ಪಂಜಾಬ್​​ನಲ್ಲಿ ಮುಖ್ಯಮಂತ್ರಿ ಆಯ್ಕೆ ಹೊಣೆ ಜನರ ಹೆಗಲಿಗೆ; ಫೋನ್​ ನಂಬರ್​ ಕೊಟ್ಟು, ಮೆಸೇಜ್​/ಕಾಲ್​ ಮಾಡಿ ಎಂದ ಅರವಿಂದ್ ಕೇಜ್ರಿವಾಲ್​ !

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್​, ನಾನು ಪಂಜಾಬ್​​ನಲ್ಲಿ ಆಪ್​ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನಮ್ಮ ಪಕ್ಷದ ಪ್ರಮುಖ ನಾಯಕ ಭಗವಂತ್​ ಮಾನ್​ ಹೆಸರನ್ನು ಘೋಷಿಸಲು ನಿರ್ಧರಿಸಿದ್ದೆ. ಆದರೆ ಅವರೇ, ನನಗೆ ಈ ಐಡಿಯಾ ಕೊಟ್ಟರು ಎಂದು ತಿಳಿಸಿದ್ದಾರೆ.

ಪಂಜಾಬ್​​ನಲ್ಲಿ ಮುಖ್ಯಮಂತ್ರಿ ಆಯ್ಕೆ ಹೊಣೆ ಜನರ ಹೆಗಲಿಗೆ; ಫೋನ್​ ನಂಬರ್​ ಕೊಟ್ಟು, ಮೆಸೇಜ್​/ಕಾಲ್​ ಮಾಡಿ ಎಂದ ಅರವಿಂದ್ ಕೇಜ್ರಿವಾಲ್​ !
ಅರವಿಂದ ಕೇಜ್ರಿವಾಲ್

ಪಂಜಾಬ್​​ನಲ್ಲಿ ಆಮ್​ ಆದ್ಮಿ ಪಕ್ಷದಿಂದ (Aam Aadmi Party) ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಮುಂದಿನ ವಾರ ಘೋಷಿಸುತ್ತೇನೆ ಎಂದು ಹೇಳಿದ್ದ ಆಪ್​ ಮುಖ್ಯಸ್ಥ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್(Arvind Kejriwal)​, ಇದೀಗ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯ ಹೊಣೆಯನ್ನು ಪಂಜಾಬ್​ ಜನರಿಗೇ ಬಿಟ್ಟಿದ್ದಾರೆ. ಅಂದರೆ ಆಮ್​ ಆದ್ಮಿ ಪಕ್ಷ ಒಂದು ಫೋನ್​ ನಂಬರ್​ನ್ನು ಸಾರ್ವಜನಿಕರಿಗೆ ನೀಡಿದೆ. ಆ ನಂಬರ್​ಗೆ ಜನರು ಸಂದೇಶ ಕಳಿಸಿ, ಯಾರು ಸಿಎಂ ಆಗಬೇಕು ಎಂಬುದನ್ನು ಹೇಳಬೇಕು. ಅತಿ ಹೆಚ್ಚು ವೋಟ್​ ಪಡೆದವರನ್ನು ಪಂಜಾಬ್​ ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸುತ್ತೇನೆ ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ. ಸದ್ಯ ಮುಂಬರುವ ಪಂಚರಾಜ್ಯಗಳ ಚುನಾವಣೆಯಲ್ಲಿ ಆಮ್​ ಆದ್ಮಿ ಪಕ್ಷ, ಪಂಜಾಬ್​, ಗೋವಾ ಹಾಗೂ ಉತ್ತರಾಖಂಡ ಚುನಾವಣೆಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದೆ. ಪಂಜಾಬ್​ನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನೂ ಆಪ್​ ಬಿಡುಗಡೆ ಮಾಡಿದೆ. ಆದರೆ ಒಂದೊಮ್ಮೆ ಆಪ್​ ಗೆದ್ದರೆ, ಅದರ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಬಗ್ಗೆ ಇನ್ನೂ ಅರವಿಂದ್ ಕೇಜ್ರಿವಾಲ್​ ಸುಳಿವು ಕೊಟ್ಟಿರಲಿಲ್ಲ. 

