ಕರ್ಹಾಲ್​ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಅಖಿಲೇಶ್ ಯಾದವ್​; ಸಮಾಜವಾದಿ ಪಕ್ಷಕ್ಕೆ ಇನ್ನೊಂದು ಅವಕಾಶ ಕೊಡುವಂತೆ ಮನವಿ

ಕರ್ಹಾಲ್​ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಅಖಿಲೇಶ್ ಯಾದವ್​; ಸಮಾಜವಾದಿ ಪಕ್ಷಕ್ಕೆ ಇನ್ನೊಂದು ಅವಕಾಶ ಕೊಡುವಂತೆ ಮನವಿ
ನಾಮಪತ್ರ ಸಲ್ಲಿಸಲು ತೆರಳಿದ ಅಖಿಲೇಶ್​ ಯಾದವ್​

ನಾನು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ನನ್ನ ಸ್ಪರ್ಧೆಯ ಬಗ್ಗೆ ಜನರೂ ಕೂಡ ಉತ್ಸುಕರಾಗಿದ್ದಾರೆ. ಯಾಕೆಂದರೆ ಅವರು ರಾಜ್ಯದಲ್ಲಿ ಬದಲಾವಣೆ ತರಲು ಕಾಯುತ್ತಿದ್ದಾರೆ ಎಂದು ಅಖಿಲೇಶ್ ಯಾದವ್ ಹೇಳಿದರು.

TV9kannada Web Team

| Edited By: Lakshmi Hegde

Jan 31, 2022 | 3:53 PM

ಲಖನೌ: ಉತ್ತರ ಪ್ರದೇಶದಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭೆ ಚುನಾವಣೆ (Uttar Pradesh Assembly Election) ದೇಶದ ಮುಂದಿನ ಶತಮಾನವನ್ನು ನಿರ್ಧರಿಸುತ್ತದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್​ (Akhilesh Yadav) ಹೇಳಿದರು. ಹಾಗೇ, ದೇಶದಲ್ಲಿರುವ ನಕಾರಾತ್ಮಕ ರಾಜಕೀಯವನ್ನು ತೊಡೆದುಹಾಕುವಂತೆ ಜನರಿಗೆ ಕರೆ ನೀಡಿದರು.  ನಂತರ ಕರ್ಹಾಲ್​ ವಿಧಾನಸಭೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ಈ ವೇಳೆ ಅಪಾರ ಬೆಂಬಲಿಗರು ಸ್ಥಳದಲ್ಲಿದ್ದು, ಅಖಿಲೇಶ್​ ಯಾದವ್​ ಪರ ಘೋಷಣೆ ಕೂಗಿದರು. ಇಂದು ಅಖಿಲೇಶ್​ ಯಾದವ್​ ಸೈಫಾಯ್​ ಮನೆಯಿಂದ ನಾಮಪತ್ರ ಸಲ್ಲಿಸಲು ಸಮಾಜವಾದಿ ಪಕ್ಷದ ರಥ (ಅಖಿಲೇಶ್​ ಯಾದವ್ ಸೈಕಲ್​ ಮೇಲೆ ಕುಳಿತ ಫೋಟೋ ಇರುವ ಬಸ್​)ದ​ಲ್ಲಿ ತೆರಳಿದರು. ಅವರು ಕರ್ಹಾಲ್​​ ತಲುಪುವಷ್ಟರಲ್ಲಿ ಅಲ್ಲಿ ಜನಸಂದಣಿ ಜಾಸ್ತಿಯಾಯಿತು. ಅಖಿಲೇಶ್​ ಬೆಂಬಲಿಗರನ್ನು ನಿಯಂತ್ರಿಸಲು ಸ್ಥಳೀಯ ಜಿಲ್ಲಾಡಳಿತ ಹರಸಾಹಸ ಪಡುವಂತಾಯ್ತು. ಅದಕ್ಕಾಗಿ  ಬ್ಯಾರಿಕೇಡ್​ಗಳನ್ನು ಕೂಡ ಹಾಕಲಾಯಿತು. 

