AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿ ಜನರ ಕಷ್ಟ ಕೇಳುವುದಿಲ್ಲ, ಏನೇನೋ ಮಾತನಾಡುತ್ತಾರೆ; ಅಮೇಥಿಯಲ್ಲಿ ಪ್ರಿಯಾಂಕಾ ಗಾಂಧಿ ಟೀಕೆ

Lok Sabha Elections: ಚುನಾವಣೆಯ ಸಮಯದಲ್ಲಿ ಎಮ್ಮೆಗಳು, ಮಂಗಳಸೂತ್ರ, ದೇವಸ್ಥಾನಗಳು ಮತ್ತು ಮಸೀದಿಗಳ ಬಗ್ಗೆ ಯಾರೂ ಮಾತು ಕೇಳಲು ಬಯಸುವುದಿಲ್ಲ. ಅಭಿವೃದ್ಧಿಯ ಬಗ್ಗೆ ಮಾತ್ರ ಕೇಳಲು ಬಯಸುವುದಾಗಿ ಜನರು ಪ್ರಧಾನಿ ಮೋದಿಯವರಿಗೆ ತಿಳಿಸಬೇಕೆಂದು ಪ್ರಿಯಾಂಕಾ ಗಾಂಧಿ ಮನವಿ ಮಾಡಿದ್ದಾರೆ. ತಮ್ಮ ಸಮಸ್ಯೆಗಳಿಗೆ ಪರಿಹಾರದ ಬಗ್ಗೆ ಮಾತನಾಡಲು ಪ್ರಧಾನಿಗೆ ತಿಳಿಸುವಂತೆ ಪ್ರಿಯಾಂಕಾ ಗಾಂಧಿ ವಾದ್ರಾ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಜನರ ಕಷ್ಟ ಕೇಳುವುದಿಲ್ಲ, ಏನೇನೋ ಮಾತನಾಡುತ್ತಾರೆ; ಅಮೇಥಿಯಲ್ಲಿ ಪ್ರಿಯಾಂಕಾ ಗಾಂಧಿ ಟೀಕೆ
ಪ್ರಿಯಾಂಕಾ ಗಾಂಧಿ
ಸುಷ್ಮಾ ಚಕ್ರೆ
|

Updated on: May 15, 2024 | 9:48 PM

Share

ಅಮೇಥಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಜನರ ಕಷ್ಟಗಳ ಬಗ್ಗೆ ಮಾತನಾಡುವುದಿಲ್ಲ, ಜನರ ಕಷ್ಟಗಳನ್ನು ಕೇಳುವುದಿಲ್ಲ. ಕೇವಲ ಅಪ್ರಸ್ತುತ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆರೋಪಿಸಿದ್ದಾರೆ. ಅಮೇಥಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಅವರ ಪರವಾಗಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಪ್ರಿಯಾಂಕಾ, ಜನರು ತಮಗೇನು ಬೇಕೆಂಬುದರ ಬಗ್ಗೆ ಪ್ರಧಾನಿಯವರಿಗೆ ತಿಳಿಸಬೇಕೆಂದಿದ್ದಾರೆ.

ನಿನ್ನೆ ಮೋದಿ ವಾರಾಣಸಿಯಲ್ಲಿ ರೋಡ್ ಶೋ ನಡೆಸಿದರು. ಎತ್ತರದ ವಾಹನದ ಮೇಲೆ ನಿಂತು ಭದ್ರತಾ ಸಿಬ್ಬಂದಿ ನಡುವೆ ನಿಂತು ಕೈ ಬೀಸಿದರು. ನಿಮ್ಮ ದುಃಖ ಏನೆಂದು ಅವರಿಗೆ ಹೇಗೆ ತಿಳಿಯುತ್ತದೆ? ಅವರು ಕೇವಲ ಉದ್ಯಮಿಗಳೊಂದಿಗೆ ಮಾತನಾಡುತ್ತಾರೆ ಎಂದು ಪ್ರಿಯಾಂಕಾ ಟೀಕಿಸಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ ಜೊತೆ ಬಿಜೆಪಿಯಿಂದ ಮೋದಿ ಬದಲು ಚರ್ಚೆಗೆ ಇಳಿಯಲಿರುವ ಅಭಿನವ್ ಪ್ರಕಾಶ್ ಯಾರು?

ಮೋದಿಯನ್ನು ತನ್ನ ಸಹೋದರ ರಾಹುಲ್ ಗಾಂಧಿಯೊಂದಿಗೆ ಹೋಲಿಕೆ ಮಾಡಿದ ಪ್ರಿಯಾಂಕಾ ಗಾಂಧಿ, ಮೋದಿ ಎಂದಿಗೂ ಜನರ ಕಷ್ಟಗಳನ್ನು ಕೇಳುವುದಿಲ್ಲ. ಆದರೆ, ಅಮೇಥಿಯಲ್ಲಿ ಜನರು ಸೋಲಿಸಿದ್ದರೂ ನನ್ನ ಸಹೋದರ ರಾಹುಲ್ ಗಾಂಧಿ ದೇಶವಾಸಿಗಳ ಸಮಸ್ಯೆಗಳನ್ನು ಆಲಿಸಲು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ 4,000 ಕಿಲೋಮೀಟರ್ ಪಾದಯಾತ್ರೆ ನಡೆಸಿದರು ಎಂದು ಅವರು ಹೇಳಿದ್ದಾರೆ.

ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕಾ ಗಾಂಧಿ ವಾದ್ರಾ, ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ಪ್ರಧಾನಿಯಂತಹ ವ್ಯಕ್ತಿ ದೇಶದ ಜನರನ್ನು ಪ್ರೀತಿಸುವುದಿಲ್ಲ. ಚುನಾವಣಾ ಪ್ರಚಾರದ ವೇಳೆ ಬಂದಿದ್ದರೆ 10 ವರ್ಷದಲ್ಲಿ ಏನು ಮಾಡಿದ್ದಾರೆ ಎನ್ನುವುದನ್ನಾದರೂ ಹೇಳಬೇಕು. ಅವರು ನಿಮ್ಮೊಂದಿಗೆ ಅಪ್ರಸ್ತುತ ವಿಷಯಗಳನ್ನು ಮಾತನಾಡುತ್ತಿದ್ದಾರೆ. ಚುನಾವಣೆಯ ಸಮಯದಲ್ಲಿ ಎಮ್ಮೆಗಳು, ಮಂಗಳಸೂತ್ರಗಳು ಮತ್ತು ದೇವಸ್ಥಾನಗಳು ಮತ್ತು ಮಸೀದಿಗಳ ಬಗ್ಗೆ ಜನರು ಕೇಳಲು ಬಯಸುವುದಿಲ್ಲ ಎಂದು ಜನರು ಧ್ವನಿ ಎತ್ತಬೇಕು ಎಂದು ಪ್ರಿಯಾಂಕಾ ಗಾಂಧಿ ಮನವಿ ಮಾಡಿದರು. ಅವರ ಸಮಸ್ಯೆಗಳಿಗೆ ಪರಿಹಾರದ ಬಗ್ಗೆ ಮಾತನಾಡಲು ಪ್ರಧಾನಿಗೆ ತಿಳಿಸುವಂತೆ ಅವರು ಕೇಳಿಕೊಂಡರು.

ನೀವು ಜಾಗೃತರಾದರೆ ನಾಯಕರು ಅಸಹಾಯಕರಾಗುತ್ತಾರೆ. ದೇಶದಲ್ಲಿ ಅದ್ಭುತ ರಾಜಕೀಯ ನಡೆಯುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ: ರಾಹುಲ್ ವಿರುದ್ಧ ಹಣ ಪಡೆದ ಆರೋಪ ಮಾಡಿದ ಮೋದಿಗೆ ಪ್ರಿಯಾಂಕಾ ಗಾಂಧಿ ತಿರುಗೇಟು

ಈ ವೇಳೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಶ್ಲಾಘಿಸಿದ ಪ್ರಿಯಾಂಕಾ ಗಾಂಧಿ, ರಾಜೀವ್ ಗಾಂಧಿ ಮಾತ್ರವಲ್ಲ, ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ ಕೂಡ ಸಭ್ಯ ಮನುಷ್ಯರಾಗಿದ್ದರು. ಅವರಿಗೆ ಜನರ ಬಗ್ಗೆ ಗೌರವವಿತ್ತು. ಜನರ ಕಡೆಗೆ ಸ್ವಲ್ಪ ಉತ್ತರದಾಯಿತ್ವವಿತ್ತು. ಆದರೆ, ಮೋದಿ ಅವರು ರೈತರಿಗೆ ಏನು ಮಾಡಿದ್ದಾರೆ? ಕೇವಲ ಅಲ್ಲೊಂದು ಇಲ್ಲೊಂದು ಮಾತನಾಡುತ್ತಾ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಾರೆ ಎಂದಿದ್ದಾರೆ.

ತನ್ನ ತಂದೆ ರಾಜೀವ್ ಗಾಂಧಿ, ತಾಯಿ ಸೋನಿಯಾ ಗಾಂಧಿ ಮತ್ತು ಸಹೋದರ ರಾಹುಲ್ ಗಾಂಧಿ ಅವರು ಅಮೇಥಿ ಕ್ಷೇತ್ರವನ್ನು ಪ್ರತಿನಿಧಿಸಿದಾಗ ಅಮೇಥಿಯ ಅಭಿವೃದ್ಧಿಯಾಯಿತು ಎಂದು ಪ್ರಿಯಾಂಕಾ ಗಾಂಧಿ ಹೇಳಿಕೊಂಡಿದ್ದಾರೆ.

ಮೇ 20ರಂದು ಅಮೇಥಿ ಲೋಕಸಭೆ ಚುನಾವಣೆಯ ಐದನೇ ಹಂತದಲ್ಲಿ ರಾಜ್ಯದಲ್ಲಿ ಮತದಾನ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