Trend continues: ರಾಜಸ್ಥಾನ ವಿಧಾನಸಭಾ ಚುನಾವಣೆ; 1993ರಿಂದೀಚೆ ಯಾವ ಪಕ್ಷವೂ ಸತತ ಎರಡು ಬಾರಿ ಗೆದ್ದದ್ದಿಲ್ಲ
Rajasthan Assembly elections 2023: ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತಕ್ಕೆ ಬೇಕಾದ 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಗದ್ದುಗೆಗೆ ಮರಳಿ ಬಂದು ಕೂರುತ್ತಿದೆ. ರಾಜಸ್ಥಾನ ಮೂಲತಃ ಕಾಂಗ್ರೆಸ್ ಭದ್ರಕೋಟೆಯಾಗಿದ್ದು ಬಿಜೆಪಿ 1993ರಲ್ಲಿ ಮೊದಲ ಬಾರಿಗೆ ಅಧಿಕಾರ ಬಂದಿತ್ತು. ಆಗಿನಿಂದಲೂ ಇಲ್ಲಿ ಕಾಂಗ್ರೆಸ್ ಆಗಲೀ ಬಿಜೆಪಿಯಾಗಲೀ ಸತತ ಎರಡು ಅವಧಿಗೆ ಅಧಿಕಾರ ಪಡೆದಿದ್ದಿಲ್ಲ. ಪ್ರತೀ ಬಾರಿಯೂ ಆಡಳಿತಪಕ್ಷ ಸೋಲನುಭವಿಸುತ್ತಾ ಬಂದಿದೆ.
ಜೈಪುರ್, ಡಿಸೆಂಬರ್ 3: ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ (Rajasthan Assembly Elections 2023) ಆಡಳಿತಾರೂಢ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡಿದೆ. ಬಿಜೆಪಿ ಮರಳಿ ಗದ್ದುಗೆ ಹಿಡಿದಿದೆ. ಮತಗಟ್ಟೆ ಸಮೀಕ್ಷೆಗಳ ಅಂದಾಜಿಗಿಂತ ಬಿಜೆಪಿ ಗೆಲುವು ತುಸು ಸುಲಭವಾಗಿ ದಕ್ಕಿದೆ. ಕರ್ನಾಟಕ, ತಮಿಳುನಾಡು ರಾಜಕೀಯದಲ್ಲಿಯಂತೆ ರಾಜಸ್ಥಾನದಲ್ಲೂ ಕಳೆದ 3 ದಶಕಗಳಿಂದ ಯಾವುದೇ ಒಂದು ಪಕ್ಷ ಸತತ ಎರಡು ಬಾರಿ ಅಧಿಕಾರ ಹಿಡಿಯಲು ಯಶಸ್ವಿಯಾಗಿಲ್ಲ. ಆ ಪರಂಪರೆ ಈ ಬಾರಿಯೂ ಮುಂದುವರಿದಿದೆ. 1993ರಿಂದೀಚೆ ರಾಜಸ್ಥಾನದಲ್ಲಿ ಆಡಳಿತಾರೂಢ ಪಕ್ಷಗಳು ಅಧಿಕಾರ ಕಳೆದುಕೊಳ್ಳುತ್ತಾ ಬಂದಿವೆ. ಈ ಬಾರಿ ಈ ದಾಖಲೆ ಸರಿಮಾಡುವ ಸಿಎಂ ಅಶೋಕ್ ಗೆಹ್ಲೋತ್ ಪ್ರಯತ್ನ ವಿಫಲವಾಗಿದೆ.
1993ರಲ್ಲಿ ಕಾಂಗ್ರೆಸ್ ಭದ್ರಕೋಟೆ ಭೇದಿಸಿತ್ತು ಬಿಜೆಪಿ
1952ರಲ್ಲಿ ರಾಜಸ್ಥಾನದಲ್ಲಿ ಮೊದಲ ವಿಧಾನಸಭಾ ಚುನಾವಣೆ ಆಗಿದ್ದು. 1977 ಅನ್ನು ಹೊರತುಪಡಿಸಿ 1952ರಿಂದ 1990ರವರೆಗೆ ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಲ್ಲಿ ಇದ್ದದ್ದು. ಈ ವೇಳೆ ನಡೆದ 9 ಚುನಾವಣೆಯಲ್ಲಿ ಕಾಂಗ್ರೆಸ್ ಎಂಟರಲ್ಲಿ ಗೆದ್ದಿತ್ತು. 1977ರಲ್ಲಿ ಜನತಾ ಪಕ್ಷ ಗೆದ್ದಿದ್ದು ಬಿಟ್ಟರೆ ರಾಜಸ್ಥಾನ 1990ರವರೆಗೂ ಅಕ್ಷರಶಃ ಕೈ ಭದ್ರಕೋಟೆಯೇ ಆಗಿತ್ತು. 1993ರಲ್ಲಿ ಮಾಜಿ ಜನತಾ ಪಕ್ಷ ಭೈರೋನ್ ಸಿಂಗ್ ಶೆಖಾವತ್ ನೇತೃತ್ವದಲ್ಲಿ ಬಿಜೆಪಿ ಈ ಕಾಂಗ್ರೆಸ್ ಭದ್ರಕೋಟೆಯನ್ನು ಭೇದಿಸಿ ಅಧಿಕಾರ ಹಿಡಿಯಿತು. ಅಲ್ಲಿಂದ ಈಚೆಗೆ ಯಾವುದೇ ಪಕ್ಷಕ್ಕೂ ಸತತ ಎರಡು ಬಾರಿ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ. ಇತ್ತೀಚೆಗೆ ಬಿಜೆಪಿಗೂ ಸಾಧ್ಯವಾಗಿಲ್ಲ.
