ಬೆಂಗಳೂರು, ಮೇ 7: ಲೋಕಸಭೆ ಚುನಾವಣೆಗೆ (Lok Sabha Election) ಕರ್ನಾಟಕದ 14 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ರಾಜ್ಯದ ಎರಡನೇ ಹಂತದ ಮತದಾನ (Voting) ಶಾಂತಿಯುತವಾಗಿ ನಡೆಯುತ್ತಿದೆ. ಆದರೆ, ಕೆಲವೆಡೆ ಮಾತ್ರ ಗದ್ದಲ, ಗೊಂದಲಗಳಾಗಿವೆ. ಕೆಲವೆಡೆ ಮತಯಂತ್ರಗಳು ಕೈ ಕೊಟ್ಟಿವೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಖಾನಾಪುರದ ನಿಟ್ಟೂರು ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರು ಶಾಲು, ಚಿಹ್ನೆ ಧರಿಸಿ ಪ್ರಚಾರ ಮಾಡಿದ ಆರೋಪ ಕೇಳಿಬಂದಿದೆ. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಚುನಾವಣಾಧಿಕಾರಿಯನ್ನು ತರಾಟೆ ತೆಗೆದುಕೊಂಡ ಘಟನೆ ನಡೆಯಿತು.
ಕಲಬುರಗಿಯಲ್ಲಿ ಕಾಂಗ್ರೆಸ್‌ಗೆ ಮತಹಾಕುವಂತೆ ಚುನಾವಣಾ ಅಧಿಕಾರಿಗಳೇ ಮತದಾರರ ಮೇಲೆ ಒತ್ತಡ ಹೇರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನ್ಯೂ ರಾಘವೇಂದ್ರ ಕಾಲೋನಿಯ181 ಬೂತ್ ಸಂಖ್ಯೆಯಲ್ಲಿ ಈ ಘಟನೆ ನಡೆದಿದೆ ಎಂದು ಬಿಜೆಪಿ ಅಭ್ಯರ್ಥಿ ಉಮೇಶ್ ಜಾದವ್ ಆರೋಪಿಸಿದ್ದಾರೆ. ಆದರೆ, ಚುನಾವಣಾಧಿಕಾರಿಗಳು ಈ ಆರೋಪವನ್ನು ಅಲ್ಲಗೆಳೆದಿದ್ದಾರೆ.
ಅತ್ತ ಶಿವಮೊಗ್ಗದ ಬಾಪೂಜಿನಗರದಲ್ಲಿ ಪೊಲೀಸರು ಮತ್ತು ಮತದಾರರ ನಡುವೆ ವಾಗ್ವಾದ ನಡೆದಿದೆ. ಮತದಾನ ಕೇಂದ್ರದಿಂದ 100 ಮೀಟರ್ ದೂರ ಇರುವಂತೆ ಪೊಲೀಸರು ಸೂಚಿಸಿದರು. ಇದರಿಂದ ಕೆರಳಿದ ಸಾರ್ವಜನಿಕರು ಪೊಲೀಸರ ಜೊತೆ ವಾಗ್ವಾದಕ್ಕಿಳಿದರು.
ರಾಯಚೂರಿನಲ್ಲಿ ಮತದಾರರಿಬ್ಬರ ವೋಟರ್ ಐಡಿ ಸಮಸ್ಯೆ ಉಂಟಾಗಿದೆ. ಹೆಸರು ಒಬ್ಬ ಮಹಿಳೆದ್ದಾಗಿದ್ರೆ, ಫೋಟೋ ಮತ್ತೊಬ್ಬ ಮಹಿಳೆಯದ್ದಾಗಿದೆ. ಇದರಿಂದ ಇಬ್ಬರು ಮಹಿಳೆಯರು ಮತದಾನದಿಂದ ವಂಚಿತರಾಗಿದ್ದಾರೆ.
ಯಾದಗಿರಿಯ ದರ್ಶನಾಪುರ ಗ್ರಾಮದಲ್ಲಿ ವಿದ್ಯುನ್ಮಾನ ಮತಯಂತ್ರ ಕೈಕೊಟ್ಟಿತು. ಹಕ್ಕು ಚಲಾಯಿಸಲು ಬಂದ ಮತದಾರು ಕೆಲ ಕಾಲ ಕಾದು ನಿಂತ್ರು. ಅತ್ತ ಹುಬ್ಬಳ್ಳಿಯ ಅಮರಗೋಳದಲ್ಲು ಇವಿಎಂ ಕೈಕೊಟ್ಟಿದ್ದರಿಂದ ಮತದಾರರು ಪರದಾಡಿದ್ರು. ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಹಲವೆಡೆ ಮತಯಂತ್ರಗಳು ಕೈಕೊಟ್ಟಿತ್ತು. ಶಿವಮೊಗ್ಗದ ಹೊಸನಗರ ತಾಲೂಕಿನ ಸುಳುಗೋಡು ಗ್ರಾಮದ ಮತಯಂತ್ರ ಕೈಗೊಟ್ಟಿದ್ದರಿಂದ ಒಂದು ಗಂಟೆ ಮತದಾನ ವಿಳಂಬವಾಗಿ ನಡೆಯಿತು.
ಕೆಲವೆಡೆ ಮತದಾನ ಬಹಿಷ್ಕಾರ ಮಾಡಿದ ಜನರು, ಪ್ರಜಾಪ್ರಭುತ್ವದ ದೊಡ್ಡ ಹಬ್ಬದಿಂದ ದೂರ ಉಳಿದಿದ್ರು. ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ಗುದ್ನೇಪ್ಪನಮಠ ನಿವಾಸಿಗಳು ಚುನಾವಣೆ ಬಹಿಷ್ಕರಿಸಿದ್ದಾರೆ. ದೇವಸ್ಥಾನದ ಜಾಗದಲ್ಲಿ ಸರ್ಕಾರಿ ಕಟ್ಟಡ ಕಟ್ಟುವ ಆದೇಶ ಹಿಂಪಡೆಯಬೇಕು ಅಂತಾ ಆಗ್ರಹಿಸಿದರು.
ಇದನ್ನೂ ಓದಿ: ಮಗುವನ್ನು ಎತ್ತಿ ಮುದ್ದಾಡಿದ ಪ್ರಧಾನಿ ಮೋದಿ, ಸುಂದರ ಕ್ಷಣ ಕಣ್ತುಂಬಿಕೊಂಡ ತಾಯಿ
ವಿಜಯಪುರದ ಚಡಚಣ ತಾಲೂಕಿನ ದಸೂರು ಗ್ರಾಮದಲ್ಲಿ ಮೂಲಭೂತ ಸೌಕರ್ಯಕ್ರಾಗಿ ಆಗ್ರಹಿಸಿ, ಗ್ರಾಮಸ್ಥರು ಕೂಡ ಚುನಾವಣಾ ಬಹಿಷ್ಕಾರ ಮಾಡಿದ್ದಾರೆ. ಅತ್ತ ಬಾಗಲಕೋಟೆಯ ಜಿಲ್ಲೆ ಇಳಕಲ್ ತಾಲ್ಲೂಕಿನ ದಾಸಬಾಳ ಗ್ರಾಮಸ್ಥರು ಕೂಡ ಮತದಾನ ಬಹಿಷ್ಕರಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