Rahul Gandhi: ಅಮ್ಮನಿಂದಾಗಿ ನಮ್ಮ ಕುಟುಂಬದ ಕರ್ಮಭೂಮಿಗೆ ಸೇವೆ ಸಲ್ಲಿಸುವ ಪುಣ್ಯ ಸಿಕ್ಕಿದೆ; ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ವಯನಾಡ್ ಕ್ಷೇತ್ರದಿಂದ ಮಾತ್ರ ಸ್ಪರ್ಧಿಸುತ್ತಾರಾ? ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಇಂದು ರಾಹುಲ್ ಗಾಂಧಿ ರಾಯ್ ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ. ಈ ಕುರಿತು ರಾಹುಲ್ ಗಾಂಧಿ ನೀಡಿರುವ ಪ್ರತಿಕ್ರಿಯೆ ಇಲ್ಲಿದೆ.
ನವದೆಹಲಿ: ಕಳೆದ 20 ವರ್ಷಗಳ ಕಾಲ ಸೋನಿಯಾ ಗಾಂಧಿ (Sonia Gandhi) ಅಧಿಕಾರದಲ್ಲಿದ್ದ ಉತ್ತರ ಪ್ರದೇಶದ ರಾಯ್‌ಬರೇಲಿ (Rae Bareli) ನಮ್ಮ ಕುಟುಂಬದ ಪಾಲಿಗೆ ಕರ್ಮಭೂಮಿ. ಈ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವುದು ನನಗೆ ಭಾವನಾತ್ಮಕ ಕ್ಷಣ. ನಮ್ಮ ಕುಟುಂಬದ ‘ಕರ್ಮಭೂಮಿ’ ಮತ್ತು ಕ್ಷೇತ್ರದ ಜನರ ಸೇವೆ ಮಾಡುವ ಅವಕಾಶದ ಜವಾಬ್ದಾರಿಯನ್ನು ನನ್ನ ತಾಯಿ ನನಗೆ ವಹಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ. ಇಂದು ಲೋಕಸಭಾ ಚುನಾವಣೆಗೆ (Lok Sabha Elections 2024) ನಾಮಪತ್ರ ಸಲ್ಲಿಸಿದ ಬಳಿಕ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ಸೋಲನ್ನು ಎದುರಿಸಿದ ನಂತರ ಅಮೇಥಿಯಲ್ಲಿ ಕೇಂದ್ರ ಸಚಿವೆ ಮತ್ತು ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರನ್ನು ಗಾಂಧಿ ವಂಶಸ್ಥರು ಎದುರಿಸುವ ಕುರಿತು ವಾರಗಳ ಕಾಲ ನಡೆದ ಸಸ್ಪೆನ್ಸ್ಗೆ ತೆರೆ ಬಿದ್ದಿದೆ. ಕಾಂಗ್ರೆಸ್ ಪಕ್ಷದಿಂದ ರಾಯ್‌ಬರೇಲಿ ಕ್ಷೇತ್ರದ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಇದು ಕಾಂಗ್ರೆಸ್ನ ಭದ್ರಕೋಟೆಯಾಗಿದೆ.
ಇದನ್ನೂ ಓದಿ: Rahul Gandhi: ರಾಹುಲ್ ಗಾಂಧಿ ಹೇಳಿದ 10 ಸುಳ್ಳುಗಳು
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಅಮೇಥಿ ಮತ್ತು ರಾಯ್ಬರೇಲಿಯ ಜನರು ಯಾವಾಗಲೂ ನಮ್ಮ ಕುಟುಂಬಸ್ಥರಿದ್ದಂತೆ ಎಂದಿದ್ದಾರೆ. ಇದೇ ವೇಳೆ ಸ್ಮೃತಿ ಇರಾನಿ ವಿರುದ್ಧ ಕಣಕ್ಕಿಳಿಯಲು ಅಮೇಥಿಯಿಂದ ಕಣಕ್ಕಿಳಿದಿರುವ ಗಾಂಧಿ ಕುಟುಂಬದ ಆಪ್ತ ಸಹಾಯಕ ಕಿಶೋರಿ ಲಾಲ್ ಶರ್ಮಾ ಅವರ ಕುರಿತೂ ರಾಹುಲ್ ಸಂತಸ ವ್ಯಕ್ತಪಡಿಸಿದರು.
ಅಮೇಥಿ ಮತ್ತು ರಾಯ್‌ಬರೇಲಿ ನನಗೆ ಬೇರೆ ಬೇರೆಯಲ್ಲ, ಎರಡೂ ನನ್ನ ಕುಟುಂಬ. ಕಳೆದ 40 ವರ್ಷಗಳಿಂದ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕಿಶೋರಿ ಲಾಲ್ ಜಿ ಅವರು ಅಮೇಥಿಯಿಂದ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುತ್ತಿರುವುದು ನನಗೆ ಸಂತೋಷ ತಂದಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಅನುಭವಿ ಚೆಸ್ ಆಟಗಾರ; ರಾಯ್ ಬರೇಲಿಯಿಂದ ರಾಹುಲ್ ಗಾಂಧಿ ಸ್ಪರ್ಧೆಗೆ ಕಾಂಗ್ರೆಸ್ ಸಮರ್ಥನೆ
ಮೇ 20ರಂದು 5ನೇ ಹಂತದ ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿರುವ ಅಮೇಥಿ ಮತ್ತು ರಾಯ್‌ಬರೇಲಿ ಸೇರಿದಂತೆ ಹಲವು ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿತ್ತು. ಇಂದು ರಾಹುಲ್ ಗಾಂಧಿ ತಮ್ಮ ಸಹೋದರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ತಾಯಿ ಸೋನಿಯಾ ಗಾಂಧಿ ಅವರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ರಾಹುಲ್ ಗಾಂಧಿ ಅವರ ಎದುರಾಳಿಯಾಗಿ ಬಿಜೆಪಿಯಿಂದ ರಾಯ್ಬರೇಲಿಯಲ್ಲಿ ದಿನೇಶ್ ಪ್ರತಾಪ್ ಸಿಂಗ್ ಸ್ಪರ್ಧಿಸಲಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ವಿರುದ್ಧ ದಿನೇಶ್ ಸಿಂಗ್ ಸೋತಿದ್ದರು. ರಾಹುಲ್ ಗಾಂಧಿ ಈ ಬಾರಿಯೂ ವಯನಾಡ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಅದರ ಜೊತೆಗೆ ರಾಯ್ಬರೇಲಿಯಲ್ಲೂ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