Dara Singh Chauhan ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನೆಡೆ; ಸಚಿವ ದಾರಾ ಸಿಂಗ್ ಚೌಹಾಣ್ ರಾಜೀನಾಮೆ

| Updated By: ರಶ್ಮಿ ಕಲ್ಲಕಟ್ಟ

Updated on: Jan 12, 2022 | 4:47 PM

ದಲಿತರು, ಹಿಂದುಳಿದ ಸಮುದಾಯಗಳ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚನೆ ಮಾಡಿದೆ. ಆದರೆ ಅವರಿಗೆ ಉತ್ತಮ ಸೇವೆ ನೀಡಲಿಲ್ಲ, ಅದಕ್ಕಾಗಿಯೇ ರಾಜೀನಾಮೆ ನೀಡಿದ್ದೇನೆ. ಮುಂದಿನ ಹೆಜ್ಜೆ ನನ್ನ ಸಮಾಜದ ಜನರೊಂದಿಗೆ ಚರ್ಚೆ ನಡೆಸುತ್ತೇನೆ. ನಂತರ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಚೌಹಾಣ್ ಹೇಳಿದ್ದಾರೆ.

Dara Singh Chauhan ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನೆಡೆ; ಸಚಿವ ದಾರಾ ಸಿಂಗ್ ಚೌಹಾಣ್ ರಾಜೀನಾಮೆ
ದಾರಾ ಸಿಂಗ್ ಚೌಹಾಣ್
Follow us on

ಲಖನೌ: ಉತ್ತರ ಪ್ರದೇಶದ ಸಚಿವ ದಾರಾ ಸಿಂಗ್ ಚೌಹಾಣ್ (Dara Singh Chauhan) ಬುಧವಾರ  ರಾಜೀನಾಮೆ ನೀಡಿದ್ದಾರೆ. ವಿಧಾನಸಭೆ ಚುನಾವಣೆಗೂ ಮುನ್ನ ರಾಜೀನಾಮೆ ನೀಡಿದ ಉತ್ತರ ಪ್ರದೇಶದ ಎರಡನೇ ಸಚಿವರಾಗಿದ್ದಾರೆ ಇವರು. ಮಂಗಳವಾರ ಉತ್ತರ ಪ್ರದೇಶದ ಕಾರ್ಮಿಕ ಸಚಿವ ಸ್ವಾಮಿ ಪ್ರಸಾದ್ ಮೌರ್ಯ (Swami Prasad Maurya)ಅವರು ಸಂಪುಟಕ್ಕೆ ಮತ್ತು ಬಿಜೆಪಿಗೆ ರಾಜೀನಾಮೆ ನೀಡಿದರು. ರಾಜ್ಯದ ಇತರ ನಾಲ್ವರು ಶಾಸಕರು ಕೂಡಾ ಇವರೊಂದಿಗೆ ಬಿಜೆಪಿ ತೊರೆದಿದ್ದರು.ದಾರಾ ಸಿಂಗ್ ಚೌಹಾಣ್ ಅವರು ಯೋಗಿ ಆದಿತ್ಯನಾಥ (Yogi Adityanath)  ಸರ್ಕಾರದಲ್ಲಿ ಅರಣ್ಯ ಮತ್ತು ಪರಿಸರ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಹಿಂದುಳಿದ ವರ್ಗಗಳು ಮತ್ತು ದಲಿತರನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿ ಅವರು ಬುಧವಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ .

