Bhagwant Mann ಪಂಜಾಬ್‌ನಲ್ಲಿ ಭಗವಂತ್ ಮಾನ್ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ
Punjab Assembly Election 2022 . ಟೆಲಿವೋಟ್‌ನ ಫಲಿತಾಂಶಗಳ ಪ್ರಕಾರ ಭಗವಂತ್ ಮಾನ್ ಅವರನ್ನು ಪಂಜಾಬ್‌ನಲ್ಲಿ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.
ಮೊಹಾಲಿ: ಭಗವಂತ್ ಮಾನ್ ಅವರು ಪಂಜಾಬ್‌ನ (Punjab) ಆಮ್ ಆದ್ಮಿ ಪಕ್ಷದ (AAP) ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅರವಿಂದ ಕೇಜ್ರಿವಾಲ್ ಮೆಂಗಳವಾರ ಘೋಷಿಸಿದ್ದಾರೆ. ಟೆಲಿವೋಟ್‌ನ ಫಲಿತಾಂಶಗಳ ಪ್ರಕಾರ ಮಾನ್ ಅವರನ್ನು ಪಂಜಾಬ್‌ನಲ್ಲಿ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಸಂಗ್ರೂರ್‌ನಿಂದ ಎರಡು ಬಾರಿ ಎಎಪಿ ಸಂಸದರಾಗಿರುವ ಭಗವಂತ್ ಮಾನ್ ಅವರು ಫೋನ್ ಮತ್ತು ವಾಟ್ಸಾಪ್ ಮೂಲಕ ಶೇಕಡಾ 93 ಕ್ಕಿಂತ ಹೆಚ್ಚು ಮತಗಳನ್ನು ಪಡೆದಿದ್ದಾರೆ ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಸುದ್ದಿಗಾರರಿಗೆ ತಿಳಿಸಿದರು. 21 ಲಕ್ಷಕ್ಕೂ ಹೆಚ್ಚು ಜನರು ಮತದಾನದಲ್ಲಿ ಪಾಲ್ಗೊಂಡಿದ್ದಾರೆ ಎಂದು ಎಎಪಿ ಹೇಳಿದೆ. ಸುಮಾರು 3 ರಷ್ಟು ಮತಗಳು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರ ಹೆಸರಿನಲ್ಲಿವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಕೆಲವರು ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ಆಯ್ಕೆ ಮಾಡಿದರು, ಆದರೆ ಆ ಮತಗಳನ್ನು ಅಸಿಂಧು ಎಂದು ಪರಿಗಣಿಸಲಾಯಿತು. ಎಎಪಿ ಪಂಜಾಬ್ ಚುನಾವಣೆಯಲ್ಲಿ ಗೆಲ್ಲುವುದು ಸ್ಪಷ್ಟವಾಗಿದೆ. ಒಂದು ರೀತಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾದ ವ್ಯಕ್ತಿ ಪಂಜಾಬ್‌ನ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂದು ಮೊಹಾಲಿಯಲ್ಲಿ ಮಾತನಾಡಿದ ಕೇಜ್ರಿವಾಲ್ ಹೇಳಿದರು.
ದೈತ್ಯ ಪರದೆಯ ಮೇಲೆ ಭಗವಂತ್ ಮಾನ್ ಅವರ ಕುರಿತಾದ ದೃಶ್ಯಗಳು ಪ್ರದರ್ಶನವಾಗುತ್ತಿದ್ದಂತೆ ಸಭಾಂಗಣವು ಹರ್ಷೋದ್ಗಾರ ಮತ್ತು ಘೋಷಣೆಗಳಿಂದ ತುಂಬಿತು. “ಜನರು ನನ್ನ ಮುಖವನ್ನು ನೋಡಿ ನಗುತ್ತಿದ್ದರು. ಆದರೆ ಈಗ ಅವರು ಅಳುತ್ತಾ ಮತ್ತು ನಮ್ಮನ್ನು ಉಳಿಸಿ ಎಂದು ಹೇಳುತ್ತಾರೆ ಎಂದು ಸ್ಟ್ಯಾಂಡಪ್ ಕಾಮಿಡಿಯನ್ ಆಗಿದ್ದ ಮಾನ್ ಹೇಳಿದ್ದಾರೆ.
ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.
ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದ ಮೊದಲ ಮತ್ತು ಇದುವರೆಗೆ ಘೋಷಣೆ ಮಾಡಿದ ಏಕೈಕ ಪಕ್ಷವಾಗಿದೆ ಎಎಪಿ. ಹಿಂದಿನ ಚುನಾವಣೆಗಳಲ್ಲಿ ಎಎಪಿ ಈ ರೀತಿ ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಘೋಷಿಸುತ್ತಿರಲಿಲ್ಲ.