ಇದನ್ನೂ ಓದಿ: ವಿಧಾನಸಭಾ ಚುನಾವಣೆ: 3 ರಾಜ್ಯಗಳಲ್ಲಿ ಕಾಂಗ್ರೆಸ್ಗೆ ಹಿನ್ನಡೆ, ಪಕ್ಷ ಮಾಡಿರುವ 3 ತಪ್ಪುಗಳಿವು
ರಾಜಸ್ಥಾನದಲ್ಲಿ ಯಾವ್ಯಾವಾಗ ಯಾವ ಪಕ್ಷಗಳು ಅಧಿಕಾರಕ್ಕೆ, ಇಲ್ಲಿದೆ ಪಟ್ಟಿ
1952: ಕಾಂಗ್ರೆಸ್ 1957: ಕಾಂಗ್ರೆಸ್ 1962: ಕಾಂಗ್ರೆಸ್ 1967: ಕಾಂಗ್ರೆಸ್ 1972: ಕಾಂಗ್ರೆಸ್ 1977: ಜನತಾ ಪಾರ್ಟಿ 1980: ಕಾಂಗ್ರೆಸ್ 1985: ಕಾಂಗ್ರೆಸ್ 1990: ಕಾಂಗ್ರೆಸ್ 1993: ಬಿಜೆಪಿ 1998: ಕಾಂಗ್ರೆಸ್ 2003: ಬಿಜೆಪಿ 2008: ಕಾಂಗ್ರೆಸ್ 2013: ಬಿಜೆಪಿ 2018: ಕಾಂಗ್ರೆಸ್ 2023: ಬಿಜೆಪಿ
ಇಲ್ಲಿ ಒಟ್ಟಾರೆ 16 ಚುನಾವಣೆಗಳಲ್ಲಿ 11 ಬಾರಿ ಕಾಂಗ್ರೆಸ್ ಗೆದ್ದು ಆಡಳಿತ ನಡೆಸಿದೆ. ಬಿಜೆಪಿ ನಾಲ್ಕು ಬಾರಿ ಗೆದ್ದಂತಾಗಿದೆ. ಜನಪಾ ಪಕ್ಷ ಒಮ್ಮೆ ಗೆದ್ದಿದೆ.
ಇದನ್ನೂ ಓದಿ: ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿದ್ದೇಕೆ ಮತದಾರ? ಇಲ್ಲಿದೆ ಕಾರಣ
ಈ ಬಾರಿ ಯಾರಾಗ್ತಾರೆ ರಾಜಸ್ಥಾನ ಸಿಎಂ?
ರಾಜಸ್ಥಾನದಲ್ಲಿ ಬಿಜೆಪಿ ಬಹುಮತಕ್ಕೆ ಬರುವುದು ನಿಶ್ಚಿತವಾಗುತ್ತಿರುವಂತೆಯೇ ಸಿಎಂ ಸ್ಥಾನಕ್ಕೆ ಹೆಸರುಗಳು ಕೇಳಿಬರುತ್ತಿವೆ. ರಾಜಮನೆತನಕ್ಕೆ ಸೇರಿದ ವಸುಂಧರಾ ರಾಜೆ ಅವರು ಮೂರನೇ ಬಾರಿ ಸಿಎಂ ಆಗುವ ಆಸೆಯಲ್ಲಿದ್ದಾರೆ. ಬಿಜೆಪಿಗೆ ಬಹುಮತಕ್ಕೆ ಕೆಲವೇ ಸ್ಥಾನ ಕೊರತೆಯಾದರೆ ಅವರನ್ನೇ ಮುಖ್ಯಮಂತ್ರಿ ಮಾಡುವುದೆಂದು ಕೇಂದ್ರೀಯ ನಾಯಕರು ಆಲೋಚಿಸಿದ್ದರು. ಆದರೆ, ಪಕ್ಷಕ್ಕೆ ಸ್ಪಷ್ಟಬಹುಮತ ಬಂದಿರುವುದರಿಂದ ವಸುಂಧರಾ ಮತ್ತೆ ಸಿಎಂ ಆಗುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.
ಈಗ ಹೆಚ್ಚು ದಟ್ಟವಾಗಿ ಕೇಳಿಬರುತ್ತಿರುವ ಹೆಸರು ಮಸ್ತ್ನಾಥ್ ಮಠದ ಮಹಂತ್ ಬಾಲಕನಾಥ್ ಅವರದ್ದು. ಯೋಗಿ ಆದಿತ್ಯನಾಥರ ನಾಥ ಪರಂಪರೆಯ ಮಠಾಧೀಶರಾಗಿರುವ ಬಾಬಾ ಬಾಲಕನಾಥ್ ಅವರು ರಾಜಸ್ಥಾನದ ಸಿಎಂ ಆದರೆ ಯಾವ ಅಚ್ಚರಿಯೂ ಇಲ್ಲ.
ಇನ್ನಷ್ಟು ಚುನಾವಣೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:38 pm, Sun, 3 December 23