ಪ್ರಧಾನಿ ಮೋದಿಯವರ ಕೆಲಸದಿಂದ ಪ್ರಭಾವಿತಳಾಗಿದ್ದೇನೆ, ಮುಲಾಯಂ ಸಿಂಗ್ ಯಾದವ್ ಆಶೀರ್ವಾದ ನನ್ನ ಮೇಲಿದೆ: ಅಪರ್ಣಾ ಯಾದವ್
ಅಪರ್ಣಾ ಯಾದವ್ ಕೇವಲ ರಾಜಕಾರಣಿಯಷ್ಟೇ ಅಲ್ಲ, ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕಿಯೂ ಹೌದು. ಇವರು ಶಾಸ್ತ್ರೀಸ ಸಂಗೀತ ಅಭ್ಯಾಸ ಮಾಡಿದ್ದಾರೆ. ಪ್ರಾಣಿ ಪ್ರಿಯರಾಗಿದ್ದು, ಪ್ರಾಣಿಗಳ ರಕ್ಷಣೆಗಾಗಿ ಎನ್ಜಿಒ ಒಂದನ್ನೂ ನಡೆಸುತ್ತಿದ್ದಾರೆ.
ಉತ್ತರಪ್ರದೇಶದಲ್ಲಿಂದು ಮಹತ್ವದ ಬೆಳವಣಿಗೆಯಾಗಿದೆ. ಅಲ್ಲಿ ಬಿಜೆಪಿಗೆ ನೇರ ಪ್ರತಿಸ್ಪರ್ಧಿಯಾಗಿರುವ ಸಮಾಜವಾದಿ ಪಕ್ಷದ ಸಂಸ್ಥಾಪಕ ಕುಟುಂಬದ ಸೊಸೆ ಇಂದು ಬಿಜೆಪಿಗೇ ಸೇರಿದ್ದಾರೆ. ಅಂದರೆ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಪುತ್ರನ ಪತ್ನಿ ಅಪರ್ಣಾ ಯಾದವ್ ಬಿಜೆಪಿಗೆ ಸೇರಿದ್ದು, ರಾಜಕೀಯ ವಲಯದಲ್ಲಿ ಬಹುಮುಖ್ಯ ಬೆಳವಣಿಗೆ ಎಂದೇ ಹೇಳಲಾಗುತ್ತಿದೆ. ಇತ್ತೀಚೆಗೆ ಬಿಜೆಪಿಯಿಂದ ಮೂರು ಸಚಿವರು ಸೇರಿ ಹಲವು ಶಾಸಕರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾದ ಬೆನ್ನಲ್ಲೇ ಇಂದು ಅಪರ್ಣಾ ಯಾದವ್ ಕಮಲ ಮುಡಿದಿದ್ದಾರೆ. 2017ರ ವಿಧಾನಸಭೆ ಚುನಾವಣೆಯಲ್ಲಿ ಲಖನೌದಿಂದ ಸ್ಪರ್ಧಿಸಿ, ಬಿಜೆಪಿ ಅಭ್ಯರ್ಥಿ ವಿರುದ್ಧ ಸೋತಿದ್ದ ಅಪರ್ಣಾಗೆ ಈ ಚುನಾವಣೆಯಲ್ಲಿ ಟಿಕೆಟ್ ಸಿಗಲಿದೆಯಾ ಎಂಬುದಿನ್ನೂ ನಿಶ್ಚಯವಾಗಿಲ್ಲ.
