ಲೋಕಸಭೆ ಚುನಾವಣೆ: ಹಲವು ವಿಶೇಷಗಳಿಗೆ ಸಾಕ್ಷಿಯಾದ ರಾಜ್ಯದ 2ನೇ ಹಂತದ ಮತದಾನ
ಲೋಕಸಭೆ ಚುನಾವಣೆಗೆ ರಾಜ್ಯದ ಎರಡನೇ ಹಂತದ ಮತದಾನ ಇಂದು (ಮೇ 7) ಆರಂಭವಾಗಿದೆ. ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 14 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 227 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಾಜ್ಯದ ಎರಡನೇ ಹಂತದ ಮತದಾನ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ.
ಬೆಂಗಳೂರು ಮೇ 07: ಲೋಕಸಭೆ ಚುನಾವಣೆಗೆ (Lok Sabha Election) ರಾಜ್ಯದ ಎರಡನೇ ಹಂತದ ಮತದಾನ ನಡೆದಿದೆ. ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ (Voting) ನಡೆಯಿತು. ಒಟ್ಟು 227 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಇಂದು (ಮೇ 07) ನಿರ್ಧಾರವಾಗಿದೆ. ಎರಡನೇ ಹಂತದ ಮತದಾನ ಪ್ರಕ್ರಿಯೆ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ.
ಮತದಾನ ಮಾಡಿದ ಶತಾಯುಷಿ
ಗದಗ: ಗದಗ ತಾಲೂಕಿನ ಶಿರುಂಜ ಗ್ರಾಮದ ಶತಾಯುಷಿ ಈರಮ್ಮ ಗುಡ್ಡದ (103) ಅವರು ಮೊಮ್ಮಕ್ಕಳ ಸಹಾಯದಿಂದ ಸರ್ಕಾರಿ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 191ಕ್ಕೆ ನಡೆದುಕೊಂಡು ಬಂದು ಮತದಾನ ಮಾಡಿದರು. ಮತದಾನದ ಹುಕ್ಕು ಚಲಾಯಿಸಿ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ.
ಮತ ಚಲಾಯಿಸಿದ ನವ ಜೋಡಿ
ಕೊಪ್ಪಳ: ಮದುವೆ ಮಂಟಪದಿಂದ ನವ ಜೋಡಿ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 47ಕ್ಕೆ ಆಗಮಿಸಿ ಮತದಾನ ಮಾಡಿದರು. ವಧು ಮಮತಾ ಹಾಗೂ ವರ ನನ್ನೆಪ್ಪ ಅವರು ಮತದಾನ ಮಾಡಿದರು.
ಇನ್ನು ಕುಕನೂರು ತಾಲೂಕಿನ ಕುದುರಿಮೋತಿ ಗ್ರಾಮದ ಶತಾಯುಷಿ ನೀಲಕಂಠಯ್ಯ ಹಿರೇಮಠ (105) ಎಂಬುವರು ಸಂಬಂಧಿಯೊಬ್ಬರ ಸಹಾಯದೊಂದಿಗೆ ಸರ್ಕಾರಿ ಶಾಲೆಯ ಬೂತ್ ನಂಬರ್ 3ಕ್ಕೆ ಆಗಮಿಸಿ ಮತ ಚಲಾಯಿಸಿದರು. ಇಳಿ ವಯಸ್ಸಿನಲ್ಲಿ ಕೂಡ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿ ಶತಾಯುಷಿ ನೀಲಕಂಠಯ್ಯ ಅವರು ಮಾದರಿಯಾಗಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ ಲೋಕಸಭೆ ಚುನಾವಣೆ: ಕಾಂಗ್ರೆಸ್-ಬಿಜೆಪಿಯ ಪ್ಲಸ್, ಮೈನಸ್ ಏನು?
