆರೋಪದಲ್ಲಿ ಕೇರಳಕ್ಕೆ ತೆರಳುತ್ತಿದ್ದ 15 ಬಸ್​​​ಗಳನ್ನು ಬಿಜೆಪಿ, ಭಜರಂಗದಳ ಕಾರ್ಯಕರ್ತರು ತಡೆದು ನಿಲ್ಲಿಸಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಘಟನೆ ನಡೆದಿದೆ. ಕೂಡಲೇ ಸ್ಥಳಕ್ಕೆ ಬಂದ ಚುನಾವಣಾ ಅಧಿಕಾರಿಗಳು 5 ಬಸ್ ಗಳನ್ನು ಜಪ್ತಿ ಮಾಡಿದ್ದಾರೆ.

  • 26 Apr 2024 07:02 AM (IST)

    Lok Sabha Election Voting LIVE: ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

    ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನಕ್ಕೆ ಅವಕಾಶವಿದೆ. ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಸೆಂಟ್ರಲ್, ಬೆಂಗಳೂರು ಗ್ರಾಮಾಂತರ, ಮೈಸೂರು-ಕೊಡಗು, ಚಾಮರಾಜನಗರ, ಮಂಡ್ಯ, ತುಮಕೂರು, ಕೋಲಾರ, ಹಾಸನ, ಉಡುಪಿ-ಚಿಕ್ಕಮಗಳೂರು
    ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಚಿತ್ರದುರ್ಗ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ.

  • 26 Apr 2024 07:01 AM (IST)

    Lok Sabha Election Voting LIVE: ಮತದಾನ ವೇಳೆ ಮೊಬೈಲ್ ಕೊಂಡೊಯ್ಯಲು ನಿರ್ಬಂಧ

    ಮತದಾನ ವೇಳೆ ಮೊಬೈಲ್ ಕೊಂಡೊಯ್ಯುವುದಕ್ಕೆ ನಿರ್ಬಂಧ ಹೇರಲಾಗಿದೆ. ಮತದಾನದ ವಿಡಿಯೋ ಮಾಡಿಕೊಳ್ಳುವ ಸಾಧ್ಯತೆ ಇರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಮತಗಟ್ಟೆ ಹೊರಗೆ ಮೊಬೈಲ್​​ ಇಟ್ಟು ಹೋಗಲು ಸೂಚನೆ ನೀಡಲಾಗುತ್ತಿದೆ.

    ಇದನ್ನೂ ಓದಿ: ಮತಗಟ್ಟೆಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುತ್ತೀರಾ? ಹಾಗಾದರೆ ಗಮನಿಸಿ

Published On - 6:56 am, Fri, 26 April 24

Follow us on