KVS Recruitment 2026: ಕೇಂದ್ರೀಯ ವಿದ್ಯಾಲಯಗಳಲ್ಲಿ 987 ಶಿಕ್ಷಕರ ನೇಮಕ; ಕಿರು ಅಧಿಸೂಚನೆ ಬಿಡುಗಡೆ
ಕೇಂದ್ರೀಯ ವಿದ್ಯಾಲಯ ಸಂಘಟನೆ (KVS) 987 ವಿಶೇಷ ಶಿಕ್ಷಕರ (PRT/TGT) ನೇಮಕಾತಿಗೆ ಕಿರು ಅಧಿಸೂಚನೆ ಪ್ರಕಟಿಸಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ದೇಶವ್ಯಾಪಿ ನಡೆಯುವ ಈ ಪ್ರಕ್ರಿಯೆಯಲ್ಲಿ 494 PRT ಮತ್ತು 493 TGT ಹುದ್ದೆಗಳಿವೆ. ಫೆಬ್ರವರಿಯಲ್ಲಿ ಅಧಿಕೃತ ಅಧಿಸೂಚನೆ ಹಾಗೂ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆಯಿದೆ. 12ನೇ ತರಗತಿ/ಪದವಿ, ವಿಶೇಷ ಶಿಕ್ಷಣ ಡಿಪ್ಲೋಮಾ/ಬಿ.ಎಡ್ ಮತ್ತು CTET ಉತ್ತೀರ್ಣರಾದವರು ಅರ್ಹರು.

ಕೇಂದ್ರೀಯ ವಿದ್ಯಾಲಯ ಸಂಘಟನೆ (KVS) ದೇಶದ ವಿವಿಧ ರಾಜ್ಯಗಳಲ್ಲಿರುವ ಕೇಂದ್ರೀಯ ವಿದ್ಯಾಲಯಗಳಲ್ಲಿ ವಿಶೇಷ ಶಿಕ್ಷಕರ (Special Educators) ನೇಮಕಾತಿಗಾಗಿ ಕಿರು ಅಧಿಸೂಚನೆಯನ್ನು ಪ್ರಕಟಿಸಿದೆ. ಈ ನೇಮಕಾತಿ ಪ್ರಕ್ರಿಯೆಯಡಿ ಒಟ್ಟು 987 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಈ ಹುದ್ದೆಗಳು ಪ್ರಾಥಮಿಕ ಶಿಕ್ಷಕ (PRT) ಮತ್ತು ತರಬೇತಿ ಪಡೆದ ಪದವೀಧರ ಶಿಕ್ಷಕ (TGT) ಹುದ್ದೆಗಳಿಗೆ ಸೇರಿವೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಈ ನೇಮಕಾತಿಯನ್ನು ದೇಶವ್ಯಾಪಿಯಾಗಿ ನಡೆಸಲು KVS ನಿರ್ಧರಿಸಿದೆ.
ಯಾವ ರಾಜ್ಯಗಳಲ್ಲಿ ನೇಮಕಾತಿ ನಡೆಯಲಿದೆ?
ಕಿರು ಅಧಿಸೂಚನೆಯ ಪ್ರಕಾರ, ಕರ್ನಾಟಕ, ಉತ್ತರ ಪ್ರದೇಶ, ಗುಜರಾತ್, ದಮನ್ ಮತ್ತು ಡಿಯು, ಮಧ್ಯಪ್ರದೇಶ, ಒಡಿಶಾ, ಪಂಜಾಬ್, ಚಂಡೀಗಢ, ತಮಿಳುನಾಡು, ಪುದುಚೇರಿ, ಉತ್ತರಾಖಂಡ್, ದೆಹಲಿ, ಹರಿಯಾಣ, ಹಿಮಾಚಲ ಪ್ರದೇಶ, ಅಸ್ಸಾಂ, ತೆಲಂಗಾಣ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ, ಗೋವಾ, ಬಿಹಾರ, ಛತ್ತೀಸ್‌ಗಢ, ಜಾರ್ಖಂಡ್, ತ್ರಿಪುರ, ಮೇಘಾಲಯ, ಮಿಜೋರಾಂ, ಮಣಿಪುರ, ಅರುಣಾಚಲ ಪ್ರದೇಶ, ಲಕ್ಷದ್ವೀಪ, ನಾಗಾಲ್ಯಾಂಡ್ ಮತ್ತು ಕೇರಳ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಶೇಷ ಶಿಕ್ಷಕರ ನೇಮಕಾತಿ ನಡೆಯಲಿದೆ.