ಇಂದು ಬಿಜೆಪಿ ಸೇರಿದ ಬಳಿಕ ಟೈಮ್ಸ್ ನೌ ಮಾಧ್ಯಮದೊಂದಿಗೆ ಮಾತನಾಡಿದ ಅಪರ್ಣಾ ಯಾದವ್, ನಾನು ನನ್ನ ಮಾವ ಮುಲಾಯಂ ಸಿಂಗ್ ಯಾದವ್ ಅವರ ಆಶೀರ್ವಾದ ಪಡೆದೇ ಬಿಜೆಪಿಗೆ ಸೇರುತ್ತಿದ್ದೇನೆ. ಅವರ ಆಶೀರ್ವಾದ ನನ್ನೊಂದಿಗೆ ಸದಾ ಇರುತ್ತದೆ ಎಂದು ಹೇಳಿದ್ದಾರೆ. ಹಾಗೇ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕೆಲಸ, ರಾಷ್ಟ್ರದ ಬಗೆಗೆ ಇರುವ ಆಸಕ್ತಿಯಿಂದ ಪ್ರಭಾವಿತಳಾಗಿದ್ದೇನೆ. ನನ್ನದು ರಾಷ್ಟ್ರದ ಹಿತಾಸಕ್ತಿ ಮುಖ್ಯ ಎಂಬ ಧ್ಯೇಯ. ರಾಷ್ಟ್ರ ಮೊದಲು ಎನ್ನುವವಳು ನಾನು. ಬಿಜೆಪಿ ಸಿದ್ಧಾಂತವೂ ಕೂಡ ಇದೇ ಆಗಿದೆ. ಹಾಗಾಗಿ ನಾನು ರಾಷ್ಟ್ರಕ್ಕಾಗಿ ದುಡಿಯಲು ಬಿಜೆಪಿ ಸೇರಿದ್ದೇನೆ ಎಂದು ಹೇಳಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಪಕ್ಷವೇ ನಿರ್ಧರಿಸುತ್ತದೆ ಎಂದಿದ್ದಾರೆ. ಯೋಗಿ ಆದಿತ್ಯನಾಥ್ ಮತ್ತು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಇಬ್ಬರಲ್ಲಿ ಯಾರು ಅತ್ಯುತ್ತಮ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕೇಳಿದ ಪ್ರಶ್ನೆಗೆ ಸೂಕ್ಷ್ಮವಾಗಿ ಉತ್ತರಿಸಿದ ಅವರು, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಯೋಗಿ ಆದಿತ್ಯನಾಥ್ ಅವರೇ ಗೆದ್ದು ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದರು. ಅಂದಹಾಗೇ, ಪ್ರತೀಕ್ ಯಾದವ್, ಮುಲಾಯಂ ಸಿಂಗ್ ಯಾದವ್ ಅವರ ಎರಡನೇ ಪತ್ನಿಗೆ ಹುಟ್ಟಿದ ಮಗ. ಅಖಿಲೇಶ್ ಯಾದವ್ ಮೊದಲ ಪತ್ನಿಯ ಪುತ್ರ. ಪ್ರತೀಕ್ ರಾಜಕೀಯದಿಂದ ದೂರವುಳಿದಿದ್ದಾರೆ.
ಅತ್ಯುತ್ತಮ ಗಾಯಕಿ ಅಪರ್ಣಾ ಅಪರ್ಣಾ ಯಾದವ್ ಕೇವಲ ರಾಜಕಾರಣಿಯಷ್ಟೇ ಅಲ್ಲ, ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕಿಯೂ ಹೌದು. ಇವರು ಶಾಸ್ತ್ರೀಸ ಸಂಗೀತ ಅಭ್ಯಾಸ ಮಾಡಿದ್ದಾರೆ. ಯುಕೆಯ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ರಾಜಕೀಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಾಣಿ ಪ್ರಿಯರೂ ಆಗಿರುವ ಇವರು, ಬಿ ಅವೇರ್ ಎಂಬ ಹೆಸರಿನ ಎನ್ಜಿಒ ನಡೆಸುತ್ತಿದ್ದಾರೆ. ಈ ಎನ್ಜಿಒ ಪ್ರಾಣಿ ರಕ್ಷಣೆಯ ಧ್ಯೇಯ ಹೊಂದಿದೆ. ಅಷ್ಟೇ ಅಲ್ಲ, ಮಹಿಳಾ ಸುರಕ್ಷತೆ, ಮಹಿಳೆಯರ ವಿರುದ್ಧ ನಡೆಯುವ ಕ್ರೈಂಗಳ ನಿಯಂತ್ರಣಕ್ಕಾಗಿಯೂ ಶ್ರಮಿಸುತ್ತಿದ್ದಾರೆ.
ಇದನ್ನೂ ಓದಿ: ಮುಲಾಯಂ ಸಿಂಗ್ ಯಾದವ್ ಸೊಸೆ ಅಪರ್ಣಾ ಯಾದವ್ ಬಿಜೆಪಿ ಸೇರ್ಪಡೆ; ಸಮಾಜವಾದಿ ಪಕ್ಷಕ್ಕೆ ಇದು ಬಹುದೊಡ್ಡ ಹಿನ್ನಡೆ !
Published On - 4:49 pm, Wed, 19 January 22