ಅಂದಹಾಗೇ, ಇದೀಗ ಆಪ್​ ಜನರಿಗೆ ಕೊಟ್ಟಿರುವ ಫೋನ್​ ನಂಬರ್​  70748 70748. ಪಂಜಾಬ್​ ಮುಖ್ಯಮಂತ್ರಿ ರೇಸ್​ನಿಂದ ಅರವಿಂದ್​ ಕೇಜ್ರಿವಾಲ್​ ಹೊರಗುಳಿದಿದ್ದಾರೆ. ಹೀಗಾಗಿ ಆಪ್​ ಪಕ್ಷ ಕೊಟ್ಟ ಫೋನ್​/ಮೆಸೇಜ್​ ಮಾಡಿ ಪಂಜಾಬ್ ಸಿಎಂ ಅಭ್ಯರ್ಥಿಯ ಹೆಸರು ಹೇಳುವ ಸಾರ್ವಜನಿಕರು ಅರವಿಂದ್ ಕೇಜ್ರಿವಾಲ್​ ಹೆಸರು ಹೇಳುವಂತಿಲ್ಲ. ಇದೇ ನಂಬರ್​ಗೆ ವಾಟ್ಸ್ ಆ್ಯಪ್ ಮೆಸೇಜ್ ಕೂಡ ಕಳಿಸಬಹುದು. ಪಂಜಾಬ್​​ನಲ್ಲಿ ಆಪ್​ ಅಧಿಕಾರಕ್ಕೆ ಬಂದರೆ ಸಿಎಂ ಯಾರಾಗಬೇಕು ಎಂಬ ಆಯ್ಕೆಯನ್ನು ನಾವು ಪಂಜಾಬ್​ನ ಮೂರು ಕೋಟಿ ಜನರಿಗೇ ಬಿಟ್ಟಿದ್ದೇವೆ. ಜನವರಿ 17ರ ಸಂಜೆ 5ಗಂಟೆಯೊಳಗೆ ಇಲ್ಲಿನ ಜನರು ತಮ್ಮ ಆಯ್ಕೆಯನ್ನು ಹೇಳಬೇಕು. ಹೀಗೆ ಸಿಎಂ ಅಭ್ಯರ್ಥಿಯನ್ನು ಮತದ ಮೂಲಕ ಇದೇ ಮೊದಲ ಬಾರಿಗೆ ಆಯ್ಕೆ ಮಾಡಲಾಗುತ್ತಿದೆ ಎಂದೂ ಅರವಿಂದ್ ಕೇಜ್ರಿವಾಲ್​ ತಿಳಿಸಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್​, ನಾನು ಪಂಜಾಬ್​​ನಲ್ಲಿ ಆಪ್​ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನಮ್ಮ ಪಕ್ಷದ ಪ್ರಮುಖ ನಾಯಕ ಭಗವಂತ್​ ಮಾನ್​ ಹೆಸರನ್ನು ಘೋಷಿಸಲು ನಿರ್ಧರಿಸಿದ್ದೆ. ಆದರೆ ಅವರೇ, ನನಗೆ ಈ ಐಡಿಯಾ ಕೊಟ್ಟರು. ಮುಖ್ಯಮಂತ್ರಿಯ ಹೆಸರನ್ನು ಎಂದಿಗೂ ಮುಚ್ಚಿದ ಬಾಗಿಲ ಹಿಂದೆ ನಿರ್ಧಾರ ಮಾಡಬಾರದು. ಜನತೆಗೆ ಅವಕಾಶ ಕೊಡೋಣ. ಅವರು ಮತ ಹಾಕಲಿ ಎಂದು ಭಗವಂತ್​ ಮಾನ್​ ನನಗೆ ಸಲಹೆ ನೀಡಿದರು. ಅದರಂತೆ ನಾವು ಈ ಬಾರಿ ಚುನಾವಣೆಗೂ ಪೂರ್ವ ಮತದಾನಕ್ಕೆ ಆಹ್ವಾನಿಸಿದ್ದೇವೆ ಎಂದು ಅರವಿಂದ್ ಕೇಜ್ರಿವಾಲ್​ ತಿಳಿಸಿದ್ದಾರೆ.​

117 ವಿಧಾನಸಭಾ ಕ್ಷೇತ್ರಗಳುಳ್ಳ ಪಂಜಾಬ್​ನಲ್ಲಿ ಫೆಬ್ರವರಿ 14ರಂದು ಮತದಾನ ನಡೆಯಲಿದ್ದು, ಮಾರ್ಚ್​ 10ರಂದು ಮತ ಎಣಿಕೆಯಾಗಲಿದೆ. ಇಲ್ಲಿ ಕಾಂಗ್ರೆಸ್​ ಮತ್ತು ಆಪ್​ ಪಕ್ಷಗಳು ಏಕಾಂಗಿಯಾಗಿ ಸ್ಪರ್ಧಿಸಲಿದ್ದು, ಶಿರೋಮಣಿ ಅಕಾಲಿ ದಳ ಮತ್ತು ಬಹುಜನ ಸಮಾಜ ಪಾರ್ಟಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲಿವೆ. ಹಾಗೇ, ಇನ್ನೊಂದೆಡೆ ಬಿಜೆಪಿ-ಪಿಎಲ್​ಸಿ ಮತ್ತು ಎಸ್​ಎಡಿ(ಸಂಯುಕ್ತ) ಪಕ್ಷಗಳ ಮೈತ್ರಿ ಸವಾಲೊಡ್ಡಲಿದೆ.  2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ 77 ಸೀಟುಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿದಿತ್ತು. ಈ ಮೂಲಕ ಅದಕ್ಕೂ ಹಿಂದಿದ್ದ ಎಸ್​ಎಡ-ಬಿಜೆಪಿ ಮೈತ್ರಿ ಸರ್ಕಾರದ 10 ವರ್ಷಗಳ ಆಡಳಿತ ಕೊನೆಗೊಂಡಿತ್ತು. ಆಪ್​ 20 ಕ್ಷೇತ್ರಗಳಲ್ಲಿ ಗೆದ್ದು, ಎರಡನೇ ಅತಿಹೆಚ್ಚು ಪಡೆದ ಕ್ಷೇತ್ರವಾಗಿತ್ತು. ಎಸ್​ಎಡಿ-ಬಿಜೆಪಿ ಮೈತ್ರಿ 18 ಕ್ಷೇತ್ರಗಳನ್ನು ಗೆದ್ದುಕೊಂಡಿದ್ದವು. ಅದರಲ್ಲೂ ಬಿಜೆಪಿ ಗೆದ್ದಿದ್ದು ಕೇವಲ ಮೂರು ಕ್ಷೇತ್ರಗಳಲ್ಲಾಗಿತ್ತು.

ಇದನ್ನೂ ಓದಿ: ಮೂವರು ಸುಂದರಿಯರ ಜತೆ ಧರ್ಮ ಕೀರ್ತಿರಾಜ್​; ‘ಸುಮನ್​’ ಚಿತ್ರದ ಹಾಡುಗಳು ರಿಲೀಸ್​

Published On - 3:24 pm, Thu, 13 January 22

Click on your DTH Provider to Add TV9 Kannada