ಹುದ್ದೆಗಳ ವಿವರ:
KVS ಒಟ್ಟು 987 ವಿಶೇಷ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಿದೆ. ಹುದ್ದೆಗಳ ವಿಂಗಡಣೆ ಈ ಕೆಳಗಿನಂತಿದೆ:
- ವಿಶೇಷ ಶಿಕ್ಷಕ (TGT) – 493 ಹುದ್ದೆಗಳು
- ವಿಶೇಷ ಶಿಕ್ಷಕ (PRT) – 494 ಹುದ್ದೆಗಳು
ಅರ್ಜಿ ಪ್ರಕ್ರಿಯೆ ಯಾವಾಗ ಆರಂಭವಾಗಲಿದೆ?
KVS ಬಿಡುಗಡೆ ಮಾಡಿರುವುದು ಕೇವಲ ಕಿರು ಅಧಿಸೂಚನೆ ಮಾತ್ರ. ಅರ್ಜಿ ಪ್ರಕ್ರಿಯೆಯ ಕುರಿತು ಸವಿಸ್ತಾರ ಮಾಹಿತಿಯನ್ನು ಇನ್ನೂ ಪ್ರಕಟಿಸಲಾಗಿಲ್ಲ. ಆದರೆ, ಫೆಬ್ರವರಿಯಲ್ಲಿ ಅಧಿಕೃತ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಇದೆ, ಅದೇ ಸಮಯದಲ್ಲಿ ಆನ್‌ಲೈನ್ ಅರ್ಜಿ ಪ್ರಕ್ರಿಯೆಯೂ ಆರಂಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಯಾರು ಅರ್ಜಿ ಸಲ್ಲಿಸಬಹುದು?
ವಿಶೇಷ ಶಿಕ್ಷಕ (PRT) ಹುದ್ದೆಗೆ
- 12ನೇ ತರಗತಿ ಕನಿಷ್ಠ ಶೇ. 50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
- ವಿಶೇಷ ಶಿಕ್ಷಣದಲ್ಲಿ ಎರಡು ವರ್ಷಗಳ ಡಿಪ್ಲೊಮಾ ಹೊಂದಿರಬೇಕು.
- CTET ಪೇಪರ್–I (CBSE) ಉತ್ತೀರ್ಣರಾಗಿರಬೇಕು.
ಇದನ್ನೂ ಓದಿ: ಸುಪ್ರೀಂ ಕೋರ್ಟ್ನಲ್ಲಿ 90 ಕಾನೂನು ಗುಮಾಸ್ತ ಹುದ್ದೆಗೆ ಅರ್ಜಿ ಆಹ್ವಾನ
ವಿಶೇಷ ಶಿಕ್ಷಕ (TGT) ಹುದ್ದೆಗೆ:
- ಕನಿಷ್ಠ ಶೇ. 50 ಅಂಕಗಳೊಂದಿಗೆ ಪದವಿ ಮತ್ತು B.Ed.
- ವಿಶೇಷ ಶಿಕ್ಷಣದಲ್ಲಿ ಒಂದು ವರ್ಷದ ಡಿಪ್ಲೊಮಾ
- ವಯೋಮಿತಿ: ಗರಿಷ್ಠ 35 ವರ್ಷ
- CTET ಪೇಪರ್–II (CBSE) ಉತ್ತೀರ್ಣರಾಗಿರಬೇಕು
- ಭಾರತೀಯ ಪುನರ್ವಸತಿ ಮಂಡಳಿ (RCI)ಯಲ್ಲಿ ನೋಂದಣಿ ಕಡ್ಡಾಯ
ವಿಶೇಷ ಶಿಕ್ಷಕರಾಗಿ ಕೇಂದ್ರೀಯ ವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮುಂದಿನ ಅಧಿಕೃತ ಅಧಿಸೂಚನೆಗಾಗಿ KVS ವೆಬ್‌ಸೈಟ್ ಅನ್ನು ನಿಯಮಿತವಾಗಿ ಪರಿಶೀಲಿಸುವುದು ಉತ್ತಮ.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
