ಪಂಜಾಬ್​ ವಿಧಾನಸಭಾ ಚುನಾವಣೆಯನ್ನು ಫೆ.20ಕ್ಕೆ ಮುಂದೂಡಿದ ಚುನಾವಣಾ ಆಯೋಗ; ಸಿಎಂ ಛನ್ನಿ, ಬಿಜೆಪಿ ನಾಯಕರ ಮನವಿಗೆ ಸ್ಪಂದನೆ

ಪಂಜಾಬ್​ ವಿಧಾನಸಭಾ ಚುನಾವಣೆಯನ್ನು ಫೆ.20ಕ್ಕೆ ಮುಂದೂಡಿದ ಚುನಾವಣಾ ಆಯೋಗ; ಸಿಎಂ ಛನ್ನಿ, ಬಿಜೆಪಿ ನಾಯಕರ ಮನವಿಗೆ ಸ್ಪಂದನೆ
ಪ್ರಾತಿನಿಧಿಕ ಚಿತ್ರ

Punjab Assembly Election 2022: ಪಂಜಾಬ್​​ ಮುಖ್ಯಮಂತ್ರಿ ಚರಣಜಿತ್​ ಸಿಂಗ್​ ಛನ್ನಿ ಮುಖ್ಯ ಚುನಾವಣಾ ಆಯುಕ್ತ ಸುಶೀಲ್​ ಚಂದ್ರರಿಗೆ ಪತ್ರ ಬರೆದು, ಫೆ.16ರಂದು ಗುರು ರವಿದಾಸರ ಜನ್ಮ ದಿನ ಹಿನ್ನೆಲೆಯಲ್ಲಿ ಚುನಾವಣೆಯನ್ನು ಆರು ದಿನಗಳಿಗೆ ಮುಂದೂಡಬೇಕು ಎಂದು ಮನವಿ ಮಾಡಿದ್ದರು. 

TV9kannada Web Team

| Edited By: Lakshmi Hegde

Jan 17, 2022 | 2:55 PM

ಫೆಬ್ರವರಿ 14ಕ್ಕೆ ನಡೆಯಬೇಕಿದ್ದ ಪಂಜಾಬ್​ ವಿಧಾನಸಭೆ ಚುನಾವಣೆ(Punjab Assembly Election 2022)ಯನ್ನು  ಚುನಾವಣಾ ಆಯೋಗ ಫೆಬ್ರವರಿ 20ಕ್ಕೆ ಮುಂದೂಡಿದೆ. ಗುರು ರವಿದಾಸ ಜಯಂತಿ (Guru Ravidas Jayanti) ಆಚರಣೆ ಹಿನ್ನೆಲೆಯಲ್ಲಿ ಆರು ದಿನಗಳ ಕಾಲ ಮುಂದೂಡಿ ಆದೇಶ ಹೊರಡಿಸಿದೆ. ಫೆಬ್ರವರಿ 16ರಂದು ಗುರು ರವಿದಾಸ ಜಯಂತಿ ಇರುವ ಹಿನ್ನೆಲೆಯಲ್ಲಿ ಫೆಬ್ರವರಿ 14ರಂದು ಚುನಾವಣೆ ನಡೆಸಬಾರದು.  ಯಾಕೆಂದರೆ ಪಂಜಾಬ್​ನಿಂದ ಅನೇಕ ಭಕ್ತರು ಉತ್ತರಪ್ರದೇಶಕ್ಕೆ ಹೋಗಬೇಕಾಗುತ್ತದೆ. ಸಿಖ್​ ಸಮುದಾಯದ ಭಕ್ತರು ಫೆ.10ರಿಂದಲೇ ವಾರಾಣಸಿಗೆ ಹೋಗಲು ಶುರು ಮಾಡುತ್ತಾರೆ ಎಂದು ಪಂಜಾಬ್​ ಮುಖ್ಯಮಂತ್ರಿ ಚರಣಜಿತ್​ ಸಿಂಗ್​ ಛನ್ನಿ, ಬಿಜೆಪಿ ನಾಯಕರು ಚುನಾವಣಾ ಆಯೋಗಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು. ಈ ಬಗ್ಗೆ ಚರ್ಚಿಸಲು ಇಂದು ಚುನಾವಣಾ ಆಯೋಗ ಸಭೆ ನಡೆಸಿತ್ತು. 