ಕಳೆದ ವಾರ ಆಮ್ ಆದ್ಮಿ ಪಕ್ಷವು ಪಂಜಾಬ್‌ನ ಜನರನ್ನು ಮುಖ್ಯಮಂತ್ರಿ ಹುದ್ದೆಗೆ ತಮ್ಮ ಆಯ್ಕೆಯ ವ್ಯಕ್ತಿಯ ಹೆಸರು ಸೂಚಿಸಲು 7074870748 ಅನ್ನು ಡಯಲ್ ಮಾಡಲು ಹೇಳಿತ್ತು. “ಪಕ್ಷವೊಂದು ಸಾರ್ವಜನಿಕರಿಗೆ ತಮ್ಮದೇ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಅವಕಾಶ ನೀಡುತ್ತಿರುವುದು ಇದೇ ಮೊದಲು” ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಪಂಜಾಬ್‌ನ ಜನರು 7074870748 ಗೆ ಕರೆ ಮಾಡಬಹುದು, WhatsApp ಅಥವಾ SMS ಮಾಡಬಹುದು ಮತ್ತು ಅವರ ಆಯ್ಕೆಯ ವ್ಯಕ್ತಿಯನ್ನು ಹೆಸರಿಸಬಹುದು. ಜನವರಿ 17 ರಂದು ಸಂಜೆ 5 ಗಂಟೆಯವರೆಗೆ ಫೋನ್ ಸಂಖ್ಯೆ ತೆರೆದಿರುತ್ತದೆ. ನಾವು ಪ್ರತಿಕ್ರಿಯೆಗಳನ್ನು ಪರಿಶೀಲಿಸುತ್ತೇವೆ ಮತ್ತು ಪ್ರತಿಕ್ರಿಯೆಯನ್ನು ಆಧರಿಸಿ ಎಎಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತದೆ ಎಂದು ಅವರು ಹೇಳಿದ್ದರು.
“ಜನತಾ ಚುನೇಗಿ ಅಪ್ನಾ ಸಿಎಂ (ಜನರು ತಮ್ಮ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ) 7074870748 ಗೆ ಕರೆ ಮಾಡಿ- ಟೆಲಿವೋಟ್ ಬಗ್ಗೆ ಎಎಪಿ ಈ ರೀತಿ ಪೋಸ್ಟರ್ ಹಾಕಿತ್ತು. ಎಎಪಿಯ ಪಂಜಾಬ್ ಮುಖ್ಯಸ್ಥರಾದ ಮಾನ್, ಪಕ್ಷವು ತನ್ನನ್ನು ಸಂಭಾವ್ಯ ಮುಖ್ಯಮಂತ್ರಿ ಎಂದು ಹೆಸರಿಸಲು ಬಹಳ ಸಮಯದಿಂದ ಕಾಯುತ್ತಿದ್ದರು.
ಎಎಪಿಯು ರೈತ ಸಂಘದ ನಾಯಕ ಬಲ್ಬೀರ್ ರಾಜೇವಾಲ್ ಅವರೊಂದಿಗೆ ಸಂಪರ್ಕದಲ್ಲಿದೆ ಎಂದು ವರದಿಗಳು ಈ ಹಿಂದೆ ಸೂಚಿಸಿದ್ದವು. ಅವರೊಂದಿಗಿನ ಮಾತುಕತೆಗಳು ವಿಫಲವಾದವು ಮತ್ತು ಎಎಪಿ ಸೀಮಿತ ಆಯ್ಕೆಗಳೊಂದಿಗೆ ಉಳಿಯಿತು ಎಂದು ವರದಿಗಳು ಹೇಳಿವೆ.
ಕೇಜ್ರಿವಾಲ್ ಕಳೆದ ವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮಾನ್ ಅವರಿಗೆ ಉನ್ನತ ಹುದ್ದೆ ವಹಿಸಬೇಕೆಂದಿದ್ದೇನೆ ಎಂದು ಹೇಳಿದ್ದರು. ಆಮೇಲೆ ಸಾರ್ವಜನಿಕರು ಆಯ್ಕೆ ಮಾಡಲಿ ಎಂಬ ವಿಧಾನವನ್ನು ಕೇಜ್ರಿವಾಲ್ ಸ್ವೀಕರಿಸಿದರು.
“ಭಗವಂತ್ ಮಾನ್ ಅವರು ನನಗೆ ತುಂಬಾ ಆತ್ಮೀಯರು. ಅವರು ನನ್ನ ಛೋಟಾ ಭಾಯ್ (ಕಿರಿಯ ಸಹೋದರ). ಅವರು ಎಎಪಿಯ ದೊಡ್ಡ ನಾಯಕ. ನಾನು ಕೂಡ ಅವರೇ ಮುಖ್ಯಮಂತ್ರಿ ಅಭ್ಯರ್ಥಿಯಾಗಬೇಕು ಎಂದು ಹೇಳುತ್ತಿದ್ದೆ. ಆದರೆ ಅವರು ಇಲ್ಲ, ಜನರು ನಿರ್ಧರಿಸಲಿ ಎಂದು ಹೇಳಿರುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಪಂಜಾಬ್‌ನ ಆಡಳಿತಾರೂಢ ಕಾಂಗ್ರೆಸ್‌ಗೆ ಎಎಪಿ ಪ್ರಬಲ ಸವಾಲಾಗಿ ಹೊರಹೊಮ್ಮಿದೆ. ಬಿಜೆಪಿ-ಅಮರಿಂದರ್ ಸಿಂಗ್ ಮೈತ್ರಿ ಮತ್ತು ಅಕಾಲಿದಳ ನೇತೃತ್ವದ ಮೈತ್ರಿ ಚುನಾವಣಾ ಕಣದಲ್ಲಿದೆ.
2017ರ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್‌ನ 117 ಕ್ಷೇತ್ರಗಳ ಪೈಕಿ 77 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಎಎಪಿ 20 ಸ್ಥಾನಗಳನ್ನು ಗೆದ್ದು ಎರಡನೇ ಸ್ಥಾನದಲ್ಲಿತ್ತು. ಅಕಾಲಿದಳ 15 ಸ್ಥಾನಗಳನ್ನು ಗೆದ್ದಿತ್ತು ಮತ್ತು ಈಗ ಪ್ರತ್ಯೇಕಗೊಂಡ ಮೈತ್ರಿಕೂಟದ ಪಾಲುದಾರ ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದಿದೆ.
Published On - 1:25 pm, Tue, 18 January 22