ನಾಮಪತ್ರ ಸಲ್ಲಿಸಿದ ಬಳಿಕ ಟ್ವೀಟ್ ಮಾಡಿದ ಅಖಿಲೇಶ್ ಯಾದವ್, ನನ್ನ ನಾಮಪತ್ರ ಸಲ್ಲಿಕೆ ಒಂದು ಮಿಷನ್​ ಎಂದು ಹೇಳಿದ್ದಾರೆ. ನಾನು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ನನ್ನ ಸ್ಪರ್ಧೆಯ ಬಗ್ಗೆ ಜನರೂ ಕೂಡ ಉತ್ಸುಕರಾಗಿದ್ದಾರೆ. ಯಾಕೆಂದರೆ ಅವರು ರಾಜ್ಯದಲ್ಲಿ ಬದಲಾವಣೆ ತರಲು ಕಾಯುತ್ತಿದ್ದಾರೆ ಎಂದು ಹೇಳಿದರು. ಹಾಗೇ, ತಾವು ಇಟಾವಾದಲ್ಲಿರುವ ಸೈಫಾಯ್​ ಮನೆಯಿಂದ ನಾಮಪತ್ರ ಸಲ್ಲಿಸಲು ಬಸ್​​ನಲ್ಲಿ ಹೋಗುತ್ತಿರುವ ಫೋಟೋವನ್ನೂ ಶೇರ್​ ಮಾಡಿಕೊಂಡಿದ್ದಾರೆ.

ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಒಟ್ಟು 7ಹಂತದಲ್ಲಿ ನಡೆಯಲಿದ್ದು, ಅದರಲ್ಲಿ ಕರ್ಹಾಲ್​ನಲ್ಲಿ ಫೆ.20ಕ್ಕೆ ಅಂದರೆ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ. ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಿರುವ ಅಖಿಲೇಶ್ ಯಾದವ್​ ಸಿಕ್ಕಾಪಟೆ ಉತ್ಸಾಹದಲ್ಲಿದ್ದಾರೆ. ಸಕಾರಾತ್ಮಕ ರಾಜಕೀಯ ದೇಶವನ್ನು ಮುನ್ನಡೆಸುತ್ತದೆ. ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷಕ್ಕೆ ಒಂದು ಅವಕಾಶ ಕೊಡಿ. ಕೇವಲ ನನ್ನ ಕ್ಷೇತ್ರ ಕರ್ಹಾಲ್​​ನಲ್ಲಿ ಅಷ್ಟೇ ಅಲ್ಲ, ಪ್ರತಿ ಕ್ಷೇತ್ರದಲ್ಲೂ ಸಮಾಜವಾದಿ ಪಕ್ಷವನ್ನು ಗೆಲ್ಲಿಸಿ. ಉತ್ತರಪ್ರದೇಶ ರಾಜ್ಯವನ್ನು ನಮ್ಮ ಪಕ್ಷ ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುತ್ತದೆ ಎಂದು ಹೇಳಿದರು.

ಕರ್ಹಾಲ್​ ವಿಧಾನಸಭೆ ಕ್ಷೇತ್ರದಲ್ಲಿ 1993ರಿಂದಲೂ ಸಮಾಜವಾದಿ ಪಕ್ಷದ ಹಿಡಿತದಲ್ಲೇ ಇದೆ. ಆದರೆ 2002ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸೋಬರನ್​ ಸಿಂಗ್​ ಇಲ್ಲಿ ಗೆಲುವು ಸಾಧಿಸಿದ್ದರು. ಆದರೆ ನಂತರ ಅವರೂ ಕೂಡ ಸಮಾಜವಾದಿ ಪಕ್ಷಕ್ಕೆ ಸೇರಿದ್ದಾರೆ. ನಂತರ ಅಲ್ಲಿ ಮೂರು ಅವಧಿಗೆ ಗೆದ್ದಿದ್ದಾರೆ. ಕರ್ಹಾಲ್​ನಲ್ಲಿ ಒಟ್ಟು 3.7 ಲಕ್ಷ ಮತದಾರರು ಇದ್ದಾರೆ. ಅದರಲ್ಲೂ ಶೇ.37ರಷ್ಟು ಅಂದರೆ 1.4 ಲಕ್ಷ ಮಂದಿ ಯಾದವ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ.

ಇದನ್ನೂ ಓದಿ: ಎಲ್​ಆರ್ ಶಿವರಾಮೇಗೌಡ ಆಡಿಯೋ ವೈರಲ್ ವಿಚಾರಕ್ಕೆ ಹೆಚ್​ಡಿ ಕುಮಾರಸ್ವಾಮಿ ಗರಂ; ಪಕ್ಷದಿಂದ ಹೊರಹಾಕಲು ಸೂಚನೆ

Follow us on

Related Stories

Most Read Stories

Click on your DTH Provider to Add TV9 Kannada