Income Tax Dept Recruitment 2026: ಆದಾಯ ತೆರಿಗೆ ಇಲಾಖೆಯಲ್ಲಿ ಕ್ರೀಡಾ ಕೋಟಾದಡಿ ಉದ್ಯೋಗವಕಾಶ; 97 ಹುದ್ದೆಗೆ ಅರ್ಜಿ ಆಹ್ವಾನ
ಆದಾಯ ತೆರಿಗೆ ಇಲಾಖೆಯ ಕ್ರೀಡಾ ಕೋಟಾ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಸ್ಟೆನೋಗ್ರಾಫರ್, ತೆರಿಗೆ ಸಹಾಯಕ, ಮಲ್ಟಿ-ಟಾಸ್ಕಿಂಗ್ ಸ್ಟಾಫ್ ಸೇರಿದಂತೆ ಒಟ್ಟು 97 ಹುದ್ದೆಗಳಿಗೆ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 10ನೇ ತರಗತಿ ಪಾಸ್ ಮತ್ತು ಕ್ರೀಡಾ ಸಾಧನೆ ಮಾಡಿದವರಿಗೆ ಇದು ಉತ್ತಮ ಅವಕಾಶ. ಅರ್ಜಿ ಸಲ್ಲಿಸಲು ಜನವರಿ 31 ಕೊನೆಯ ದಿನಾಂಕವಾಗಿದ್ದು, ಆನ್‌ಲೈನ್ ಮೂಲಕ ಶೀಘ್ರವಾಗಿ ಅರ್ಜಿ ಸಲ್ಲಿಸಿ, ಲಿಖಿತ ಪರೀಕ್ಷೆ ಇಲ್ಲದೆ ಉದ್ಯೋಗ ಪಡೆಯಿರಿ.

ಆದಾಯ ತೆರಿಗೆ ಇಲಾಖೆಯಿಂದ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ಬಂದಿದೆ. ಆದಾಯ ತೆರಿಗೆ ಪ್ರಧಾನ ಮುಖ್ಯ ಆಯುಕ್ತರ (Pr. CCIT) ಕಚೇರಿಯು ಕ್ರೀಡಾ ಕೋಟಾದಡಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯಡಿ ಒಟ್ಟು 97 ಖಾಲಿ ಹುದ್ದೆಗಳು ಭರ್ತಿಯಾಗಲಿದ್ದು, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಅರ್ಜಿ ಸಲ್ಲಿಸಲು ಕೇವಲ 4 ದಿನಗಳು ಮಾತ್ರ ಉಳಿದಿದ್ದು, ಅರ್ಹ ಅಭ್ಯರ್ಥಿಗಳು ಜನವರಿ 31 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಈ ನೇಮಕಾತಿಯಲ್ಲಿ ಸ್ಟೆನೋಗ್ರಾಫರ್ ಗ್ರೇಡ್–2 (12 ಹುದ್ದೆಗಳು), ತೆರಿಗೆ ಸಹಾಯಕ (47 ಹುದ್ದೆಗಳು) ಹಾಗೂ ಮಲ್ಟಿ–ಟಾಸ್ಕಿಂಗ್ ಸ್ಟಾಫ್ (38 ಹುದ್ದೆಗಳು) ಸೇರಿವೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು. ಜೊತೆಗೆ ಅಥ್ಲೆಟಿಕ್ಸ್, ಈಜು, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಚೆಸ್, ಲಾನ್ ಟೆನ್ನಿಸ್, ಕ್ರಿಕೆಟ್, ಬ್ಯಾಸ್ಕೆಟ್‌ಬಾಲ್, ವಾಲಿಬಾಲ್, ಕಬಡ್ಡಿ, ಫುಟ್‌ಬಾಲ್, ಬಿಲಿಯರ್ಡ್ಸ್ ಸೇರಿದಂತೆ ಮಾನ್ಯತೆ ಪಡೆದ ಕ್ರೀಡೆಗಳಲ್ಲಿ ಭಾಗವಹಿಸಿದ ಪ್ರಮಾಣಪತ್ರ ಹೊಂದಿರಬೇಕು. ಅಭ್ಯರ್ಥಿಗಳ ವಯೋಮಿತಿ 18 ರಿಂದ 27 ವರ್ಷಗಳ ನಡುವೆ ಇರಬೇಕು. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.
ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ 312 ಹುದ್ದೆಗಳಿಗೆ ಅರ್ಜಿ ಆಹ್ವಾನ; ಪದವೀಧರರು ಅರ್ಹರು
ಅರ್ಜಿ ಶುಲ್ಕವಾಗಿ ಅಭ್ಯರ್ಥಿಗಳು 200 ರೂ ಪಾವತಿಸಬೇಕು. ಈ ನೇಮಕಾತಿಯಲ್ಲಿ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಸಂಬಂಧಿತ ಕ್ರೀಡಾ ಸಾಧನೆ ಮತ್ತು ಅರ್ಹತೆಯ ಆಧಾರದಲ್ಲೇ ಅಂತಿಮ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ವೇತನ ಸೌಲಭ್ಯವೂ ದೊರೆಯಲಿದೆ. ಸ್ಟೆನೋಗ್ರಾಫರ್ ಮತ್ತು ತೆರಿಗೆ ಸಹಾಯಕ ಹುದ್ದೆಗಳಿಗೆ ತಿಂಗಳಿಗೆ 25,500 ರಿಂದ 81,100 ರೂ. ವರೆಗೆ ಹಾಗೂ ಮಲ್ಟಿ–ಟಾಸ್ಕಿಂಗ್ ಸ್ಟಾಫ್ ಹುದ್ದೆಗೆ 18,000 ರಿಂದ 56,900 ರೂ. ವರೆಗೆ ವೇತನ ನೀಡಲಾಗುತ್ತದೆ.
ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿ, ಕೇಂದ್ರ ಸರ್ಕಾರಿ ಉದ್ಯೋಗವನ್ನು ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕಕ್ಕೂ ಮುನ್ನ ತಪ್ಪದೇ ಅರ್ಜಿ ಸಲ್ಲಿಸಿ.
ಆದಾಯ ತೆರಿಗೆ ಇಲಾಖೆಯ ನೇಮಕಾತಿ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:27 pm, Wed, 28 January 26