ವಿದೇಶದಿಂದ ಬಂದು ಮತದಾನ
ಬೆಳಗಾವಿ: ಕಳೆದ 10 ವರ್ಷಗಳಿಂದ ಅಬುದಾಬಿಯಲ್ಲಿರುವ ಯುವಕ ಸೂರಜ್ ಉಪಾಶೆ ಎಂಬ ಯುವಕ ಮತದಾನಕ್ಕಾಗಿ ಊರಿಗೆ ಬಂದಿದ್ದಾರೆ. ಇಂದು ಹುಕ್ಕೇರಿ ಪಟ್ಟಣದ ಗಾಂಧಿನಗರ ಶಾಲೆಯಲ್ಲಿ ಮತದಾನ ಮಾಡಿದರು. ಎಲ್ಲರೂ ತಮ್ಮ ಹಕ್ಕು ಚಲಾಯಿಸುವಂತೆ ಯುವಕ ಮನವಿ ಮಾಡಿದ್ದಾರೆ.
ಪತಿ ಸಾವಿನ ನೋವಿನಲ್ಲೂ ಮತದಾನ ಮಾಡಿದ ಮಹಿಳೆ
ಶಿವಮೊಗ್ಗ: ಹೊಸನಗರ ತಾಲೂಕಿನ ಆಡುಗೋಡಿಯ ಕಲಾವತಿ ಎಂಬುವರ ಪತಿ ವೆಂಕಟೇಶ್ ಅನಾರೋಗ್ಯದ ಕಾರಣ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಮುಂಜಾನೆ ನಿಧನರಾಗಿದ್ದಾರೆ. ಪತಿಯ ಸಾವಿನ ವಿಚಾರ ತಿಳಿದು ದುಃಖದಲ್ಲೇ ಕಲಾವತಿಯವರು ಮತಗಟ್ಟೆಗೆ ಆಗಮಿಸಿ ಮತ ಹಾಕಿದ್ದಾರೆ. ಇದೀಗ ಮೃತ ಪತಿ ದೇಹ ನೋಡಲು ಹೋಗಿದ್ದಾರೆ.
ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ಮತಗಟ್ಟೆಯಲ್ಲಿ ಮತ ಚಲಾಯಿಸಿದ ವ್ಯಕ್ತಿ
ಧಾರವಾಡ: ಕಾನೂನು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿರುವ ಶ್ರೀನಿವಾಸ ಪರಾಂಡೆ (77) ಎಂಬುವರು ಏ. 26 ರಂದು ಮಂಡಿ ನೋವಿನ ಸಂಬಂಧ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇಂದಿನವರೆಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಮಧ್ಯೆಯೂ ವ್ಹೀಲ್ ಚೇರ್ ಮೂಲಕ ನಗರದ ಎಮ್ಮಿಕೇರಿ ಸರ್ಕಾರಿ ಶಾಲೆಗೆ ಆಗಮಿಸಿ ಮತ ಚಲಾವಣೆ ಮಾಡಿದರು.
ಅರಮನೆ ಮತಗಟ್ಟೆ
ಶಿವಮೊಗ್ಗ: ನಗರದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಅರಮನೆ ಮಾದರಿಯಲ್ಲಿ ಮತಗಟ್ಟೆ ನಿರ್ಮಾಣ ಮಾಡಲಾಗಿದೆ. ಮತದಾರರನ್ನು ಸೆಳೆಯಲು ಚುನಾವಣಾ ಅಧಿಕಾರಿಗಳು ವಿನೂತನ ಪ್ರಯೋಗ ಮಾಡಿದ್ದಾರೆ. ಇನ್ನು ಚುನಾವಣಾ ಅಧಿಕಾರಿಗಳು ರಾಜ-ಮಹಾರಾಜ ವೇಷ ಭೂಷಣ ತೊಟ್ಟಿದ್ದಾರೆ. ಮತದಾನದ ಬಳಿಕ ಮತದಾರರನ್ನು ಸಿಂಹಾಸನದ ಮೇಲೆ ಕೂಡಿಸಿ ಕಿರಿಟ ಹಾಕಿ ಸನ್ಮಾನ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಲೋಕಸಭಾ ಚುನಾವಣೆಯ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