ಜನವರಿ 8ರಂದು ಸುದ್ದಿಗೋಷ್ಠಿ ನಡೆಸಿದ್ದ ಚುನಾವಣಾ ಆಯೋಗದ ಅಧಿಕಾರಿಗಳು, ಗೋವಾ, ಪಂಜಾಬ್​, ಉತ್ತರಾಖಂಡ್​, ಉತ್ತರಪ್ರದೇಶ, ಮಣಿಪುರ ರಾಜ್ಯಗಳ ದಿನಾಂಕ ಘೋಷಣೆ ಮಾಡಿದ್ದರು. ಅದರಲ್ಲಿ ಪಂಜಾಬ್​, ಗೋವಾ, ಉತ್ತರಾಖಂಡ್​ಗಳಲ್ಲಿ ಫೆ.14ರಂದು ಮತದಾನ ನಡೆಯಲಿದೆ ಎಂದು ಹೇಳಿದ್ದರು. ಆದರೆ ಪಂಜಾಬ್​​ ಮುಖ್ಯಮಂತ್ರಿ ಚರಣಜಿತ್​ ಸಿಂಗ್​ ಛನ್ನಿ ಮುಖ್ಯ ಚುನಾವಣಾ ಆಯುಕ್ತ ಸುಶೀಲ್​ ಚಂದ್ರರಿಗೆ ಪತ್ರ ಬರೆದು, ಫೆ.16ರಂದು ಗುರು ರವಿದಾಸರ ಜನ್ಮ ದಿನ ಹಿನ್ನೆಲೆಯಲ್ಲಿ ಚುನಾವಣೆಯನ್ನು ಆರು ದಿನಗಳಿಗೆ ಮುಂದೂಡಬೇಕು ಎಂದು ಮನವಿ ಮಾಡಿದ್ದರು.  ಫೆ. 16ರಂದು ಗುರು ರವಿದಾಸ ಜಯಂತಿ ಹಿನ್ನೆಲೆಯಲ್ಲಿ ಪಂಜಾಬ್​ನ ಎಸ್​ಸಿ ಸಮುದಾಯ ಸುಮಾರು 20 ಲಕ್ಷ ಭಕ್ತರು ಉತ್ತರಪ್ರದೇಶದ ಬನಾರಸ್​ಗೆ ಭೇಟಿ ಕೊಡುತ್ತಾರೆ. ಬಹುತೇಕವಾಗಿ ಫೆ.10ರಿಂದಲೇ ಅಲ್ಲಿಗೆ ಹೋಗಲು ಶುರು ಮಾಡುತ್ತಾರೆ. ಹೀಗಾಗಿ ಫೆ.14ರಂದು ಚುನಾವಣೆ ನಡೆದರೆ ಅನೇಕರಿಗೆ ಮತದಾನ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದರು. ಇದಕ್ಕೆ ಬಿಜೆಪಿ ಕೂಡ ಸಾಥ್​ ನೀಡಿತ್ತು.

ಗುರು ರವಿದಾಸರು 15-16ನೇ ಶತಮಾನದ ಸಂತರು. ಅತಿ ಮುಖ್ಯವಾಗಿ ಭಕ್ತಿ ಚಳವಳಿಯಲ್ಲಿ ಗುರುತಿಸಿಕೊಂಡಿದ್ದವರು. ಈ ಬಾರಿ ಫೆಬ್ರವರಿ 16ರಂದು ಅವರ 645ನೇ ಜನ್ಮ ವಾರ್ಷಿಕೋತ್ಸವ ನಡೆಯಲಿದೆ. ಇವರು ಬರೆದ ಸುಮಾರು 40 ಪದ್ಯಗಳು, ಸಿಖ್ಖರ ಪವಿತ್ರ ಧರ್ಮಗ್ರಂಥ ಆದಿ ಗ್ರಂಥದಲ್ಲಿ ಸೇರಿಸಲ್ಪಟ್ಟಿವೆ. ಜಾತೀಯತೆ, ತಾರತಮ್ಯವನ್ನು ಹೋಗಲಾಡಿಸಲು ಅವರು ತುಂಬ ಹೋರಾಡಿದ್ದರು ಎಂದು ಹೇಳಲಾಗುತ್ತದೆ. ಅವರ ಜಯಂತಿಯಂದು ಭಕ್ತರು ಪವಿತ್ರ ನದಿಗಳಲ್ಲಿ ಪುಣ್ಯಸ್ನಾನವನ್ನೂ ಮಾಡುತ್ತಾರೆ.

ಇದನ್ನೂ ಓದಿ: Lata Mangeshkar: ಲತಾ ಮಂಗೇಶ್ಕರ್ ಆರೋಗ್ಯ ಸುಧಾರಣೆಗೆ ಕುಟುಂಬವರಿಂದ ವಿಶೇಷ ಪೂಜೆ; ಸಹೋದರಿ ಆಶಾ ಬೋಸ್ಲೆ ಮಾಹಿತಿ

Follow us on

Related Stories

Most Read Stories

Click on your DTH Provider to Add TV9 Kannada