ದಲಿತರು, ಹಿಂದುಳಿದ ಸಮುದಾಯಗಳ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚನೆ ಮಾಡಿದೆ. ಆದರೆ ಅವರಿಗೆ ಉತ್ತಮ ಸೇವೆ ನೀಡಲಿಲ್ಲ, ಅದಕ್ಕಾಗಿಯೇ ರಾಜೀನಾಮೆ ನೀಡಿದ್ದೇನೆ. ಮುಂದಿನ ಹೆಜ್ಜೆ ನನ್ನ ಸಮಾಜದ ಜನರೊಂದಿಗೆ ಚರ್ಚೆ ನಡೆಸುತ್ತೇನೆ. ನಂತರ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಚೌಹಾಣ್ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಮುಂದಿನ ತಿಂಗಳು ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಗೆ ಮುನ್ನ ಯೋಗಿ ತಂಡವನ್ನು ತೊರೆದ ಎರಡನೇ ಒಬಿಸಿ (ಇತರ ಹಿಂದುಳಿದ ವರ್ಗ) ನಾಯಕರಾಗಿದ್ದಾರೆ.   ರಾಜಕೀಯವಾಗಿ ಅತ್ಯಂತ ಪ್ರಮುಖವಾದ ರಾಜ್ಯದಲ್ಲಿ ಮತ್ತೊಮ್ಮೆ ಗದ್ದುಗೇಯೇರಲು ಬಯಸುತ್ತಿರುವ ಬಿಜೆಪಿಗೆ ಇದು ಭಾರಿ ಹೊಡೆತವಾಗಿದೆ. ಇಬ್ಬರು ಸಚಿವರು ಮತ್ತು ನಾಲ್ವರು ಶಾಸಕರು ಇದುವರೆಗೆ ಬಿಜೆಪಿ ತೊರೆದಿದ್ದು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷಕ್ಕೆ ಸೇರಲು ಸಿದ್ಧರಾಗಿದ್ದಾರೆ.

ನಾನು ಸಮರ್ಪಣಾ ಭಾವದಿಂದ ಕೆಲಸ ಮಾಡಿದ್ದೇನೆ ಆದರೆ ಹಿಂದುಳಿದ, ವಂಚಿತ ವರ್ಗಗಳು, ದಲಿತರು, ರೈತರು ಮತ್ತು ನಿರುದ್ಯೋಗಿ ಯುವಕರ ಮೇಲಿನ ಈ ಸರ್ಕಾರದ ದಬ್ಬಾಳಿಕೆಯ ಧೋರಣೆ ಮತ್ತು ಹಿಂದುಳಿದವರು ಮತ್ತು ದಲಿತರ ಕೋಟಾವನ್ನು ನಿರ್ಲಕ್ಷಿಸಿದ್ದರಿಂದ ನನಗೆ ನೋವಾಗಿ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಚೌಹಾಣ್ ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ. ಸ್ವಾಮಿ ಪ್ರಸಾದ್ ಮೌರ್ಯ ಅವರಂತೆಯೇ ಬಹುತೇಕ ಅದೇ ದಾಟಿಯಲ್ಲಿ ಚೌಹಾಣ್ ರಾಜೀನಾಮೆ ಪತ್ರವಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಉಪನಾಯಕ ಕೇಶವ್ ಪ್ರಸಾದ್ ಮೌರ್ಯ ಅವರು ಈ ಕ್ರಮವನ್ನು ಮರುಪರಿಶೀಲಿಸುವಂತೆ ಚೌಹಾಣ್ ಅವರನ್ನು ಒತ್ತಾಯಿಸಿ ಟ್ವೀಟ್ ಮಾಡಿದ್ದಾರೆ.

“ಯಾವುದೇ ಕುಟುಂಬದ ಸದಸ್ಯರು ದಾರಿ ತಪ್ಪಿದರೆ, ಅದು ತುಂಬಾ ದುಃಖವಾಗುತ್ತದೆ. ಹೊರ ಹೋಗುತ್ತಿರುವ ಗೌರವಾನ್ವಿತ ನಾಯಕರಲ್ಲಿ ನನ್ನ ಮನವಿಯೇನೆಂದರೆ, ದಯವಿಟ್ಟು ಮುಳುಗುವ ಹಡಗನ್ನು ಹತ್ತಬೇಡಿ ಅಥವಾ ಅದು ಅವರಿಗೆ ನಷ್ಟವಾಗುತ್ತದೆ. ಹಿರಿಯ ಸಹೋದರ ದಾರಾ ಸಿಂಗ್, ದಯವಿಟ್ಟು ನಿಮ್ಮ ನಿರ್ಧಾರವನ್ನು ಮರುಪರಿಶೀಲಿಸಿ ಎಂದು ಕೇಶವ್ ಮೌರ್ಯ ಬರೆದಿದ್ದಾರೆ.

