Employment: ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್; 10 ಲಕ್ಷ ಹುದ್ದೆಗಳ ಭರ್ತಿಗೆ ಕೇಂದ್ರ ಸರ್ಕಾರ ನಿರ್ಧಾರ
‘ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಇಲಾಖೆಗಳು ಸಚಿವಾಲಯಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಸೂಚನೆ ನೀಡಿದ್ದಾರೆ’ ಎಂದು ಪ್ರಧಾನಿ ಕಾರ್ಯಾಲಯವು ಹೇಳಿದೆ.
ದೆಹಲಿ: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿ ಬಾಕಿಯಿರುವ ಸುಮಾರು 10 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪ್ರಧಾನ ಮಂತ್ರಿ ಕಚೇರಿಯು (Prime Minister’s Office – PMO) ಮಂಗಳವಾರ ತಿಳಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಕಾರ್ಯಾಲಯವು, ‘ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಇಲಾಖೆಗಳು ಸಚಿವಾಲಯಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಸೂಚನೆ ನೀಡಿದ್ದಾರೆ’ ಎಂದು ಹೇಳಿದೆ.
ವಿವಿಧ ಇಲಾಖೆಗಳ ಉದ್ಯೋಗಿಗಳ ಪರಿಸ್ಥಿತಿ, ಮಾನವ ಸಂಪನ್ಮೂಲದ ಸ್ಥಿತಿಗತಿ ಪರಿಶೀಲಿಸಿದ ಪ್ರಧಾನಿ, ಮುಂದಿನ ಒಂದೂವರೆ ವರ್ಷಗಳ ಅವಧಿಯಲ್ಲಿ 10 ಲಕ್ಷ ಮಂದಿಯನ್ನು ನೇಮಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ ಎಂದು ಟ್ವೀಟ್ನಲ್ಲಿ ಮಾಹಿತಿ ನೀಡಲಾಗಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದ ಪ್ರಧಾನಿ, ನೇಮಕಾತಿ ಪ್ರಕ್ರಿಯೆಗೆ ವೇಗ ಕೊಡಬೇಕು ಎಂದು ಸೂಚಿಸಿದ್ದರು. ರಾಜ್ಯಸಭೆಗೆ ಕಳೆದ ಫೆಬ್ರುವರಿ ತಿಂಗಳಲ್ಲಿ ಮಾಹಿತಿ ನೀಡಿದ್ದ ಸರ್ಕಾರವು ಮಾರ್ಚ್ 1, 2020ಕ್ಕೆ ದೇಶದಲ್ಲಿ ಪ್ರಸ್ತುತ 87 ಲಕ್ಷ ಖಾಲಿ ಹುದ್ದೆಗಳಿವೆ ಎಂದು ಹೇಳಿತ್ತು.
ನಿರುದ್ಯೋಗ ವಿಚಾರವಾಗಿ ಕೇಂದ್ರ ಸರ್ಕಾರವನ್ನು ವಿರೋಧ ಪಕ್ಷಗಳು ಸಾಕಷ್ಟು ಬಾರಿ ಟೀಕಿಸಿದ್ದವು. ಇದೀಗ ದೊಡ್ಡಮಟ್ಟದಲ್ಲಿ ಉದ್ಯೋಗ ನೇಮಕಾತಿಗೆ ಆದೇಶಿಸಿರುವ ಸರ್ಕಾರವು ಈ ಟೀಕೆಗಳಿಗೆ ಉತ್ತರ ಕೊಡಲು ಮುಂದಾಗಿದೆ. ವಿವಿಧ ಸರ್ಕಾರಿ ಇಲಾಖೆ ಮತ್ತು ಸಚಿವವಾಲಯಗಳಲ್ಲಿ ಬಾಕಿಯಿರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಇನ್ನು ಮುಂದೆ ಚುರುಕಾಗಲಿದೆ.
PM @narendramodi reviewed the status of Human Resources in all departments and ministries and instructed that recruitment of 10 lakh people be done by the Government in mission mode in next 1.5 years.
— PMO India (@PMOIndia) June 14, 2022
ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಇದು ಶುಭ ಸುದ್ದಿ. ಆದರೆ ಯಾವೆಲ್ಲಾ ಇಲಾಖೆಗಳಲ್ಲಿ ಎಷ್ಟು ಹುದ್ದೆಗಳು ಖಾಲಿಯಿವೆ? ಭರ್ತಿಗೆ ಆದೇಶ ಎಂದು ಹೊರಡಿಸಲಾಗುತ್ತದೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಬಿಜೆಪಿ ಸರ್ಕಾರದ ಎರಡನೇ ಅವಧಿಯು ಪೂರ್ಣಗೊಳ್ಳುವುದರ ಒಳಗೆ ನೇಮಕಾತಿಗೆ ಆದೇಶ ಹೊರಡಿಸಬಹುದು ಎಂದು ಹೇಳಲಾಗುತ್ತಿದೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:04 am, Tue, 14 June 22