ಕೆಸಿಆರ್ ಬಿಜೆಪಿ ಜೊತೆ ಸ್ನೇಹ ಬೆಳೆಸಲು ಪ್ರಯತ್ನ ನಡೆಸುತ್ತಿದ್ದರು: ತೆಲಂಗಾಣದಲ್ಲಿ ಪ್ರಧಾನಿ ಮೋದಿ
ಎನ್‌ಡಿಎ ಸೇರಲು ನಾನು ಬಿಡದ ಕಾರಣ ಕೆಸಿಆರ್ ನನ್ನನ್ನು ನಿಂದಿಸಿದ್ದಾರೆ. ಬಿಆರ್‌ಎಸ್ ಹತ್ತಿರ ಬರಲು ಬಿಜೆಪಿ ಎಂದಿಗೂ ಬಿಡುವುದಿಲ್ಲ. ತೆಲಂಗಾಣ ಜನತೆಯ ಆಶಯಕ್ಕೆ ವಿರುದ್ಧವಾಗಿ ಬಿಜೆಪಿ ಎಂದಿಗೂ ಕೆಲಸ ಮಾಡುವುದಿಲ್ಲ ಎಂದು ತೆಲಂಗಾಣದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಹೇಳಿದ್ದಾರೆ.
ಮಹಬೂಬಾಬಾದ್ ನವೆಂಬರ್ 27: ತೆಲಂಗಾಣ (Telangana) ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (KCR) ವಿರುದ್ಧ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸೋಮವಾರ ವಾಗ್ದಾಳಿ ನಡೆಸಿದ್ದು, ಭಾರತ್ ರಾಷ್ಟ್ರ ಸಮಿತಿ (BRS), ಬಿಜೆಪಿಯೊಂದಿಗೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ. ಬಿಜೆಪಿಯ ಹೆಚ್ಚುತ್ತಿರುವ ಶಕ್ತಿಯನ್ನು ಕೆಸಿಆರ್ ಬಹಳ ಹಿಂದೆಯೇ ಅರಿತುಕೊಂಡಿದ್ದರು. ಬಹಳ ದಿನಗಳಿಂದ ಬಿಜೆಪಿಯೊಂದೆ ಗೆಳೆತನ ಮಾಡಲು ಪ್ರಯತ್ನ ನಡೆಸುತ್ತಿದ್ದರು. ಒಮ್ಮೆ ದೆಹಲಿಗೆ ಬಂದಾಗ ಕೆಸಿಆರ್ ನನ್ನನ್ನು ಭೇಟಿಯಾಗಿ ಇದೇ ಮನವಿ ಮಾಡಿದ್ದರು. ಆದರೆ ತೆಲಂಗಾಣ ಜನತೆಯ ಆಶಯಕ್ಕೆ ವಿರುದ್ಧವಾಗಿ ಬಿಜೆಪಿ ಎಂದಿಗೂ ಕೆಲಸ ಮಾಡಲಾರದು ಎಂದು ಮಹಬೂಬಾಬಾದ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಹೇಳಿದರು.
“ಬಿಜೆಪಿ ಕೆಸಿಆರ್ ಅನ್ನು ತಿರಸ್ಕರಿಸಿದಾಗಿನಿಂದ, ಬಿಆರ್‌ಎಸ್ ಗೊಂದಲಕ್ಕೊಳಗಾಗಿದೆ. ನನ್ನನ್ನು ನಿಂದಿಸುವ ಯಾವುದೇ ಅವಕಾಶವನ್ನು ಪಕ್ಷ ಕಳೆದುಕೊಳ್ಳುವುದಿಲ್ಲ. ಮೋದಿ ಬಿಜೆಪಿಯ ಹತ್ತಿರಬಿಡುವುದಿಲ್ಲ ಎಂಬುದು ಬಿಆರ್‌ಎಸ್‌ಗೆ ತಿಳಿದಿದೆ. ಇದು ಮೋದಿಯವರ ಗ್ಯಾರಂಟಿ,” ಎಂದಿದ್ದಾರೆ ಮೋದಿ.
KCR abuses me because I did not allow him to join NDA.
BJP will never allow BRS to come close to it. pic.twitter.com/TDMEfjogz5
— Narendra Modi (@narendramodi) November 27, 2023
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಕೆಸಿಆರ್ ಪ್ರಯತ್ನಿಸುತ್ತಿರುವ ಬಗ್ಗೆ ಪ್ರಧಾನಿಯವರು ಇದೇ ರೀತಿಯ ಹೇಳಿಕೆ ನೀಡಿರುವುದು ಇದೇ ಮೊದಲಲ್ಲ. ಕಳೆದ ತಿಂಗಳು, ನಿಜಾಮಾಬಾದ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಮೋದಿ ಅವರು ಕೆಸಿಆರ್ ಅವರನ್ನು ದೆಹಲಿಗೆ ಭೇಟಿ ಮಾಡಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸೇರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು ಎಂದು ಹೇಳಿದ್ದರು. ಹೈದರಾಬಾದ್ ಮುನ್ಸಿಪಲ್ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆದ್ದ ಹಿನ್ನೆಲೆಯಲ್ಲಿ ಪ್ರಧಾನಿಯವರ ಪ್ರಕಾರ ಈ ಸಭೆ ನಡೆದಿದೆ.
“ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ನಂತರ, ಕೆಸಿಆರ್ ನನ್ನನ್ನು ಭೇಟಿ ಮಾಡಲು ದೆಹಲಿಗೆ ಬಂದರು ಮತ್ತು ಎನ್ ಡಿಎ ಸೇರಲು ಬಯಸುವುದಾಗಿ ಹೇಳಿದರು. ಅವರಿಗೆ ಬೆಂಬಲ ನೀಡುವಂತೆಯೂ ಕೇಳಿಕೊಂಡರು. ಅವರ ಕಾರ್ಯಗಳಿಂದಾಗಿ ಮೋದಿ ಅವರೊಂದಿಗೆ ಸಂಬಂಧ ಹೊಂದಲು ಸಾಧ್ಯವಿಲ್ಲ ಎಂದು ನಾನು ಅವರಿಗೆ (ಕೆಸಿಆರ್) ಹೇಳಿದ್ದೇನೆ ಎಂದು ಮೋದಿ ಹೇಳಿದರು.
ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ಶ್ಲಾಘನೆಗೊಳಗಾದ ಬಾಲಾಜಿ ಶ್ರೀನಿವಾಸನ್ ಯಾರು?
ಇಂದು(ಸೋಮವಾರ) ನಡೆದ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಮತ್ತು ಕೆಸಿಆರ್ ಇಬ್ಬರನ್ನೂ ‘ಸಮಾನ ಪಾಪಿಗಳು’ ಎಂದು ಕರೆದರು. “”ತೆಲಂಗಾಣವನ್ನು ನಾಶ ಮಾಡುವಲ್ಲಿ ಕಾಂಗ್ರೆಸ್ ಮತ್ತು ಕೆಸಿಆರ್ ಇಬ್ಬರೂ ಸಮಾನ ಪಾಪಿಗಳು. ಹಾಗಾಗಿ, ತೆಲಂಗಾಣ ಜನರು ಒಬ್ಬರನ್ನು ಹೊರಹಾಕಿದ ನಂತರ ಮತ್ತೊಂದು ರೋಗವನ್ನು ಬಿಡಲು ಸಾಧ್ಯವಿಲ್ಲ. ನಾನು ಇದನ್ನು ರಾಜ್ಯದ ಎಲ್ಲೆಡೆ ನೋಡಿದ್ದೇನೆ. ತೆಲಂಗಾಣದ ನಂಬಿಕೆ ಬಿಜೆಪಿ ಮೇಲಿದೆ. ತೆಲಂಗಾಣದ ಮುಂದಿನ ಸಿಎಂ ಬಿಜೆಪಿಯಿಂದಲೇ ಎಂದು ನಿರ್ಧರಿಸಿದ್ದೀರಿ. ತೆಲಂಗಾಣದಲ್ಲಿ ಮೊದಲ ಬಿಜೆಪಿ ಸಿಎಂ ಒಬಿಸಿ ಸಮುದಾಯದಿಂದ (ಹಿಂದುಳಿದ ವರ್ಗ) ಎಂದು ಬಿಜೆಪಿ ನಿಮಗೆ ಭರವಸೆ ನೀಡಿದೆ” ಎಂದು ಅವರು ಹೇಳಿದರು.
ತೆಲಂಗಾಣದಲ್ಲಿ ನವೆಂಬರ್ 30 ರಂದು ಒಂದೇ ಹಂತದ ಚುನಾವಣೆ ನಡೆಯಲಿದೆ. ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