ನಿನ್ನೆ ರಾಜೀನಾಮೆ ನೀಡಿದ ಸ್ವಾಮಿ ಪ್ರಸಾದ್ ಮೌರ್ಯ ಅವರ ಬಳಿಯೂ ಅವರು ಇದೇ ರೀತಿ ಮನವಿ ಮಾಡಿದ್ದರು.

ಅಖಿಲೇಶ್ ಯಾದವ್ ಮತ್ತು ಹಿಂದುಳಿದ ಮತಗಳು ನಿರ್ಣಾಯಕವಾಗಿರುವ ಚುನಾವಣೆಗೆ ಮುನ್ನ ಬಿಜೆಪಿಯ ಒಬಿಸಿ ನಾಯಕತ್ವದಲ್ಲಿನ ನಿರ್ಗಮನ ಪಕ್ಷಕ್ಕೆ ದೊಡ್ಡ ಮಟ್ಟದ ಹೊಡೆತವಾಗಲಿದೆ .

ಪೂರ್ವ ಉತ್ತರ ಪ್ರದೇಶದ ಚೌಹಾಣ್, ಮಾಯಾವತಿಯವರ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ತೊರೆದ ನಂತರ 2015 ರಲ್ಲಿ ಬಿಜೆಪಿ ಸೇರಿದರು. ಅವರು 2009 ರಿಂದ 2014 ರವರೆಗೆ ಬಿಎಸ್ಪಿ ಸಂಸದರಾಗಿದ್ದರು. ಅವರು ಬಿಜೆಪಿ ಸೇರಿದಾಗ ಅವರನ್ನು ಪಕ್ಷದ ಒಬಿಸಿ ಘಟಕದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಲಾಯಿತು.
ಅವರು ತನಗಿಂತ ಮೊದಲು ಇತರ ಐವರಂತೆ ಬಿಎಸ್ಪಿ-ಬಿಜೆಪಿ-ಸಮಾಜವಾದಿ ಪಕ್ಷದ ಸರ್ಕ್ಯೂಟ್ ಅನ್ನು ಅನುಸರಿಸುತ್ತಿದ್ದಾರೆ.

ಸ್ವಾಮಿ ಪ್ರಸಾದ್ ಮೌರ್ಯ ಅವರ ರಾಜೀನಾಮೆ ನೀಡಿದ ಬೆನ್ನಲ್ಲೇ ನಾಲ್ವರು ಶಾಸಕರು – ರೋಷನ್ ಲಾಲ್ ವರ್ಮಾ, ಬ್ರಿಜೇಶ್ ಪ್ರಜಾಪತಿ, ಭಗವತಿ ಸಾಗರ್ ಮತ್ತು ವಿನಯ್ ಶಕ್ಯಾ ಬಿಜೆಪಿ ತೊರೆದಿದ್ದಾರೆ.

ಇದನ್ನೂ ಓದಿ:  ಚುನಾವಣೆಗೆ ಇನ್ನೊಂದೇ ತಿಂಗಳು ಬಾಕಿ ಇರುವಾಗ ಉತ್ತರ ಪ್ರದೇಶ ಬಿಜೆಪಿಗೆ ಶಾಕ್ ಮೇಲೆ ಶಾಕ್​ !- ಪಕ್ಷಕ್ಕೆ ರಾಜೀನಾಮೆ ಕೊಟ್ಟ ಮೂವರು ಶಾಸಕರು

ಇದನ್ನೂ ಓದಿ:  ಅಪ್ಪನನ್ನು ಅಪಹರಿಸಿದ್ದಾರೆ ಎಂದು ಶಾಸಕನ ಪುತ್ರಿ ಆರೋಪ, ಅಪಹರಣ ನಡೆದಿಲ್ಲ ಎಂದ ಪೊಲೀಸ್; ಉತ್ತರ ಪ್ರದೇಶದಲ್ಲಿ ಹೈಡ್ರಾಮಾ

Published On - 4:15 pm, Wed, 12 January 22